ಭಾರತ ದಾಳಿ ವಿಶ್ವಸಂಸ್ಥೆ ಕಳವಳ

varthajala
0

 



ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿವೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ನಡೆಸಿದ "ಆಪರೇಷನ್ ಸಿಂಧೂರ" ಎಂಬ ಕಾರ್ಯಾಚರಣೆಯು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ನೆಲೆ ಮತ್ತು ಲಾಹೋರ್ ಮತ್ತು ಸಿಯಾಲ್ಕೋಟ್ ಬಳಿಯ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಮರ್ಕಾಜ್‌ನಂತಹ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿದೆ.

ಈ ದಾಳಿಯು "ಕೇಂದ್ರೀಕೃತ, ವಿವೇಚನೆಯ ಹಾಗೂ ಮತ್ತು ಉಲ್ಬಣವಾಗದಂತಹ" ಕಾರ್ಯಾಚರಣೆ ಎಂದು ಭಾರತದ ಸೇನೆ ಹೇಳಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಲ್ಲ, ಭಾರತವು ನಿಖರ ಗುರಿಗಳ ಆಯ್ಕೆ ಮತ್ತು ದಾಳಿಗಳಲ್ಲಿ ಸಂಯಮವನ್ನು ಪ್ರದರ್ಶಿಸಿದೆ. ಎಲ್‌ಇಟಿ ಮತ್ತು ಜೆಇಎಂ ಶಿಬಿರಗಳನ್ನು ಹೊಂದಿರುವ ಪಿಒಕೆಯ ಕೋಟಿಲ್ ಮತ್ತು ಮುಜಫರಾಬಾದ್ ಕೂಡ ಗುರಿಯಾಗಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ದಾಳಿಯ ನಂತರ, "ನ್ಯಾಯ ಒದಗಿಸಲಾಗಿದೆ" ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ.

ಪಾಕಿಸ್ತಾನವೂ ದಾಳಿಗಳ ಬಗ್ಗೆ ದೃಢಪಡಿಸಿದ್ದು, ಇದೊಂದು ಹೇಡಿತನದ ಕೃತ್ಯ ಎಂದಿದೆ. ಅಲ್ಲದೆ, ಪಾಕ್​ ವಿದೇಶಾಂಗ ಸಚಿವಾಲಯವು ಇದನ್ನು ಅಪ್ರಚೋದಿತ ಯುದ್ಧ ಕೃತ್ಯ ಎಂದು ಖಂಡಿಸಿದೆ. ನಾಗರಿಕ ಸಾವುನೋವುಗಳು ಸಂಭವಿಸಿವೆ ಎಂದು ಆರೋಪಿಸಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸೂಕ್ತ ಉತ್ತರ ನೀಡುವುದಾಗಿ ಎಚ್ಚರಿಸಿದ್ದಾರೆ.

ಭಾರತೀಯ ಸೇನೆಯ 'ಆಪರೇಷನ್ ಸಿಂಧೂರ' ವಿಚಾರ ತಿಳಿದ ಬೆನ್ನಲ್ಲೇ, ಎಕ್ಸ್​​ನಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, 'ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ. ಜೈ ಹಿಂದ್!' ಎಂದು ಪೋಸ್ಟ್​ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಭಾರತೀಯ ಸಶಸ್ತ್ರ ಪಡೆಗಳ ಯಶಸ್ವಿ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.

"ಪಾಕಿಸ್ತಾನ ಮತ್ತು ಪಿಒಕೆಯಿಂದ ನಡೆಯುವ ಎಲ್ಲ ರೀತಿಯ ಭಯೋತ್ಪಾದನೆಯ ವಿರುದ್ಧ ಭಾರತವು ದೃಢವಾದ ರಾಷ್ಟ್ರೀಯ ನೀತಿಯನ್ನು ಹೊಂದಿದೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹತ್ತಿಕ್ಕಿರುವ ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಅವರ ದೃಢ ನಿಶ್ಚಯ ಮತ್ತು ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ದಿನದಿಂದ, ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಯಾವುದೇ ನಿರ್ಣಾಯಕ ಕ್ರಮ ಕೈಗೊಳ್ಳಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಶಸ್ತ್ರ ಪಡೆಗಳು ಮತ್ತು ಸರ್ಕಾರದೊಂದಿಗೆ ಸ್ಪಷ್ಟವಾಗಿ ನಿಂತಿದೆ. ರಾಷ್ಟ್ರೀಯ ಏಕತೆ ಮತ್ತು ಒಗ್ಗಟ್ಟು ಈ ಸಮಯದ ಅಗತ್ಯವಾಗಿದೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ಸಶಸ್ತ್ರ ಪಡೆಗಳೊಂದಿಗೆ ಬೆಂಬಲಿಸಿದೆ. ನಮಗೆ ರಾಷ್ಟ್ರೀಯ ಹಿತಾಸಕ್ತಿಯೇ ಅತ್ಯುನ್ನತವಾದದು" ಎಂದಿದ್ಧಾರೆ.

ವಿಶ್ವಸಂಸ್ಥೆ ಕಳವಳ

ಪಾಕಿಸ್ತಾನದ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ. ಎರಡೂ ದೇಶಗಳ ನಡುವಿನ ಘರ್ಷಣೆಯನ್ನು ಜಗತ್ತು ಸಹಿಸಲ್ಲ. ಗರಿಷ್ಠ ಮಿಲಿಟರಿ ಸಂಯಮ ಕಾಪಾಡಿಕೊಳ್ಳಬೇಕು ಎಂದು ಗುಟೆರೆಸ್ ಕೋರಿದ್ದಾರೆ" ಎಂದು ಡುಜಾರಿಕ್ ತಿಳಿಸಿದ್ದಾರೆ.

Post a Comment

0Comments

Post a Comment (0)