ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಅತ್ಯಂತ ಭೀಕರ ಮತ್ತು ನೀಚವಾದ ಕೃತ್ಯವಾಗಿದೆ. ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಇಡೀ ದೇಶವನ್ನು ಆಳವಾದ ದುಃಖಕ್ಕೆ ದೂಡಿದೆ.
ಈ ದಾಳಿಯು ಕೇವಲ ಭಯೋತ್ಪಾದಕ ಕೃತ್ಯವಷ್ಟೇ ಅಲ್ಲ; ಇದು ಮಾನವೀಯತೆಯ ವಿರುದ್ಧ, ಭಾರತದ ಸಾರ್ವಭೌಮತ್ವದ ವಿರುದ್ಧ ಮತ್ತು ಈ ನೆಲದ ಅಸ್ಮಿತೆಯ ಮೇಲಿನ ನೇರ ದಾಳಿಯಾಗಿದೆ. ಈ ಕೃತ್ಯದ ಹಿಂದಿರುವ ಶಕ್ತಿಗಳನ್ನು ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಿನಿಂದ ತಡೆಗಟ್ಟಲೇಬೇಕು.
ಪಾಕಿಸ್ತಾನದ ಬೆಂಬಲವಿಲ್ಲದೆ, ಆ ದೇಶದ ಗುಪ್ತಚರ ಸಂಸ್ಥೆಗಳ ಕೈವಾಡವಿಲ್ಲದೆ ಪಹಲ್ಗಾಮ್‌ನಂತಹ ವ್ಯವಸ್ಥಿತ ದಾಳಿಯು ಸಾಧ್ಯವೇ ಇಲ್ಲ. ಈ ಕೃತ್ಯದ ಹಿಂದಿನ ಪಾಕಿಸ್ತಾನದ ಪಾತ್ರವನ್ನು ಜಗತ್ತಿಗೆ ಸಾಬೀತುಪಡಿಸುವ ಜವಾಬ್ದಾರಿಯು ಕೇಂದ್ರ ಸರ್ಕಾರದ ಮೇಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಟ್ ಮಾಡಿದ್ದಾರೆ.