ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆಯೂ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೂ ಆಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಎನ್ ಪುವಿಯರಸು ತಿಳಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಅವರು, ಸದ್ಯದ ಚಂಡಮಾರುತದ ಪ್ರಕಾರ, ವಿಶೇಷವಾಗಿ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರಿನಲ್ಲಿಯೂ ಮುಂದಿನ ಎರಡು ದಿನ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.
ಭಾನುವಾರದಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತವಾಗಿದ್ದವು. ಭಾರಿ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು. ಸಣ್ಣಪುಟ್ಟ ಸಂಚಾರ ದಟ್ಟಣೆ ಹಾಗೂ ಮರ, ರೆಂಬೆ, ಕೊಂಬೆಗಳು ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇಂದು ಬೆಳಗ್ಗೆ ನೀಡಿರುವ ಹೇಳಿಕೆ ಪ್ರಕಾರ, ಚಂಡಮಾರುತವು ಆಗ್ನೇಯ ಬಂಗಾಳ ಕೊಲ್ಲಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಉತ್ತರ ತಮಿಳುನಾಡಿನವರೆಗೆ ವ್ಯಾಪಿಸಿದ್ದು, ದಕ್ಷಿಣ ಭಾರತದಾದ್ಯಂತ ಮಳೆಯನ್ನು ತೀವ್ರಗೊಳಿಸುತ್ತಿದೆ.
ನಗರದ ವಿವಿಧೆಡೆ ರಸ್ತೆಗಳು ಜಲಾವೃತಗೊಂಡ, ಜನರು ತೀವ್ರ ತೊಂದರೆ ಎದುರಿಸುವಂತಾಯಿತು. ಮಾನ್ಯತಾ ಟೆಕ್ ಪಾರ್ಕ್ ಬಳಿಯೂ ವಾಹನ ಸಂಚಾರ ನಿಧಾನವಾಗಿತ್ತು. ರಾಜ್ಯದ ಹಲವು ಭಾಗಗಳಲ್ಲಿ ವಿಶೇಷವಾಗಿ ಮಲೆನಾಡು ಪ್ರದೇಶ ಮತ್ತು ಕರಾವಳಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ.