ನಾಳೆ ದೇಶದಲ್ಲಿ ಯುದ್ಧದ ಡ್ರಿಲ್‌! – ಮಾಕ್‌ ಡ್ರಿಲ್‌ ಹೇಗಿರಲಿದೆ?

varthajala
0

 


ನವದೆಹಲಿ: ಬರೋಬ್ಬರಿ 54 ವರ್ಷದ ಬಳಿಕ ಭಾರತದಲ್ಲಿ ಮಾಕ್‌ ಡ್ರಿಲ್‌ ನಡೆಯಲಿದೆ. ಪಹಲ್ಗಾಮ್‌ ಪ್ರತೀಕಾರಕ್ಕೆ  ಭಾರತ  ಸನ್ನದ್ಧವಾಗುತ್ತಿದ್ದಂತೆ ದೇಶದ 244 ಸಿವಿಲ್‌ ಡಿಫೆನ್ಸ್‌ ಜಿಲ್ಲೆಗಳಲ್ಲಿ  ನಾಳೆ ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ.

ಯುದ್ಧದ (War) ದಾಳಿ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಣಕು ತಾಲೀಮಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕರ ರಕ್ಷಣೆಗಾಗಿ ಪ್ರಾತ್ಯಕ್ಷಿಕೆ ಕೊಡುವಂತೆ ಸಿವಿಲ್ ಡಿಫೆನ್ಸ್‌ಗಳಿಗೆ ಸೂಚನೆ ನೀಡಲಾಗಿದೆ.

ಸಾಧಾರಣವಾಗಿ ಒಂದು ದೇಶ ಯುದ್ಧಕ್ಕೆ ಸಿದ್ಧಗೊಳ್ಳುತ್ತಿದ್ದಾಗ ಮಾಕ್‌ ಡ್ರಿಲ್‌ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಕಳೆದ ಭಾನುವಾರ ಪಂಜಾಬ್‌ನ ಫಿರೋಜ್‌ಪುರ್ ಕಂಟೋನ್ಮೆಂಟ್‌ನಲ್ಲಿ ರಾತ್ರಿ 9 ರಿಂದ 9:30ರವರೆಗೆ ವಿದ್ಯುತ್‌ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

1971ರ ಸಂದರ್ಭದಲ್ಲೂ ಮೊದಲಿಗೆ ಪಂಜಾಬ್‌ನಲ್ಲೇ ಮೊದಲ ಬಾರಿ ಮಾಕ್ ಡ್ರಿಲ್ ಮಾಡಲಾಗಿತ್ತು. ಈ ಬಾರಿಯೂ ಮೊದಲು ಪಂಜಾಬ್ ನಲ್ಲಿ ನಡೆಸಿ ಬಳಿಕ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿರುವುದು ವಿಶೇಷ. ಹೀಗಾಗಿ 1971 ರೀತಿ ಮತ್ತೊಮ್ಮೆ ಭಾರತ ಪಾಕ್‌ ಮಧ್ಯೆ ಯುದ್ಧ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ.

ಮಾಕ್ ಡ್ರಿಲ್ ಎಂದರೇನು?
ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.

ಸಂಕಷ್ಟದ ಸನ್ನಿವೇಶಗಳನ್ನು ಅಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ.

ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ.

ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.

1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ವೇಳೆ ಈ ರೀತಿಯ ಮಾಕ್‌ ಡ್ರಿಲ್‌ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್‌ ಡ್ರಿಲ್‌ ಮಾಡಲು ಸಮಯ ಸಿಕ್ಕಿರಲಿಲ್ಲ.

Post a Comment

0Comments

Post a Comment (0)