ಬೆಂಗಳೂರು: ಕ್ರೀಡಾ ಸಮಿತಿಯಿಂದ ಕ್ರೀಡಾ ಪ್ರಾಧಿಕಾರ ಆದರೂ ಪ್ರಗತಿ ಕಂಡು ಬರುತ್ತಿಲ್ಲ. ಪ್ರಾಧಿಕಾರ ಮಾಡಿದ ಉದ್ದೇಶವೇ ಈಡೇರದಿದ್ದರೆ ಇದನ್ನು ಮಾಡಿ ಪ್ರಯೋಜನವೇನು? ಎಂದು ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗರಂ ಆದ ಬೆಳವಣಿಗೆ ಸೋಮವಾರ ಕಂಡು ಬಂದಿತು.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕಾಗಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟು ವರ್ಷವಾದರೂ 176 ತರಬೇತುದಾರರ ನೇಮಕಾತಿ ಮಾಡಿಕೊಂಡಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ. ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಬೇಕು. ಯಾವ ಜಿಲ್ಲೆಯಲ್ಲೂ ಉಪ ನಿರ್ದೇಶಕರ ಸ್ಥಾನ ಖಾಲಿ ಬಿಡಬಾರದು. ಪ್ರಾಧಿಕಾರದ ಸಭೆಗಳನ್ನು ನಿಯಮಿತವಾಗಿ ಆಯೋಜಿಸಬೇಕು. ಪ್ರತಿ ವರ್ಷ ಲೆಕ್ಕಪರಿಶೋಧನೆ ಆಗಬೇಕು. ದಸರಾ ಕ್ರೀಡಾಕೂಟ ಆರಂಭಕ್ಕೂ ಮೊದಲು ಪ್ರಾಧಿಕಾರ ಕ್ರಿಯಾಶೀಲವಾಗಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸಲು ಅಗತ್ಯ ಅನುದಾನ ನಿಗದಿ ಮಾಡಬೇಕು. ಅಂತರರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸುವ ಮೊದಲು ಕನಿಷ್ಠ 15 ರಾಷ್ಟ್ರಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಕಾಗದ ಪತ್ರಗಳಲ್ಲಷ್ಟೇ ‘ಅಂತರರಾಷ್ಟ್ರೀಯ, ರಾಷ್ಟ್ರೀಯ ಕ್ರೀಡಾಕೂಟ’ ಎಂದು ನಮೂದಿಸಿ, ಭಾಗವಹಿಸುವ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು. ಅಗತ್ಯವಾದ ಮಾರ್ಗಸೂಚಿ ಸಿದ್ಧಪಡಿಸಬೇಕು ಎಂದು ಹೇಳಿದರು.
ಭಾರತೀಯ ಕ್ರೀಡಾ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಬೇಕು. ಅದಕ್ಕಿಂತ ಉತ್ತಮವಾಗಿ ರಾಜ್ಯದ ಕ್ರೀಡಾ ಚಟುವಟಿಕೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಕಂಬಳವನ್ನು ಗ್ರಾಮೀಣ ಕ್ರೀಡೆಯಾಗಿ ಗುರುತಿಸುವ ಬಗ್ಗೆಯೂ ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು.