ಬೆಂಗಳೂರು, ಜು.9: ಬದುಕಿನಲ್ಲಿ ಪ್ರೇರಣಾದಾಯಕ ಹೋರಾಟ ಹಾಗೂ ಸಹನೆಯ ಜೀವನ ವಿಧಾನವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಪದ್ಮಶ್ರೀ ಡಾ. ವಿಜಯಲಕ್ಷ್ಮಿ ದೇಶಮಾನೆ ಕರೆ ನೀಡಿದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಉದ್ಘಾಟನಾ ಸಮಾರಂಭ ಹಾಗೂ ಕೇರಳದ ಕೇರಳದ ಕೋಟಾಯಂನ ಐಐಐಟಿ ಮತ್ತು ಬಸವನಗುಡಿ ನ್ಯಾಷನಲ್ ಕಾಲೇಜು, ಜಯನಗರ ಡಾ. ಎಚ್.ಎನ್, ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಮಾತನಾಡಿದ ಅವರು, ವೃತ್ತಿ ಬದುಕು ಆರಂಭವಾದ ನಂತರ ಪ್ರತಿಯೊಬ್ಬರ ಸಹಕಾರ ಅಗತ್ಯ. ಜೊತೆಗೆ ಕಠಿಣ ಪರಿಶ್ರಮದಿಂದ ಅವಿರತ ದುಡಿಮೆ ನಿಮ್ಮನ್ನು ಮತ್ತೊಂದು ಹಂತಕ್ಕೆ ಕೊಂಡೊಯುತ್ತದೆ. ಹೀಗಾಗಿ ವಿದ್ಯಾರ್ಥಿ ದಿಸೆಯಿಂದ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕೆ ಆರ್ ವೇಣುಗೋಪಾಲ್ ಮಾತನಾಡಿ, ಡಾ. ಎಚ್. ನರಸಿಂಹಯ್ಯ ಅವರ ಅದ್ಭುತ ಸಾಧನೆಗಳು ವಿದ್ಯಾರ್ಥಿಗಳ ಬದುಕಿಗೆ ಬುನಾದಿಯಾಗಿವೆ. ವಿದ್ಯಾರ್ಥಿಗಳು ಕಲಿಕೆಯನ್ನು ಎಂದಿಗೂ ನಿಲ್ಲಿಸಬಾರದು. ನಿರಂತರ ಪರಿಶ್ರಮ ಯಶಸ್ಸಿಗೆ ಸೋಪಾನವಾಗಿದೆ. ವಿದ್ಯಾರ್ಥಿಗಳು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೊಟ್ಟಾಯಂ ಐಐಐಟಿ ರಿಜಿಸ್ಟ್ರಾರ್ ಡಾ. ರಾಧಾಕೃಷ್ಣನ್ ಮಾತನಾಡಿ, ದೃಢವಾದ ಗುರಿ, ಪ್ರೇರಣಾದಯಕ ವ್ಯಕ್ತಿಗಳ ಸಲಹೆ, ಸಹಕಾರದ ಮೂಲಕ ಯಶಸ್ಸಿನತ್ತ ದಾಪುಗಾಲಿಡಬೇಕು. ಜೀವನ ಹಾಗೂ ಅಧ್ಯಯನದಲ್ಲಿ ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಉತ್ಸಾಹವೇ ಬೆಳವಣಿಗೆ ಮತ್ತು ಸಾಧನೆಯ ಪ್ರಮುಖ ಚಾಲಕ ಶಕ್ತಿಗಳು ಎಂದರು.
ಕರ್ನಾಟಕ ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಡಾ. ಎಚ್. ಎನ್. ಸುಬ್ರಮಣ್ಯ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಮಾಜಿ ನಿರ್ದೇಶಕರಾದ ಡಾ. ಸಂಧ್ಯಾ ಕೃಷ್ಣಮೂರ್ತಿ, ಎನ್.ಇ.ಎಸ್ ಗೌರವ ಉಪಾಧ್ಯಕ್ಷ ವೈ. ಜಿ. ಮಧುಸೂದನ್, ಕಾರ್ಯದರ್ಶಿ ವಿ. ವೆಂಕಟ ಶಿವರೆಡ್ಡಿ, ಗೌರವ ಕಾರ್ಯದರ್ಶಿ ಬಿ. ಎಸ್. ಅರುಣಕುಮಾರ್, ಖಜಾಂಚಿ ತಲ್ಲಂ ಆರ್. ದ್ವಾರಕನಾಥ್, ಜಂಟಿ ಕಾರ್ಯದರ್ಶಿ ಸುಧಾಕರ್ ಎಸ್ತೂರಿ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಫ್ರೊ. ಅಲಕನಂದಾ ಕೆ.ಪಿ. ಮತ್ತಿತರರು ಉಪಸ್ಥಿತರಿದ್ದರು.