ಗುರುಗಳಿಗೆ ವಂದನೆ ಸಲ್ಲಿಸಿ ಋಣ ತೀರಿಸಿಕೊಳ್ಳಲು ಮೀಸಲಾದ ದಿನ.

varthajala
0

ಜೀವನದಲ್ಲಿ ಕೇವಲ ಒಂದಕ್ಷರವನ್ನು ಕಲಿಸಿದ ವ್ಯಕ್ತಿಯೂ ನಮಗೆ ಗುರು ಸಮಾನ ಎಂದು ಗೌರವಿಸುವ ಗುಣ ನಮ್ಮ ಭಾರತೀಯರದು. ಇದರೊಟ್ಟಿಗೆ ವೇದ ವೇದಾಂಗ ಪಾಠ ಮತ್ತು ಉತ್ತಮ ಜೀವನ ಶೈಲಿಯನ್ನು ಕಲಿಸುವ ಗುರುಗಳನ್ನು ನಾವು ನಿತ್ಯ ನಿರಂತರ ಸ್ಮರಿಸುತ್ತೇವೆ. ಹಾಗಾಗಿಯೇ ದೇವರನ್ನು ಭಜಿಸುವ ಮೊದಲು ಶ್ರೀಗುರುಭ್ಯೋ ನಮಃ ಎಂದು ಗುರುಗಳನ್ನು ನೆನೆಯುವುದು ವಾಡಿಕೆ.

  ಇಷ್ಟೆಲ್ಲಾ ಕರುಣಿಸುವ ಗುರುಗಳನ್ನು ನಾವು ಸದಾ ಸ್ಮರಿಸಬೇಕು. ಆದರೂ ಈ ದಿನ ವಿಶೇಷವಾಗಿ ಸ್ಮರಿಸಬೇಕು. ಕಾರಣ ಈ ದಿನ ಶ್ರೀವೇದವ್ಯಾಸ ದೇವರಿಗೆ ಮೀಸಲಾದ ದಿನ. ಕೆಲವರು ಈ ದಿನವನ್ನು ಶ್ರೀವೇದವ್ಯಾಸರ ಜನ್ಮದಿನ ಎನ್ನುತ್ತಾರೆ. ಇದು ಶುದ್ಧ ತಪ್ಪು. ಮಹಾನುಭಾವರಾದ ಶ್ರೀವೇದವ್ಯಾಸರು ಅವತರಿಸಿದ್ದು, ವೈಶಾಖ ಮಾಸ ಶುದ್ಧ ತ್ರಯೋದಶಿಯಂದು. ಅಂದು ಅವರ ಜನ್ಮದಿನ.

   ಶ್ರೀಹಯಗ್ರೀವ ದೇವರು ಬ್ರಹ್ಮದೇವರಿಗೆ ಕರುಣಿಸಿದ್ದ, ಮಾನವನ ಸುಸಂಸ್ಕೃತ ಜೀವನಕ್ಕೆ ಅವಶ್ಯವಾದ ವೇದ(ಜ್ಞಾನ) ಸಂಗ್ರಹ ಬೆಟ್ಟದ ರೀತಿ ರಾಶಿಯಾಗಿತ್ತು. ಇದನ್ನು ಸರಳೀಕರಿಸಿದ ಶ್ರೀ ವ್ಯಾಸರು, ಜನರ ಉಪಯೋಗಕ್ಕಾಗಿ ಆಷಾಢಮಾಸದ ಹುಣ್ಣಿಮೆಯಂದು ನಾಲ್ಕು ವಿಭಾಗಗಳಾಗಿ ಮಾಡುತ್ತಾರೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದ ಎಂದು ವಿಭಾಗ ಮಾಡಿ ಜ್ಞಾನದಾಹಿ ಗಳಿಗೆ ಅನುಕೂಲ ಮಾಡಿಕೊಟ್ಟರು. ಹಾಗಾಗಿ ಜ್ಞಾನಗಳಿಕೆ ಗೆ ಸುಲಭ ಮಾಡಿಕೊಟ್ಟ ಶ್ರೀವ್ಯಾಸರನ್ನು ಗೌರವಿಸಲು ಈ ದಿನವನ್ನು ಗುರುಪೂರ್ಣಿಮೆ ಎಂದು  ಆಚರಿಸುತ್ತೇವೆ. 

   ಈ ನೆಪದಲ್ಲಿ, ನಮಗೆ ಪಾರಮಾರ್ಥಿಕ ಹಾಗೂ ಲೌಕಿಕ ವಿದ್ಯೆ ಮತ್ತು ನಮಗೆ ಬುದ್ಧಿ ಕಲಿಸಿದ ಪ್ರತಿಯೊಬ್ಬರನ್ನೂ ಗುರುಗಳೆಂದು ಭಾವಿಸಿ ಅವರಿಗೆ ಗೌರವ ಸಲ್ಲಿಸುತ್ತೇವೆ.

   ಚಕ್ಕಡಿ(ಬಂಡಿ)ಗೆ ಎತ್ತುಗಳು ಎಷ್ಟು ಮುಖ್ಯವೋ, ಹಾಗೆಯೇ ಚಕ್ಕಡಿ ಓಡಿಸುವ ವ್ಯಕ್ತಿಯು ಬಹುಮುಖ್ಯ. ನನ್ಮ ಜೀವನದ ಬಂಡಿ ಸಾಗಿಸಲು, ಭವ ಸಾಗರ ದಾಟಲು ದೈವಾನುಗ್ರಹ ಎಷ್ಟೇ ಇರಲಿ, ಅದರ ಜತೆಗೆ ಗುರುಗಳ ಕರುಣಾಪೂರಿತ ಕಾರುಣ್ಯ ಇರಲೇ ಬೇಕು. ಹರ ಮುನಿದರೆ ಗುರು ಕಾಯ್ವ, ಗುರು ಮುನಿದರೆ ಕಾಯುವರಾರೋ ಎಂಬ ಮಾತಿದೆ. 

   ಗುರುಬಲವಿದ್ದರೆ ದೈವಬಲ ತಾನಾಗಿಯೇ ಬರುತ್ತದೆ, ಇಲ್ಲವೇ ಗುರುಗಳು ಬರಿಸುತ್ತಾರೆ. ಅದಕ್ಕಾಗಿಯೇ ಯಾವುದೇ ಶುಭಕಾರ್ಯದ ಆರಂಭದಲ್ಲಿ, ವೇದ ಪಾರಾಯಣ ಮತ್ತಿತರ ಸಮಯದಲ್ಲಿ ಶ್ರೀಗುರುಭ್ಯೋ ನಮಃ ಎನ್ನುತ್ತೇವೆ. ನಂತರ ಹರಿಃ ಓಂ ಎನ್ನುತ್ತೇವೆ. ವೀರಶೈವರು ಹರಹ ಓಂ ಎನ್ನುತ್ತಾರೆ. ಯಾವುದೇ ಧರ್ಮವಿರಲಿ, ಮತವಿರಲಿ, ಪಂಥವಿರಲಿ ಗುರು ವಿಗೆ ಅಗ್ರಸ್ಥಾನ. ಇಂತಹ ಗುರುವನ್ನು ಸದಾ ಸ್ಮರಿಸಬೇಕು. ಅದರಲ್ಲಿಯೂ ವಿಶೇಷವಾದ ಪರ್ವಕಾಲದಲ್ಲಿ ವಿಶೇಷವಾಗಿ ಸ್ಮರಣೆ ಮಾಡಬೇಕು.

   ತಾಯಿ ತನ್ನ ಮಗುವಿಗೆ ಪ್ರೇಮ ನೀಡಬಲ್ಲಳು, ತಂದೆಯಂತೆ ಶಿಕ್ಷಿಸಿ ಸರಿದಾರಿಗೆ ತರಲಾರಳು. ತಂದೆ ಶಿಸ್ತು ಕಲಿಸಿ ಬೆಳೆಸಬಹುದು, ಆದರೆ ಮಾತೃ ಪ್ರೇಮ ನೀಡಲಾರ. ಉತ್ತಮ ಗುಣ ಸಂಪನ್ನರಾದ ಗುರುಗಳು ಮಾತೆಯಂತೆ ಮಾತೃ ಹೃದಯಿಯಾಗಿ ಪ್ರೀತಿಸುವುದರ ಜತೆ, ಪಿತೃವಿನಂತೆ ದಂಡಿಸಿ ತಿದ್ದಿ ತೀಡಿ ವಿದ್ಯೆ ಕಲಿಸಬಲ್ಲರು. ಉನ್ನತವಾದ ಗುರಿ ಮುಟ್ಟಲು ಹೆಗಲಿಗೆ ಹೆಗಲಾಗುವರು. ಶಿಷ್ಯ ಸಾಧಕನಾದರೆ, ಗುರುಗಳ ಹರ್ಷಕ್ಕೆ ಮಿಗಿಲಿಲ್ಲ.

    ಹಾಗಾಗಿಯೇ ಮೂರು ರೀತಿಯ ಅನುಗ್ರಹ ತೋರುವ ಗುರುಗಳಿಗಿಂತ ಅಧಿಕ ಆಪ್ತರು ಇನ್ನಾರು ಎಮಗೆ ಎನ್ನುತ್ತೇವೆ. ಅಂತಹ ಗುರುಗಳ ಹೃತ್ಕಮಲದಲ್ಲಿ ನಿಂತು ನಮ್ಮನ್ನು ಸರಿದಾರಿಯಲ್ಲಿ ನಡೆಸಿ ಸತ್ಕುಲ ಪ್ರಸೂತರನ್ನಾಗಿಸುವ, ನಮಗೆ ಪಾಠದ ಜತೆ ಜೀವನದ ಮಾರ್ಗದರ್ಶನ ಮಾಡಿದ ಎಲ್ಲ ಗುರುಗಳನ್ನು ಇಂದು ಸ್ಮರಿಸೋಣ. ಸಮಸ್ತ ಗುರುಗಳ ಹೃತ್ಕಮಲದಲ್ಲಿ ಸದಾ ನೆಲೆಸಿ ಜನರಿಗೆ ಸದಾಚಾರ, ಸದ್ವಿದ್ಯೆ ಬೋಧಿಸುವ ಶ್ರೀವೇದವ್ಯಾಸದೇವರಿಗೆ ನಮಿಸೋಣ.

ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಯೇ |

ಹೃದ್ಯಾಯ ಶುದ್ಧವಿದ್ಯಾಯ ಮಧ್ವಾಯ ಚ ನಮೋ ನಮ: ||

 ಅಭ್ರಮಂ ಭಂಗರಹಿತಮಜಡಂ ವಿಮಲಂ ಸದಾ| ಆನಂದತೀರ್ಥಮತುಲಂ ಭಜೇ ತಾಪತ್ರಯಾಪಹಂ||

ಚಿತ್ರೈಃ ಪದೈಶ್ಚ ಗಂಭೀರೈರ್ವಾಕ್ಯೈರ್ಮಾನೈರಖಂಡಿತೈಃ |

*ಗುರುಭಾವಂ ವ್ಯಂಜಯಂತೀ ಭಾತಿ ಶ್ರೀ ಜಯತೀರ್ಥವಾಕ್ ||

ಅರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥಿಗಜಕೇಸರಿ| ವ್ಯಾಸತೀರ್ಥ ಗುರುರ್ಭೂಯಾತ್ ಅಸ್ಮದಿಷ್ಟಾರ್ಥ ಸಿದ್ಧಯೇ॥

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ|

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ||

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ|

ಶ್ರೀರಾಘವೇಂದ್ರಗುರುವೇ ನಮೋಅತ್ಯಂತ ದಯಾಲವೇ||

ಆಪಾದಮೌಳಿ ಪರ್ಯಂತಂ ಗುರುಣಾಕೃತಿಂ ಸ್ಮರೇತ್|

ತೇನವಿಘ್ನಾಃಪ್ರಣಶ್ಯಂತಿ ಸಿದ್ಧಂತಿಚ ಮನೋರಥಾಃ||

ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

Post a Comment

0Comments

Post a Comment (0)