ಜುಲೈ 31 : ಸಂತ ತುಳಸೀದಾಸರ ತಿಥಿಗನುಸಾರ ಜಯಂತಿ ನಿಮಿತ್ತ ಸನಾತನ ಸಂಸ್ಥೆಯ ಲೇಖನ

varthajala
0

ಮಹಾನ್ ಸಂತ ಗೋಸ್ವಾಮಿ ತುಳಸೀದಾಸರುಶ್ರಾವಣ ಶುದ್ಧ ಸಪ್ತಮಿ ಅಂದರೆ ಈ ವರ್ಷ ಜುಲೈ 31 ರಂದು ಸಂತ ಗೋಸ್ವಾಮಿ ತುಳಸೀದಾಸರ ಜಯಂತಿಯಿದೆ. ಅವರು ಉತ್ತರಪ್ರದೇಶದ ಮಹಾನ್ ಸಂತರಾಗಿದ್ದು, ಅವರನ್ನು ಮಹರ್ಷಿ ವಾಲ್ಮೀಕಿ ಋಷಿಯ ಅವತಾರವೆಂದು ಹೇಳಲಾಗುತ್ತದೆ. ಅವರು ರಾಮಚರಿತಮಾನಸ, ಅಯೋಧ್ಯಾಕಾಂಡ, ಸುಂದರಕಾಂಡ ಮತ್ತು ಹಲವಾರು ಮಹಾನ್ ಆಧ್ಯಾತ್ಮಿಕ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಜಯಂತಿಯ ಪ್ರಯುಕ್ತ ಅವರ ಜೀವನದ ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೋಣ.

ಸಂತ ತಳಸೀದಾಸರು :ಉತ್ತರಪ್ರದೇಶದ ಹಸ್ತಿನಾಪುರದಲ್ಲಿ ಶ್ರಾವಣ ಶುಕ್ಲ ಸಪ್ತಮಿಗೆ, ಮಾತೆ ಹುಲಸಿಯ ಮನೆಯಲ್ಲಿ ತುಲಸೀದಾಸರು ಜನಿಸಿದರು. ಅವರು ತಾಯಿಯ ಗರ್ಭದಲ್ಲಿ 12 ತಿಂಗಳುಗಳಿದ್ದರು. ಜನನದ ಸಮಯದಲ್ಲಿ, ಅದು ಮೂಲಾ ನಕ್ಷತ್ರ, ಅವನ ಬಾಯಿಯಲ್ಲಿ ಮೂವತ್ತೆರಡು ಹಲ್ಲುಗಳಿದ್ದವು, ಅವನ ಎತ್ತರ ಐದು ವರ್ಷದ ಮಗುವಿನಂತಿತ್ತು. ಜನನದ ಸಮಯದಲ್ಲಿ, ಮಗು ಅಳಲಿಲ್ಲ, ಅವನ ಬಾಯಿಂದ 'ರಾಮ' ಎಂಬ ಹೆಸರು ಹೊರಬಂದಿತು. ಅಂತಹ ಅದ್ಭುತ ಆದರೆ ಅಶುಭ ಲಕ್ಷಣ ನೋಡಿದ ಪೋಷಕರು ಮಗುವನ್ನು ಚಿನ್ನದ ಜೊತೆಗೆ ಚುನಿಯಾ ಎಂಬ ಸೇವಕಿಗೆ ಒಪ್ಪಿಸಿದರು. ನಂತರ ಅವರ ತಾಯಿ ಹುಲಸಿ ಕೂಡ ನಿಧನರಾದರು. ಚುನಿಯಾ ದಾಸಿ ಅವರನ್ನು ಐದು ವರ್ಷಗಳ ಕಾಲ ಬೆಳೆಸಿದರು. ನಂತರ ಚುನಿಯಾ ಕೂಡ ನಿಧನರಾದರು. ಮಗು ಒಂಟಿ ಜೀವನ ನಡೆಸುತ್ತಿತ್ತು, ನಂತರ ಜಗಜ್ಜನನಿ ಪಾರ್ವತಿ ಸ್ವತಃ ಬ್ರಾಹ್ಮಣ ಮಹಿಳೆಯ ವೇಷದಲ್ಲಿ ಬಂದು ಮಗುವನ್ನು ನರಸಿಂಹದಾಸ ಎಂಬ ಸಂತರಿಗೆ ಒಪ್ಪಿಸಿದರು. ನರಸಿಂಹದಾಸರು ಅವನನ್ನು ಬೆಳೆಸಿದರು. ಉಪನಯನ ಮಾಡಿದ ನಂತರ, ಆ ಹುಡುಗನಿಗೆ ರಾಮಬೋಲ ಎಂದು ಹೆಸರಿಡಲಾಯಿತು. ಅವರೇ ತುಲಸೀದಾಸರು.

ಅಧ್ಯಯನ:ಅಯೋಧ್ಯೆಯಲ್ಲಿ 12 ವರ್ಷಗಳ ಕಾಲ ಗುರುಸಾನ್ನಿಧ್ಯದಲ್ಲಿ ವೇದ-ಶಾಸ್ತ್ರಗಳ ಅಧ್ಯಯನ ಮಾಡಿ ಹಸ್ತಿನಾಪುರಕ್ಕೆ ಹಿಂದಿರುಗಿದರು. ಅಲ್ಲಿ ತಮ್ಮ ತಂದೆ ಆತ್ಮಾರಾಮ ದುಬೆಯವರನ್ನು ಭೇಟಿಯಾದರು. ಆತ್ಮಾರಾಮ ಅವರು ಅಕ್ಬರ್‍ನ ದರ್ಬಾರಿನಲ್ಲಿದ್ದರು. ಅವರು ಒಮ್ಮೆ ತುಳಸೀದಾಸರನ್ನು ಅಕಬರ್‍ನ ಬಳಿಗೆ ಕರೆದೊಯ್ದರು. ಅಕಬರ್ ಗೆ ತುಳಸಿದಾಸರು ಅತ್ಯಂತ ಪ್ರಿಯರಾದರು. ಅವರು ಬೇಟೆಗೆ ಹೋದಾಗಲೂ ಇವರನ್ನು ಜೊತೆಗೆ ಕರೆದೊಯ್ಯುತ್ತಿದ್ದರು.

ವಿವಾಹ ಮತ್ತು ವೈರಾಗ್ಯ :ತುಳಸೀದಾಸರ ತಂದೆ ಆತ್ಮಾರಾಮರು ಅವರ ವಿವಾಹವನ್ನು ಶ್ರೀಮಂತ ವ್ಯಕ್ತಿಯ ಪುತ್ರಿ ರತ್ನಾವಳಿಯೊಂದಿಗೆ ನಿಶ್ಚಯಿಸಿದರು. ಅದ್ದೂರಿಯಾಗಿ ಮದುವೆ ಮಾಡಿದರು. ಇಬ್ಬರಿಗೂ ಪರಸ್ಪರ ಅಪಾರ ಪ್ರೇಮವಿತ್ತು. ತುಳಸೀದಾಸರಿಗೆ ರತ್ನಾವಳಿಯನ್ನು ಬಿಟ್ಟಿರಲು ಆಗುತ್ತಿರಲಿಲ್ಲ. ಒಂದು ದಿನ, ತುಳಸೀದಾಸರು ಅಕ್ಬರನೊಂದಿಗೆ ದೂರ ದೇಶಕ್ಕೆ ಹೋಗಿದ್ದರು. ರತ್ನಾವಳಿ ಸಹ ತನ್ನ ತವರಿಗೆ ಹೋಗಿದ್ದಳು, ಇದು ತಿಳಿದ ತುಳಸೀದಾಸರು ರಾತ್ರೋರಾತ್ರಿ ಅವರ ಮಾವನ ಮನೆ ತಲುಪಿದರು. ಮನೆ ಬಾಗಿಲುಗಳೆಲ್ಲ ಮುಚ್ಚಿದ್ದವು. ತುಳಸೀದಾಸರು ಒಳಗೆ ಹೇಗೆ ಪ್ರವೇಶ ಮಾಡುವುದೆಂದು ಯೋಚಿಸತೊಡಗಿದರು. ಅವರು ರತ್ನಾವಳಿಯನ್ನು ಭೇಟಿ ಮಾಡಲು ಅತ್ಯಂತ ಆತುರರಾಗಿದ್ದರು. ಅವರು ಹತ್ತಿರದ ಕಿಟಕಿಯಲ್ಲಿದ್ದ ಒಂದು ಸರ್ಪವನ್ನು ಹಗ್ಗವೆಂದು ತಿಳಿದು ಅದನ್ನು ಹಿಡಿದು ಒಳಗೆ ಹೋದರು. ಮನೆಯವರೆಲ್ಲ ಎಚ್ಚರಗೊಂಡರು, ತುಳಸೀದಾಸರು ಬಂದ ವಿಷಯವನ್ನು ರತ್ನಾವಳಿಗೆ ಅವರ ತಾಯಿ ತಿಳಿಸಿದರು. ರತ್ನಾವಳಿ ತುಳಸೀದಾಸರ ಬಳಿ ಬಂದು ಎಲ್ಲ ಬಾಗಿಲು ಮುಚ್ಚಿರುವಾಗ ನೀವು ಒಳಗೆ ಹೇಗೆ ಬಂದಿರೆಂದು ಕೆಳಿದಳು, ಅದಕ್ಕೆ ತುಲಸೀದಾಸರು, ‘ನೀನು ಕಟ್ಟಿದ್ದ ಹಗ್ಗದ ಸಹಾಯ ಪಡೆದು ನಾನು ಬಂದೆ ಎಂದರು, ಇದನ್ನು ಕೇಳಿ ರತ್ನಾವಳಿ ಆಶ್ಚರ್ಯಗೊಂಡಳು. ಮತ್ತು ಕಿಟಕಿ ಬಳಿ ಹೋಗಿ ಸರ್ಪವನ್ನು ಕಂಡಳು. ನಂತರ ಅವಳು ತುಲಸೀದಾಸರಿಗೆ “ಪ್ರಾಣನಾಥ, ನೀವು ನನ್ನನ್ನು ಎಷ್ಟು ಪ್ರೀತಿಸುವಿರೋ, ಅಷ್ಟು ಪ್ರೀತಿ ಪ್ರಭು ಶ್ರೀರಾಮನ ಮೇಲಿಟ್ಟರೆ ತಮ್ಮ ಜೀವನ ಸಾರ್ಥಕಗೊಳ್ಳುವುದು” ಎಂದಳು. ಇದನ್ನು ಕೇಳಿದ ತುಳಸೀದಾಸರು ವಿರಕ್ತರಾದರು. ಅವರ ಮನದಲ್ಲಿ ವೈರಾಗ್ಯ ನಿರ್ಮಾಣವಾಯಿತು. ಮತ್ತು ಅವರು ಅಲ್ಲಿಂದ ಹೊರಟು ಆನಂದವನ ತಲುಪಿದರು. ಅಲ್ಲಿ ಅವರು 12 ವರ್ಷ ತಪಸ್ಸು ಮಾಡಿದರು. ನಂತರ ಅವರು ರಾಮಕಥೆ ಹೇಳಲಾರಂಭಿಸಿದರು.

ರಾಮದರ್ಶನಕ್ಕಾಗಿ ತುಳಸೀದಾಸರ ಬಯಕೆ: ಒಂದು ಬಾರಿ ತುಳಸೀದಾಸರಿಗೆ ಪಿಶಾಚಿಯೊಂದರ ಭೇಟಿಯಾಯಿತು. ಮತ್ತು ಅವನು ತುಳಸೀದಾಸರನ್ನು ನೋಡಿ ‘ನಿನಗೆ ಏನು ಬೇಕು ?’ ಎಂದು ಕೇಳಿದನು. ತುಳಸೀದಾಸರು ರಾಮನ ದರ್ಶನ ಮಾಡಿಸೆಂದು ಹೆಳಿದಾಗ, ಪಿಶಾಚಿ ಮುಂದೆ ಮುಂದೆ ಹೋಗಿ “ನೀನು ಪ್ರತಿದಿನ ರಾಮಕಥೆ ಹೇಳುವ ಜಾಗದಲ್ಲಿ ಒಬ್ಬ ವೃದ್ಧ ಬ್ರಾಹ್ಮಣ ಕೈಯಲ್ಲಿ ಲಾಠಿ ಹಿಡಿದು ಎಲ್ಲರಿಗಿಂತ ಮೊದಲು ಬಂದು ಕೂರುತ್ತಾನೆ. ಮತ್ತು ಎಲ್ಲರೂ ಹೋದ ಮೇಲೆ ಹೊರಡುತ್ತಾನೆ, ಅವನೇ ನಿನಗೆ ರಾಮನ ದರ್ಶನ ಮಾಡಿಸಬಹುದು, ಅವನು ವಾಸ್ತವದಲ್ಲಿ ಹನುಮಂತನಾಗಿದ್ದಾನೆ” ಎಂದು ಹೇಳಿ ಅದೃಶ್ಯವಾಯಿತು. ಮರುದಿನ, ಪುರಾಣ ಮುಗಿದು, ಬ್ರಾಹ್ಮಣನು ಹೊರಡುತ್ತಿದ್ದಾಗ ತುಳಸೀದಾಸನು ದಾರಿಯಲ್ಲಿ ಅವನನ್ನು ತಡೆದು ಅವನಿಗೆ ನಮಸ್ಕರಿಸಿದನು. ಬ್ರಾಹ್ಮಣನು, "ನಾನು ಬಡ ಬ್ರಾಹ್ಮಣ, ನಿನಗೆ ಕೊಡಲು ನನ್ನಲ್ಲಿ ಏನೂ ಇಲ್ಲ" ಎಂದು ಹೇಳಿದನು. ತುಳಸೀದಾಸನು, "ನೀನು ಹನುಮಾನ್. ನೀನು ಮಾತ್ರ ನನಗೆ ಶ್ರೀರಾಮನನ್ನು ತೋರಿಸಬಲ್ಲೆ" ಎಂದನು. ಹನುಮಂತನು ತುಲಸೀದಾಸರನ್ನು ವಾಲ್ಮೀಕಿಯ ಅವತಾರವೆಂದು ಗುರುತಿಸಿದನು. ಅವನು ತುಳಸೀದಾಸರನ್ನು ಪ್ರೀತಿಯಿಂದ ಅಪ್ಪಿಕೊಂಡನು. ಶೀಘ್ರದಲ್ಲೇ ರಾಮನ ದರ್ಶನ ಮಾಡಿಸುವುದಾಗಿ ಭರವಸೆ ನೀಡಿ ಕಣ್ಮರೆಯಾದನು. ಹನುಮಂತನು ಶ್ರೀ ರಾಮಚಂದ್ರನಿಗೆ, "ನಿಮ್ಮ ಆದೇಶದಂತೆ ವಾಲ್ಮೀಕಿ ತುಳಸೀದಾಸರ ರೂಪವನ್ನು ಪಡೆದಿದ್ದಾನೆ. ಅವನು ನಿನ್ನನ್ನು ನೋಡಲು ತುಂಬಾ ಕಾತುರನಾಗಿದ್ದಾನೆ" ಎಂದು ಹೇಳಿದನು. ಆಗ ಭಗವಾನ್ ಶ್ರೀ ರಾಮನು ವಾಲ್ಮೀಕಿ ವಿವರಿಸಿದ ರೂಪದಲ್ಲಿ ತುಳಸೀದಾಸರಿಗೆ ಕಾಣಿಸಿಕೊಂಡು ಅವರನ್ನು ಅಪ್ಪಿಕೊಂಡು ಹಣೆಯ ಮೇಲೆ ಕೈಯಿಟ್ಟು ಕಣ್ಮರೆಯಾದನು.

 ರಚಿಸಿದ ಕೃತಿಗಳು : ಹಿಂದಿ ಸಾಹಿತ್ಯದಲ್ಲಿ ಕವಿಯಾಗಿ ಸಂತ ತುಳಸೀದಾಸರಿಗೆ ಮಹತ್ತರವಾದ ಸ್ಥಾನವಿದೆ. ಮಧ್ಯಕಾಲೀನ ಭಾರತದಲ್ಲಿ ಸಂತ ತುಳಸೀದಾಸರಂತಹ ಜನಪ್ರಿಯ ಕವಿ ಬೇರೆ ಯಾರೂ ಇರಲಿಲ್ಲ. ಅವರ ಕೃತಿಗಳು ಬಡವರ ಗುಡಿಸಲುಗಳು ಮತ್ತು ಶ್ರೀಮಂತರ ಅರಮನೆಗಳನ್ನು ಸಮಾನವಾಗಿ ತಲುಪಿವೆ. ಅವರು ರಾಮಚರಿತಮಾನಸ, ಅಯೋಧ್ಯಾಕಾಂಡ, ಸುಂದರಕಾಂಡ ಮುಂತಾದ ಮಹಾನ್ ಆಧ್ಯಾತ್ಮಿಕ ಗ್ರಂಥಗಳ ಲೇಖಕರು. ತುಳಸೀದಾಸರು "ಹನುಮಾನ್ ಚಾಲೀಸಾ"ವನ್ನು ರಚಿಸಿದರು. ಹನುಮಾನ್ ಅವರಿಗೆ ವಿನಯಪದವನ್ನು ಬರೆಯಲು ಆದೇಶಿಸಿದರು, ಅದನ್ನು ಅವರು ಸ್ವೀಕರಿಸಿ 'ವಿನಯ-ಪತ್ರಿಕಾ' ಎಂಬ ಮಹಾಕಾವ್ಯವನ್ನು ರಚಿಸಿದರು. ಸಂತ ತುಳಸೀದಾಸರು ವಾಲ್ಮೀಕಿ ರಾಮಾಯಣವನ್ನು ಹಿಂದಿಯಲ್ಲಿ ಪ್ರಸ್ತುತ ಪಡಿಸಿದರು. ಅದೇ ತುಳಸೀದಾಸರು ಬರೆದ ಶ್ರೀ ರಾಮಚರಿತಮಾನಸ. ಸಂತ ತುಳಸೀದಾಸರು ಕ್ರಿ.ಶ. 1574 ರ ರಾಮನವಮಿಯಂದು (ಸಂವತ್ 1631) ಶ್ರೀ ರಾಮಚರಿತಮಾನಸವನ್ನು ಬರೆಯಲು ಪ್ರಾರಂಭಿಸಿದರು. ಈ ರಚನೆಯು ಎರಡು ವರ್ಷ, ಏಳು ತಿಂಗಳು ಮತ್ತು ಇಪ್ಪತ್ತೇಳು ದಿನಗಳಲ್ಲಿ ಪೂರ್ಣಗೊಂಡಿತು. ಎಲ್ಲಾ ಏಳು ಅಧ್ಯಾಯಗಳು 1576 ರಲ್ಲಿ ಮಾರ್ಗಶಿರ ಶುಕ್ಲ ಪಕ್ಷದ (ಸಂವತ್ 1633) ಶ್ರೀ ರಾಮ ಮತ್ತು ಸೀತೆಯ ವಿವಾಹದ ದಿನದಂದು ಪೂರ್ಣಗೊಂಡವು.
ಭಗವಾನ್ ಶ್ರೀ ರಾಮನ ಆಜ್ಞೆಯಂತೆ, ತುಳಸೀದಾಸರು ಕಾಶಿಯನ್ನು ತಲುಪಿ ಶ್ರೀ ವಿಶ್ವನಾಥ ಮತ್ತು ಅನ್ನಪೂರ್ಣರಿಗೆ ತಮ್ಮ ಕಾವ್ಯವನ್ನು ಪಠಿಸಿದರು. ಅವರು ಗ್ರಂಥವನ್ನು ವಿಶ್ವನಾಥ ದೇವಾಲಯದ ಗರ್ಭಗುಡಿಯಲ್ಲಿ ಇರಿಸಿದರು. ಮರುದಿನ ಆ ಪುಸ್ತಕದ ಮೇಲೆ - "ಸತ್ಯಂ ಶಿವಂ ಸುಂದರಂ" ಎಂದು ಬರೆಯಲಾಗಿತ್ತು, ಅದರ ಕೆಳಗೆ 'ಶ್ರೀ ಶಂಕರ್' ಎಂದು ಬರೆಯಲಾಗಿತ್ತು.

ದೇವರೊಬ್ಬನೇ ರಕ್ಷಕ : ಕೆಲವು ದುಷ್ಟರು ತುಳಸೀದಾಸರ ಈ ಕಾವ್ಯವನ್ನು ನಾಶಮಾಡಲು ಪ್ರಯತ್ನಿಸಿದರು. ಕಳ್ಳರನ್ನು ಅವರ ಮನೆಗೆ ಸಹ ಕಳುಹಿಸಲಾಯಿತು. ಆದರೆ ಇಬ್ಬರು ಬಿಲ್ಲುಗಾರರು ಅಲ್ಲಿ ಕಾವಲು ಕಾಯುತ್ತಿದ್ದರು. ಇದನ್ನು ನೋಡಿ ಕಳ್ಳರು ಓಡಿಹೋದರು. ನಂತರ ತುಲಸೀದಾಸರು ಆ ಪುಸ್ತಕವನ್ನು ತಮ್ಮ ಆಪ್ತ ಮಿತ್ರ ತೋದರಮಲ್ ಅವರ ಬಳಿಗೆ ಕೊಟ್ಟರು.

ಅವತಾರಿ ಕಾರ್ಯ : ಗೋಸ್ವಾಮಿ ತುಳಸೀದಾಸರು ಭಾರತದಾದ್ಯಂತ ಪ್ರವಾಸ ಮಾಡಿದರು. ಆ ಕಾಲದ ಹಿಂದೂ ಸಮಾಜದ ಮೇಲಿನ ದಾಳಿಗಳಿಂದ ಅವರು ತೀವ್ರವಾಗಿ ದುಃಖಿತರಾಗಿದ್ದರು. ಅವರು ಭಾರತದ ಎಲ್ಲಾ ರಾಜರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಅವರು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಿದರು. ತುಳಸೀದಾಸರು ರಾಮಲೀಲಾ ನಾಟಕವನ್ನು ಪ್ರಾರಂಭಿಸಿದರು.

ತುಳಸೀದಾಸರ ಬೋಧನೆಗಳು : ತುಳಸೀದಾಸರ ಭಕ್ತಿಯಲ್ಲಿ ವಿನಯಕ್ಕೆ ಬಹಳ ಉನ್ನತ ಸ್ಥಾನವಿದೆ. ಅಹಂಕಾರವನ್ನು ನಾಶಮಾಡದೆ ಮತ್ತು ವಿನಮ್ರರಾಗದೆ ಭಕ್ತಿಯ ಆನಂದವನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. ಈ ಅಹಂಕಾರವನ್ನು ನಾಶಮಾಡಲು, ನಮ್ಮ ದೋಷಗಳನ್ನು ಸ್ವಯಂ ಪರೀಕ್ಷಿಸಿಕೊಂಡು ನಾಶಮಾಡಿಕೊಂಡು ನಮ್ಮ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕ. ಭಕ್ತಿಗೆ ಅವರು ಸತ್ಸಂಗ, ಜ್ಞಾನ, ನಿರ್ಲಿಪ್ತತೆ, ತಪಸ್ಸು, ಆತ್ಮ ಸಂಯಮ, ನಂಬಿಕೆ, ಪ್ರೀತಿ, ದೇವರ ಅನುಗ್ರಹ ಮತ್ತು ದೇವರಿಗೆ ಶರಣಾಗತಿಯನ್ನು ಮುಖ್ಯವೆಂದು ಪರಿಗಣಿಸಿದರು. ಒಂದು ರೀತಿಯಲ್ಲಿ, ಸಂತ ಗೋಸ್ವಾಮಿ ತುಳಸೀದಾಸರ ಭಕ್ತನು ಆದರ್ಶ ಮನುಷ್ಯನ ರೂಪವನ್ನು ಪಡೆಯುತ್ತಾನೆ.

ಈ ರೀತಿಯ ಸಾಧನೆಯನ್ನು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಹೇಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸನಾತನ ಸಂಸ್ಥೆಯ ಸಾಧಕರು ವೇಗವಾಗಿ ಆಧ್ಯಾತ್ಮಿಕ ಪ್ರಗತಿಯನ್ನೂ ಸಾಧಿಸುತ್ತಿದ್ದಾರೆ. ಶ್ರಾವಣ ಕೃಷ್ಣ ತೃತೀಯಾ, 31 ಜುಲೈ 1623 (ವಿಕ್ರಮ ಸಂವತ್ 1680) ತುಳಸೀದಾಸರು ಅಸ್ಸಿ ಘಾಟ್‌ನಲ್ಲಿ ಶ್ರೀ ರಾಮನ ಹೆಸರನ್ನು ಉಚ್ಚರಿಸುತ್ತಾ ತಮ್ಮ ದೇಹವನ್ನು ತ್ಯಜಿಸಿದರು.

VK  DIGITAL NEWS:






















Post a Comment

0Comments

Post a Comment (0)