ಬೆಂಗಳೂರು : ನನ್ನ ಮೂವತ್ತು ವರ್ಷಗಳ ವೃತ್ತಿ ಜೀವನದಲ್ಲಿ ಮೂರು ವರ್ಷಗಳ ಕಾಲ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದು ಅತ್ಯಂತ ದೊಡ್ಡ ಗೌರವವಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ಅವರು ಹರ್ಷ ವ್ಯಕ್ತಪಡಿಸಿದರು. ಇಂದು ಹೈಕೋರ್ಟ್‍ನ ಪ್ರಧಾನ ಪೀಠದ ಕೋರ್ಟ್ ಹಾಲ್ ನಲ್ಲಿ ಅವರ ನಿವೃತ್ತಿ ಪ್ರಯುಕ್ತ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ನ್ಯಾಯಾಲಯಗಳಲ್ಲಿ ಕೆಲಸ ಮಾಡುವುದು ಆತ್ಮಸಾಕ್ಷಿ ಇರುವ ಕಡೆ ಕೆಲಸ ಮಾಡಿದಂತೆ. ಇಲ್ಲಿ ಕೇವಲ ವ್ಯಾಜ್ಯಗಳನ್ನು ಇತ್ಯರ್ಥ ಮಾಡುವುದಲ್ಲದೆ ಸಂವಿಧಾನವನ್ನು ವ್ಯಾಖ್ಯಾನಿಸುತ್ತೇವೆ ಎಂದು ಹೇಳಿದರು. ಕೃತಕ ಬುದ್ಧಿಮತ್ತೆ ಇಲ್ಲದ ದಿನಗಳಲ್ಲಿ ಕಾನೂನು ಕುರಿತು ಸಹೋದ್ಯೋಗಿಗಳೊಂದಿಗೆ ಮಾಡಿದ ಚರ್ಚೆ, ಹಂಚಿಕೊಂಡ ಅನುಭಗಳು ಪ್ರಕರಣಗಳನ್ನು ಇತ್ಯರ್ಥಪಡಿಸಲು ನೆರವಾಗಿವೆ. ಅಲ್ಲದೆ, ತಮ್ಮ ಕೆಲಸಕ್ಕೆ ನೆರವಾದ ಅಧಿಕಾರಿಗಳಿಂದ ಹಿಡಿದು ಗನ್ ಮ್ಯಾನ್, ತನಕ ಎಲ್ಲಾ ಸಿಬ್ಬಂದಿಗಳನ್ನು ಸ್ಮರಿಸಿ ಎಲ್ಲರಿಗೂ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.
ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದು ಅತ್ಯಂತ ಗೌರವ: ನ್ಯಾ. ಉಮೇಶ್ ಎಂ ಅಡಿಗ
January 08, 2026
0
ಈ ಬೀಳ್ಕೊಡುಗೆ ಸಂದರ್ಭದಲ್ಲಿ ಮಾತನಾಡಿದ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ವಿಭು ಬಖ್ರು ಅವರು ಉಮೇಶ್ ಎಂ ಅಡಿಗ ಅವರು ನ್ಯಾಯಮೂರ್ತಿಗಳಾಗಿ ಪ್ರಕರಣಗಳ ವಿಚಾರಣೆ, ತೀರ್ಪು ಕಾನೂನುಗಳನ್ನು ಅತ್ಯುತ್ತಮವಾಗಿ ವಿಶ್ಲೇಷಿಸಿದ್ದಾರೆ. ನ್ಯಾಯಾಂಗದ ವಿವಿಧ ಆಡಳಿತಾತ್ಮಕ ಮತ್ತು ಸಂಶೋಧನಾತ್ಮಕ ಕೆಲಸಗಳಲ್ಲೂ ಅವರು ತೊಡಗಿದ್ದರು ಎಂದು ಅವರ ಸೇವೆಯನ್ನು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನ ಅಧ್ಯಕ್ಷರಾದ ವಿ.ಡಿ. ಕಮರಡ್ಡಿ ಅವರು ಮಾತನಾಡಿ ಅನೇಕ ಸ್ಥಳಗಳಲ್ಲಿ ವಿವಿಧ ವೃಂದಗಳಲ್ಲಿ ಸೇವೆ ಸಲ್ಲಿಸಿರುವ ಗೌರವಾನ್ವಿತ ನ್ಯಾಯಮೂರ್ತಿಗಳಾದ ಉಮೇಶ್ ಎಂ ಅಡಿಗ ಅವರು ಯಾವಾಗಲೂ ಮುಕ್ತ ಹೃದಯ ಮತ್ತು ಮುಕ್ತ ಮನಸ್ಸಿನವರಾಗಿದ್ದರು ಮತ್ತು ಬಾರ್ ಕೌನ್ಸಿಲ್‍ನ ಎಲ್ಲಾ ಸದಸ್ಯರನ್ನು ಸಮಾನವಾಗಿ ನಡೆಸಿಕೊಂಡಿದ್ದಾರೆ ಎಂದರು.
ಗೌರವಾನ್ವಿತ ನ್ಯಾಯಮೂರ್ತಿಗಳಾದ ಉಮೇಶ್ ಎಂ ಅಡಿಗ ಅವರ ಸರಳತೆ, ಮುಕ್ತ ಹೃದಯ, ಮುಕ್ತ ಮನಸ್ಸು ಮತ್ತು ನೇರ ನಡೆಗಳು ವಕೀಲರ ಮನಸ್ಸಿನಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ನ್ಯಾಯಾಧೀಶರಾಗಿ ಅವರು ಎಂದಿಗೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಿಲ್ಲ ಮತ್ತು ಪ್ರಕರಣಗಳ ಸ್ವರೂಪವು ಸೂಕ್ಷ್ಮವಾಗಿರಲಿ ಅಥವಾ ಅತ್ಯಂತ ಮಹತ್ವದ್ದಾಗಿರಲಿ, ಅವುಗಳಿಂದ ಹಿಂಜರಿಯಲಿಲ್ಲ. ನಿಮ್ಮಂತವರನ್ನು ಗೌರವಾನ್ವಿತ ಹೈಕೋರ್ಟ್‍ನ ನ್ಯಾಯಾಧೀಶರನ್ನಾಗಿ ಹೊಂದಿದಕ್ಕೆ ನಾವೆಲ್ಲರೂ ಮತ್ತು ಕರ್ನಾಟಕದ ಜನರು ಅದೃಷ್ಟಶಾಲಿಗಳು ಎಂದು ಹೇಳಿದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯ ನ್ಯಾಯಾಧೀಶರುಗಳು, ಕರ್ನಾಟಕ ಬಾರ್ ಕೌನ್ಸಿಲ್‍ನ ಉಪಾಧ್ಯಕ್ಷರು, ಹೆಚ್ಚುವರಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್‍ಗಳು, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಹೈಕೋರ್ಟ್‍ನಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.