ಬೆಂಗಳೂರು :ಜನರು ಉಳಿತಾಯದ ಹೂಡಿಕೆಗಳು ಸರ್ಕಾರದ (MSIL) ಎಂ ಎಸ್ ಐ ಎಲ್ ಸಂಸ್ಥೆಯಲ್ಲಿ ಸುಭದ್ರವಾಗಿರುವ ಗ್ಯಾರಂಟಿಯಾಗಿದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ ಎಂ.ಎಸ್.ಐ.ಎಲ್ ಚಿಟ್ಸ್ (MSIL Chits) ಹೊಸ ಸಾಫ್ಟ್ ವೆರ್ ಹಾಗೂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು ಎಂಎಸ್ ಐ ಎಲ್ ಸರ್ಕಾರಿ ಸಂಸ್ಥೆಯು ಹಲವು ದಶಕಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. 2005 ರಿಂದ ಚಿಟ್ ಫಂಡ್ ವ್ಯವಸ್ಥೆ ಪ್ರಾರಂಭವಾಗಿದೆ. ಉಳಿತಾಯದ ಸಂಸ್ಕøತಿ ಅತ್ಯವಶ್ಯ.ವಾಗಿದ್ದು, ಅಗತ್ಯ ಸಂದರ್ಭದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ. ಜಾತಿವರ್ಗಗಳ ಬೇಧವಿಲ್ಲದೇ ಜಾರಿಯಾಗುವ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳಿಂದ ಉಳಿತಾಯವಾಗುವ ಹಣವನ್ನು ಜನರು ವಿಶೇಷವಾಗಿ ಮಹಿಳೆಯರು ಹೂಡಿಕೆ ಮಾಡಬೇಕು ಎಂದರು.
ಜನರ ಹೂಡಿಕೆ ಭದ್ರತೆಯ ಖಾತ್ರಿ:ಹೂಡಿಕೆ ಹಣವನ್ನು ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಎಂ.ಎಸ್.ಐ.ಎಲ್.ನ ಚಿಟ್ ಫಂಡ್ ಈ ಭರವಸೆಯನ್ನು ನೀಡುತ್ತದೆ. ಸಾಮಾನ್ಯವಾಗಿ ನಡೆಯುವ ಚೀಟಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯವಿರುತ್ತದೆ. ಆದರೆ ಎಂ.ಎಸ್.ಐ.ಎಲ್ ಸರ್ಕಾರಿ ಸಂಸ್ಥೆಯಾಗಿದ್ದು, ಜನರ ಹೂಡಿಕೆಗೆ ಭದ್ರತೆಯನ್ನು ಒದಗಿಸುತ್ತದೆ. ತಮ್ಮ ಹೂಡಿಕೆಯ ಕೇವಲ ಶೇ.5 ರಷ್ಟು ಲಾಭ ಪಡೆಯುವ ಸಂಸ್ಥೆ ಜನರ ಆರ್ಥಿಕ ಭದ್ರತೆಗೆ ನೆರವಾಗಿದೆ ಎಂದರು.
ಚಿಟ್ ಫಂಡ್ ವಹಿವಾಟು 10000 ಕೋಟಿ ಗೆ ಏರಿಸುವ ಗುರಿ:ಕೇರಳ ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ 47000 ಕೋಟಿ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲಿ ಕೇವಲ 500 ಕೋಟಿ ವ್ಯವಹಾರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು 10000 ಕೋಟಿ ಯಷ್ಟು ವಹಿವಾಟು ನಡೆಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಶಿಕ್ಷಣ, ಆರೋಗ್ಯ, ಮದುವೆ, ಮನೆ ಹೀಗೆ, ಜನರು ತಮ್ಮ ಅಗತ್ಯಗಳಿಗಾಗಿ ಹೂಡಿಕೆ ಮಾಡುವ ಉಳಿತಾಯದ ಮೊತ್ತ ಸುಭದ್ರವಾಗಿರುವ ಗ್ಯಾರಂಟಿ ಇದೆ. ಹಣ ಗಳಿಸುವುದು ಹಾಗೂ ಸುಭದ್ರವಾಗಿ ಹೂಡಿಕೆ ಮಾಡುವುದೂ ಮುಖ್ಯ ಎಂದರು.
ಕಿರುಸಾಲ ಪಡೆದ ಜನರ ರಕ್ಷಣೆಗಾಗಿ ಕಾಯ್ದೆ:ಎಂ.ಎಸ್.ಐ.ಎಲ್.ನ ಚಿಟ್ ಫಂಡ್ ವ್ಯವಹಾರದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಆಧುನಿಕ ತಂತ್ರಾಂಶವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಮೈಕ್ರೋ ಫೈನಾನ್ಸ್ ಗಳು ನೀಡುವ ಸಾಲದ ಸುಳಿಯಲ್ಲಿ ಅನೇಕ ಜನರು ಸಿಲುಕುತ್ತಾರೆ. ಆದ್ದರಿಂದ ಕಿರು ಸಾಲ ಮತ್ತು ಸಣ್ಣ ಸಾಲ ಅಧ್ಯಾದೇಶ 2025 ನ ರಕ್ಷಣೆ ನೀಡಲಾಗಿದೆ. ಸಾಲ ಪಡೆದ ಕಿರುಕುಳ ಅನುಭವಿಸುತ್ತಿರುವ ಜನರ ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದರು.ಬೃಹತ್ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮಾತನಾಡುತ್ತಾ, ಎಂ.ಎಸ್.ಐ.ಎಲ್ ಸಂಸ್ಥೆಯು ಜನರ ನಂಬಿಕೆಗೆ ಪಾತ್ರವಾಗಿದೆ. ಹೊಸ ಸಾಫ್ಟ್‍ವೇರ್ ಮತ್ತು ಮೊಬೈಲ್ ಆಪ್ ಅಳವಡಿಕೆಯಿಂದ ವ್ಯವಹಾರದಲ್ಲಿ ಹೆಚ್ಚಿನ ಪಾರದರ್ಶಕತೆ ಬರಲಿದ್ದು, ಗ್ರಾಹಕರು ಮನೆಯಲ್ಲೇ ಕುಳಿತು ತಮ್ಮ ಚಿಟ್ ವ್ಯವಹಾರಗಳನ್ನು ಗಮನಿಸಬಹುದು ಎಂದು ತಿಳಿಸಿದರು.
ಡಿಜಿಟಲೀಕರಣದ ಅಗತ್ಯ: ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಪ್‍ಡೇಟ್ ಆಗಬೇಕು. ಈ ಆಪ್ ಮೂಲಕ ಚಂದಾದಾರರು ಕಂತು ಪಾವತಿ, ಹರಾಜಿನ ವಿವರಗಳು ಮತ್ತು ಉಳಿತಾಯದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು ಎಂದರು.ಇದರಿಂದ ಖಾಸಗಿ ಲೇವಾದೇವಿಗಾರರ ಹಾವಳಿ ತಡೆ ಒಡ್ಡುವ ಕೆಲಸವಾಗಲಿದೆ. ಜನರು ಅನಧಿಕೃತ ಚಿಟ್ ಫಂಡ್‍ಗಳ ಮೊರೆ ಹೋಗಿ ಮೋಸ ಹೋಗುವುದನ್ನು ತಪ್ಪಿಸಲು ಎಂ.ಎಸ್.ಐ.ಎಲ್ ಸುರಕ್ಷಿತ ವೇದಿಕೆಯಾಗಿದೆ. ಡಿಜಿಟಲ್ ಸೌಲಭ್ಯಗಳಿಂದಾಗಿ ಇನ್ನಷ್ಟು ಜನಸಾಮಾನ್ಯರು ಈ ಯೋಜನೆಯ ಲಾಭ ಪಡೆಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಮುಂದಿನ ದಿನಗಳಲ್ಲಿ ಎಂ.ಎಸ್.ಐ.ಎಲ್ ಚಿಟ್ಸ್ ವಹಿವಾಟನ್ನು ರಾಜ್ಯದಾದ್ಯಂತ ಮತ್ತಷ್ಟು ವಿಸ್ತರಿಸುವ ಗುರಿ ಹೊಂದಲಾಗಿದ್ದು, ತಂತ್ರಜ್ಞಾನವು ಈ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಅವರು ಆಶಿಸಿದರು.
ಈ ಆಪ್‍ನಿಂದ ಗ್ರಾಹಕರಿಗಾಗುವ ಪ್ರಯೋಜನಗಳು:ಆನ್‍ಲೈನ್ ಪಾವತಿ: ಕಚೇರಿಗೆ ಭೇಟಿ ನೀಡದೆ ಮಾಸಿಕ ಕಂತು ಪಾವತಿಸಬಹುದು.
ಹರಾಜು ಮಾಹಿತಿ: ಹರಾಜಿನ ದಿನಾಂಕ ಮತ್ತು ಲಾಭಾಂಶದ ವಿವರಗಳನ್ನು ತಕ್ಷಣ ತಿಳಿಯಬಹುದು.
ಸುರಕ್ಷತೆ: ಸರ್ಕಾರದ ಉಸ್ತುವಾರಿಯಲ್ಲಿ ಇರುವುದರಿಂದ ಹಣಕ್ಕೆ ಸಂಪೂರ್ಣ ಭದ್ರತೆ ಇರುತ್ತದೆ.
ಈ ಸಮಾರಂಭವು ಎಂ.ಎಸ್.ಐ.ಎಲ್ ಸಂಸ್ಥೆಯನ್ನು ಆಧುನಿಕ ಹಾದಿಯಲ್ಲಿ ನಡೆಸುವ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಸೇಲ್ಸ್ ಇಂಟನ್ರ್ಯಾಷನಲ್ ಲಿಮಿಟೆಡ್ (ಎಂ.ಎಸ್.ಐ.ಎಲ್) ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.