ಬೆಂಗಳೂರು, ಅಕ್ಟೋಬರ್ 27 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರು ಮತ್ತು ಆರೈಕೆದಾರರೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘ - ಸಂಸ್ಥೆಗಳ ಸಹಯೋಗದೊಂದಿಗೆ ಅಕ್ಟೋಬರ್ 29 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಿರುವ ಬಾಲಭವನದಲ್ಲಿ ಸದೃಢ ಆರೈಕೆದಾರರು - ಸದೃಢ ಸಮಾಜ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಆರೈಕೆದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಸಮಾರಂಭದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಅವರು ನೆರವೇರಿಸಲಿದ್ದಾರೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ.ಶಮ್ಲಾ ಇಕ್ಬಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯದ ಮೂಲಕ ಅಕ್ಟೋಬರ್ 29 ರಂದು ಆರೈಕೆ ಮತ್ತು ಬೆಂಬಲ ಅಂತರ ರಾಷ್ಟ್ರೀಯ ದಿನವನ್ನಾಗಿ ಘೋಷಿಸಿರುವುದು ಚರಿತ್ರಾರ್ಹವಾದದ್ದಾಗಿದೆ. ಈ ಘೋಷಣೆ ವಿಶ್ವದಾದ್ಯಂತ ತಮ್ಮ ಪ್ರೀತಿ ಪಾತ್ರರನ್ನು ಆರೈಕೆ ಮಾಡಲು ಜೀವನ ಪರ್ಯಂತ ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ಆರೈಕೆ ಮಾಡುತ್ತಿರುವ ಆರೈಕೆದಾರರನ್ನು ಗುರುತಿಸುವ ಹಾಗೂ ಅವರಿಗೆ ಬೆಂಬಲ ನೀಡುವ ದೃಷ್ಟಿಯಿಂದ ಇದು ಒಂದು ಮೈಲುಗಲ್ಲಾಗಿದ್ದು ಅತ್ಯಂತ ಸಂತೋಷದಾಯಕ ವಿಷಯವಾಗಿದೆ.
ಆರೈಕೆದಾರರು ಎಂದರೆ ಯಾರು?
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ರ ಪ್ರಕಾರ, ಆರೈಕೆದಾರರು ಎಂದರೆ ಅಂಗವಿಕಲ ವ್ಯಕ್ತಿಗೆ ಆರೈಕೆ, ಸಹಾಯ ಅಥವಾ ಆಸರೆ ನೀಡುವ ವ್ಯಕ್ತಿಗಳು, ಇವರು ತಂದೆ-ತಾಯಿ ಅಥವಾ ಕುಟುಂಬದ ಸದಸ್ಯರು ಆಗಿರಬಹುದು. ಅವರು ತಮ್ಮ ಕೆಲಸಕ್ಕೆ ಹಣ ಪಡೆಯುವವರು ಆಗಿರಬಹುದು ಅಥವಾ ಹಣ ತೆಗೆದುಕೊಳ್ಳದೆ ಆರೈಕೆ ನೀಡುವವರಾಗಿರಬಹುದು.
ನಿರಂತರ ಆರೈಕೆಯ ಹೊರೆಯಿಂದಾಗಿ ಆರೈಕೆದಾರರು ಅನೇಕ ಸಮಸ್ಯೆಗಳನ್ನು ಎದುರಿಸುತಿದ್ದು, ಕೆಲವು ಪ್ರಮುಖ ಸಮಸ್ಯೆಗಳು:
ತಮ್ಮ ಪ್ರೀತಿ ಪಾತ್ರರ ನಿರಂತರ ದಿನದ 24 ಗಂಟೆಗಳ ಆರೈಕೆಯ ಹೊರೆಯ ಕಾರಣದಿಂದ ದೈಹಿಕವಾಗಿ ಶೇಕಡ 86% ಆರೈಕೆದಾರರು ಸ್ವತಃ ತಾವೇ ಅನಾರೋಗ್ಯದಿಂದ ಬಳಲುವುದು ಹಾಗೂ ಆರೈಕೆಯ ಒತ್ತಡದಿಂದಾಗಿ ಶೇಕಡ 89% ಆರೈಕೆದಾರರು ಮಾನಸಿಕ ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುವುದು.
ಆರೈಕೆದಾರರಿಗೆ ಆರೈಕೆಗೊಳಪಟ್ಟವರ ನಿರ್ವಹಣೆ ಮಾಡುವ ಕೌಶಲ್ಯಗಳ ಕೊರತೆ, ಹಾಗೆಯೇ ತಾಂತ್ರಿಕ ನೆರವು ದೊರೆಯದ ಕಾರಣವಾಗಿ ಆರೈಕೆಯ ನಿರ್ವಹಣೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಆರೈಕೆಯಲ್ಲಿ ತೊಡಗಿರುವುದರಿಂದ ಕುಟುಂಬದಿಂದ ಹೊರಗೆ ಹೋಗಿ ದುಡಿಮೆ ಮಾಡಲು ಸಾಧ್ಯವಾಗದೇ ಆದಾಯವಿಲ್ಲದೆ ಶೇಕಡ 92% ಆರೈಕೆದಾರರು ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ನಿರಂತರ ಆರೈಕೆ ಮತ್ತು ಪರ್ಯಾಯ ಆರೈಕೆಯ ವ್ಯವಸ್ಥೆಗಳು ಇಲ್ಲದಿರುವುದರಿಂದ ಕುಟುಂಬ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಸಭೆ-ಸಮಾರಂಭಗಳಿಗೆ ಹೋಗಲು ಸಾಧ್ಯವಾಗದೆ ಸಮುದಾಯದಲ್ಲಿ ನಿರ್ಲಕ್ಷ್ಯಕ್ಕೆ ಹಾಗೂ ಕಳಂಕಕ್ಕೆ ಒಳಗಾಗಿರುತ್ತಾರೆ.
ಕೆಲವೊಂದು ಕುಟುಂಬಗಳಲ್ಲಿ ಮಕ್ಕಳೇ ತಮ್ಮ ಪೋಷಕರನ್ನು ಆರೈಕೆ ಮಾಡುವ ಸಂದರ್ಭಗಳಲ್ಲಿ ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹಾಗೂ ಅವರ ಭವಿಷ್ಯದ ಬೆಳವಣಿಗೆಯ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ.
ಆರೈಕೆದಾರರ ಸೇವೆಗಳನ್ನು ಕುಟುಂಬ, ಸಮುದಾಯ ಮತ್ತು ಸರ್ಕಾರಗಳು ಗುರುತಿಸದೇ ಇರುವುದು ಹಾಗೂ ಆರೈಕೆದಾರರಿಗೆ ಸರ್ಕಾರದ ಸಷ್ಟವಾದ ಬೆಂಬಲಿತ ಕಾರ್ಯಕ್ರಮಗಳು ಲಭ್ಯವಿಲ್ಲದಿರುವುದರಿಂದ ಆರೈಕೆದಾರರು ಸಂಕಷ್ಟಕರವಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರೈಕೆದಾರರು ಆಗೋಚರರಾಗಿರುತ್ತಾರೆ. ಒಂಟಿಯಾಗಿರುತ್ತಾರೆ. ಹಾಗೂ ಸಂಕಷ್ಟಕದ ಪರಿಸ್ಥಿತಿಯಲ್ಲಿರುತ್ತಾರೆ
ವಿಕಲಚೇತನರು, ಧೀರ್ಘ ಕಾಲದ ಕಾಯಿಲೆಗಳು ಹಾಗೂ ಆರೈಕೆಯ ಅಗತ್ಯವಿರುವ ಇತರೆ ವ್ಯಕ್ತಿಗಳಿಗೆ ಆರೈಕೆಯನ್ನು ನೀಡುವ ಆರೈಕೆದಾರರ ಸೇವೆಗಳನ್ನು ಗುರುತಿಸಲು ಮತ್ತು ಗೌರವಿಸಲು ಅಂತರರಾಷ್ಟ್ರೀಯ ಆರೈಕೆದಾರರ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಹಲವಾರು ಪ್ರಮುಖ ಉದ್ದೇಶಗಳನ್ನು ಒಳಗೊಂಡಿರುತ್ತದೆ.
ಆರೈಕೆದಾರರ ದಿನಾಚರಣೆಯ ಆಚರಿಸುವ ಮುಖ್ಯ ಉದ್ದೇಶಗಳು:
ಜಾಗೃತಿ ಮೂಡಿಸುವುದು: ಆರೈಕೆದಾರರು ಗುರುತಿಸುವಿಕೆ ಮತ್ತು ಬೆಂಬಲವಿಲ್ಲದೆ ಸಂಕಷ್ಟ ಜೀವನ ಎದುರಿಸುತ್ತಿದ್ದಾರೆ. ಆರೈಕೆದಾರರ ದಿನವು ಆರೈಕೆದಾರರ ಅಮೂಲ್ಯವಾದ ಸೇವೆಯನ್ನು ಗಮನಕ್ಕೆ ತರುತ್ತದೆ ಹಾಗೂ ಆರೈಕೆದಾರರ ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಹೊರೆಗಳನ್ನು ಒಳಗೊಂಡಂತೆ ಅವರು ಎದುರಿಸುತ್ತಿರುವ ಸವಾಲುಗಳನ್ನು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ.
ಆರೈಕೆದಾರರು ನೀಡುವ ಸೇವೆಗಳನ್ನು ಮತ್ತು ಕೊಡುಗೆಗಳನ್ನು ಅಂಗೀಕರಿಸುವುದು:
ಆರೈಕೆದಾರರು ತಮ್ಮ ಪ್ರೀತಿ ಪಾತ್ರರ ಆರೈಕೆಯ ಸಮರ್ಪಣೆ ಮತ್ತು ಸಹಾನುಭೂತಿಯನ್ನು ಅಂಗೀಕರಿಸಲು ಮತ್ತು ಆಚರಿಸಲು ಇದು ಅವಕಾಶವನ್ನು ನೀಡುತ್ತದೆ. ದೈನಂದಿನ ಜೀವನ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟಪಡುವ ಅನೇಕರಿಗೆ ಜೀವನದ ಗುಣಮಟ್ಟ ಕಾಪಾಡುವಲ್ಲಿ ಆರೈಕೆದಾರರ ಕೊಡುಗೆಯ ಮಹತ್ವ ತಿಳಿಸಲು ಸಾಧ್ಯವಾಗುತ್ತದೆ.
ಆರೈಕೆದಾರರಿಗೆ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು:
ಆರೈಕೆದಾರರಿಗೆ ಬೆಂಬಲ, ಮಾಹಿತಿ ಮತ್ತು ಸಂಪನ್ಮೂಲಗಳನ್ನು ನೀಡುವ ಗುರಿಯನ್ನು ಹೊಂದಿರುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಈ ದಿನವು ಒಳಗೊಂಡಿರುತ್ತದೆ. ಈ ದಿನವು ಕಾರ್ಯಾಗಾರ, ಬೆಂಬಲ ನೀಡುವ ಗುಂಪುಗಳು ಮತ್ತು ಸೇವೆಗಳ ಬಗ್ಗೆ ಮಾಹಿತಿಯ ಹಂಚಿಕೆ ಹಾಗು ಪಡೆದುಕೊಳ್ಳುವುದನ್ನು ಒಳಗೊಂಡಿರುತ್ತದೆ.
ಆರೈಕೆದಾರರ ಹಕ್ಕುಗಳು ಮತ್ತು ಉತ್ತಮ ಬೆಂಬಲಕ್ಕಾಗಿ ಪ್ರತಿಪಾದಿಸುವುದು:
ಆರೈಕೆದಾರರಿಗೆ ತಮ್ಮ ಸಮಸ್ಯೆಗಳಿಗೆ ವೇದಿಕೆಯನ್ನು ಒದಗಿಸುವ ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುವುದು ಮತ್ತು ಹಣಕಾಸಿನ ನೆರವು, ವಿಶ್ರಾಂತಿ, ಪರ್ಯಾಯ ಆರೈಕೆ ವ್ಯವಸ್ಥೆ ಮತ್ತು ಉತ್ತಮ ಕೆಲಸದ ವಾತಾವರಣವನ್ನು ಪಡೆಯಲು ವ್ಯವಸ್ಥೆ ಮತ್ತು ನೀತಿಗಳನ್ನು ಪ್ರತಿಪಾದಿಸಲು ಇದು ಒಂದು ಉತ್ತಮ ವೇದಿಕೆಯಾಗುತ್ತದೆ. ಆರೈಕೆದಾರರ ಅಗತ್ಯಗಳು, ಹಕ್ಕುಗಳು, ಗುರುತಿಸುವಿಕೆ ಮತ್ತು ಅವರ ಅಗತ್ಯವಾದ ಬೆಂಬಲವನ್ನು ಪಡೆಯುವುದು ಪ್ರಮುಖವಾಗಿದೆ.
ಆರೈಕೆದಾರರ ಸಮುದಾಯಗಳನ್ನು ಸಂಘಟಿಸುವುದು:
ಇದು ಆರೈಕೆದಾರರಲ್ಲಿ ಅವರದೇ ಆದ ಸಮುದಾಯದ ಪ್ರಜ್ಞೆಯನ್ನು ಬೆಳೆಸುತ್ತದೆ. ಅವರ ನೋವು-ನಲಿವು ಹಾಗೂ ಅನುಭವಗಳನ್ನು ಅರ್ಥಮಾಡಿಕೊಳ್ಳುವ ಇತರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಈ ದಿನವು ಆರೈಕೆದಾರರಲ್ಲಿ ಮನೆ ಮಾಡಿರುವ ಪ್ರತ್ಯೇಕತೆ, ಒಂಟಿತನ ಹಾಗೂ ಒತ್ತಡದ ಭಾವನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವರಿಗೆ ಬೆಂಬಲದ ಸಂಪರ್ಕ ಜಾಲ ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಅನುವು ಮಾಡುತ್ತದೆ.
ಕರ್ನಾಟಕ ರಾಜ್ಯ ಸರ್ಕಾರದ ಕ್ರಮಗಳು:
ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ವಿಕಲಚೇತನರು ಮತ್ತು ಹಿರಿಯ ನಾಗರೀಕರ ನಿರ್ದೇಶನಾಲಯ ಜಿಲ್ಲಾ ಮಟ್ಟದಲ್ಲಿ ವಿಕಲಚೇತನರ ಇಲಾಖೆಯ ಮೂಲಕ ಹಾಗೂ ಕಳೆದ ವರ್ಷ 2024 ರಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ವಿಶ್ವ ವಿಕಲಚೇತನರ ದಿನಾಚರಣೆಯ ಜೊತೆಗೆ ಅಂತರ ರಾಷ್ಟ್ರೀಯ ಆರೈಕೆ ದಿನಾಚರಣೆಯನ್ನು ದಿನಾಂಕ 3ನೇ ಡಿಸೆಂಬರ್ 2024 ರಂದು ಆಚರಿಸಲಾಗಿದೆ. ಇದು ನಮ್ಮ ದೇಶದಲ್ಲಿ ಪ್ರಥಮವಾಗಿದ್ದು, ಈ ಕಾರ್ಯಕ್ರಮ ನಮ್ಮ ರಾಜ್ಯದಲ್ಲಿ ಆರೈಕೆದಾರನ್ನು ಗುರುತಿಸುವ ಹಾಗೂ ಅವರಿಗೆ ಬೆಂಬಲ ನೀಡುವ ದೃಷ್ಟಿಯಿಂದ ಇದು ಅತ್ಯಂತ ಸಂತೋಷದಾಯಕ ವಿಷಯವಾಗಿದೆ.
ಈಗ ರಾಜ್ಯ ಸರ್ಕಾರ ಏಳು ವಿಧದ ವಿಕಲಚೇತನರ (ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಟೋಫಿ, ಮಲ್ಟಿಪಲ್ ಸ್ಕ್ಲಿರೋಸಿಸ್, ಪಾರ್ಕಿನ್ಸನ್, ಆಟಿಸಂ, ಭೌದ್ಧಿಕ ವಿಕಲತೆ ಹಾಗೂ ಬಹುವಿಧ ಅಂವಿಕಲತೆ (ಡೆಫ್ ಬ್ಲೈಂಡ್) ಆರೈಕೆದಾರರಿಗೆ ಮಾಸಿಕ ರೂ 1000 ಗಳ ಪ್ರೋತ್ಸಾಹ ಧನ ನೀಡುತ್ತಿರುವುದು ಅತ್ಯಂತ ಮಹತ್ವದ್ದುಳ್ಳದ್ದಾಗಿದೆ. ಈ ಪೆÇ್ರೀತ್ಸಾಹ ನಮ್ಮ ದೇಶದಲ್ಲಿ ಪ್ರಥಮವಾಗಿದ್ದು ಈ ಕ್ರಮ ಆರೈಕೆದಾರರಿಗೆ ಆರ್ಥಿಕವಾಗಿ ತುಂಬಾ ಸಹಾಯವಾಗುತ್ತಿದೆ.
ರಾಜ್ಯದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಕಲಚೇತನರ ಸ್ವಸಹಾಯ ಗುಂಪುಗಳ ರೀತಿಯಲ್ಲಿ ಒಂದು ಆರೈಕೆದಾರರ ಸ್ವಸಹಾಯ ಗುಂಪುಗಳನ್ನು ರಚಿಸಲು ಹಾಗೂ ನಗರ ವ್ಯಾಪ್ತಿಯಲ್ಲೂ ಆರೈಕೆದಾರರ ಸ್ವಸಹಾಯ ಗುಂಪುಗಳನ್ನು ರಚಿಸಲು ಸಹ ಕ್ರಮ ಕೈಗೊಂಡಿದ್ದು ಈಗಾಗಲೆ ರಾಜ್ಯದಲ್ಲಿ ಆರೈಕೆದಾರರ ಗುಂಪುಗಳನ್ನು ರಚಿಸಿದ್ದು ಅವರ ಬಲವರ್ಧನೆ ಕ್ರಮಗಳನ್ನು ಕೈಗೊಂಡಿರುವುದು.
2016 ರ ಅಂಗವಿಲಕರ ಹಕ್ಕುಗಳ ಕಾಯ್ದೆ ಸೆಕ್ಷನ್ 72 ರ ಅಡಿಯಲ್ಲಿ ಬರುವ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಆರೈಕೆದಾರರಿಗೆ ಸದಸ್ಯತ್ವ ನೀಡಲಾಗಿರುತ್ತದೆ. ಅಧಿಕ ಬೆಂಬಲದ ಅಗತ್ಯವಿರುವ ವಿಕಲಚೇತನರನ್ನು ಗುರ್ತಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ.
ರಾಜ್ಯ ಸರ್ಕಾರದ ಪ್ರೋತ್ಸಾಹದಾಯಕ ಕ್ರಮಗಳಿಗಾಗಿ ನಾವು ರಾಜ್ಯ ಸರ್ಕಾರವನ್ನು ಅಭಿನಂಧಿಸುತ್ತೇವೆ. ಈ ವರ್ಷ ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಾಜ್ಯ ಮಟ್ಟದಲ್ಲಿ ಆರೈಕೆದಾರರ ದಿನಾಚರಣೆಯನ್ನು ಆಕ್ಟೋಬರ್ 29 ರಂದು ಆಚರಣೆ ಮಾಡಲು ಬದ್ಧರಾಗುವ ಮೂಲಕ ಆರೈಕೆದಾರರನ್ನು ಗುರುತಿಸಿ ಅವರಿಗೆ ಬೆಂಬಲ ನೀಡುತ್ತಿರುವುದು ಬಹಳ ಮಹತ್ವದ್ದಾಗಿರುತ್ತದೆ.
ಒಟ್ಟಾರೆಯಾಗಿ ಅಂತರ ರಾಷ್ಟ್ರೀಯ ಆರೈಕೆದಾರರ ದಿನವು ಸಮಾಜದಲ್ಲಿ ಆರೈಕೆದಾರರ ಅಗತ್ಯವನ್ನು ಒತ್ತಿ ಹೇಳುತ್ತದೆ ಮತ್ತು ಆರೈಕೆದಾರರ ಸೇವೆಗಳು, ಕೊಡುಗೆಗಳು ಹಾಗೂ ತ್ಯಾಗಗಳ ಬಗ್ಗೆ ಉತ್ತಮ ತಿಳುವಳಿಕೆ ನೀಡುತ್ತದೆ. ಈ ದಿನವು ಆರೈಕೆದಾರರಿಗೆ ಅಗತ್ಯವಾದ ಬೆಂಬಲ ಮತ್ತು ಮನ್ನಣೆಯನ್ನು ಪಡೆಯಲು ಸಮಾಜ ಮತ್ತು ಸರ್ಕಾರಗಳನ್ನು ಪ್ರೋತ್ಸಾಹಿಸುತ್ತದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ವ್ಯಾಪಕವಾಗಿ ಆರೈಕೆದಾರರ ಬಗ್ಗೆ ಅರಿವನ್ನು ಮೂಡಿಸಲು, ಅವರ ಮಹತ್ತರವಾದ ಸೇವೆಗಳನ್ನು ಮಾನ್ಯತೆ ಮಾಡಲು ಹಾಗೂ ಬೆಂಬಲವನ್ನು ನೀಡಲು ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಹಾಗು ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವಾಲಯವು ರಾಜ್ಯ ಮಟ್ಟದಲ್ಲಿ 2025 ರ ಅಕ್ಟೋಬರ್ 29 ರಂದು ಅಂತರ ರಾಷ್ಟ್ರೀಯ ಆರೈಕೆದಾರರ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಿರುವುದು ಶ್ಲಾಘನೀಯವಾದದ್ದು ಮತ್ತು ಅಭಿನಂದನೀಯವಾದದ್ದು.