KALASHREE UTSAV : ಮಾರ್ಚ್ 18 ರಿಂದ ಮೂರು ದಿನಗಳ ‘ಕಲಾಶ್ರೀ ಉತ್ಸವ’

varthajala
0

ಆಯೋಜನೆ : ಸಂಗೀತ ನೃತ್ಯ ಭಾರತಿ ಅಕಾಡೆಮಿ , ವಿಜಯನಗರ , ಬೆಂಗಳೂರು.

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ನಗರದ ವಿಜಯನಗರದಲ್ಲಿರುವ ಸಂಗೀತ ನೃತ್ಯ ಭಾರತಿ ಅಕಾಡೆಮಿಯಲ್ಲಿ ಮಾರ್ಚ್ 18 ರಿಂದ ಮೂರು ದಿನಗಳ ‘ಕಲಾಶ್ರೀ ಉತ್ಸವ’2021 ಅನ್ನು ಆಯೋಜಿಸಿದೆ. 

ಮಾ 18 ಸಂಜೆ 6.00 ರಿಂದ ಗುರು ಶ್ರೀಮತಿ ವಿದುಷಿ ಪದ್ಮಾ ಹೇಮಂತ್ ಪುತ್ರಿ – ಶಿಷ್ಯೆ ಕು.ಶೀತಲ್ ಹೇಮಂತ್ , ವಿದುಷಿ ಸ್ನೇಹ ನಾರಾಯಣ್ ಮತ್ತು ವಿದ್ವಾನ್ ಯೋಗೇಶ್ ಕುಮಾರರವರಿಂದ ಯುಗಳ ಭರತನಾಟ್ಯ ಪ್ರಸ್ತುತಿ, ಕರ್ನಾಟಕ ಕಲಾಶ್ರೀ ಗುರು ಡಾ.ಕೆ.ಕುಮಾರ್ ಪುತ್ರಿಯರು ಹಾಗು ಶಿಷ್ಯೆಯರಾದ  ಮೈಸೂರು ಕಲಾಮನೆ ಸಹೋದರಿಯರಾದ ಕು.ಲೇಖಾ.ಕೆ.ಎಂ ಹಾಗೂ ಕು.ನಿಧಿ ಕೆ.ಎಂ ,  ಸಂಗೀತ ನೃತ್ಯ ಭಾರತಿ ಅಕಾಡೆಮಿಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ – ಮುಖ್ಯ ಅತಿಥಿಗಳಾಗಿ ಕುಮಾರ್ ಪರ್ಫಾಮಿಂಗ್ ಸೆಂಟರ್ ಫಾರ್ ಆರ್ಟ್ ನ ಸ್ಥಾಪಕ – ನಿರ್ದೇಶಕ ಕರ್ನಾಟಕ ಕಲಾಶ್ರೀ ಗುರು ಡಾ.ಕೆ.ಕುಮಾರ್ ಭಾಗವಹಿಸುವರು.

ಮಾ 19 ಸಂಜೆ 6.00 ರಿಂದ ಸಂಗೀತ ನೃತ್ಯ ಭಾರತಿ ಅಕಾಡೆಮಿಯ ವಿದ್ಯಾರ್ಥಿಗಳಿಂದ, ಕರ್ನಾಟಕ ಕಲಾಶ್ರೀ ಗುರು ವಿದುಷಿ ಮಂಜುಳಾ ಪರಮೇಶ್ ಶಿಷ್ಯೆಯರಾದ ಕು.ಶಾಲಿನಿ ಪರಮೇಶ್ ಹಾಗು ಮಾಲಿನಿ ಪರಮೇಶ್ , ಗುರು ಶ್ರೀಮತಿ ಸುಮಾ ರಾಜೇಶ್ ರವರ ಸ್ಫೂರ್ತಿ ಸ್ಕೂಲ್ ಆಫ್  ಡ್ಯಾನ್ಸ್ ನ ತಂಡ ಹಾಗು ವಿದುಷಿ ಅಂಜನಾ ಸುಧೀಂದ್ರ ಕಲಾಚೇತನ  ಪರ್ಫಾಮಿಂಗ್ ಸೆಂಟರ್ ಫಾರ್ ಆರ್ಟ್ನ ತಂಡ ದವರಿಂದ ನೃತ್ಯ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಶಾಸ್ತ್ರೀಯ ವೇಣುವಾದಕ – ಸಂಗೀತ ಶಿಕ್ಷಕ ವಿದ್ವಾನ್ ಹೆಚ್.ಎಸ್.ವೇಣುಗೋಪಾಲ್ ಭಾಗವಹಿಸುವರು.

ಮಾ 20 ಸಂಜೆ 6.00 ರಿಂದ ನಾಟ್ಯಾಚಾರ್ಯ ವಿದ್ವಾನ್ ಮಿಥುನ್ ಶ್ಯಾಮ್ ಶಿಷ್ಯೆ ಕು.ಕಾವ್ಯ ಕಾಶೀನಾಥನ್ , ಗುರು ಶ್ರೀಮತಿ ಬಿ.ಭಾನುಮತಿ ಹಾಗೂ ಶೀಲಾ ಚಂದ್ರಶೇಖರ್ ರವರ ಶಿಷ್ಯೆಯರಾದ ವಿದುಷಿ ಅರ್ಚನಾ ಮತ್ತು ವಿದುಷಿ ಚೇತನಾರವರಿಂದ ಯುಗಳ ಭರತನಾಟ್ಯ ಪ್ರಸ್ತುತಿ ಮತ್ತು ವಿದುಷಿ ರಂಜಿತಾ ನಾಗೇಶ್ – ವಿದ್ವಾನ್ ನಾಗೇಶ್ ಜಿ.ಎಸ್.ರವರ ಶ್ರೀ ನಾಟ್ಯಭಾರತಿ ಟ್ರಸ್ಟ್ ತಂಡದಿಂದ ಗೋಕುಲ ನಿರ್ಗಮನ ನೃತ್ಯ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಭಾರತಿ ವೇಣುಗೋಪಾಲ್ ಭಾಗವಹಿಸುವರು.ಎಂದು ಆಯೋಜಕರಾದ ಶ್ರೀಮತಿ ವಿದುಷಿ ಪದ್ಮಾ ಹೇಮಂತ್ ಮತ್ತು ಬಿ.ಆರ್ ಹೇಮಂತ್ ಕುಮಾರ್ ತಿಳಿಸಿರುತ್ತಾರೆ. 



ನಾಡಿನ ನೃತ್ಯ, ಸಂಗೀತ, ಸಾಹಿತ್ಯ, ಸಮೂಹ ಮಾಧ್ಯಮ ಕ್ಷೇತ್ರಗಳಲ್ಲಿನ ಅನನ್ಯ ಕೃಷಿಮಾಡುತ್ತಿರುವ 

 ‘ ನೃತ್ಯ ಕಲಾ ಉತ್ತುಂಗ ‘ ಶ್ರೀಮತಿ ಪದ್ಮಾ ಹೇಮಂತ್ 

ನಟರಾಜನ ಒಲುಮೆಯ ಕಲೆಯಾದ ನೃತ್ಯದ ಲಯಲಾಸ್ಯಗಳನ್ನು ಮೈಯ ಕಣಕಣದಲ್ಲೂ ಆವರ್ಜಿಸಿಕೊಂಡಿರುವ ಅಪರೂಪದ

ಕಲಾವಿದೆ ಅನಂತಾನನ ಪ್ರತಿಭಾಖನಿ ಗುರು   ಶ್ರೀಮತಿ ಪದ್ಮಾ ಹೇಮಂತ್ .

ಕಲೆಯೇ ಉಸಿರೆನಿಸಿದ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ, ಅತಿಸಣ್ಣವಯಸ್ಸಿನಲ್ಲಿಯೇ,  ಅಂಗ ಪ್ರತ್ಯಂಗವಿಕ್ಷೇಪಿತ ವಾಗರ್ಥದ ಮೂಲಕ ನವರಸಗಳನ್ನು ಪ್ರತಿಪಾದಿಸುವ ನಾಟ್ಯಕಲೆಯತ್ತ ಆಕರ್ಷಿತರಾಗಿ, ನೃತ್ಯಕಲಾ ಪಯಣದ ಮೊದಲ ಹೆಜ್ಜೆಗಳನ್ನು  ಗುರು ಶ್ರೀ ಎಂ. ಸುರೇಶ್ ಅವರ ಬಳಿ ಆರಂಭಿಸಿ, ಗುರು ಶ್ರೀಮತಿ ಮಂಜುಳಾ ಪರಮೇಶ್ ಅವರಲ್ಲಿ ಕಲಿಕೆಯನ್ನು ಮುಂದುವರಿಸಿ, ತದನಂತರ ಗುರು ಶ್ರೀಮತಿ ನರ್ಮದಾ ಮತ್ತು  ಅಂತಾರಾಷ್ಟ್ರೀಯ ಖ್ಯಾತಿಯ ಡಾ. ಪದ್ಮಾ ಸುಬ್ರಮಣ್ಯಂ ಅವರ ಮಾರ್ಗದರ್ಶನದ ಭಾಗ್ಯ ಒದಗಿಬಂದು, ಇಂತಹ ಅಪ್ರತಿಮ ಕಲಾಗುರುಚತುಷ್ಟಯರ ದಾರಿದೀವಿಗೆಯ ಬೆಳಕಲ್ಲಿ ನಾಟ್ಯಕಲೆಯ ಆಳ ಹರಹು ವ್ಯಾಪ್ತಿ ವಿಸ್ತಾರಗಳನ್ನು ಅರಿತು ಪರಿಪೂರ್ಣ ನೃತ್ಯಪಟುವಾಗಿ ರೂಪುಗೊಂಡ ಸಾಧನೆ ಇವರದು.


ಅಭಿಜಾತ ಕಲಾವಿದೆಯಾದ ಇವರು ಈ ನೆಲದ ನೂರಾರು ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಪ್ರಬುದ್ಧ ವಿದ್ವತ್ಪೂರ್ಣ ನೃತ್ಯಪ್ರದರ್ಶನಗಳ ಮೂಲಕ ಕಲಾರಸಿಕಮಾನಸದಲ್ಲಿ ಚಿರಂತನವಾಗಿ ನೆಲೆಗೊಂಡಿರುವುದು ಇವರ ಕಲಾವೈದುಷ್ಯಕ್ಕೆ ನಿದರ್ಶನವಾಗಿದೆ. ಸುಮಾರು ಮೂರು ದಶಕಗಳ ಸುದೀರ್ಘ ಕಾಲದಿಂದ ‘ಸಂಗೀತ ನೃತ್ಯ ಭಾರತಿ ಕಲಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ ನೂರಾರು ನೃತ್ಯಪಟುಗಳನ್ನು ರೂಪುಗೊಳಿಸುತ್ತಿರುವ ಇವರ ಬಾಳಸಂಗಾತಿ ಸಂಗೀತಜ್ಞ ವಿದ್ವಾನ್ ಬಿ.ಆರ್.ಹೇಮಂತಕುಮಾರ್ ಹಾಗೂ ಪ್ರೀತಿಯ ಪುತ್ರಿ ನೃತ್ಯಪ್ರತಿಭಾನ್ವಿತೆ, ನಟಿ, ಗಾಯಕಿ ಶೀತಲ್ ಹೇಮಂತ್ ಅವರ ಒತ್ತಾಸೆ ಅಮೂಲ್ಯ ಕೊಡುಗೆ.ಇವರ ಮಾರ್ಗದರ್ಶನದಲ್ಲಿ ಅನೇಕ ಯುವಕಲಾವಿದರು ರಾಜ್ಯ ಸರ್ಕಾರ ಹಾಗೂ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿರುವುದು ಶಿಕ್ಷಣ ಕುಶಲತೆಗೆ ದೊರೆತಿರುವ ಅಪೂರ್ವ ವಿಜಯ. 

ದಸರಾ ಉತ್ಸವ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವ ಮುಂತಾದ ವಿಶ್ವ ಪ್ರಸಿದ್ಧ ಮಹೋತ್ಸವಗಳಲ್ಲಿ ನೃತ್ಯ ಪ್ರದರ್ಶನಗಳು ಅಪಾರ ಜನಮನ್ನಣೆ ಗಳಿಸಿ ರಾಷ್ಟ್ರಮಟ್ಟದಲ್ಲಿ ತಮಗೆ ಖ್ಯಾತಿಯನ್ನು ತಂದಿತ್ತರೆ,  ಶ್ರೀ ವಾಸವಿ ದಿವ್ಯದರ್ಶನ, ಮಾಯೆ ಮಹಾಮಾಯೆ, ವಿಘ್ನಹರ ವಿಘ್ನೇಶ್ವರ, ರುಕ್ಮಿಣಿ ಪರಿಣಯ ಮುಂತಾದ ನೃತ್ಯರೂಪಕಗಳು ಮತ್ತು ‘ ಕಲಾಶ್ರೀ ರಾಷ್ಟ್ರೀಯ ನೃತ್ಯ ಹಾಗೂ ಸಂಗೀತ ಉತ್ಸವ’ ನಿಮ್ಮ ಕಲ್ಪನೆಯ ಕಲಾತ್ಮಕ  ಕರ್ತೃತ್ವಶಕ್ತಿಯ ದ್ಯೋತಕಗಳಾಗಿ ನೂರಾರು ಯುವ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನೊದಗಿಸಿ ಕೊಟ್ಟಿವೆ. ಈ ಸುದೀರ್ಘ ಕಲಾಪಯಣದಲ್ಲಿ ಇವರಿಗೆ ಒಲಿದು ಬಂದ ಪ್ರಶಸ್ತಿಪುರಸ್ಕಾರಗಳಲ್ಲಿ ಕರ್ನಾಟಕ ಸರ್ಕಾರದ ‘ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’, ಕರ್ನಾಟಕ ನೃತ್ಯಕಲಾ ಪರಿಷತ್ತಿನ ‘ನೃತ್ಯ ನಿಪುಣೆ ಪ್ರಶಸ್ತಿ’, ಅಂತಾರಾಷ್ಟ್ರೀಯ ಮಹಿಳಾ ಉದ್ಯಮದ ‘ಶ್ರೀ ರತ್ನ ಪ್ರಶಸ್ತಿ’ ಇವು ಕೆಲವು ಮಾತ್ರ.

ಇವಲ್ಲದೆ ಕನ್ನಡ ಬೆಳ್ಳಿತೆರೆ, ಕಿರುತೆರೆಗಳ ಹಿನ್ನೆಲೆ ಗಾಯಕಿಯಾಗಿ, ಹಲವಾರು ಕಿರುಚಿತ್ರ, ಸಾಕ್ಷ್ಯಚಿತ್ರ, ಟೆಲಿಚಿತ್ರ, ಚಲನಚಿತ್ರ, ಜಾಹಿರಾತುಗಳಿಗೆ ಸಂಭಾಷಣೆ - ಸಾಹಿತ್ಯವೊದಗಿಸಿ, ಮಕ್ಕಳಿಗಾಗಿ ಅನೇಕ ಟಿವಿ ಚಾನೆಲ್ಲುಗಳಲ್ಲಿ ಅಂತ್ಯಾಕ್ಷರಿ, ಹಾಡಿಗೊಂದು ಹಾಡು, ನಂದನವನ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿ, ನಾಡಿನ ಖ್ಯಾತ ಕಿರುತೆರೆ  ಚಲನಚಿತ್ರ ನಿರ್ದೇಶಕರುಗಳಿಗೆ ಸಮರ್ಥ ಸಹನಿರ್ದೇಶಕಿಯಾಗಿ, ಕಂಠದಾನ ಕಲಾವಿದೆಯಾಗಿ ಪ್ರತಿಭೆಯ ಸಾಗರವೇ ಆಗಿದ್ದೀರಿ..

 

Post a Comment

0Comments

Post a Comment (0)