ಶಿಡ್ಲಘಟ್ಟ : ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಛಲವನ್ನು ಹೊಂದಿದ್ದ ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಗ್ರಾಮ ಪಂಚಾಯಿತಿ ಸದಸ್ಯನಾಗಿ ತನ್ನ ಊರಿನ ಅಭಿವೃದ್ಧಿಗಾಗಿ ಪಣತೊಟ್ಟು ಶ್ರಮಿಸಿದ ಏಕೈಕ ವ್ಯಕ್ತಿ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಬೆಳ್ಳೂಟಿ ಗೇಟ್ ಬಳಿ ಇರುವ ಶ್ರೀ ಗುಟ್ಟಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಎಸ್ ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಆಯೋಜಿಸಿದ 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಿನ ಮನುಷ್ಯ ನಾನು, ನನ್ನದು ತನ್ನ ಸ್ವಾರ್ಥಕ್ಕಾಗಿ ಬದುಕುವ ಈ ಸಮಾಜದಲ್ಲಿ, ನಾನು ನನ್ನದು ಎಂಬುದನ್ನು ಬದಿಗೊತ್ತಿ ಸಮಾಜಕ್ಕಾಗಿ, ಪರಿಸರಕ್ಕಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ ವ್ಯಕ್ತಿ ಗೆಳೆಯ ಸಂತೋಷ್. ಸಮಾಜದಲ್ಲಿ ಆದರ್ಶ ಪ್ರಾಯವಾಗಿ,ಸಮಾಜದ ಪರವಾಗಿ ನಿಸ್ವಾರ್ಥ ರೀತಿಯಲ್ಲಿ ತಮ್ಮ ಬದುಕನ್ನ ಕಟ್ಟಿಕೊಂಡಿದ್ದರು. ಆದರೆ ನಾವು ಯಾರು ಊಹಿಸಿರಲಿಲ್ಲ ಇಷ್ಟು ಬೇಗ ಅವರನ್ನು ಭಗವಂತ ಕರೆದುಕೊಂಡು ಹೋಗುತ್ತಾನೆ ಎಂದು ಗೊತ್ತಿರಲಿಲ್ಲ. ಅವನು ನಮ್ಮೊಟ್ಟಿಗೆ ಇಲ್ಲ ಆದರೆ ಅವನು ಮಾಡಿರುವ ಕಾರ್ಯಗಳು ನಮ್ಮ ಮುಂದೆ ಕಾಣುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ರೂವಾರಿ ಹಾಗೂ ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು ಮಾತನಾಡಿ, ಇಂದಿನ ಮಕ್ಕಳು ದೇಶದ ಭವಿಷ್ಯ ನೀವು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ನಿಮಗೆ ಅತ್ಯಂತ ಅವಶ್ಯಕವಾಗಿರುವುದು ವಿದ್ಯಾಭ್ಯಾಸ. ನಿಮ್ಮ ಭವಿಷ್ಯಕ್ಕೆ ನಿಮ್ಮ ಬೆಳವಣಿಗೆಗೆ ಸದಾ ಸಹಕಾರಿಯಾಗಿರುತ್ತೇನೆ. ನಿಮ್ಮ ಭವಿಷ್ಯಕ್ಕೆ ನೀವೇ ಮೊದಲ ಪ್ರಯತ್ನವಾಗಿರಬೇಕು. ನೀವು ಎಷ್ಟು ಆಲೋಚನೆ ಮಾಡುತ್ತೀರಿ, ಎಷ್ಟು ಗಟ್ಟಿಯಾಗಿ ಯೋಚಿಸುತ್ತೀರಿ, ನೀವು ಎಷ್ಟು ಆತ್ಮವಿಶ್ವಾಸ ಇದ್ದರೆ ಅಷ್ಟು ಯಶಸ್ಸು ಕಾಣುತ್ತೀರಿ. ಎಲ್ಲಾ ವಿದ್ಯಾರ್ಥಿಗಳು ಬಹಳ ವಿಶೇಷ ಬಹಳ, ವಿಶಿಷ್ಟ ತನ್ನದೇ ಆದಂತಹ ಸೃಜನಶೀಲತೆಯನ್ನು ಹೊಂದಿರುತ್ತಾರೆ. ನೀವೆಲ್ಲರೂ ಸಹ ದೇಶದ ಆಸ್ತಿ. ಈ ದೇಶಕ್ಕೆ ದೊಡ್ಡ ಕೊಡುಗೆಯಾಗಿ ನೀಡಬೇಕು. ಶಿಡ್ಲಘಟ್ಟದ ಭವಿಷ್ಯ ನಿರ್ಮಾಣ ಮಾಡಲು ನಿಮ್ಮೆಲ್ಲರೂ ಸದೃಢರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಾವುಕರಾಗಿ ಕಣ್ಣೀರಿಟ್ಟ ಆಂಜಿನಪ್ಪ
ಪ್ರತಿವರ್ಷದಂತೆ ಈ ವರ್ಷವೂ ಸಹ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದ್ದು, ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್ ಪ್ರತಿ ವರ್ಷವೂ ಸಹ ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತು ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದ. ಆದರೆ ಈ ವರ್ಷ ಅವನು ನಮ್ಮೆಲ್ಲರ ಜೊತೆ ಇಲ್ಲದೆ ಇರುವುದನ್ನ ನೆನೆದು ಬಾವುಕರಾಗಿ ಕಣ್ಣೀರಿಟ್ಟ ಪುಟ್ಟು ಆಂಜಿನಪ್ಪ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮೊದಲ ಐದು ವಿದ್ಯಾರ್ಥಿಗಳಿಗೆ ಅವರ ಭವಿಷ್ಯವನ್ನು ಉಜ್ವಲ ಗೊಳಿಸಲು ಲ್ಯಾಪ್ಟಾಪ್ ಗಳನ್ನ ವಿತರಿಸಲಾಯಿತು. ಹಾಗೆಯೇ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರದ ಪ್ರಶಂಸನಾ ಪತ್ರ ಮತ್ತು ಕಿರುಕಾಣಿಕೆಯಾಗಿ ಲ್ಯಾಪ್ಟಾಪ್ ಬ್ಯಾಗ್ ಕುಕ್ಕರ್ ಗಳನ್ನ ವಿತರಿಸಿ ಶುಭ ಹಾರೈಸಿದರು. ಇನ್ನು ಕಾರ್ಯಕ್ರಮಕ್ಕೂ ಮೊದಲು ಕಲಾವಿದ ಮುನಿರಾಜು ನೃತ್ಯ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಪ್ರೋ.ಎಂ ವಿ ರಾಜೀವ್ ಗೌಡ,ಶ್ರೀನಿವಾಸ್ ರಾಮಯ್ಯ,ಬೆಳ್ಳೂಟಿ ವೆಂಕಟೇಶ್,ಹಾಪ್ ಕಾಮ್ಸ್ ಚಂದ್ರೇಗೌಡ,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭ್ರಮಣಿ, ಕೋಟಹಳ್ಳಿ ಶ್ರಿನಿವಾಸ್,ಕೆ ಎಂ ಭೀಮೇಶ್, ಪ್ರೆಸ್ ನಾರಾಯಣಸ್ವಾಮಿ, ತಲಕಾಯಲಬೆಟ್ಟ ಅಶ್ವತ್ಥರೆಡ್ಡಿ, ಬೆಳ್ಳೂಟಿ ವರಲಕ್ಷ್ಮಿ ಸಂತೋಷ್,ಅಬ್ಲೂಡು ಚಂದ್ರು,ರಾಜ್ ಕುಮಾರ್, ಕೃಷ್ಣಪ್ಪ, ಕಾಳನಾಯಕನಹಳ್ಳಿರಮೇಶ್, ಕೋರ್ಲಪರ್ತಿ ಶೇಖರ್ ರೆಡ್ಡಿ,ಗೌಡನಹಳ್ಳಿ ಮಂಜುನಾಥ್, ಸಿಕೆ ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪೋಷಕರು,ಕಾಂಗ್ರೆಸ್ ಕಾರ್ಯಕರ್ತರು,ಮುಖಂಡರು ಪಾಲ್ಗೊಂಡಿದ್ದರು.