ಬೆಂಗಳೂರು, ಆಗಸ್ಟ್ 19, (ಕರ್ನಾಟಕ ವಾರ್ತೆ) :
ಸುಮಾರು 45 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕಿ ಇಲ್ಲದೇ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಸೇವೆಯನ್ನು ಸಚಿವರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಶ್ಲಾಘಿಸಿ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
ಮೊದಲಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರು 1980ರಲ್ಲಿ ವಿಧಾನ ಪರಿಷತ್ತಿನ ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿ ಅಲ್ಲಿಂದ ಇಲ್ಲಿಯವರಗೂ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಸೋಲನ್ನು ಕಾಣದೆ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಆಂದ್ರ ಪ್ರದೇಶದ ಪೆÇ್ರ. ರಂಗ ಅವರು 10 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ, ಕರ್ನಾಟಕದಲ್ಲಿ ತಾವು ಒಬ್ಬರೇ ಇಷ್ಟು ಸುದೀರ್ಘ ಸೇವೆ ಸಲ್ಲಿಸಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಸಭಾಪತಿಗಳಾಗಿ ತಾವು ಯಾವುದೇ ಪಕ್ಷ ಭೇದ ಮರೆತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ರೀತಿ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ. ತಮ್ಮ ಕುರ್ಚಿಗೆ ಅಪಮಾನವಾದಗ ಸೂಕ್ತ ರೀತಿಯ ತೀರ್ಮಾನ ತೆಗೆದುಕೊಂಡು ಕ್ರಮ ವಹಿಸಬೇಕಾಗಿತ್ತು. ಆದರೆ ತಾವು ಆ ಕೆಲಸ ಮಾಡಲಿಲ್ಲ. ತಾವು ಕಿರಿಯರಿಗೆ ಮಾರ್ಗದರ್ಶಕರಾಗಿದ್ದೀರಿ. ತಮ್ಮ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ತಿಳಿಸಿದರು.
ಪರಿಷತ್ ಸದಸ್ಯ ಮಂಜುನಾಥ ಬಂಡಾರಿ ಮಾತನಾಡಿ, ತಮ್ಮ ಸುದೀರ್ಘ ಸೇವೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 8 ಬಾರಿ ಆಯ್ಕೆಯಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿಧಾನ ಪರಿಷತ್ ಸಭಾಪತಿಗಳಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ತಮ್ಮ ಸೇವಾಧಿಯಲ್ಲಿ 17 ಜನ ಮುಖ್ಯಮಂತ್ರಿಗಳೊಂದಿಗೆ ಕಾರ್ಯನಿವಹಿಸಿರುತ್ತೀರಿ. ತಾವು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಅಪಾರಾದ ಕೊಡುಗೆ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಶಾಲೆ ತೆರಯುವ ಸಲುವಾಗಿ ತಮ್ಮ ಊರಿನಲ್ಲಿ ಸ್ವಂತ ಜಾಗವನ್ನು ದಾನ ಮಾಡಿ, ಶಾಲೆಯನ್ನು ನಿರ್ಮಿಸಿ ಆರ್ಥಿಕತೆಯಿಂದ ಹಿಂದುಳಿದ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದೀರಿ. ಮಂಗಳೂರಿಗೆ ಭೇಟಿ ನೀಡಿದ ಸಮಯದಲ್ಲಿ ನಮ್ಮ ಕಾಲೇಜಿಗೆ ಬಂದು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ನಮ್ಮ ಕಾಲೇಜಿನ ಸಿಬ್ಬಂದಿಯೊಂದಿಗೆ ಮಾತನಾಡಿ ಅವರಿಗೆ ಮಾರ್ಗದರ್ಶನ ನೀಡಿದ್ದೀರಿ ಈ ಸಂದರ್ಭವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣ ಸ್ವಾಮಿ ಅವರು ಮಾತನಾಡಿ, ರಾಜಕೀಯ ಜೀವನದಲ್ಲಿ 45 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮುನ್ನಡೆಯುತ್ತಿದ್ದೀರಿ. ತಮ್ಮ ಜೀವನದ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ಪಿ.ಹೆಚ್.ಡಿ ಮಾಡಬೇಕಾಗಿದೆ. ಜನಪರ ಸೇವೆ ಮಾಡುತ್ತಾ ಜನರ ಮನ ಗೆದ್ದಿದ್ದೀರಿ. ಒಂದು ವಿಪರ್ಯಾಸ ಎಂದರೆ ತಮ್ಮದು 45 ವರ್ಷಗಳ ಸುದೀರ್ಘ ಸೇವೆ ಆಯಿತು ಆದರೆ ನಾನು ಸದನಕ್ಕೆ ಬರಬೇಕಾದಲ್ಲಿ 45 ವರ್ಷ ಆಯಿತು ಎಂದರು.
ಅದೇ ರೀತಿ ವಿಧಾನ ಪರಿಷತ್ತಿನ ಸದಸ್ಯರಾದ .ಹೆಚ್. ವಿಶ್ವನಾಥ್, ಐವಾನ್ ಡಿಸೋಜಾ, ಡಿ.ಟಿ. ಶ್ರೀನಿವಾಸ್, ಹೇಮಲತಾ ನಾಯಕ್, ಪಿ.ಹೆಚ್. ಪೂಜಾರ್ ಪುಟ್ಟಣ್ಣ, ಡಾ. ಧನಂಜಯ ಸರ್ಜಿ, ಶಶೀಲ್ ನಮೋಶಿ, ಹಣಮಂತ ನಿರಾಣಿ ರುದ್ರಪ್ಪ, ಸಲೀಮ್ ಅಹಮ್ಮದ್, ನಜೀರ್ ಅಹಮ್ಮದ್, ಬಲ್ಕಿಸ್ ಬಾನು, ತಿಪ್ಪಣ್ಣ ಕಮಕನೂರ, ಟಿ.ಎ. ಶರವಣ, ಕೆ.ಎಸ್. ನವೀನ್, ಕಿಶೋರ್ ಕುಮಾರ್ ಪುತ್ತೂರ್ ಹಾಗೂ ಸಚಿವರಾದ ಎಂ.ಬಿ. ಪಾಟೀಲ್ ಅವರುಗಳು ಸಭಾಪತಿ ಬಸವರಾಜ ಹೊರಟ್ಟಿಯವರ 45 ವರ್ಷಗಳ ಸುದೀರ್ಘ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು.