ಬೆಂಗಳೂರು : 77ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರುಗಳನ್ನು ಪದ್ಮ ಪುರಸ್ಕಾರಕ್ಕೆ ಹಾಗೂ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿರುವ ರಾಜ್ಯದ ಎಲ್ಲಾ ಸಾಧಕರಿಗೆ ಸದನದ ಪರವಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ಅಭಿನಂದನೆಗಳನ್ನು ಸಲ್ಲಿಸಿದರು.
ಸಾಧಕರ ಪೈಕಿ ರಾಜ್ಯದ ಅಕ್ಷರ ಬ್ರಹ್ಮ ಎಂದೇ ಖ್ಯಾತರಾಗಿರುವ ಕನ್ನಡ, ಸಂಸ್ಕøತ, ತೆಲುಗು ಮತ್ತು ಪ್ರಾಕೃತ ಭಾμÉಗಳಲ್ಲಿ 1300ಕ್ಕೂ ಹೆಚ್ಚು ಅವಧಾನಗಳನ್ನು ಪ್ರದರ್ಶಿಸಿ, 24 ಗಂಟೆ ನಿರಂತರವಾಗಿ ಕಾವ್ಯ ರಚಿಸುವ ಮೂಲಕ ದಾಖಲೆ ನಿರ್ಮಿಸಿರುವ ಶತವಧಾನಿ ಡಾ. ಆರ್. ಗಣೇಶ್ ಅವರಿಗೆ ಪದ್ಮಭೂಷಣ, ಸ್ವತಃ ಹಿಮೋಫಿಲಿಯಾ ಖಾಯಿಲೆಗೆ ತುತ್ತಾಗಿ, ಈ ರೀತಿಯ ರೋಗಿಗಳಿಗೆ ನೆರವಾಗಲು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸ್ಥಾಪಿಸಿದ ವೈದ್ಯ ಡಾ. ಸುರೇಶ್ ಹನಗವಾಡಿ, ಕೆ.ಎಲ್.ಇ ಸೊಸೈಟಿಯನ್ನು ಸ್ಥಾಪಿಸಿ, ನಾಡಿನ ಜನತೆಗೆ ಶಿಕ್ಷಣ ಹಾಗೂ ರೋಗಿಗಳಿಗೆ ವಿಶ್ವದರ್ಜೆ ಚಿಕಿತ್ಸೆ ಸಿಗುವಂತೆ ಮಾಡಿದ ಡಾ. ಪ್ರಭಾಕರ ಕೋರೆ, ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅಂಕೇಗೌಡ, ನಿರ್ಗತಿಕ ಮಹಿಳೆಯರ ಸಬಲೀಕರಣ ಮತ್ತು ಮಕ್ಕಳ ಸೇವೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಸಿ ಸದ್ದಿಲ್ಲದೆ ಸೇವೆ ಸಲ್ಲಿಸಿರುವ ಡಾ. ಎಸ್.ಜಿ. ಸುಶೀಲಮ್ಮ, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ಪ್ರಸಾರ ಭಾರತಿಯ ಮಾಜಿ ಸಿಇಒ ಶಶಿಶೇಖರ್ ವೆಂಪತಿ, ಏರೋಸ್ಪೇಸ್ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ವಿಜ್ಞಾನಿ ಶ್ರೀಮತಿ ಶುಭಾ ವೆಂಕಟೇಶ್ ಅಯ್ಯಂಗಾರ್ ಅವರುಗಳಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಹಾಗೂ ಪ್ರೆಶರ್ ಕುಕ್ಕರ್ ಬ್ಲಾಸ್ಟ್ ಆಗದಿರಲು ಸೇಫ್ಟಿವಾಲ್ ಅಭಿವೃದ್ಧಿ ಪಡಿಸುವಲ್ಲಿ ಮಹೋನ್ನತ ಸಾಧನೆಗೈದ ಖ್ಯಾತ ಕೈಗಾರಿಕೋದ್ಯಮಿ ದಿವಂಗತ ಟಿ.ಟಿ. ಜಗನ್ನಾಥನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಅಲ್ಲದೇ, ಅನನ್ಯ ಸೇವೆ ಸಲ್ಲಿಸಿದ್ದಕ್ಕೆ ಕುಂದು ಕೊರತೆ ಹಾಗೂ ಮಾನವ ಹಕ್ಕುಗಳ ವಿಭಾಗದ ಎಡಿಜಿಪಿ ದೇವಜ್ಯೋತಿ ರೇ, ಬೆಂಗಳೂರಿನ ಹಲಸೂರು ಉಪ ವಿಭಾಗದ ಎಸಿಪಿ ಟಿ. ರಂಗಪ್ಪ ಅವರುಗಳಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕವನ್ನು ಘೋಷಣೆ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.