ಬೆಂಗಳೂರು : ಕರ್ನಾಟಕ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಸರ್ಕಾರದ ಅಧಿಕಾರಿ/ಸಿಬ್ಬಂದಿಗಳ ಚಲನ-ವಲನ ಹಾಗೂ ಹಾಜರಾತಿ ಕುರಿತ ‘ಕರ್ತವ್ಯ’ ತಂತ್ರಾಂಶವು ಬಯೋಮೆಟ್ರಿಕ್ ತಂತ್ರಜ್ಞಾನ ಮತ್ತು ಮುಖ ಗುರುತಿಸುವಿಕೆ ವಿಭಾಗದಲ್ಲಿ ‘ಗವರ್ನನ್ಸ್ ನೌ – ಡಿಜಿಟಲ್ ಟ್ರಾನ್ಸ್ ಫರ್ಮೇಷನ್ ಅವಾಡ್ರ್ಸ್ 2025’ ರ ಅಡಿಯಲ್ಲಿ ‘ಅವಾರ್ಡ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ಕರ್ನಾಟಕವನ್ನು ಡಿಜಿಟಲ್ ಆಡಳಿತ ಮೂಲಸೌಕರ್ಯದಲ್ಲಿ ರಾಷ್ಟ್ರದ ಮುಂಚೂಣಿ ರಾಜ್ಯವಾಗಿ ಗುರುತಿಸುವಂತೆ ಮಾಡಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ತಿಳಿಸಿದ್ದಾರೆ.ಕರ್ನಾಟಕ ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ‘ಕರ್ತವ್ಯ’ – ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಏಕೀಕೃತ ಹಾಜರಾತಿ ವೇದಿಕೆಯನ್ನು ಜಾರಿಗೆ ತಂದಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಅಡಿಯಲ್ಲಿರುವ ಇ-ಆಡಳಿತ ಕೇಂದ್ರವು ಈ ತಂತ್ರಾಂಶವನ್ನು ಸಂಪೂರ್ಣವಾಗಿ ಆಂತರಿಕವಾಗಿ ಅಭಿವೃದ್ಧಿಪಡಿಸಿದ್ದು, ಹಳೆಯ ಹಸ್ತಚಾಲಿತ ಮತ್ತು ಖಾಸಗಿ ಮಾರಾಟಗಾರರ ಅವಲಂಬಿತ ವ್ಯವಸ್ಥೆಗಳನ್ನು ದೂರವಿಟ್ಟು, ಸರ್ಕಾರವೇ ಅಭಿವೃದ್ಧಿ ಪಡಿಸಿರುವ ಈ ತಂತ್ರಾಂಶವು ಅತ್ಯಂತ ನವೀಕೃತ ತಂತ್ರಾಂಶ ಹೊಂದಿದ್ದು, ಸಿಬ್ಬಂದಿಗಳ ಹಾಜಾರಾತಿಯನ್ನು ಅತ್ಯಂತ ನಿಖರವಾಗಿ ಸೆರೆಹಿಡಿಯಲು ಸಹಾಯಕವಾಗಿದೆ.
ಈ ತಂತ್ರಾಂಶದಲ್ಲಿ ಸುಧಾರಿತ ಸೌಲಭ್ಯಗಳನ್ನು ಅಳವಡಿಸಲಾಗಿದ್ದು,AI ಮುಖ ಗುರುತಿಸುವಿಕೆ: ವ್ಯಕ್ತಿಯ ಉಪಸ್ಥಿತಿಯನ್ನು ಖಚಿತಪಡಿಸುವ 'ಲೈವ್ನೆಸ್ ಡಿಟೆಕ್ಷನ್' ತಂತ್ರಜ್ಞಾನದೊಂದಿಗೆ ಎಐ-ಆಧಾರಿತ ಮುಖ ಗುರುತಿಸುವಿಕೆ. ಜಿಯೋಫೆನ್ಸಿಂಗ್: ಸ್ಥಳ-ಪರಿಶೀಲಿತ ಹಾಜರಾತಿಗಾಗಿ GIS ಆಧಾರಿತ ಜಿಯೋಫೆನ್ಸಿಂಗ್ ವ್ಯವಸ್ಥೆ. ಮೊಬೈಲ್ ಆಪ್: ಸಿಬ್ಬಂದಿಗಳ ಅನುಕೂಲಕ್ಕಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ. ನೈಜ-ಸಮಯದ ಮೇಲ್ವಿಚಾರಣೆ: ಎಲ್ಲಾ ಆಡಳಿತಾತ್ಮಕ ಹಂತಗಳಲ್ಲಿ ಮೇಲ್ವಿಚಾರಣೆಗಾಗಿ ಕೇಂದ್ರೀಕೃತ ಡ್ಯಾಶ್ ಬೋರ್ಡ್‍ಗಳನ್ನು ನೀಡಲಾಗಿದೆ.
ಪ್ರಸ್ತುತ, ವಿವಿಧ ಇಲಾಖೆಗಳ ಸುಮಾರು 1.3 ಲಕ್ಷ ಸರ್ಕಾರಿ ನೌಕರರು ಕರ್ತವ್ಯ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಇದು ವ್ಯವಸ್ಥೆಯ ಕಾರ್ಯಾಚರಣೆಯ ಸಿದ್ಧತೆಯನ್ನು ಪ್ರತಿಬಿಂಬಿಸುತ್ತಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ಸಂಪೂರ್ಣವಾಗಿ ವಿಸ್ತರಿಸಲು ಯೋಜಿಸಲಾಗಿದೆ.
ಪಾರದರ್ಶಕತೆ ಮತ್ತು ಹೊಣೆಗಾರಿಕೆ: ಸಚಿವಾಲಯದಿಂದ ಹಿಡಿದು ಕ್ಷೇತ್ರ ಕಚೇರಿಗಳವರೆಗೆ ನೈಜ-ಸಮಯದ ಹಾಜರಾತಿ ಗೋಚರತೆಯಿಂದ ಆಡಳಿತಾತ್ಮಕ ಶಿಸ್ತು ಬಲಗೊಳ್ಳುತ್ತದೆ. ದತ್ತಾಂಶ ಸುರಕ್ಷತೆ: ಎಐ ಮತ್ತು ಜಿಐಎಸ್ ಮೌಲ್ಯೀಕರಣವು ಪ್ರಾಕ್ಸಿ ಹಾಜರಾತಿಯನ್ನು ತಡೆಯುತ್ತದೆ ಮತ್ತು ಹಾಜರಾತಿ ದತ್ತಾಂಶವನ್ನು ಸುರಕ್ಷಿತವಾಗಿರಿಸುತ್ತದೆ. ವೆಚ್ಚ ಉಳಿತಾಯ: ಖಾಸಗಿ ಬಯೋಮೆಟ್ರಿಕ್ ಹಾರ್ಡ್‍ವೇರ್ ಮತ್ತು ನಿರ್ವಹಣಾ ಒಪ್ಪಂದಗಳನ್ನು ಹಂತ-ಹಂತವಾಗಿ ಕಡಿಮೆ ಮಾಡುವ ಮೂಲಕ ಹಣಕಾಸಿನ ದಕ್ಷತೆಯನ್ನು ಹೆಚ್ಚಿಸುತ್ತದೆ. ಆಧುನಿಕ ಹೆಚ್ ಆರ್ ನಿರ್ವಹಣೆ: ರಜೆ ಮತ್ತು ಓಓಡಿ ಅನುಮೋದನೆ ಪ್ರಕ್ರಿಯೆಗಳನ್ನು ಹೆಚ್‍ಆರ್‍ಎಂಎಸ್ ನೊಂದಿಗೆ ಸಂಯೋಜಿಸಲಾಗಿದ್ದು, ವೇತನದಾರರ ನಿರ್ವಹಣೆಯನ್ನು ಸುಗಮಗೊಳಿಸುವುದು ಈ ತಂತ್ರಾಂಶದ ಪ್ರಯೋಜನಕಾರಿ ವಿಷಯಗಳಾಗಿವೆ.
ಕರ್ತವ್ಯ (KAAMS) ಕೇವಲ ಒಂದು ಐಟಿ ವ್ಯವಸ್ಥೆಯಾಗಿರದೆ, ಇದು ಕರ್ನಾಟಕ ಸರ್ಕಾರದ ಪ್ರಮುಖ ಆಡಳಿತ ಸುಧಾರಣಾ ಉಪಕ್ರಮವಾಗಿದೆ. ಇದು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.