ಐವರು ಗಣ್ಯರಿಗೆ ಭಂಡಾರಕೇರಿ ಮಠದ ಪ್ರಶಸ್ತಿ - ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

varthajala
0

 ಐವರು ಗಣ್ಯರಿಗೆ  ಭಂಡಾರಕೇರಿ ಮಠದ ಪ್ರಶಸ್ತಿ

- ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

- ಕೇಶವ ಬಾಯರಿ, ಸಗ್ರಿ ರಾಘವೇಂದ್ರ, ಗಣಪತಿ ಭಟ್, ಡಿ.ಪಿ. ಅನಂತ, ಸತ್ಯಪ್ರಮೋದ ಭಾಜನರು

- ಪಂಡಿತರಿಗೆ ತಲಾ ಒಂದು ಲಕ್ಷ ರೂ. ಗೌರವಧನ ಸಮರ್ಪಣೆ

ಮೈಸೂರು: ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ ಮತ್ತು ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೋತ್ಸವದ ಅಂಗವಾಗಿ ಉಡುಪಿ ಶ್ರೀ ಭಂಡಾರಕೇರಿ ಮಠ ಕೊಡಮಾಡುವ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ನಾಲ್ವರು ವಿದ್ವಾಂಸರು  ಮತ್ತು ಗೌರವ ಪ್ರಶಸ್ತಿಗೆ ಒಬ್ಬ ಗಣ್ಯರು ಆಯ್ಕೆಯಾಗಿದ್ದಾರೆ.

ಶ್ರೀ ರಾಜವಿದ್ಯಾವಂದ್ಯ ಪ್ರಶಸ್ತಿಗೆ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ, ಪಂಡಿತ ಕೇಶವ ಬಾಯರಿ, ವೇದಪೀಠ ಪ್ರಶಸ್ತಿಗೆ ಉಡುಪಿಯ ಹಿರಿಯ ಪಂಡಿತ ಮತ್ತು ಪರವಿದ್ಯಾ ಪ್ರತಿಷ್ಠಾನದ ಮುಖ್ಯಸ್ಥ ಸಗ್ರಿ ರಾಘವೇಂದ್ರ ಉಪಾಧ್ಯಾಯ ಆಯ್ಕೆಯಾಗಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ.

ಯುವ ವಿದ್ವಾಂಸರಿಗೆ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ವಿದ್ಯಾಮಾನ್ಯನಗರದ ವಿದ್ವಾನ್ ಎನ್. ಗಣಪತಿ ಭಟ್ ಮತ್ತು ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿಯ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಪ್ರಮೋದ ಕಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

 ಗೌರವ ಪ್ರಶಸ್ತಿ:

ಹಿರಿಯ ಉದ್ಯಮಿ ಮತ್ತು ತಿರುಮಲ- ತಿರುಪತಿ ಬೋರ್ಡ್‌ಗೆ 2 ಬಾರಿ ಸದಸ್ಯರಾಗಿ, ಪೇಜಾವರ ಶ್ರೀ ವಿಶ್ವೇಶ ತೀರ್ಥರಿಗೆ ಆಪ್ತ ಕಾರ್ಯದರ್ಶಿಯಾಗಿ ಅನನ್ಯ ಸೇವೆ ಸಲ್ಲಿಸಿದ ಡಿ.ಪಿ. ಅನಂತ ಅವರಿಗೆ ಶ್ರೀಶ ರಾಜದರ್ಶನ- ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮೇ. 2ರಂದು ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಮಠ ಆಯೋಜಿಸಿರುವ ಶ್ರೀ ವೇದವ್ಯಾಸ ಮಹರ್ಷಿಗಳ ರಾಷ್ಟ್ರೀಯ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಇದೇ ಸಂದರ್ಭ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ರಚಿಸಿರುವ 300 ಪದ್ಯಗಳ ಸಂಕಲನ ‘ವಿದ್ಯೇಶ ವಿಠಲಾಂಕಿತ ಕೃತಿ ಮಂಜರೀ’ ಲೋಕಾರ್ಪಣೆಗೊಳ್ಳಲಿದೆ. ಸೋಸಲೆ ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ.

Post a Comment

0Comments

Post a Comment (0)