ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ವಿಮಾ ವೈದ್ಯಾಧಿಕಾರಿಗಳ ಹುದ್ದೆಗಳ ನೇರ ಸಂದರ್ಶನಕ್ಕೆ ಆಹ್ವಾನ

varthajala
0

 ಬೆಂಗಳೂರು  : ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು, ಇಲಾಖೆಯಲ್ಲಿನ ಆಸ್ಪತ್ರೆಗಳು ಹಾಗೂ ಚಿಕಿತ್ಸಾಲಯಗಳಲ್ಲಿ ಖಾಲಿ ಇರುವ ವಿಮಾ ವೈದ್ಯಾಧಿಕಾರಿಗಳಿಗೆ ಎದುರಾಗಿ ನೇರ ಸಂದರ್ಶನದ ಮೂಲಕ 32 ವೈದ್ಯರನ್ನು ಮಾಸಿಕ ರೂ. 60,000/- ಗಳ ಸಂಚಿತ ವೇತನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಎಂ.ಬಿ.ಬಿ.ಎಸ್ ವೈದ್ಯರನ್ನು ವಿವಿಧ ಸ್ಥಳಗಳಲ್ಲಿ ನಿಗಧಿಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನೇರ ಸಂದರ್ಶನಕ್ಕಾಗಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ನಿಗಧಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ಎಂ.ಬಿ.ಬಿ.ಎಸ್. ಪದವಿಯಾಗಿದ್ದು, ಅದಕ್ಕಿಂತ ಹೆಚ್ಚಿನ ವ್ಯಾಸಂಗ ಮಾಡಿರುವ ತಜ್ಞ ವೈದ್ಯರೂ ಸಹ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ನೇರ ನೇಮಕಾತಿಗೆ ನಿಗಧಿಪಡಿಸಿದ ಮೀಸಲಾತಿಯನುಸಾರ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ-2ಎ, 2ಬಿ, 3ಎ, ಮತ್ತು 3ಬಿ ಅಭ್ಯರ್ಥಿಗಳಿಗೆ 38 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ 40 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ. ಎಲ್ಲಾ ವರ್ಗಕ್ಕೂ ಕನಿಷ್ಠ ವಯೋಮಿತಿ 18 ವರ್ಷಗಳಾಗಿರುತ್ತದೆ.


ನಿಗಧಿತ ಆಯ್ಕೆ ಕೇಂದ್ರಗಳಲ್ಲಿ ಮೀಸಲಾತಿ ಪ್ರಕಾರ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಗರಿಷ್ಠ 60 ವರ್ಷ ವಯೋಮಾನದವರೆಗಿನ ಅರ್ಹ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. 40 ರಿಂದ 60 ವರ್ಷದೊಳಗಿನ ಅಭ್ಯರ್ಥಿಗಳನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಹಾಗೂ ಈ ಹಿಂದೆ ಸರ್ಕಾರಿ ಇಲಾಖೆಯಲ್ಲಿ ವಿಶೇಷವಾಗಿ ಈ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಗುತ್ತಿಗೆ ಆಧಾರದ ವೈದ್ಯರನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು. ಈ ಒಪ್ಪಂದದ ನೇಮಕಾತಿಯು ಕ್ರಮಬದ್ಧ ನೇಮಕಾತಿ ಆದ ತಕ್ಷಣ ಮುಕ್ತಾಯವಾಗುತ್ತದೆ. ಆಸಕ್ತಿ ಉಳ್ಳವರು ಸೂಚಿತ ದಿನಾಂಕದಂದು ಹಾಜರಾಗಬಹುದು. 
ವಿಮಾ ವೈದ್ಯಾಧಿಕಾರಿಗಳ 32 ಹುದ್ದೆಗಳ ನೇಮಕಾತಿಗಾಗಿ ಸಮತಳ ಮೀಸಲಾತಿಯಂತೆ ನಿಗದಿಪಡಿಸಲಾಗಿದೆ. ಮಂಗಳೂರು ವಲಯದಲ್ಲಿ ಮಂಗಳೂರಿನ ಶಿವಭಾಗ್, ಕದ್ರಿ, ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ, ದಾವಣಗೆರೆ ವಲಯದಲ್ಲಿ ದಾವಣಗೆರೆಯ ನಿಟ್ಟುವಲ್ಲಿ, ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ, ಬೆಳಗಾವಿ ವಲಯದಲ್ಲಿ  ಬೆಳಗಾವಿಯ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ, ಮೈಸೂರು ವಲಯದ ಮೈಸೂರಿನ ಕೆ.ಆರ್.ರಸ್ತೆಯಲ್ಲಿರುವ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ, ಹುಬ್ಬಳ್ಳಿ ವಲಯದ ಹುಬ್ಬಳ್ಳಿಯ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ, ಬೆಂಗಳೂರು ವಲಯದ ಇಂದಿರಾನಗರ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಜನವರಿ 21 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ.

ಅರ್ಜಿಯೊಂದಿಗೆ ಒದಗಿಸಬೇಕಾದ ದಾಖಲೆಗಳು: ಜನ್ಮದಿನಾಂಕವನ್ನು ಸಮರ್ಥಿಸುವ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಕುಮಿಲೇಟಿವ್ ದಾಖಲೆ ಪ್ರತಿ, ಶೈಕ್ಷಣಿಕ ದಾಖಲೆಗಳು, ಮೀಸಲಾತಿ ಬಯಸುವವರು ಸರ್ಕಾರಿ ಆದೇಶದನ್ವಯ ಸಕ್ಷಮ ಪ್ರಾಧಿಕಾರದಿಂದ ಪಡೆದ ನಿಗಧಿತ ಜಾತಿ ಪ್ರಮಾಣ ಪತ್ರಗಳ ದೃಢೀಕೃತ ಒಂದು ಸೆಟ್ ನ್ನು ಅರ್ಜಿಯೊಂದಿಗೆ ಒದಗಿಸಬೇಕು.     3.5x 4.5 ಅಳತೆಯ ಇತ್ತೀಚಿನ 2 ಭಾವಚಿತ್ರಗಳ ಪೈಕಿ ಒಂದನ್ನು ಅರ್ಜಿಗೆ ಅಂಟಿಸಿ ಮತ್ತೊಂದನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಆಯಾ ಚಿಕಿತ್ಸಾಲಯಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು. 
ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸುವಾಗ ಎಂ.ಬಿ.ಬಿ.ಎಸ್. ಪದವಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಮೀಸಲಾತಿಗನುಗುಣವಾಗಿ ಆದ್ಯತೆ ನೀಡಿ ಕಡಿಮೆ ಅಂಕ ಗಳಿಸಿರುವ ಅಭ್ಯರ್ಥಿಗಳು ರಾಜ್ಯದ ಯಾವುದೇ ಭಾಗದಲ್ಲಾದರೂ ಸೇವೆ ಮಾಡಲು ಸಹಮತ ವ್ಯಕ್ತಪಡಿಸಿದಲ್ಲಿ ಅಂತಹವರನ್ನು ಕಾಯ್ದಿರಿಸಿದ ಪಟ್ಟಿಯಲ್ಲಿರಿಸಿ ಖಾಲಿ ಉಳಿದ ಸ್ಥಳಗಳಿಗೆ ನೇಮಕ ಮಾಡಲಾಗುವುದು. 
ಅರ್ಜಿ ನಮೂನೆ ಮತ್ತು ವಿವರಗಳನ್ನು ಇಲಾಖೆಯ ವೆಬ್ ಸೈಟ್ www.esisms.karnataka.gov.in ಮೂಲಕ ಪಡೆಯಬಹುದು.  ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಆಯ್ಕೆ ಸಮಿತಿಯು ಹೊಂದಿರುತ್ತದೆ. ಈ ಬಗ್ಗೆ ಯಾವುದೇ ಶಿಫಾರಸ್ಸು ಮತ್ತು ಮನವಿಗಳಿಗೆ ಮಾನ್ಯತೆ ಇರುವುದಿಲ್ಲ. ನೇಮಕಾತಿ ಪ್ರಾಧಿಕಾರ ತೀರ್ಮಾನವನ್ನು ಪ್ರಶ್ನಿಸುವ ಅಧಿಕಾರವು ಬೆಂಗಳೂರು ನಗರ ವ್ಯಾಪ್ತಿಗೊಳಪಟ್ಟಿರುತ್ತದೆ. 
ಹೆಚ್ಚಿನ ಮಾಹಿತಿಗಾಗಿ ಸ್ಥಿರ ದೂರವಾಣಿ ಸಂಖ್ಯೆ: 080-23324216 / 23324218 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರಿನ ರಾಜಾಜಿನಗರದ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)