ಬೆಂಗಳೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಡವಳಿಕೆ ಮತ್ತು ಕದನ ವಿರಾಮದ ನಿರ್ಧಾರದ ಕುರಿತು ತೀವ್ರ ಟೀಕೆಗಳನ್ನು ಮಾಡಿದ್ದಾರೆ. ಕಳೆದ 22 ದಿನಗಳಲ್ಲಿ ದೇಶದಲ್ಲಿ ನಡೆದ ಘಟನೆಗಳು ಜನರ ಮುಂದಿವೆ ಎಂದು ಸಚಿವ ಲಾಡ್ ಹೇಳಿದ್ದಾರೆ.
ಪಾಕಿಸ್ತಾನದವರು ಸಂಪರ್ಕ ಮಾಡಿದ ಕಾರಣಕ್ಕೆ ಕದನ ವಿರಾಮ ಘೋಷಿಸಲಾಯಿತು ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಕದನ ವಿರಾಮದ ನಂತರವೂ ಪಾಕಿಸ್ತಾನ ದಾಳಿಗಳನ್ನು ಮುಂದುವರೆಸಿದೆ. ಈ ಸಂದರ್ಭದಲ್ಲಿ ದೇಶದ ಜನತೆಯ ಬೆಂಬಲ ಸರ್ಕಾರಕ್ಕೆ ಇದ್ದರೂ, ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕೆಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಯಾವ ಆಧಾರದ ಮೇಲೆ ಕದನ ವಿರಾಮ ಮಾಡಲಾಯಿತು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸರ್ವಪಕ್ಷದ ಸಭೆಗೆ ಗೈರಾಗಿದ್ದಾರೆ ಮತ್ತು ಸಂಸತ್ತಿಗೂ ಆಗಮಿಸುತ್ತಿಲ್ಲ ಎಂದು ಲಾಡ್ ಟೀಕಿಸಿದ್ದಾರೆ. “ನಾನೇ ಸುಪ್ರೀಂ, ಯಾವ ಸಭೆಗೂ ಭಾಗಿಯಾಗುವುದಿಲ್ಲ ಎಂಬ ಸಂದೇಶವನ್ನು ಮೋದಿ ಕೊಡುತ್ತಿದ್ದಾರೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ವ್ಯಾಪಾರಕ್ಕಾಗಿ ಯುದ್ಧ ನಿಲ್ಲಿಸಿದ್ದೇನೆ” ಎಂದು ಹೇಳಿರುವಂತೆ, ಮೋದಿಯವರ ಕದನ ವಿರಾಮದ ನಿರ್ಧಾರವೂ ವ್ಯಾಪಾರಕ್ಕಾಗಿಯೇ ಆಗಿರಬಹುದೇ ಎಂದು ಲಾಡ್ ಕಿಡಿಕಾರಿದ್ದಾರೆ.