ಸಮಾಜಕ್ಕೆ ತಮ್ಮ ಅಮೂಲ್ಯ ಸೇವೆಯನ್ನು ನೀಡಿ : ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದ - ಸಚಿವ ದಿನೇಶ್ ಗುಂಡೂರಾವ್

varthajala
0
ಬೆಂಗಳೂರು, ಜುಲೈ 08 (ಕರ್ನಾಟಕ ವಾರ್ತೆ): ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವೈದ್ಯರಾಗಿ ಹೊರಬಂದು ಸಮಾಜಕ್ಕೆ ತಮ್ಮ ಅಮೂಲ್ಯ ಸೇವೆ ನೀಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂದು ಕೆ.ಹೆಚ್.ಬಿ. ಕಾಲೋನಿಯ ಸರ್ಕಾರಿ ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯಗಳ “ಪುರುಷ ವಿದ್ಯಾರ್ಥಿನಿಲಯ”ದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸಚಿವರು ರಾಜ್ಯದ ವಿವಿಧ ನಗರ, ಗ್ರಾಮೀಣ ಪ್ರದೇಶದಿಂದ ಹಾಗೂ ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ವ್ಯಾಸಾಂಗಕ್ಕಾಗಿ ಬಂದಿರುತ್ತಾರೆ. ವ್ಯಾಸಾಂಗಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಅವಶ್ಯಕತೆಯನ್ನು ಗಮನಿಸಿ ಪುರುಷ ವಿದ್ಯಾರ್ಥಿನಿಲಯವನ್ನು ಇಂದು ಉದ್ಘಾಟಿಸಲಾಗಿದೆ ಎಂದು ತಿಳಿಸಿದರು. ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯಗಳ ಪುರುಷ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಟ್ಟು 64 ಕೊಠಡಿಗಳ ನೆಲ ಮಹಡಿ, ಮೊದಲನೇ ಮಹಡಿ ಮತ್ತು ಎರಡನೇ ಮಹಡಿ ಹಾಗೂ ಟೆರೆಸ್ ಒಳಗೊಂಡ ಒಟ್ಟು ವಿಸ್ತೀರ್ಣ 3136.45 ಚದರ ಮೀಟರ್ ಕಟ್ಟಡವನ್ನು 1250 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಿದ್ಯಾರ್ಥಿ ನಿಲಯದ ಉಪಯೋಗವನ್ನು ಸುಮಾರು 188 ಪುರುಷ ವಿದ್ಯಾರ್ಥಿಗಳು ಉಚಿತವಾಗಿ ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡಕ್ಕೆ ಅವಶ್ಯಕವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಹೊರಗಡೆ ಊಟ ಮಾಡುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವಂತ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು, ವಿದ್ಯಾರ್ಥಿ ನಿಲಯದಲ್ಲಿಯೇ ಊಟದ ವ್ಯವಸ್ಥೆ ಮಾಡುವ ಸಲುವಾಗಿ ಮುಂದಿನ ದಿನಗಳಲ್ಲಿ ಕಟ್ಟಡದಲ್ಲಿ ಅಡಿಗೆ ಮನೆ ಮತ್ತು ಊಟದ ಹಾಲ್‍ನ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು. ಎಂದು ತಿಳಿಸಿದರು. ರಾಜ್ಯ ಸರ್ಕಾರವು ಆಯುಷ್ ಇಲಾಖೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದು, ವಿಶೇಷವಾಗಿ ಯುನಾನಿ ಮತ್ತು ಹೋಮಿಯೋಪತಿಯ ವೈದ್ಯ ಪದ್ದತಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದೆ. ಯುನಾನಿ ವೈದ್ಯ ಪದ್ಧತಿ ಒಂದು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದ್ದು, ಗ್ರೀಕ್ ಮತ್ತು ಅರೇಬಿಕ್ ವೈದ್ಯಕೀಯ ಚಿಂತನೆಯಿಂದ ಹುಟ್ಟಿಕೊಂಡಿದೆ. ಜರ್ಮನಿಯ ಡಾ.ಸಿ.ಎಫ್. ಸ್ಯಾಮುಯಲ್ ಹಾನಿಮನ್ ಅವರು ಹೋಮಿಯೋಪತಿ ವೈದ್ಯಪದ್ಧತಿಯನ್ನು ಸಂಶೋಧüನೆ ಮಾಡಿದ್ದಾರೆ. ಈಗ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಹೊಂದಿದೆ ಎಂದು ತಿಳಿಸಿದರು. ದೈನಂದಿನ ಜೀವನಶೈಲಿಯಲ್ಲಿನ ನಡೆ, ನುಡಿ, ಹವ್ಯಾಸಗಳು ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಉತ್ತಮ ಜೀವನಶೈಲಿ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಮಾತನಾಡಿ ಕಟ್ಟಡವನ್ನು ಸಚಿವರು ವೀಕ್ಷಿಸುವುದರ ಜೊತೆಗೆ ಅಡಿಗೆ ಮನೆ ಮತ್ತು ಡೈನಿಂಗ್ ಹಾಲ್ ವಿದ್ಯಾರ್ಥಿಗಳಿಗಾಗಿ ಬೇಕಾಗಿದೆ ಎಂದು ಕಾಳಜಿ ವಹಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗಾಗಿ ಸ್ಕೈವಾಕ್ ನಿರ್ಮಿಸಲು ಕೋರಿಕೆ ಬಂದಿದ್ದು, ಕಾನೂನಿನ ಸಮಸ್ಯೆಯಿಂದಾಗಿ ಮಾಡಲಾಗಲಿಲ್ಲ. ಮುಂದಿನ ದಿನಗಳಲ್ಲಿ ಸ್ಕೈವಾಕ್ ನಿರ್ಮಿಸಲಾಗುವುದು ಎಂದು ತಿಳಿಸಿದರು. ವಿದ್ಯಾರ್ಥಿಗಳು ಕಟ್ಟಡದ ಸದುಪಯೋಗವನ್ನು ಪಡೆದುಕೊಂಡು ವೈದ್ಯರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ಎಂದು ಕಿವಿಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಆಯುಕ್ತ ವಿಪಿನ್ ಸಿಂಗ್, ಆಯುಷ್ ಇಲಾಖೆಯ ಜಂಟಿ ನಿರ್ದೇಶಕರಾದ (ಆಯುಷ್ ವೈಶಿ) (ಪ್ರ) ಡಾ. ಮಂಜುಳಾ ಎಸ್, ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಾಚಾರ್ಯರು ಡಾ. ರಾಜೇಶ್ವರಿ ಕೆ, ಸರ್ಕಾರಿ ಯುನಾನಿ ಮತ್ತು ಹೊಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬೋಧಕ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)