ಬೆಂಗಳೂರು, ಜುಲೈ 19 (ಕರ್ನಾಟಕ ವಾರ್ತೆ): ನ್ಯಾಯಾಂಗ ವ್ಯವಸ್ಥೆಯಲ್ಲಿನ ವೃತ್ತಿಪರತೆ ಹಾಗೂ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತೇನೆ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ತಿಳಿಸಿದರು.
ಅವರು ಇಂದು ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿ, ಹೈಕೋರ್ಟ್‍ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಏರ್ಪಡಿಸಿದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂದು ಹಲವಾರು ಒಳ್ಳೆಯ ಬದಲಾವಣೆಗಳು ಕಂಡುಬಂದಿದೆ.
ನ್ಯಾಯಾಧೀಶರು ಹಾಗೂ ವಕೀಲರ ನಡುವೆ ಉತ್ತಮ ಬಾಂಧವ್ಯ ಏರ್ಪಡಬೇಕು. ಕರ್ನಾಟಕ ಹಲವು ಸಾಧನೆಕಾರರನ್ನು ಕೊಡುಗೆಯಾಗಿ ನೀಡಿದೆ. ಬಸವಣ್ಣ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್, ಸರ್.ಎಂ.ವಿಶ್ವೇಶ್ವರಯ್ಯ ಇಂತಹ ಮಹನೀಯರ ಸಾಧನೆಗಳನ್ನು ನಾವು ಇಂದು ನೆನೆಯಬೇಕಿದೆ. ಜನರು ನ್ಯಾಯದಾನದಲ್ಲಿ ಇಟ್ಟಿರುವ ನಂಬಿಕೆಯನ್ನು ನಾವು ಉಳಿಸಿಕೊಂಡು ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.
ಕರ್ನಾಟಕ ಉಚ್ಚನ್ಯಾಯಾಲಯದ ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ ಸ್ವಾಗತ ಕೋರಿ ಭಾಷಣ ಮಾಡಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾದ ಮಿಟ್ಟಲ ಕೋಡ್ ಎಸ್.ಎನ್. ಅವರು ಮಾತನಾಡಿ, ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಅವರು 1966ರಲ್ಲಿ ನಾಗ್ಪುರದಲ್ಲಿ ಜನಿಸಿದರು. ಶಾಲೆ ಮುಗಿಸಿದ ನಂತರ ಇನ್ಸಿಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ನೊಂದಣಿಯಾಗಿ, ನಂತರ ಠಾಕೂರ್ ವೈದ್ಯನಾಥನ್ ಅಂಡ್ ಕಂಪೆನಿಯಲ್ಲಿ 1985ರಲ್ಲಿ ಸೇವೆ ಪ್ರಾರಂಭಿಸಿ, ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಮುಗಿಸಿ ನಂತರ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯನ್ನು ಪೂರ್ಣಗೊಳಿಸಿದರು. 1990ರಲ್ಲಿ ಕಾನೂನು ಪದವಿಯನ್ನು ಪಡೆದು ದೆಹಲಿಯ ಬಾರ್ ಕೌನ್ಸಿಲ್‍ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಅಲ್ಲದೆ ದೆಹಲಿಯ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಎರಡರಲ್ಲೂ ಸೇವೆ ಸಲ್ಲಿಸಿದ ಅನುಭವ ಅವರದ್ದು. ಕಂಪನಿ ನ್ಯಾಯ ಮಂಡಳಿ ಹಾಗೂ ಇನ್ನಿತರ ನ್ಯಾಯ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ ಅವರು, ದೆಹಲಿ ಹೈಕೋರ್ಟ್‍ನಲ್ಲಿ ಹಿರಿಯ ವಕೀಲರಾಗಿ 2011ರಲ್ಲಿ ನೇಮಕಗೊಂಡರು. ನಂತರ 17, 2013ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ, 2015ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ ಎಂದು ಅವರು ತಿಳಿಸಿದರು.
ನ್ಯಾಯಾಧೀಶರು ಹಾಗೂ ವಕೀಲರದ್ದು ಅವಿನಾಭವ ಸಂಬಂಧ ಎಂದು ಬಣ್ಣಿಸಿದ ಅವರು ಈ ಇಬ್ಬರ ಸಮನ್ವಯದಿಂದ ನ್ಯಾಯ ವ್ಯವಸ್ಥೆಯಲ್ಲಿ ಉತ್ತಮ ತೀರ್ಪುಗಳನ್ನು ನೀಡಲು ಸಾಧ್ಯವಿದೆ. ಕರ್ನಾಟಕದಂತಹ ಸಾಂಸ್ಕøತಿಕ ಹಿರಿಮೆಯುಳ್ಳ ರಾಜ್ಯದಲ್ಲಿ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡ ತಮಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್, ಕರ್ನಾಟಕ ಉಚ್ಚನ್ಯಾಯಾಲಯದ ಹಿರಿಯ ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.