ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಬಿ.ಕೆ. ಶಿವರಾಂ ಉದ್ಘಾಟನೆ –ವೈಭವದ ಆಚರಣೆ

varthajala
0

ಬೆಂಗಳೂರು, ಫೆ.16:ಮಲ್ಲೇಶ್ವರದಲ್ಲಿರುವ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸೋಮವಾರ ಮಧ್ಯಾಹ್ನ ಭವ್ಯವಾಗಿ ನಡೆದ ಬ್ರಹ್ಮರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಕ್ತಿ ಸಾಗರದಲ್ಲಿ ಮಿಂದೆದ್ದರು. ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರ ಉಪಸ್ಥಿತಿಯಲ್ಲಿ ವಿಶಿಷ್ಟ ಹೂವಿನ ಅಲಂಕಾರ ಮಾಡಲಾಗಿದ್ದು, ದೇವಾಲಯವು ಭಕ್ತಿಭಾವದಿಂದ ಕಂಗೊಳಿಸಿತು. ರಾಜ್ಯದ 15ಕ್ಕೂ ಹೆಚ್ಚು ವಾದ್ಯ, ಕಲಾ ತಂಡಗಳು ಮತ್ತು ತಮಿಳುನಾಡಿನ ವಿಶೇಷ ತಮಟೆ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಬ್ರಹ್ಮರಥೋತ್ಸವದ ರಥವು ಭಕ್ತರ ಘೋಷಣೆಗಳ ನಡುವೆ ಮಲ್ಲೇಶ್ವರದ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ಸಾಗಿತು. 



ರಥೋತ್ಸವದ ವೇಳೆ ಭಕ್ತರಿಗೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ಭಕ್ತಿ-ಭಾವದಿಂದ ರಥೋತ್ಸವವನ್ನು ಕಣ್ತುಂಬಿಕೊಂಡರು. ಮಹಾಶಿವರಾತ್ರಿ ಪ್ರಯುಕ್ತ ಎರಡು ದಿನಗಳ ಕಾಲ ವಿಶೇಷ ಪೂಜೆ, ರುದ್ರಾಭಿಷೇಕ, ಅಲಂಕಾರ, ಶಿವನಾಮ ಸಂಕೀರ್ತನೆ, ಭಜನೆ ಮತ್ತು ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಮಕ್ಕಳಿಂದ ಶಿವ–ಪಾರ್ವತಿ ವೇಷಧಾರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಭಕ್ತರಿಗೆ ಉಚಿತ ಕುಡಿಯುವ ನೀರು, ಆರೋಗ್ಯ ತಪಾಸಣೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, “ಯುವ ಸಮೂಹದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು ಹಾಗೂ ಪರಂಪರೆಯನ್ನು ಉಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದರು. 

ಕಾರ್ಯಕ್ರಮದಲ್ಲಿ ಬಿಕೆ ಹರಿಪ್ರಸಾದ್, ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್, ಪ್ಯಾಲೇಸ್ ಗುಟ್ಟಹಳ್ಳಿಯ ಚಂದ್ರಶೇಖರ್ ನಾಯ್ಡು. ಕಾಡು ಮಲ್ಲೇಶ್ವರ ಬಳಗದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.








Post a Comment

0Comments

Post a Comment (0)