ಸಿಡಿಸೈಮರ್ (CDSIMER) ನಲ್ಲಿ ಔಷಧಗಳ ಅಡ್ಡಪರಿಣಾಮಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ - SHIKSHANA RATNA

Breaking

Post Top Ad

Responsive Ads Here

Sunday, 18 September 2022

ಸಿಡಿಸೈಮರ್ (CDSIMER) ನಲ್ಲಿ ಔಷಧಗಳ ಅಡ್ಡಪರಿಣಾಮಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ

ಹಾರೋಹಳ್ಳಿ, ಕನಕಪುರ ತಾಲೂಕು: ದಿನಾಂಕ ಸೆಪ್ಟೆಂಬರ್ 17, 2022 ರಂದು

ವಿಶ್ವ ರೋಗಿಗಳ ಸುರಕ್ಷತೆ ದಿನದ (world patient safety day) ಅಂಗವಾಗಿ ಡಾ. ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ (ಸಿಡಿಸೈಮರ್), ಔಷಧಶಾಸ್ತ್ರ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಡಿಸೈಮರ್ ನ ದೀನ್ ಮತ್ತು ಪ್ರಾಂಶುಪಾಲರು ಆದ ಡಾ. ಅಶೋಕ್ ಎ.ಸಿ ಅವರು ಮಾತನಾಡುತ್ತಾ "ಎಲ್ಲಾ ಔಷಧಗಳು ರೋಗವನ್ನು ವಾಸಿ ಮಾಡುವ ಗುಣವನ್ನು ಹೊಂದಿರುತ್ತವೆ. ಆದರೆ ಅದರ ಜೊತೆಗೆ ಅವುಗಳನ್ನು ಸರಿಯಾಗಿ ಬಳಸದಿದ್ದರೆ ಕೆಟ್ಟ ಪರಿಣಾಮಗಳನ್ನೂ ಸಹ ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಇದನ್ನು ಅರಿತು ಎಲ್ಲಾ ವೈದ್ಯರೂ ಈ ಅಡ್ಡಪರಿಣಾಮಗಳನ್ನು ಕಂಡು ಹಿಡಿದು "ಔಷಧ ಅಡ್ಡ ಪರಿಣಾಮಗಳ ನಿಗಾ ಕೇಂದ್ರ, ಔಷಧಶಾಸ್ತ್ರ ವಿಭಾಗ, ಸಿಡಿಸೈಮರ್" ಇಲ್ಲಿಗೆ ತಿಳಿಸಬೇಕಾಗಿ ತಿಳಿಸಿದರು. ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಈ ಕಡೆ ಗಮನ ಹರಿಸಿ ಔಷಧಗಳನ್ನು ಸುರಕ್ಷಿತವಾಗಿ ಉಪಯೋಗಿಸಿ ರೋಗಿಗಳನ್ನು ಚಿಕಿತ್ಸೆ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಲು ತಿಳಿಸಿದರು. ಔಷಧ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಡಾ. ಪ್ರತಿಭಾ ನಾಡಿಗ್ ಅವರು ಮಾತನಾಡಿ ರೋಗಿಗಳು ಸಹ ಅವರು "ರೋಗಿಗಳು ಅನುಭವಿಸಿದ ಔಷಧಗಳ ಅಡ್ಡ ಪರಿಣಾಮಗಳನ್ನು ವೈದ್ಯಕೀಯ ಸಿಬ್ಬಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಇದರಿಂದ ಅಂತಹ ಔಷಧಗಳನ್ನು ಹೊರಗಿಟ್ಟು ರೋಗಿಗೆ ಒಗ್ಗುವಂತಹ ಔಷಧಗಳನ್ನು ಬಳಸಲು ಅನುಕೂಲ ಆಗುತ್ತದೆ. ಹೆಚ್ಚು ಪ್ರತಿಕೂಲ ಪರಿಣಾಮ ಉಂಟುಮಾಡುವ ಔಷಧಗಳ ಬಳಕೆಯನ್ನು ಕಡಿಮೆ ಮಾಡಲಾಗುತ್ತದೆ. ಜೊತೆಗೆ ಅತೀವ ತೊಂದರೆ ಉಂಟು ಮಾಡುವ ಔಷಧಗಳನ್ನು ಮಾರುಕಟ್ಟೆಯಿಂದ ಹೊರದೂಡಲು (ಬ್ಯಾನ್ ಮಾಡಲು) ಸಹಾಯ ಆಗುತ್ತದೆ" ಎಂದರು. ಸಮಾರಂಭದಲ್ಲಿ ಸಂಸ್ಥೆಯ ವಿಶೇಷ ಅಧಿಕಾರಿಗಳಾದ ಡಾ. ಮದನ್ ಗಾಯಕ್ವಾಡ್ ಅವರು ಮಾತನಾಡಿ "ಎಲ್ಲಾ ಆಸ್ಪತ್ರೆಗಳು ಔಷಧ ಅಡ್ಡ ಪರಿಣಾಮ ತಡೆಗಟ್ಟಲು ಕ್ರಮ ತೆಗೆದು ಕೊಳ್ಳಬೇಕು" ಎಂದರು. ಮೆಡಿಕಲ್ ಡೈರೆಕ್ಟರ್ ಆದ ಡಾ. ರಾಜಗೋಪಾಲನ್ ಅವರು "ಹೊಸ ಔಷಧಗಳನ್ನು ಹೆಚ್ಚು ನಿಗಾ ಇಟ್ಟು ಬಳಸಬೇಕು. ಯಾವುದೇ ಹೊಸ ಅಥವಾ ಹಳೆಯ ರೋಗದ ಚಿನ್ಹೆಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆದು ಅಡ್ಡ ಪರಿಣಾಮಗಳಿಗೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇದರಿಂದ ಪ್ರಾಣಾಪಾಯದಿಂದ ಪಾರುಮಾಡಬಹುದು" ಎಂದರು. ಉಪಪ್ರಾಂಶುಪಾಲರಾದ ಡಾ. ಪ್ರಶಾಂತ್ ಕುಮಾರ್ ಎಂ ಅವರು ಮಾತನಾಡಿ "ಸಿಡಿಸೈಮರ್ ನಲ್ಲಿ ಇಂತಹ ಕಾರ್ಯಕ್ರಮ ಗಳನ್ನು ನಿರಂತರ ಆಚರಿಸುತ್ತ ಬಂದಿರುವುದು ಸಂತಸದ ವಿಷಯ. ನಮ್ಮ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ತರಬೇತಿ ನೀಡಲು ಒಂದು ಸರ್ಟಿಫಿಕೇಟ್ ಕೋರ್ಸ್ ನಡೆಸಲಾಗುತ್ತಿದೆ. ಇದರಿಂದ ಅವರು ಹೆಚ್ಚಿನ ತರಭೇತಿ ಪಡೆಯಲು ಅನುಕೂಲವಾಗಿದೆ" ಎಂದರು.  ಖ್ಯಾತ ಮಕ್ಕಳರೋಗ ತಜ್ಞ ವೈದ್ಯರು ಮತ್ತು ವಿಭಾಗದ ಮುಖ್ಯಸ್ಥರು ಆದ ಡಾ. ಆಶಾ ಬೆನಕಪ್ಪ ಅವರು ಮಾತನಾಡಿ "ಮಕ್ಕಳು ಮತ್ತು ಗರ್ಭಿಣಿಯರು ವೈದ್ಯರು ಸಲಹೆ ಮಾಡಿದ ಔಷಧಿ ಗಳನ್ನು ಸೇವಿಸಬೇಕು ಮತ್ತು ಸ್ವಯಂ ವೈದ್ಯಕೀಯ ಎಂದೂ ಮಾಡಬಾರದು. ಇದರಿಂದ ಹೆಚ್ಚಿನ ಮಟ್ಟದ ಔಷಧಗಳ ಅಡ್ಡ ಪರಿಣಾಮಗಳನ್ನು ತಡೆಯಬಹುದು" ಎಂದು ಹೇಳಿದರು.  ಸಾಮಾಜಿಕ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಮತ್ತು ಪ್ರೊಫೆಸರ್ ಆದ ಡಾ. ಸುಂದರ್ ಅವರು ಮಾತನಾಡಿ "ಔಷಧಗಳ ಅಡ್ಡ ಪರಿಣಾಮಗಳನ್ನು ಗುರುತಿಸಿ ಅದರ ನಿಗಾ ಕೇಂದ್ರಕ್ಕೆ ತಿಳಿಸುವುದು ವೈದ್ಯಕೀಯ ಸಿಬ್ಬಂದಿ ಮತ್ತು ಸಾರ್ವಜನಿಕಕರೆಲ್ಲರ ಜವಾಬ್ದಾರಿ ಆಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಜನರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಲು ಉಪಕಾರಿ ಆಗುತ್ತದೆ" ಎಂದು ಹೇಳಿದರು. 

ಡಾ. ಶಿವಮೂರ್ತಿ ಎನ್ ಅವರು ಪತ್ರಿಕೆಯೊಂದಿಗೆ ಮಾತನಾಡಿ "ಸೆಪ್ಟೆಂಬರ್17 ರಿಂದ 23ರ ವರೆಗೆ "ರಾಷ್ಟ್ರೀಯ ಔಷಧ ಸುರಕ್ಷಿತ ಉಪಯೋಗ (ನ್ಯಾಷನಲ್ ಫಾರ್ಮಕೋವಿಜಿಲ್ಯಾನ್ಸ್ ವೀಕ್) ಸಪ್ತಾಹ" ವನ್ನು ಪ್ರತೀ ವರ್ಷದಂತೆ ಈ ವರ್ಷ ಕೂಡ ಸಿಡಿಸೈಮರ್ ನಲ್ಲಿ ಆಯೋಜಿಸಿದ್ದು ವಿವಿದ   (ಈ-ಪೋಸ್ಟರ್, ರಿಫ್ಲೆಕ್ಟಿವ್ ಬರವಣಿಗೆ, ಮತ್ತು ಕಿರು ಚಿತ್ರ) ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ವಿಶೇಷವಾಗಿದ್ದು ವಿವಿಧ ರಾಜ್ಯಗಳಿಂದ ಸ್ಪರ್ಧಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ"  ಎಂದು ತಿಳಿಸಿದರು. ಪಲಿತಾಂಶಗಳು ಸೆಪ್ಟೆಂಬರ್ 23 ರಂದು ಹೊರಬೀಳಲಿದ್ದು ಮುಕ್ತಾಯ ಸಮಾರಂಭದಲ್ಲಿ ವಿಜೇತರನ್ನು ಪ್ರಶಂಸನಾ ಪತ್ರ ಮತ್ತು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ಜನಜಾಗೃತಿ ಉಂಟುಮಾಡುವುದಕ್ಕಾಗಿ ಏರ್ಪಡಿಸಿದ್ದ ಜಾಥಾದಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗಿದರು ಮತ್ತು ಬೀದಿನಾಟಕ ಮಾಡಿ ಜನಜಾಗೃತಿ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದರು. ಸಿಡಿಸೈಮರ್ ನ ಸಿಬ್ಬಂದಿ, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಸಾರ್ವಜನಿಕರು, ರೋಗಿಗಳು, ಮತ್ತು ಅವರ ಸಂಭಂಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡರು.

No comments:

Post a Comment

Post Bottom Ad

Responsive Ads Here

Pages