“ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯದ ಉದ್ಘಾಟನೆ ಮತ್ತು ಬೀಜ ಉದ್ಯಮದಾರರೊಂದಿಗೆ ಸಂವಹನ” ಕಾರ್ಯಕ್ರಮ

varthajala
0

 ಬೆಂಗಳೂರು, ಏಪ್ರಿಲ್ 18 (ಕರ್ನಾಟಕ ವಾರ್ತೆ):

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ  “ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯದ ಉದ್ಘಾಟನೆ ಮತ್ತು ಬೀಜ ಉದ್ಯಮದಾರರೊಂದಿಗೆ ಸಂವಹನ” ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಅವರು ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು,  ಉತ್ತಮ ಬೆಳೆ ಬೆಳೆಯುವಲ್ಲಿ ಆರೋಗ್ಯಕರ ಬೀಜಗಳು ಪ್ರಮುಖ ಪಾತ್ರವಹಿಸುತ್ತವೆ. ವಿಶ್ವಾಸಾರ್ಹ ಆಹಾರ ಉತ್ಪಾದನೆಗೆ ಮಾನ್ಯತೆ ಪಡೆದ ರೋಗಕಾರಕಗಳಿಲ್ಲದ ಆರೋಗ್ಯಕರ ಬೀಜಗಳು ಬೇಕಾಗುತ್ತವೆ. ಬೀಜ ಆರೋಗ್ಯ ಪರೀಕ್ಷೆಯು ಕೀಟ ಬಾಧೆ,  ಶಿಲೀಂದ್ರಗಳು, ಬ್ಯಾಕ್ಟೀರಿಯಾಗಳು ಅಥವಾ ವೈರಸ್‍ಗಳಿಂದ ಹರಡುವ ರೋಗಗಳ ಚಿಹ್ನೆಗಳನ್ನು ಕಂಡುಹಿಡಿಯುವುದು. ರೋಗಪೀಡಿತ ಬೀಜಗಳ ಸೋಂಕುಗಳನ್ನು ಹರಡುವುದರ ಜೊತೆಗೆ ಶೇಕಡಾ.15-90 ರಷ್ಟು ಇಳುವರಿ ಕುಂಠಿತಗೊಳ್ಳುತ್ತದೆ ಎಮದರು.
 ಬೀಜ ಪ್ರಮಾಣೀಕರಣ, ಪೈಟೋಸಾನಿಟರಿ ಪ್ರಮಾಣೀಕರಣ ಮತ್ತು ದಿಗ್ಬಂಧನ ಕಾರ್ಯಕ್ರಮಗಳು ಸಸ್ಯ ಸೂಕ್ಷ್ಮಾಣುಗಳ ಸಂರಕ್ಷಣೆ, ಉತ್ಪನ್ನ ಅಭಿವೃದ್ಧಿ ಮತ್ತು ಆರೋಗ್ಯಕರ ಬೀಜ ಉತ್ಪಾದನೆಗಾಗಿ ಬೀಜ ಆರೋಗ್ಯ ಪರೀಕ್ಷೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಉತ್ತಮ ಸುಗ್ಗಿಯ ನಂತರದ ಬೀಜದ ಸಂಸ್ಕರಣೆ ಮತ್ತು ಶೇಖರಣೆಯಂತಹ ಉತ್ಪಾದನಾ ಪದ್ಧತಿಗಳು ಸಹ ಬೀಜಗಳ ಆರೋಗ್ಯವನ್ನು ನಿರ್ವಹಿಸಲು ಮತ್ತು ದೀರ್ಘಕಾಲೀನ ಬೆಳೆ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ. ಇಲ್ಲದಿದ್ದಲ್ಲಿ ಸೋಂಕಿತ ಬೀಜಗಳು ಮುಂದಿನ ಹಂಗಾಮಿಗೆ ರೋಗಾಣುವಿನ ಮೂಲ ಸೋಂಕಾಗಿ ವಿವಿಧ ಸ್ಥಳಗಳಲ್ಲಿ ರೋಗತರುವುದಲ್ಲದೆ, ಮಾನವನ ಮತ್ತು ಪ್ರಾಣಿಗಳ ಆಹಾರಗಳಲ್ಲಿ ಬೆರೆತು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅಲ್ಲದೆ, ಸೋಂಕಿತ ಬೀಜಗಳು ಹೊರ ರಾಜ್ಯ, ದೇಶಗಳಿಗೆ ಸರಬರಾಜಾಗಿ ಅಲ್ಲಿನ ಉತ್ಪಾದಕತೆಯಲ್ಲಿ ತೊಡಕನ್ನುಂಟು ಮಾಡುತ್ತವೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಸಸ್ಯರೋಗಶಾಸ್ತ್ರ ವಿಭಾಗವು ಸುಸಜ್ಜಿತ ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ,  ಮಾನ್ಯತೆ ಪಡೆದ ಅಂಗಾಂಶ ಕೃಷಿ ಬೆಳೆಗಳ ಪ್ರಮಾಣೀಕರಣ ಮತ್ತು ಮಾನ್ಯತೆ ಪಡೆದ ಸಸ್ಯರೋಗ ನಿರ್ಣಯ ಪ್ರಯೋಗಾಲಯ ಎಲ್ಲಾ ಬೆಳೆಗಳ ಬೀಜ ಮತ್ತು ಸಸ್ಯ ಆರೋಗ್ಯ ಪರೀಕ್ಷಾ ಸೇವೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಬೀಜಗಳ ಉತ್ಪಾದನಾ ಉದ್ಯಮಗಳಿಗೆ ಮತ್ತು ಸಂಸ್ಥೆಗಳಿಗೆ ನೀಡಲು ಪ್ರಾರಂಬಿಸುತ್ತಿದೆ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನೀಡುವ ಬೀಜ ಆರೋಗ್ಯ ಪರೀಕ್ಷಾ ವರದಿ ದೃಢಿಕರಣ ಪತ್ರ ಪಡೆದ ಖಾಸಗಿ ಸಂಸ್ಥೆಗಳು ಹೊರದೇಶಗಳಾದ ಥೈಲ್ಯಾಂಡ್, ಚೀನಾ, ನೆದರ್‍ಲ್ಯಾಂಡ್ ಮತ್ತು ಸ್ಪೇನ್ ದೇಶಗಳಿಗೆ ರಫ್ತು ಮಾಡಬಹುದಾಗಿದೆ. ಅಲ್ಲದೆ, ಬೆಂಗಳೂರು, ಮುಂಬೈ, ಗುಜರಾತ್, ನವದೆಹಲಿಯಲ್ಲಿನ ಪ್ರಾದೇಶಿಕ ಸಸ್ಯ ಸಂಪರ್ಕ ತಡೆ ಕೇಂದ್ರಗಳಿಂದ ಸಲ್ಲಿಸಲಾದ 140 ವಿವಿಧ ಬೀಜಗಳನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಿ ಬೀಜ ಆರೋಗ್ಯ ವರದಿ ನೀಡಿರುತ್ತದೆ. ಬೀಜ ಪರೀಕ್ಷೆಯ ಲ್ಯಾಬ್‍ನಲ್ಲಿರುವ ಆಧುನಿಕ ತಂತ್ರಜ್ಞಾನವು ರೈತರ ಮತ್ತು ಉದ್ಯಮದ ವೃತ್ತಿಪರರಿಗೆ ತ್ವರಿತ ರೀತಿಯಲ್ಲಿ ಸೇವೆಯನ್ನು ನೀಡುವುದರ ಜೊತೆಗೆ ಜ್ಞಾನವನ್ನು ಹೆಚ್ಚಿಸುವುದರಲ್ಲಿ ಸಹಾಯಕವಾಗಲಿದೆ. ಮುಂದಿನ ದಿನಗಳಲ್ಲಿ ಸಂಶೋಧನೆಯ ಫಲಶೃತಿಯನ್ನು ರೈತರಿಗೆ ವಿಸ್ತರಿಸಲು ಸಾರ್ವಜನಕ ಸಹಬಾಗಿತ್ವ ಯೋಜನೆಯಡಿ ಮತ್ತಷ್ಟು ವಿಸ್ತರಿಸಲಾಗುವುದು, ಬೀಜ ಉದ್ದಿಮೆದಾರರು ಬೀಜ ಪರೀಕ್ಷಾ ವರದಿಯನ್ನು 30 ದಿನಗಳ ಬದಲು 10 ದಿನಗಳಲ್ಲಿ ನೀಡಿದರೆ ಒಳ್ಳೆಯದು ಎಂದು ತಿಳಿಸಿದಾಗ  ಕುಲಪತಿಗಳು ಮುಂದೆ ಹತ್ತು ದಿನಗಳಲ್ಲೇ ವರದಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  
ಕಾರ್ಯಕ್ರಮದಲ್ಲಿ “ಬೀಜ ಆರೋಗ್ಯ ಪರೀಕ್ಷೆ ಕುರಿತ” ಕಿರು ಹೊತ್ತಿಗೆಯನ್ನು ಸಹ ಬಿಡುಗಡೆಗೊಳಿಸಲಾಯಿತು. 30ಕ್ಕೂ ಹೆಚ್ಚು ಬೀಜ ಉದ್ಯಮದಾರರು ಕಾರ್ಯಕ್ರಮದ ಸಂವಹನದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಕೆ.ಸಿ ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು, ಡಾ: ಬಸವೇಗೌಡ, ಕುಲಸಚಿವರು, ಡಾ: ಎನ್.ಬಿ. ಪ್ರಕಾಶ್,ಡೀನ್ (ಕೃಷಿ) ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು, ಡಾ.ವೆಂಕಟೇಶ್, ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಉಪಸ್ಥಿತರಿದ್ದರು.

Post a Comment

0Comments

Post a Comment (0)