ಸಚಿವರಿಂದ “ಸಾರಿಗೆ ಮಿತ್ರ” ಹೆಚ್‍ಆರ್‍ಎಂಎಸ್ ಮೊಬೈಲ್ ಆ್ಯಪ್ ಬಿಡುಗಡೆ

varthajala
0

 ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ “ಸಾರಿಗೆ ಮಿತ್ರ” ಹೆಚ್‍ಆರ್‍ಎಂಎಸ್ ಮೊಬೈಲ್ ಆಪ್ (ಆವೃತ್ತಿ 2.0.0) ಅನ್ನು ಇಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಬಿಡುಗಡೆ ಮಾಡಿದರು.ಡಿಜಿಟಲ್ ಪರಿವರ್ತನೆ, ಪಾರದರ್ಶಕತೆ, ಕಾರ್ಯಕ್ಷಮತೆ ವೃದ್ಧಿಗೊಳಿಸಲು ಮತ್ತು ನೌಕರರ ಕಲ್ಯಾಣದ ಮೇಲೆ ಬಲವಾದ ಗಮನವನ್ನು ಕೇಂದ್ರೀಕರಿಸಿ ಹೊಸ ವರ್ಷದ ಸಾರ್ಥಕ ಆರಂಭವಾಗಿ ಈ ಮೊಬೈಲ್ ಆ್ಯಪ್ ಅನ್ನು  ಬಿಡುಗಡೆಗೊಳಿಸಲಾಗಿದೆ.ಹೆಚ್‍ಆರ್‍ಎಂಎಸ್ ಮೊಬೈಲ್ ಆ್ಯಪ್ ಅನ್ನು ನೌಕರರಿಗೆ ತ್ವರಿತ ಸಮಯದಲ್ಲಿ ಮಾನವ ಸಂಪನ್ಮೂಲ ಸೇವೆಗಳನ್ನು ಸ್ಮಾರ್ಟ್ ಫೋನ್ ಮೂಲಕ ಒದಗಿಸುವ ಉದ್ದೇಶದಿಂದ ಅಭಿವೃದ್ಧಿ ಪಡಿಸಲಾಗಿದೆ.

“ಸಾರಿಗೆ ಮಿತ್ರ” ಹೆಚ್‍ಆರ್‍ಎಂಎಸ್ ಮೊಬೈಲ್ ಆಪ್ ನಿಂದ ಜಿಯೋ–ಫೆನ್ಸಿಂಗ್ ಆಧಾರಿತ ಹಾಜರಾತಿ ವ್ಯವಸ್ಥೆ, ಮಾಸಿಕ ಹಾಜರಾತಿ ವೀಕ್ಷಣೆ, ವೈಯಕ್ತಿಕ ವಿವರಗಳು, ಸೇವಾ ದಾಖಲಾತಿ (ಸರ್ವಿಸ್ ರಿಜಿಸ್ಟರ್) ವಿವರಗಳು, ಕುಟುಂಬ ಸದಸ್ಯರ ಮಾಹಿತಿ ಹಾಗೂ ನಾಮನಿರ್ದೇಶಿತ (ನಾಮಿನಿ) ವಿವರಗಳ ವೀಕ್ಷಣೆ, ಮಾಸಿಕ ವೇತನ ಪಟ್ಟಿ (ಪೇ ಸ್ಲಿಪ್)ಗಳನ್ನು ಒಂದೇ ಕ್ಲಿಕ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. 

ರಜೆ ನಿರ್ವಹಣಾ ವ್ಯವಸ್ಥೆ ಮೂಲಕ ಖಾತೆಯಲ್ಲಿರುವ ರಜೆ ವಿವರಗಳ ಪರಿಶೀಲನೆ, ಆಂತರಿಕ ಸಂವಹನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ನಿಗಮದ ವಿವಿಧ ವಿಭಾಗಗಳಿಂದ ಹೊರಡಿಸಲಾಗುವ ಸುತ್ತೋಲೆ ವಿವರಗಳು ದೊರಕುವುದಲ್ಲದೆ, ಒಂದರ್ಥದಲ್ಲಿ ಅಂಗೈಯಲ್ಲಿ ನೌಕರರಿಗೆ ಈ ಆ್ಯಪ್ ಮೂಲಕ ಸಮಗ್ರ ಮಾಹಿತಿ ಲಭ್ಯವಾಗಲಿದೆ.
ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ  ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ, ನಿರ್ದೇಶಕರಾದ ಡಾ.ನಂದಿನಿ ದೇವಿ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)