- ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಬಗ್ಗೆ ದಾಖಲೆ ಒದಗಿಸುವಂತೆ ನಾರಾಯಣಸ್ವಾಮಿಗೆ ವೆಂಕಟ ರೆಡ್ಡಿ ಪಾಟೀಲ್ ಸವಾಲು
- ತನಿಖೆಯಾಗಿ ಈ ಪ್ರಕರಣದಲ್ಲಿ ತಪ್ಪು ಮಾಡಿದ್ದರೆ ಪರಿಣಾಮ ಎದುರಿಸಲು ಸಿದ್ಧ; ಆರೋಪ ಸುಳ್ಳಾದರೆ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರು, ಮೇ 8: ರಾಜ್ಯದಲ್ಲಿ ಅಂಕ ಪಟ್ಟಿ ಮುದ್ರಣಕ್ಕೆ ಸಂಬಂಧಿಸಿದಂತೆ ಊರ್ಧ್ವ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆಯ ನಿರ್ದೇಶಕ ವೆಂಕಟ ರೆಡ್ಡಿ ಪಾಟೀಲ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಕಪಟ್ಟಿ ಮುದ್ರಣದಲ್ಲಿ ಕಂಪನಿಯೊಂದರ ಏಕಸ್ವಾಮ್ಯಕ್ಕೆ ಅಡ್ಡಿಯಾದ ಕಾರಣಕ್ಕೆ ಊರ್ಧ್ವ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅವರು ನಮ್ಮ ಕಂಪನಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ಅವರು ಪ್ರಸ್ತಾಪಿಸಿರುವ ಟೆಂಡರ್ ಪ್ರಕ್ರಿಯೆ ಪ್ರಸ್ತುತ ನ್ಯಾಯಾಲಯದಲ್ಲಿದೆ. ಮೇಲಾಗಿ ನಮ್ಮ ಕಂಪನಿ ಇದುವರೆಗೂ ಅಂಕಪಟ್ಟಿ ಮುದ್ರಣವನ್ನೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಲ್ಲದೆ, ಕಪ್ಪು ಪಟ್ಟಿಗೆ ಸೇರಿಸಿರುವ ಕಂಪನಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಆದರೆ, ಕೆಲಸವನ್ನೇ ಮಾಡದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ವೆಂಕಟ ರೆಡ್ಡಿ ಪಾಟೀಲ್, ನಮ್ಮ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೆ ಅದು ಯಾವಾಗ ಮತ್ತು ಎಲ್ಲಿ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ವಿವಿಧ ತರಬೇತಿ, ಕಾರ್ಯಕ್ರಮ, ಸಾರ್ವಜನಿಕ ಸಂಪರ್ಕ, ಬೃಹತ್ ಸರಕುಗಳ ಪೂರೈಕೆ ಸೇರಿದಂತೆ ಅನೇಕ ಸೇವೆಗಳನ್ನು ನೀಡುವ ಕಂಪನಿಯಾಗಿದ್ದು, ಇದರೊಂದಿಗೆ ಮುದ್ರಣ ಸೇವೆಗಳನ್ನೂ ನೀಡುತ್ತದೆ. ನಮ್ಮ ಸೇವೆಯ ಎಲ್ಲಾ ವಿವರಗಳು ಸಾರ್ವಜನಿಕರಿಗೆ ಲಭ್ಯವಿದೆ. ಅದಾವುದನ್ನೂ ಪರಿಗಣಿಸದೆ ಯಾವುದೋ ಕಂಪನಿಯ ಪರವಾಗಿ ನಿಂತು ನಮ್ಮ ಮೇಲೆ ಆರೋಪ ಮಾಡಿದ್ದಾರೆ. ಊರ್ಧ್ವ ಮತ್ತು ನನ್ನ ವಿರುದ್ಧ 20-25 ಪ್ರಕರಣಗಳು ದಾಖಲಾಗಿವೆ ಎಂದೂ ಆರೋಪಿಸಿದ್ದಾರೆ. ಅವರು ಈ ಕುರಿತು ನೀಡಿರುವ ಪಟ್ಟಿಯು ಪ್ರಕರಣ ಸಂಖ್ಯೆಗಳಿಗಿಂತ ವಿಚಾರಣೆಯ ದಿನಾಂಕಗಳಿಗೆ ಸಂಬಂಧಿಸಿದೆ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸೂಕ್ತ ಅರಿವಿಲ್ಲದೆ ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಟೆಂಡರ್ ಪ್ರಕ್ರಿಯೆಯ ಕುರಿತು ಸ್ಪಷ್ಟನೆ:
ಛಲವಾದಿ ನಾರಾಯಣಸ್ವಾಮಿ ಅವರು ಉಲ್ಲೇಖಿಸಿದಂತೆ, ನಾವು ಆ ಟೆಂಡರ್‌ನಲ್ಲಿ ಎಲ್1 (ಅತ್ಯಂತ ಕಡಿಮೆ ದರ ನೀಡಿದ) ಕಂಪನಿಯಾಗಿದ್ದೇವೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ, ಎಲ್ಲಾ ಸ್ಪರ್ಧಿಗಳು ಕೇವಲ ಒಂದು ದರ ಮಾತ್ರ ನಮೂದಿಸುವಂತೆ ನಿಯಮ ಹಾಕಲಾಗಿತ್ತು. ನಾವು ನೀಡಿದ ದರವು ಪ್ರಸ್ತುತ ಎಂಎಸ್‌ಐಎಲ್ (ಕರ್ನಾಟಕ ಸರ್ಕಾರದ ನಿಗಮ) ಮೂಲಕ ಸರಬರಾಜಾಗುತ್ತಿರುವ ದರಕ್ಕಿಂತ ಶೇಕಡಾ 5ನ್ನು ಮೀರಿಲ್ಲ. ಇದರ ಬೆನ್ನಲ್ಲೇ, ನಮ್ಮೊಂದಿಗೆ ನಡೆಸಿದ ಚರ್ಚೆಯ ನಂತರದ ಒಪ್ಪಂದದ ದರವು ಇತ್ತೀಚಿನ ಪೂರೈಕೆ ದರಕ್ಕಿಂತ ಶೇಕಡಾ 3ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ಯಾವುದೇ ರೀತಿಯ ಹೆಚ್ಚು ದರ ನಾವು ಕೊಟ್ಟಿಲ್ಲ ಮತ್ತು ಎಲ್ಲಾ ನಿಯಮಗಳನ್ನು ಅನುಸರಿಸಿ ಟೆಂಡರ್‌ನಲ್ಲಿ ಭಾಗವಹಿಸಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಎಲ್ 1 ಎಂದು ಗುರುತಿಸಲ್ಪಟ್ಟಿದ್ದೇವೆ. ಆದರೆ ಮೇಲ್ಮನೆ ಪ್ರತಿಪಕ್ಷದ ನಾಯಕರು ಎಲ್ 1 ಹೇಗೆ ನಿರ್ಧರಿಸಲಾಗುತ್ತದೆ ಎಂಬುದರ ಕುರಿತು ಕೆಟಿಟಿಪಿ (Karnataka Transparency in Public Procurements Act) ಕಾಯ್ದೆಯ ಪ್ರಕಾರ ಇರುವ ನಿಯಮಗಳನ್ನು ತಿಳಿಯದೇ ಮಾತನಾಡಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ ಎಂದರು.
ಟೆಂಡರ್ ನಲ್ಲಿ ನಮ್ಮ ಆರ್ಥಿಕ ಪ್ರಸ್ತಾವನೆ (financial bid) ತೆರೆದ ನಂತರ ಟೆಂಡರ್ ನಮಗೆ ನೀಡುವ ನಿರ್ಧಾರ ಮಾಡಲಾಯಿತು. ಆದರೆ ಅದಾದ ಬಳಿಕ ನಮಗೆ ತಿಳಿಯದ ಯಾವುದೋ ಕಾರಣವನ್ನು ಮುಂದಿಟ್ಟುಕೊಂಡು, ನಮ್ಮ ವಾದಕ್ಕೆ ಅವಕಾಶವನ್ನೂ ನೀಡದೆ ಮರು ಟೆಂಡರ್‌ಗೆ ಆದೇಶ ನೀಡಲಾಗಿದೆ. ಇದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ಏಕೆಂದರೆ ನಾವು ಎಲ್ 1 ಟೆಂಡರ್ದಾರನಾಗಿದ್ದು, ಈ ತೀರ್ಮಾನದಿಂದ ನೇರವಾಗಿ ತೊಂದರೆಗೀಡಾಗಿದ್ದೇನೆ. ಹೀಗಾಗಿ ನ್ಯಾಯ ಕೋರಿ ಹೈಕೋರ್ಟ್ ಮಟ್ಟಿಲೇರಿದ್ದೇವೆ. ಈ ಪ್ರಕ್ರಿಯೆ 2025ರ ಫೆಬ್ರವರಿಯಲ್ಲಿಯೇ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಊರ್ಧ್ವ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂಬುದು ಸೇರಿದಂತೆ ಛಲವಾದಿ ನಾರಾಯಣಸ್ವಾಮಿ ಅವರು ಸಂಸ್ಥೆಯ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಏಕಸ್ವಾಮ್ಯದ ಪರ ನಿಂತು ನಮ್ಮ ಮೇಲೆ ಆರೋಪ:
ವಿಶ್ವವಿದ್ಯಾಲಯಗಳ ಅಂಕಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಎಂಎಸ್ಐಎಲ್ ಮೂಲಕ ಟೆಂಡರ್ ಕರೆಯಲಾಗುತ್ತದೆ. ಈ ವಿಚಾರದಲ್ಲಿ ಕಂಪನಿಯೊಂದು ಏಕಸ್ವಾಮ್ಯ ಸಾಧಿಸಿತ್ತು. ನಮ್ಮ ಕಂಪನಿ ಎಲ್ 1 ಆಗಿದ್ದರಿಂದ ಆ ಕಂಪನಿಯ ಏಕಸ್ವಾಮ್ಯಕ್ಕೆ ಪೆಟ್ಟು ಬಿದ್ದಿತ್ತು. ಈ ಮಧ್ಯೆ ಅಸ್ತಿತ್ವದಲ್ಲಿರುವ ಕಂಪನಿ ಒಂದು ವರ್ಷದ ವಿಸ್ತರಣೆ ಪಡೆದುಕೊಂಡಿದ್ದು, ಇದು ಮೇಲ್ಮನೆ ಪ್ರತಿಪಕ್ಷ ನಾಯಕರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ ಅವರು, ನಮ್ಮ ವಿರುದ್ಧ ಅವರ ಹೇಳಿಕೆಗಳನ್ನು ಗಮನಿಸಿದರೆ ಏಕಸ್ವಾಮ್ಯ ಹೊಂದಿರುವ ಕಂಪನಿಗೆ ಪ್ರಯೋಜನವಾಗಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ವಿರುದ್ಧ ಮತ್ತು ಕಂಪನಿ ವಿರುದ್ಧ ಮಾಡಿರುವ ಆರೋಪಗಳಿಗೆ ಆಧಾರಗಳನ್ನು ಒದಗಿಸುವಂತೆ ಛಲವಾದಿ ನಾರಾಯಣಸ್ವಾಮಿ ಅವರನ್ನು ಒತ್ತಾಯಿಸಿದ ವೆಂಕಟರೆಡ್ಡಿ ಪಾಟೀಲ್, ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬರೆದಿರುವ ಪತ್ರಗಳನ್ನು ಆ ನಾಯಕರು, ಅವರ ಸಿಬ್ಬಂದಿ ಅಥವಾ ರಹಸ್ಯವಾಗಿ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಏಕಸ್ವಾಮ್ಯ ಉದ್ಯಮಿಗಳು ನೀಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಛಲವಾದಿ ನಾರಾಯಣಸ್ವಾಮಿ ತಮ್ಮ ಕಂಪನಿ ವಿರುದ್ಧ ಮಾಡಿರುವ ಆರೋಪಗಳಿಂದಾಗಿ ನಮ್ಮ ವಿಶ್ವಾಸಾರ್ಹತೆಗೆ ಧಕ್ಕೆ ತಂದಿವೆ. ಕುಟುಂಬ ಮತ್ತು ಸ್ನೇಹಿತರೊಂದಿಗಿನ ಸಂಬಂಧಗಳ ಮೇಲೂ ಪರಿಣಾಮ ಬೀರಿ ಅವರು ನನ್ನನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ಹೀಗಾಗಿ ಊರ್ಧವ್ ಮತ್ತು ಅದನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಸತ್ಯ ಕಂಡುಹಿಡಿಯಲು ತನಿಖೆ ನಡೆಸಬೇಕು. ಒಂದು ವೇಳೆ ಆರೋಪಗಳು ಸಾಬೀತಾದರೆ ನಾನು ಅದರ ಪರಿಣಾಮ ಎದುರಿಸಲು ಸಿದ್ಧನಾಗಿದ್ದೇನೆ. ಆರೋಪ ಸುಳ್ಳು ಎಂದು ಸಾಬೀತಾದರೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಹೇಳಿದರು.
ಸಚಿವರೊಂದಿಗೆ ಸಂಬಂಧ ಇಲ್ಲ:
ಊರ್ಧ್ವ ಕಂಪನಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ಹತ್ತಿರದ ಸಂಬಂಧಿಯ ಒಡೆತನದ್ದು ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಆದರೆ, ಸಚಿವರೊಂದಿಗೆ ನಾನು ಯಾವುದೇ ಸಂಬಂಧ ಹೊಂದಿಲ್ಲ. ಅವರ ಕ್ಷೇತ್ರಕ್ಕೆ ಸೇರಿದವನು ಎಂಬ ಕಾರಣಕ್ಕೆ ಈ ರೀತಿಯ ಆರೋಪ ಮಾಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.