ಬೆಂಗಳೂರು: ಬೆಂಗಳೂರು ನಗರದ ಹರಿಕಾರ ನಾಡಪ್ರಭು ಕೆಂಪೇಗೌಡರ ಹೆಸರನ್ನು ಬೆಂಗಳೂರಿನ ʼನಮ್ಮ ಮೆಟ್ರೊʼ ಗೆ ನಾಮಕರಣ ಮಾಡಬೇಕೆಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ಅಧ್ಯಕ್ಷರಾದ ವೈ.ಡಿ. ರವಿಶಂಕರ್ ಮನವಿ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಈಗಿರುವ ʼನಮ್ಮ ಮೆಟ್ರೋʼ ಗೆ ʼನಾಡಪ್ರಭು ಕೆಂಪೇಗೌಡ ಮೆಟ್ರೋʼ ಎಂದು ನಾಮಕರಣವಾಗಬೇಕು ಎಂದು ಸುಮಾರು 10 ವರ್ಷಗಳ ಹಿಂದೆ (ಡಿಸೆಂಬರ್ 2,2015) ನಡೆದ ನಮ್ಮ ಮೆಟ್ರೋ ಉದ್ಘಾಟನೆ ವೇಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಯಯ್ಯ ಅವರಿಗೆ ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ವಿಜಯನಗರದ ಶಾಸಕರು ಹಾಗೂ ಮಾಜಿ ವಸತಿ ಸಚಿವರಾದ ಎಂ.ಕೃಷ್ಣಪ್ಪನವರು ಬೇಡಿಕೆಯಿಟ್ಟಿದ್ದರು. ಅದಕ್ಕೆ ಅಂದು ಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದರು. ಆದರೆ ಅದಾದ ಬಳಿಕ ಅಕ್ಟೋಬರ್ 4,2025ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಅಕ್ಟೋಬರ್ 7,2025ರಂದು ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಂದರ್ಭದಲ್ಲಿ ನಮ್ಮ ಮೆಟ್ರೋಗೆ ವಾಲ್ಮೀಕಿ ಮೆಟ್ರೋ ಎಂದು ನಾಮಕರಣ ಮಾಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ನಾನು ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. ಆದ್ರೆ ಮುಖ್ಯಮಂತ್ರಿಗಳು ಸಮುದಾಯದ ಒಲೈಕೆಗೆ ಈ ರೀತಿಯ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದು ರವಿಶಂಕರ್ ಆಗ್ರಹಿಸಿದರು.
ಈ ಸುಂದರ ನಗರ ನಿರ್ಮಾಣಕ್ಕೆ ಕಾರಣಕರ್ತರಾದ ಹಾಗೂ ಬೆಂಗಳೂರಿನ ಪಿತಾಮಹ ಎಂದು ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನೇ ನಗರದ ಮೆಟ್ರೋಗೆ ಇಡುವುದು ಹೆಚ್ಚು ಸೂಕ್ತವಾಗಿರುತ್ತದೆ. ಮುಖ್ಯಮಂತ್ರಿಗಳು ಯಾವುದೇ ಒತ್ತಡಗಳಿಗೆ ಒಳಗಾಗದೆ ಸೂಕ್ಷವಾಗಿ ಯೋಚಿಸಿ 10 ವರ್ಷಗಳ ಹಿಂದೆಯೇ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ಕೇಂದ್ರ ಸರ್ಕಾರಕ್ಕೆ ಕೆಂಪೇಗೌಡರ ಹೆಸರಿಡಲು ಶಿಫಾರಸ್ಸು ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಆರ್. ಅಶ್ವತ್ಥನಾರಾಯಣಗೌಡ ಒತ್ತಾಯಿಸಿದರು.