ಬೆಂಗಳೂರು, ಜುಲೈ 09, (ಕರ್ನಾಟಕ ವಾರ್ತೆ): ಕಲಬುರಗಿಯ ನಿವಾಸಿಯಾದ ಶ್ರೀಮಂತ ಬಿನ್ ಶೀವರಾಜ್ ರವರು ಉದ್ಯೋಗಕ್ಕಾಗಿ ದುಬೈಗೆ ತೆರಳಿದ್ದರು. ಅಲ್ಲಿನ FE Green idea Building Contracting LLC ಯಲ್ಲಿ ಕಟ್ಟಡ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಕಳೆದ ಡೆಸೆಂಬರ್ ಮಾಹೆಯಲ್ಲಿ ಅಪಘಾತವಾಗಿ ಸುಮಾರು 7 ತಿಂಗಳಿನಿಂದ ಕೋಮಾದಲ್ಲಿರುತ್ತಾರೆ ಮತ್ತು ವೈದ್ಯಕೀಯ ವೆಚ್ಚ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚಾಗಿರುತ್ತದೆ.
ಈ ವಿಷಯವನ್ನು ತಿಳಿದ ‘ಕರ್ನಾಟಕ ಸಂಘ ದುಬೈ' ನವರು ಅನಿವಾಸಿ ಭಾರತೀಯ ಸಮಿತಿಗೆ ಸೂಕ್ತ ಕ್ರಮ ಕೈಗೊಳ್ಳಲು ಕೋರಿದ್ದು, ಇದಕ್ಕೆ ಸ್ಪಂದಿಸಿದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರು ಕೂಡಲೆ ಮಾನ್ಯ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ರೋಗಿಯು Non Traumatic Intracerebral Haemorrhage, Intraventicular (ICD Code: 16t-5) ಧನ ಸಹಾಯ ಮಾಡಬೇಕಾಗಿ ಮನವಿ ಸಲ್ಲಿಸಿದ್ದರು.
ಏಕಕಾಲದಲ್ಲಿ ‘ಕರ್ನಾಟಕ ಸಂಘ ದುಬೈ' ರವರು ವಿಮೆ ಹಾಗೂ ಕೋರಿಕೆಯ ಮೇರೆಗೆ ವೈದ್ಯಕೀಯ ಶುಲ್ಕವನ್ನು ಕಡಿಮೆ ಮಾಡಿಸಿ ರೋಗಿಯನ್ನು ಭಾರತಕ್ಕೆ ಕಳುಹಿಸಲು ಸುಮಾರು 7,00,000/- ರೂಪಾಯಿಗಳನ್ನು ಸಂಘದ ವತಿಯಿಂದ ಸಂಗ್ರಹಿಸಿ ರೋಗಿಯನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲದೆ, ಉಪಾಧ್ಯಕ್ಷರ ಕೋರಿಕೆಯ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ಸದರಿಯವರ ವೈದ್ಯಕೀಯ ಚಿಕಿತ್ಸೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 3,00,000/- ರೂಪಾಯಿಗಳನ್ನು ಮಂಜೂರು ಮಾಡಿರುತ್ತಾರೆ.
ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಅವರು ಇದೇ ಜುಲೈ 4 ರಂದು ಭಾರತಕ್ಕೆ ಹಿಂದಿರುಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.