ಕೊಲ್ಹಾರ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಸಾರ್ವತ್ರಿಕ ಚುನಾವಣೆ: ಬಾಲಕಿಯರು ಮೇಲುಗೈ

varthajala
0

ಕೊಲ್ಹಾರ 01: ಪಟ್ಟಣದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 2023-24ನೇ ಸಾಲಿಗೆ ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಶಾಲಾ ಸಂಸತ್‌ ಗೆ ಚುನಾವಣೆ ನಡೆಯಿತು.ಈ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಾಲಕಿಯರು ಮೇಲುಗೈ ಸಾಧಿಸಿದರು.




ಈ ವರ್ಷದ ಶಾಲಾ ಸಂಸತ್ತಿಗೆ ಚುನಾವಣೆಯನ್ನು ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆಯಿಂದ ಮಕ್ಕಳು ಹುರುಪು ಹುಮ್ಮಸ್ಸಿನಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಮಗೆ ಮತ ನೀಡುವಂತೆ ಶಾಲಾ ಮೈದಾನದಲ್ಲಿ ಪ್ರಚಾರ ನಡೆಸಿ, ತಮಗೇ ಮತ ಹಾಕುವಂತೆ ಮತದಾರ(ವಿದ್ಯಾರ್ಥಿ)ನ್ನು ಮನವೊಲಿಸುತ್ತಿರುವ ದೃಶ್ಯಗಳು ಎಲ್ಲರನ್ನು ಗಮನ ಸೆಳೆದವು.

ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಶಾಲಾ ಸಂಸತ್‌ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರ ವಾಪಸ್‌ ಪಡೆಯುವುದು, ನಾಮಪತ್ರ ಪರಿಶೀಲನೆ, ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದ ಅಭ್ಯರ್ಥಿಗಳ ಘೋಷಣೆ, ಚುನಾವಣೆ ಪ್ರಚಾರ, ಚುನಾವಣೆ ದಿನಾಂಕ ಪ್ರಕಟಣೆ ಎಲ್ಲ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ಜರುಗುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಕರು ಚುನಾವಣೆಯ ಅರಿವು ಮೂಡಿಸಿದರು.

ಚುನಾವಣೆಯಲ್ಲಿ ಮತದಾನಕ್ಕೆ ಇವಿಎಂ ಬಳಸುವ ರೀತಿಯಲ್ಲಿ ತರಗತಿ ಶಿಕ್ಷಕರು ತಮ್ಮ ತಮ್ಮ ಮೊಬೈಲ್ ಗಳಲ್ಲಿ ವೋಟಿಂಗ್‌ ಆ್ಯಪ್‌ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ ಮಕ್ಕಳ ಹೆಸರು, ಫೋಟೋ ಸೇರಿಸಿದರು. ನಂತರ ಮಕ್ಕಳು ಮೊಬೈಲ್ ಇ ವಿ ಎಂ ಅಪ್ ಮೂಲಕ ಮತದಾನ ಮಾಡಿದರು. ಇವಿಎಂ ನಲ್ಲಿ ಇರುವಂತೆ ಎಲ್ಲ ಅಭ್ಯರ್ಥಿಗಳ ಫೋಟೋ ಸಹಿತ ಮೊಬೈಲ್ಗಳಲ್ಲಿ ಸೆಟಿಂಗ್‌ ಮಾಡಲಾಗಿತ್ತು. ಚುನಾವಣೆ ನಡೆಯುವ ಪೂರ್ವದಲ್ಲಿ ಇವಿಎಂ ಮಷಿನ್‌ ನಲ್ಲಿರುವ ಬ್ಯಾಲಟಿಂಗ್‌, ಕ್ಲೋಸ್‌, ರಿಸಲ್ಟ್,ಕ್ಲಿಯರ್‌ ಬಟನ್‌ಗಳು ಯಾವ ರೀತಿ ಕೆಲಸ ಮಾಡುತ್ತವೆ ಹಾಗೂ ವೋಟಿಂಗ್ ಮಾಡುವ ವಿಧಾನದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಮಾಹಿತಿ ನೀಡಿದ್ದರು.

ತರಗತಿಗಳನ್ನು ಮತಗಟ್ಟೆಗಳಾಗಿ ನಿರ್ಮಿಸಲಾಗಿತ್ತು. ಪಿ ಆರ್ ಓ, ಎಪಿಆರ್ ಓ, ಪಿ ಓ 1 ಮತ್ತು 2 ಅಧಿಕಾರಿಗಳನ್ನಾಗಿ ಶಿಕ್ಷಕರನ್ನು ನೇಮಿಸಲಾಗಿತ್ತು. ಎರಡು ವೋಟಿಂಗ್ ಕಂಪಾರ್ಟಮೆಂಟ್ ಗಳನ್ನು ನಿರ್ಮಿಸಿ ಮಕ್ಕಳಿಗೆ ಮತದಾನ ಮಾಡಲು ತಿಳಿಸಲಾಯಿತು.ಮಕ್ಕಳು ತಮ್ಮ ಪರವಾಗಿ ಪೋಲಿಂಗ್ ಎಜೇಂಟ್ ರನ್ನು ನೇಮಿಸಿದ್ದರು.5,6ಮತ್ತು 7ನೇ ತರಗತಿಯ ಎಲ್ಲ ಮಕ್ಕಳು ತರಗತಿವಾರು ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳಿಗೆ ಆಧಾರ್ ಕಾರ್ಡ್ ತೋರಿಸಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೌಲ್ಯ ವನ್ನು ಎತ್ತಿಹಿಡಿದರು.

ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯ ಶಿಕ್ಷಕ ಯಲ್ಲಪ್ಪ ಶಿರೋಳ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆಯ ಅಧಿಕಾರಿಗಳಾಗಿ ಗಿರೀಶ ಕುಲಕರ್ಣಿ,ಮಲ್ಲಿಕಾರ್ಜುನ ಕುಬಕಡ್ಡಿ,ಮಂಜುನಾಥ ಮುಳವಾಡ, ಬಸವರಾಜ ತುಪ್ಪದ, ಶ್ರೀದೇವಿ ಬಿರಾದಾರ, ವೈಷ್ಣವಿ ಕುಲಕರ್ಣಿ,ಪ್ರೀಯಾ ಕಾಖಂಡಕಿ, ನಿಂಗಮ್ಮ ಹಳ್ಳಿ ಕಾರ್ಯನಿರ್ವಹಿಸಿದರು.

ಶಾಲಾ ಸಂಸತ್ ಫಲಿತಾಂಶ :
ಶಾಲಾ ಪ್ರಧಾನ ಮಂತ್ರಿಯಾಗಿ ಗೌರಮ್ಮ ಈ ಗಿಡ್ಡಪ್ಪಗೋಳ, ಉಪಪ್ರಧಾನ ಮಂತ್ರಿಯಾಗಿ ವೈಷ್ಣವಿ ಶ್ರೀ ಮಠಪತಿ, ಹಣಕಾಸು ಮಂತ್ರಿಯಾಗಿ ನಂದಿನಿ ಕಾಡಸಿದ್ದೇಶ್ವರಮಠ, ಪರಿಸರ ಮಂತ್ರಿಯಾಗಿ ಸಿಂಚನಾ ಜಮಖಂಡಿ, ಆರೋಗ್ಯ ಮಂತ್ರಿಯಾಗಿ ಪ್ರೀಯಾ ಧರೆಗೊಂಡ, ಕ್ರೀಡಾ ಮಂತ್ರಿಯಾಗಿ ನಾಗರತ್ನಾ ಉಳ್ಳಾಗಡ್ಡಿ,ಶಿಕ್ಷಣ ಮಂತ್ರಿಯಾಗಿ ಶ್ರೀಶೈಲ ಮುರನಾಳ, ಸಾಂಸ್ಕೃತಿಕ ಮಂತ್ರಿಯಾಗಿ ನೀಲಾ ಕುದರಿ, ಪ್ರವಾಸ ಮಂತ್ರಿಯಾಗಿ ಕವಿತಾ ಬಾಲಗೊಂಡ, ವೈದ್ಯಕೀಯ ಮಂತ್ರಿಯಾಗಿ ಮುತ್ತಪ್ಪ ಉಳ್ಳಾಗಡ್ಡಿ,ಆಹಾರ ಮಂತ್ರಿಯಾಗಿ ಕೃತಿಕಾ ಗಿಡ್ಡಪ್ಪಗೋಳ, ತೋಟಗಾರಿಕೆ ಮಂತ್ರಿಯಾಗಿ ಸೌಮ್ಯ ಪತಂಗಿ, ನೀರಾವರಿ ಮಂತ್ರಿಯಾಗಿ ಶ್ರಾವಣಿ ಉಳ್ಳಾಗಡ್ಡಿ, ವಾಚನಾಲಯ ಮಂತ್ರಿಯಾಗಿ ಶ್ರೇಯಸ್ಸ ಕಾರಜೋಳ, ಸ್ವಚ್ಛತೆ ಮಂತ್ರಿಯಾಗಿ ಜಾಹೀದಾ ಶಿರೂರ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Post a Comment

0Comments

Post a Comment (0)