ಮೈಸೂರು/ ಬೆಂಗಳೂರು, ಜುಲೈ 19, (ಕರ್ನಾಟಕ ವಾರ್ತೆ): ವಿವಿಧ ಇಲಾಖೆಗಳ 2578.03 ಕೋಟಿ ಮೌಲ್ಯದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ. ಇದು ನಮ್ಮ ಸರ್ಕಾರದ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ಇದೆ ಆದ್ದರಿಂದಲೇ ಇಂದು 2578 ಕೋಟಿ ರೂಗಳ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಾಗಿದೆ. ನಾವು 2 ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಲು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ನಾವು ರಾಜ್ಯದ ಜನರ ಪ್ರೀತಿ ಅಭಿಮಾನವನ್ನು ಉಳಿಸಿಕೊಂಡಿದ್ದೇವೆ. ನಾವು ಬಡವರ ಹಿಂದುಳಿದವರ ನೊಂದವರ ಪರ ಇರುವ ಸರ್ಕಾರ. ಕರ್ನಾಟಕದಿಂದ 4.5 ಲಕ್ಷ ಕೋಟಿ ತೆರಿಗೆ ನೀಡುತ್ತವೆ. ಆದರೆ ನಮಗೆ 65 ಸಾವಿರ ಕೋಟಿ ಮಾತ್ರ ಬರುತ್ತಿದೆ. ಇದರ ಪಾಲು ಹೆಚ್ಚಾಗಬೇಕು. ಈ ಬಗ್ಗೆ ನಮ್ಮ ರಾಜ್ಯದ ಸಂಸದರು ದ್ವನಿ ಎತ್ತಬೇಕು ಎಂದರು.
ನಾವು 5 ಗ್ಯಾರೆಂಟಿಗಳನ್ನು ಧರ್ಮರಹಿತವಾಗಿ, ಪಕ್ಷಾತೀತವಾಗಿ, ಎಲ್ಲಾ ಬಡವರಿಗೆ ನೀಡಿದ್ದೇವೆ. ನಾವು ವಾರ್ಷಿಕ 55 ಸಾವಿರ ಕೋಟಿ ರೂಗಳನ್ನು ಗ್ಯಾರೆಂಟಿ ಯೋಜನೆಗಳಿಗೆ ನೀಡುತ್ತಿದ್ದೇವೆ. ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.
ದೇಶದಲ್ಲಿ ಅಸಮಾನತೆ ನಿವಾರಣೆ ಆಗಬೇಕು. ಶೇಕಡಾ 90% ಜನ ಹಿಂದುಳಿದವರು ಇದ್ದಾರೆ. ಇವರು ರಾಜಕೀಯವಾಗಿ ಮೇಲೆ ಬರಬೇಕು. ಇವರಿಗೆ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕು. ಇವರನ್ನು ಮುಖ್ಯ ವಾಹಿನಿಗೆ ತರಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಸರ್ವತೋಮುಖ ಅಭಿವೃದ್ಧಿಗೆ ನಾವು ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ದೇಶದ ಎಲ್ಲಾ ಜನರನ್ನು ಸಮಾನವಾಗಿ ಕಾಣುವ ಸಮಾಜ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಯಾರಿಗೆ ಇತಿಹಾಸ ಗೊತ್ತಿಲ್ಲ ಅವರಿಗೆ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಿಳಿಸಿದ್ದಾರೆ ಎಂದರು.
ರಾಜ್ಯ ಸಭಾ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ಮೈಸೂರಿನಲ್ಲಿ ಇಂದು ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ. ಸಿದ್ಧರಾಮಯ್ಯ ಅವರಿಗೆ ಮೈಸೂರಿನ ಮೇಲೆ ಹೆಚ್ಚು ಪ್ರೀತಿ. ಆದ್ದರಿಂದ ಮೈಸೂರು ಭಾಗಕ್ಕೆ ಹೆಚ್ಚಿನ ಅನುಧಾನ ನೀಡಿ ಅಭಿವೃದ್ಧಿ ಮಾಡುತ್ತಾರೆ. ನೆಹರೂ ಅವರ ಕಾಲದಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಬೆಂಗಳೂರು ಹಾಗೂ ಮೈಸೂರು ಭಾಗಕ್ಕೆ ನೀಡಿದರು. ದೇವರಾಜ ಅರಸು ಅವರ ಕಾಲದಲ್ಲಿ ಮೈಸೂರು ಹೆಚ್ಚು ಅಭಿವೃದ್ಧಿ ಆಗಿದೆ ಎಂದು ತಿಳಿಸಿದರು.
ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿ ನೀಡಿದರು. ಬಡವ ಇರಲಿ ಶ್ರೀಮಂತ ಇರಲಿ ಎಲ್ಲರಿಗೂ ಏಕ ಮತದಾನ ಹಕ್ಕನ್ನು ನೀಡಿದರು. ನಾವೆಲ್ಲರೂ ಒಳ್ಳೆ ಕೆಲಸಗಳನ್ನು ಮಾಡೋಣ ಎಂದರು.
ನಮ್ಮ 5 ಗ್ಯಾರೆಂಟಿ ಯೋಜನೆಗಳು ಇಂದು ದೇಶಕ್ಕೆ ಮಾದರಿಯಾಗಿವೆ. ಹಲವಾರು ರಾಜ್ಯಗಳು ಇಂದು ನಮ್ಮ ಗ್ಯಾರೆಂಟಿ ಗಳನ್ನೂ ಅನುಕರಣೆ ಮಾಡುತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳನ್ನು ಜನ ಸಾಮಾನ್ಯರಿಗೋಸ್ಕರ ಜಾರಿಗೆ ತರಲಾಗಿದೆ. ದೇಶಕ್ಕಾಗಿ ನಮ್ಮ ಪಕ್ಷ ಹಲವು ಯೋಜನೆಗಳನ್ನು ಮಾಡಿದೆ.
ಉಪ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಇಲಾಖೆಯ ಸಚಿವರಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ ನಾವು ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ನಾವು 5 ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡಿದ್ದೇವೆ. ನೀವು ನಮಗೆ ಆಶೀರ್ವಾದ ಮಾಡಿದ್ದೀರಿ. ನಾವು ಅಭಿವೃದ್ಧಿ ಮಾಡುವ ಮೂಲಕ ಇಂದು ನಿಮ್ಮ ಋಣ ತೀರಿಸಲು ಬಂದಿದ್ದೇವೆ. ನಾವು ಭಾರತ್ ಜೋಡೊ ಯಾತ್ರೆ ಮಾಡಿದ್ದೆವು. ನಾವು ಯಾತ್ರೆ ಮಾಡಿದ್ದ ಭಾಗದಲ್ಲಿ ಎಲ್ಲ್ಲಾ ನಮ್ಮ ಶಾಸಕರು ಗೆದ್ದಿದ್ದಾರೆ. ನಾವು ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿದ್ದೇವೆ. ನಾವು ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ. ನಾವು ಬದುಕಿನ ಅಭಿವೃದ್ಧಿ ಮೇಲೆ ರಾಜಕೀಯ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉತ್ತಮವಾಗಿ ಮಳೆ ಆಗಿದೆ ಜೂನ್ ತಿಂಗಳಲ್ಲಿ ಕೆ ಆರ್ ಎಸ್ ತುಂಬಿದ್ದು ಬಾಗಿನ ಅರ್ಪಿಸಿದ್ದೇವೆ. ನಾಳೆ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತೇವೆ. ಉಳುವವನಿಗೆ ಭೂಮಿಯನ್ನು ನೀಡಿದ್ದು ಇಂದಿರಾ ಗಾಂಧಿಯವರು. ಇದನ್ನು ಕೋಟ್ಯಾಂತರ ಜನ ನೆನೆಸಿಕೊಳ್ಳುತ್ತಾರೆ. ಇಂದು ಮೈಸೂರಿನಲ್ಲಿ 2578 ಕೋಟಿಗಳ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ ಎಂದು ತಿಳಿಸಿದರು
ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಮಾತನಾಡಿ ಈ ಕಾರ್ಯಕ್ರಮ ಅಭಿವೃದ್ಧಿಯ ಕಾರ್ಯಕ್ರಮ. ನಮ್ಮ ಸರ್ಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ಜನರ ಜೀವನವನ್ನು ಸುಧಾರಿಸಿದೆ. 100 ವರ್ಷಗಳ ಹಿಂದೆ ಗಾಂಧೀಜಿಯವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಿತ್ತು. ನೂರು ವರ್ಷಗಳ ನಂತರ ನಮ್ಮ ಪಕ್ಷ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಿ ಹಲವು ಪ್ರಮುಖ ಸಿದ್ಧಾಂತಗಳನ್ನು ಅಳವಡಿಸಿಕೊಂಡಿತು ಎಂದು ಹೇಳಿದರು.
ಮೈಸೂರು ಪ್ರಮುಖವಾಗಿ ಅಭಿವೃದ್ಧಿ ಆಗಿದೆ. ಜಿಲ್ಲಾ ಆಸ್ಪತ್ರೆ ನಿರ್ಮಾಣ ಆಗಿದೆ. ಇದರಿಂದ ಕೋವಿಡ್ ಸಂದರ್ಭವನ್ನು ಕರ್ನಾಟಕದಲ್ಲಿ ನಿರ್ವಹಿಸಲು ಸಾಧ್ಯವಾಯಿತು. ಮೈಸೂರಿನ ರಸ್ತೆಗಳು ಅಭಿವೃದ್ಧಿ ಆಗಿವೆ. ಹೊಸ ಕೆ.ಎಸ್.ಆರ್.ಟಿ.ಸಿ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸಲು ಅಭಿವೃದ್ಧಿ ಮಾಡಲಾಗುತ್ತಿದೆ. ದೇವರಾಜ ಅರಸು ಅವರ ನಂತರ ಅತಿ ಹೆಚ್ಚು ಅಭಿವೃದ್ಧಿ ಮಾಡಿದ್ದು ನಮ್ಮ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ. ನಮ್ಮ 5 ಗ್ಯಾರೆಂಟಿಗಳು ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರಿಗೂ ನೀಡಲಾಗುತ್ತಿವೆ. ನಾವು ಹೇಳಿದ್ದನ್ನು ಮಾಡುತ್ತಿದ್ದೇವೆ. ನುಡಿದಂತೆ ನಡೆಯುತ್ತಿದ್ದೇವೆ. ಕರ್ನಾಟಕವನ್ನು ಸವಾರ್ಂಗೀಣ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯೋಣ ಎಂದು ತಿಳಿಸಿದರು.
ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್ ಅವರು ಮಾತನಾಡಿ ನಮ್ಮ ಸರ್ಕಾರ ಅಭಿವೃದ್ಧಿ ಪರವಾದ ಸರ್ಕಾರವಾಗಿದೆ. ಹಿಂದಿನ ಸರ್ಕಾರದವರು ಅಭಿವೃದ್ಧಿಯನ್ನು ಮಾಡಲು ಆಗಲಿಲ್ಲ ಆದ್ದರಿಂದ ನಮ್ಮ ಮೇಲೆ ಸುಳ್ಳು ಅಪವಾದಗಳನ್ನು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಾವು ಚುನಾವಣೆಗೂ ಮುಂಚೆ 5 ಗ್ಯಾರೆಂಟಿಗಳ ಭರವಸೆಯನ್ನು ನೀಡಿದ್ದೆವು. ಅದರಂತೆ 5 ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಸರ್ಕಾರ ಹಿಂದುಳಿದವರ ಬಡವರ ಪರ ಕೆಲಸ ಮಾಡುತ್ತಿದೆ. ಜನಪರ ಆಡಳಿತವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ ಪರಮೇಶ್ವರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ, ಇಂಧನ ಇಲಾಖೆಯ ಸಚಿವರಾದ ಕೆ ಜೆ ಜಾರ್ಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಡರಗಿ, ನಗರಾಭಿವೃದ್ಧಿ ಇಲಾಖೆಯ ಸಚಿವರಾದ ರಹೀಂ ಖಾನ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷರಾದ ಹೆಚ್ ಎಂ ರೇವಣ್ಣ, ವಸತಿ ವಿಹಾರ ಧಾಮಗಳ ಅಧ್ಯಕ್ಷರು ಹಾಗೂ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಕುಮಾರ್ ಸಿ, ಚಾಮರಾಜ ಲೋಕಸಭಾ ಕ್ಷೇತ್ರದ ಸದಸ್ಯರಾದ ಸುನಿಲ್ ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಜೀರ್ ಅಹಮ್ಮದ್, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರವಿಶಂಕರ್, ಶಾಸಕರಾದ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಿ ತಿಮ್ಮಯ್ಯ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ನಗರ ಪೋಲಿಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿಗಳಾದ ಡಾ ಪಿ ಶಿವರಾಜು, ಚಲನಚಿತ್ರ ನಟರಾದ ಸಾಧುಕೋಕಿಲ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.