ಬೆಂಗಳೂರು, ಆಗಸ್ಟ್ 21, (ಕರ್ನಾಟಕ ವಾರ್ತೆ) :
ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು.
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಗೃಹ ಇಲಾಖೆ ಸಚಿವರಾದ ಡಾ. ಜಿ ಪರಮೇಶ್ವರ ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.
ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕದಲ್ಲಿ ನೂತನವಾಗಿ ನಿರ್ಮಾಣ ಮಾಡುವಂತಹ 21 ಮೀಟರ್‍ಗೆ ಮೇಲ್ಪಟ್ಟ ಬಹು ಮಹಡಿ ಕಟ್ಟಡಗಳಲ್ಲಿ ಅಗ್ನಿಶಾಮಕ ಉಪಕರಣಗಳ ಅಳವಡಿಕೆಗಾಗಿ ಶೇಕಡ 10 ರಷ್ಟು ಶುಲ್ಕ ಹಾಗೂ ಶೇಕಡ 1 ರಷ್ಟು ಸೆಸ್‍ನ್ನು ವಿಧಿಸಲು ತಿದ್ದುಪಡಿ ತರಲು ಅಂಗೀಕಾರ ನೀಡುವಂತೆ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು.
ಈ ವಿಧೇಯಕದಲ್ಲಿ ಶಾಲಾ ಕಾಲೇಜುಗಳಿಗೆ ವಿನಾಯತಿ ಇರುತ್ತೆ. ಅಲ್ಲದೇ ಅಗ್ನಿಶಾಮಕ ಠಾಣೆಗಳಲ್ಲಿ ತಂತ್ರಜ್ಞಾನ ಆಧಾರಿತ ಉಪಕರಣಗಳು ಹಾಗೂ ವಾಹನಗಳ ಖರೀದಿಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಅನುದಾನವನ್ನು ಸಹ ನೀಡಿರುತ್ತಾರೆ. ಹೊಸ ವಾಹನಗಳ ಖರೀದಿಗೆ ಕ್ರಮ ವಹಿಸಲಾಗಿದೆ ಅಲ್ಲದೇ ಪ್ರತಿ ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಮುಖ್ಯಮಂತ್ರಿಗಳು ಸೂಚನೆಯನ್ನೂ ಸಹ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಕ್ರಮ ವಹಿಸಿದ್ದೇವೆ ಎಂದು ತಿಳಿಸಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಕೋರಿದರು.
ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಟಿ.ಎ. ಶರವಣ, ಗೋವಿಂದರಾಜು, ರವಿಕುಮಾರ್, ಅರುಣ್ ಡಿ.ಎಸ್., ಮಂಜೇಗೌಡ, ಅವರ ಸ್ಪಷ್ಟನೆಗಳಿಗೆ ಉತ್ತರ ನೀಡಿದ ಸಚಿವರು ವಿಧೇಯಕವನ್ನು ಅಂಗೀಕರಿಸುವಂತೆ ಮಾನ್ಯ ಸಭಾಪತಿಗಳಿಗೆ ಕೊರಿದರು. ಮಾನ್ಯ ಸಭಾಪತಿಗಳಿಂದ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಅಂಗೀಕಾರ ದೊರೆಯಿತು.