ಬೆಂಗಳೂರು : ರಾಯಚೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲಿ ಮಟ್ಕಾ, ಜೂಜು, ಅಕ್ರಮ ಮರಳುಗಾರಿಕೆ ಕಳ್ಳತನದಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸರ್ಕಾರವು ಸಿಪಿಐ ರವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನೇಮಕ ಮಾಡಿ ವಿಶೇಷ ತಂಡವನ್ನು ರಚನೆ ಮಾಡಿದ್ದು, ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿಯನ್ನು ಪಡೆದು ದಾಳಿ ಮಾಡಿ ಕಾನೂನು ಕ್ರಮ ವಹಿಸಲಾಗುತ್ತಿದೆ. ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮಗಳಿಗೆ ಬೀಟ್ ಸಿಬ್ಬಂದಿಯವರನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಯವರು ತಮ್ಮ ತಮ್ಮ ಬೀಟ್ ನಲ್ಲಿ ನಡೆಯುವ ಮಟ್ಕಾ, ದಂಧೆ ಹಾಗೂ ಇಸ್ಪೀಟ್, ಜೂಜಾಟಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಮಾಹಿತಿ ನೀಡುತ್ತಿದ್ದು ದಾಳಿ ಮಾಡಿ ಪ್ರಕರಣಗಳು ದಾಖಲಾಗುತ್ತಿವೆ ಎಂದು ಗೃಹ ಸಚಿವ ಡಾ: ಜಿ. ಪರಮೇಶ್ವರ್ ವಿಧಾನಭೆಯಲ್ಲಿ ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಅವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಹಾಗೂ ಸ್ವತಂ ತಮಗೆ ರಕ್ಷಣೆ ನೀಡಬೇಕೆಂದು ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದರು. ಗೃಹ ಸಚಿವರ ಡಾ: ಜಿ. ಪರಮೇಶ್ವರ್ ಅವರು ಈ ವಿಷಯವು ಕೇವಲ ದೇವದುರ್ಗಕ್ಕೆ ಸೀಮಿತವಾಗಿರದೆ ಇಡೀ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಸದರಿ ವಿಷಯವನ್ನು ಗಮನಿಸಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸರ್ಕಾರ ಹಲವು ಕಾನೂನು ಕ್ರಮಗಳನ್ನು ತೆಗೆದುಕೊಂಡಿದೆ. ಮರಳು ದಂದೆಯು ಮೈನ್ಸ್ ಅಂಡ್ ಜುವಾಲಜಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಇದು ಆ ಇಲಾಖೆಯ ಜವಾಬ್ದಾರಿಯಾಗಿದೆ. ಇಲಾಖೆಯ ಹಂತದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಸಮಿತಿಯು ಈ ವಿಷಯದ ಬಗ್ಗೆ ದೂರುಗಳು ದಾಖಲಾದಲ್ಲಿ ಕೇಸ್ ರಿಜಿಸ್ಟರ್ ಮಾಡಿ ಕಾನೂನಿನ ರೀತ್ಯ ಕ್ರಮ ವಹಿಸಬೇಕಾಗಿದೆ. ಈಗಾಗಲೇ ಟಾಸ್ಕ್ ಪೋರ್ಸ್ ನ್ನು ರಚಿಸಿ, ಅಲ್ಲಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಅಲ್ಲದೇ ಸ್ಯಾಂಡ್ ಟಾಸ್ಕ್ ಪೋರ್ಸ್ ನ್ನು ಸಹ ರಚನೆ ಮಾಡಿದೆ ಎಂದು ಗೃಹ ಸಚಿವ ಉತ್ತರಿಸಿದರು.
ರಾಯಚೂರು ಜಿಲ್ಲೆಯಲ್ಲಿ 2025ರ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55ರನ್ವಯ ಗಡಿಪಾರು ಮಾಡುವ ಬಗ್ಗೆ 28 ಪ್ರಕರಣಗಳು ಸಕ್ಷಮ ಪ್ರಾಧಿಕಾರವು ಗಡಿಪಾರು ಆದೇಶವನ್ನು ಹೊರಡಿಸಿದೆ, ಉಳಿದ 18 ಪ್ರಕರಣಗಳು ಪರಿಶೀಲನೆಯಲ್ಲಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.
ವಿಧಾನಸಭೆಯ ಶಾಸಕರಿಗೆ ರಕ್ಷಣೆ – ಗೃಹ ಸಚಿವ ಡಾ: ಜಿ.ಪರಮೇಶ್ವರ್
ದೇವದುರ್ಗ ಶಾಸಕಿ ಕರೆಮ್ಮ ಅವರು ಅಕ್ರಮ ಮರಳುಗಾರಿಕೆ ವಿರುದ್ದ ದನಿ ಎತ್ತಿದಕ್ಕೆ ನಿರಂತರ ಬೆದರಿಕೆಗಳು ಬರುತ್ತಿದ್ದು, ನನಗೆ ರಕ್ಷಣೆ ನೀಡಬೇಕೆಂದು ಪ್ರಸ್ತಾಪಿಸಿದರು, ದೇವದುರ್ಗದ ಕ್ಷೇತ್ರದ ಶಾಸಕರಿಗೆ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಕಾನೂನಾತ್ಮಕ ಕೆಲಸ ಮಾಡುತ್ತಿದೆ. ಇದು ಸಾಮಾನ್ಯ ವಿಷಯವಲ್ಲ ಕೇವಲ ದೇವದುರ್ಗ ಶಾಸಕರಿಗೆ ಮಾತ್ರವಲ್ಲದೇ ಎಲ್ಲಾ ಶಾಸಕರಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಬ್ದಾರಿಯಾಗಿರುತ್ತದೆ..ಈ ಬಗ್ಗೆ ವಿಶೇಷವಾಗಿ ಚರ್ಚಿಸಿ ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು ಎಂದು ವಿಧಾನಸಭೆಯಲ್ಲಿ ಗೃಹ ಸಚಿವರ ಡಾ: ಜಿ. ಪರಮೇಶ್ವರ ಹೇಳಿದರು.