ಬೆಲೆ ಏರಿಕೆ ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಬೃಹತ್ ಪ್ರತಿಭಟನೆ

varthajala
0

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ನಗರ ರಾಜಕೀಯ ಚಟುವಟಿಕೆಗಳ ಅಧ್ಯಕ್ಷ ಚನ್ನಪ್ಪ ಗೌಡ ನಲ್ಲೂರು , “ಬಿಜೆಪಿಯ ಡಬಲ್‌ ಎಂಜಿನ್‌ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಹಾಗೂ ಭ್ರಷ್ಟಾಚಾರವು ಡಬಲ್‌ ಆಗುತ್ತಿದೆ. ಮೊಸರು, ಮಜ್ಜಿಗೆಯಂತಹ ಅತೀ ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ವಿಧಿಸಿ, ಜನರ ಜೇಬಿಗೆ ಕತ್ತರಿ ಹಾಕುವುದೊಂದೇ ತಮ್ಮ ಗುರಿ ಎಂಬುದನ್ನು ಬಿಜೆಪಿ ಸಾಬೀತು ಪಡಿಸಿದೆ. 2014ರ ತನಕ ಸಣ್ಣ ಪ್ರಮಾಣದ ಬೆಲೆ ಏರಿಕೆಗೂ ಬಂದ್‌ಗೆ ಕರೆ ನೀಡುತ್ತಿದ್ದ ಬಿಜೆಪಿ ನಾಯಕರು ಈಗ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮೊಸರು, ಮಜ್ಜಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿ ತಪ್ಪು ಮಾಹಿತಿ ನೀಡಿ ಜನರನ್ನು ವಂಚಿಸಿದ್ದಕ್ಕೆ ಸಿಎಂ ಬಸವರಾಜ್‌ ಬೊಮ್ಮಾಯಿಯವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಸಿಎಂ ಹೇಳಿರುವಂತೆ, ಅವೆರಡರ ಮೇಲಿನ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರವು ಕೆಎಂಎಫ್‌ಗೆ ವಾಪಸ್‌ ನೀಡುವುದು ನಿಜವಾಗಿದ್ದರೆ, ಮಾರುಕಟ್ಟೆಯಲ್ಲಿ ಮೊಸರು, ಮಜ್ಜಿಗೆಯ ಬೆಲೆ ಏರಿಕೆಯಾಗಿದ್ದೇಕೆ? ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜನರಿಗೆ ತಪ್ಪು ಮಾಹಿತಿ ನೀಡಿದ್ದು ಖಂಡನೀಯ” ಎಂದು ಚನ್ನಪ್ಪಗೌಡ ಹೇಳಿದರು.

ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷ ಕುಶಲ ಸ್ವಾಮಿ ಪ್ರತಿಭಟನೆಯಲ್ಲಿ  ಭಾಗವಹಿಸಿ ಹೆಚ್ಚು ತೆರಿಗೆ ಸಂಗ್ರಹಿಸುವುದನ್ನು ಮಹಾನ್‌ ಸಾಧನೆ ಎಂದು ಬಿಜೆಪಿ ಭಾವಿಸಿದೆ. ತೆರಿಗೆ ಏರಿಕೆಯಿಂದ ಸಂಗ್ರಹವಾದ ಹಣದಲ್ಲಿ ಲೂಟಿಗೆ ಅವಕಾಶವಿರುವ ಯೋಜನೆಯನ್ನು ಬಿಜೆಪಿ ಘೋಷಿಸುತ್ತದೆ. ಅದರಲ್ಲಿ 40% ಕಮಿಷನ್‌ ಪಡೆದು, ಕಾಮಗಾರಿಯನ್ನು ಕಳಪೆಯಾಗಿಸುತ್ತದೆ. ಹೆಚ್ಚುವರಿ ತೆರಿಗೆಯು ಅಂತಿಮವಾಗಿ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿಯಲ್ಲಿರುವ ಬಿಜೆಪಿ ಈಗ ಸಿಕ್ಕಿರುವ ಅವಕಾಶವನ್ನು ಕೊಳ್ಳೆ ಹೊಡೆಯುವುದಕ್ಕೆ ಬಳಸಿಕೊಳ್ಳುತ್ತಿದೆ” ಎಂದು ಹೇಳಿದರು.





“ಮೋದಿ ಸರ್ಕಾರವು ಪೆಟ್ರೋಲ್‌, ಡಿಸೇಲ್‌ ಮೇಲಿನ ತೆರಿಗೆಯನ್ನು ವಿಪರೀತ ಹೆಚ್ಚಿಸಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಭಾರತೀಯರಿಗೆ ಅದರ ಲಾಭ ಸಿಗುತ್ತಿಲ್ಲ. ಅಡುಗೆ ಅನಿಲದ ಸಬ್ಸಿಡಿಯನ್ನು ರದ್ದು ಪಡಿಸುವ ಮೂಲಕ ದೇಶದ ಬಡ ಹಾಗೂ ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರವು ಮಹಾದ್ರೋಹ ಮಾಡಿದೆ. ಕೇವಲ ಶ್ರೀಮಂತ ಉದ್ಯಮಿಗಳ ಹಿತ ಕಾಪಾಡಿ, ಅವರಿಂದ ಪಕ್ಷಕ್ಕೆ ಬೃಹತ್‌ ಮೊತ್ತದ ದೇಣಿಗೆ ಪಡೆಯುವುದರಲ್ಲಿ ನಿರತವಾಗಿರುವ ಬಿಜೆಪಿಗೆ ಜನಸಾಮಾನ್ಯರ ಕಷ್ಟಗಳು ಕಾಣಿಸುತ್ತಿಲ್ಲ” ಎಂದು ಕುಶಲ ಸ್ವಾಮಿ ಹೇಳಿದರು.

ಬೆಂಗಳೂರು ರಾಜಕೀಯ ಚಟುವಟಿಕೆಗಳ ಎಲ್ಲಾ ವಿಧಾನಸಭಾ ಅಧ್ಯಕ್ಷರುಗಳು ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Post a Comment

0Comments

Post a Comment (0)