ಬೆಂಗಳೂರು, ಜುಲೈ 09 (ಕರ್ನಾಟಕ ವಾರ್ತೆ): ಅರ್ಹವಲ್ಲದ ಖೊಟ್ಟಿ ಹೂಡುವಳಿ ತೆರಿಗೆಯನ್ನು ಕ್ಷೇಮು ಮಾಡಿ ಸರ್ಕಾರದ ತೆರಿಗೆ ರಾಜಸ್ವದ ಮೇಲೆ ಪರಿಣಾಮ ಉಂಟು ಮಾಡುವ ನೀಚ ಕೃತ್ಯದಲ್ಲಿ ತೊಡಗಿರುವ ಖೊಟ್ಟಿ ಬಿಲ್ ಟ್ರೇಡರ್‍ಗಳ ವಿರುದ್ಧ ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯು ತನ್ನ ಅವಿರತ ಕ್ರಮಗಳನ್ನು ಕೈಗೊಂಡಿದೆ.
ಬೆಂಗಳೂರಿನ ಜಾರಿ ದಕ್ಷಿಣ ವಲಯ ಹಾಗೂ ಜಾಗೃತಿ ವಿಭಾಗಗಳ ಅಧಿಕಾರಿಗಳ ತಂಡವು ಬೆಂಗಳೂರು ಪೂರ್ವ ಪೆÇೀಲಿಸ್ ತಂಡದ ಸಹಯೋಗದೊಂದಿಗೆ ರಾಜಸ್ಥಾನದ ಜಲೋರ್ ಜಿಲ್ಲೆಯ ನಿವಾಸಿಯಾದ ಕೈಲಾಶ್ ವಿಶ್ಣೋಯ್ ಎಂಬ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಕಸ್ಟಡಿಗೆ ಪಡೆದಿರುತ್ತಾರೆ.
ಕೈಲಾಶ್ ವಿಶ್ಣೋಯ್ ಎಂಬ ವ್ಯಕ್ತಿಯು ನಕಲಿ ಆಧಾರ್ ಕಾರ್ಡ್‍ಗಳನ್ನು ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆದು, ಜಿಎಸ್‍ಟಿ ನೋಂದಣಿಗಳನ್ನು ಪಡೆದು, ಇವುಗಳನ್ನು ಉಪಯೋಗಿಸಿ ನೂರಾರು ಕೋಟಿಗಳ ಮೊತ್ತದ ಟ್ಯಾಕ್ಸ್ ಇನ್ವಾಯ್ಸ್ ಗಳನ್ನು ನೀಡಿ ಮೆಟಲ್ ಸ್ಕ್ರಾಪ್ ಸರಕುಗಳ ರಹಸ್ಯ ಸಾಗಾಣಿಕೆಗೆ ಸಹಕರಿಸಿ, ಆ ಮೂಲಕ ಖೊಟ್ಟಿ ಹೂಡುವಳಿ ತೆರಿಗೆಯನ್ನು ಕ್ಷೇಮು ಮಾಡಲು ಕರ್ನಾಟಕ ಮತ್ತು ಇತರೆ ರಾಜ್ಯಗಳ ವರ್ತಕರೊಂದಿಗೆ ಅಕ್ರಮವಾಗಿ ಕೈಜೋಡಿಸಿದ್ದು ಸರ್ಕಾರಕ್ಕೆ ರಾಜಸ್ವ ನಷ್ಟ ಉಂಟುಮಾಡುತ್ತಿದ್ದನು. ಈ ವ್ಯಕ್ತಿಯನ್ನು ಬೆಂಗಳೂರಿನ ವಿಶೇಷ ಆರ್ಥಿಕ ನ್ಯಾಯಾಲಯವು ಮುಂದಿನ ವಿಚಾರಣೆಗಾಗಿ ವಾರೆಂಟ್ ಮೂಲಕ ಇಲಾಖೆಯ ವಶಕ್ಕೆ ನೀಡಿರುತ್ತದೆ.
ವಾಣಿಜ್ಯ ತೆರಿಗೆಗಳ ಇಲಾಖೆಯ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದು, ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯ ಈ ದೃಢವಾದ ಕ್ರಮಗಳು, ನ್ಯಾಯವನ್ನು ಎತ್ತಿ ಹಿಡಿಯುವ, ಸಮಾನ ತೆರಿಗೆ ವ್ಯವಸ್ಥೆಯನ್ನು ಖಾತ್ರಿ ಪಡೆಸುವ ಹಾಗೂ ರಾಜ್ಯದ ಮತ್ತು ಅದರ ಪ್ರಾಮಾಣಿಕ ತೆರಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ಸರ್ಕಾರದ ಆಚಲವಾದ ಬದ್ಧತೆಯ ಬಗ್ಗೆ ಸ್ಪಷ್ಟವಾದ ಸಂದೇಶವನ್ನು ನೀಡುತ್ತವೆ ಎಂದು ಬೆಂಗಳೂರು ದಕ್ಷಿಣ ವಲಯದ ತೆರಿಗೆಗಳ ಅಪರ ಆಯುಕ್ತರು (ಜಾರಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.