ಬೆಂಗಳೂರು, ಆಗಸ್ಟ್ 21, (ಕರ್ನಾಟಕ ವಾರ್ತೆ) :
ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು.
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ. ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.
ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ, 2023 (2023ರ ಕರ್ನಾಟಕ ವಿಧೇಯಕ 28) ರಿಟ್ ಅರ್ಜಿ ಸಂಖ್ಯೆ 2024ರ 11822 (ಜಿಇ-ಆರ್‍ಇಎಸ್-ಪಿಐಎಲ್) ನಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿದ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವುದು, ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವಿಕೆ ಅಥವಾ ಅನುಪಾಲನೆಯನ್ನು ಮೇಲ್ವಿಚಾರಣೆ ನಡೆಸಲು ಗೊತ್ತುಪಡಿಸಿದ ಅಧಿಕಾರಿಯನ್ನಾಗಿ ಒಬ್ಬ ಅಧಿಕಾರಿಯನ್ನು ನೇಮಿಸುವುದು ಮತ್ತು ನ್ಯಾಯಾಲಯದ ಆದೇಶದ ಅನುಪಾಲನೆಗಾಗಿ ಕಾರ್ಯವಿಧಾನವನ್ನು ನಿರ್ದಿಷ್ಟಪಡಿಸುವುದು ಅವಶ್ಯಕವೆಂದು ತಿದ್ದುಪಡಿಗೆ ಪರಿಗಣಿಸಲಾಗಿದೆಯೆಂದು ತಿಳಿಸಿದರು.
ಸದನದಲ್ಲಿ ಪರಿಷತ್ ಸದಸ್ಯರುಗಳಾದ ಪಿ.ಹೆಚ್. ಪೂಜಾರ್, ಐವಾನ್ ಡಿಸೋಜ, ರವಿಕುಮಾರ್, ಪ್ರತಾಪ್ ಸಿಂಹ ನಾಯಕ್, ಹಣಮಂತ ನಿರಾಣಿ ರುದ್ರಪ್ಪ, ಟಿ.ಎ. ಶರವಣ, ಮಂಜೇಗೌಡ ಅವರ ಸ್ಪಷ್ಟನೆಗಳಿಗೆ ಉತ್ತರ ನೀಡಿದ ಸಚಿವರು ವಿಧೇಯಕವನ್ನು ಅಂಗೀಕಾರಕ್ಕಾಗಿ ಮಂಡಿಸಿದರು. ನಂತರ ಮಾನ್ಯ ಸಭಾಪತಿಗಳಿಂದ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ 2025ಕ್ಕೆ ಅಂಗೀಕಾರ ದೊರೆಯಿತು.