ಬೆಂಗಳೂರು, ಸೌಂದರ್ಯ ಕಾನೂನು ಕಾಲೇಜು ಆಯೋಜಿಸಿದ್ದ 3ನೇ ಅಖಿಲ ಭಾರತ ಅಣಕು ನ್ಯಾಯಾಲಯ ಸ್ಪರ್ಧೆ 2025 ಪೂರ್ಣಗೊಂಡಿದ್ದು, ವಿಶೇಷ ಪ್ರಶಸ್ತಿ ವಿಭಾಗದಲ್ಲಿ ಉತ್ತಮ ಸಂಶೋಧಕಿಯಾಗಿ ರಕ್ಷಿತಾ ಮಹಿಪಾಲ್ (ಸಿಂಬಯೋಸಿಸ್ ಕಾನೂನು ಕಾಲೇಜು, ಪುಣೆ), ಉತ್ತಮ ಸಂಸದೀಯಪಟು ವಾಸುದೇವ ತಿಲಕ್ (ವೈಕುಂಠ ಬಾಲಿಗ ಕಾನೂನು ಕಾಲೇಜು, ಉಡುಪಿ) ಆಯ್ಕೆಯಾಗಿದ್ದಾರೆ. ಉತ್ತಮ ಮೆಮೊರಿಯಲ್ ಪ್ರಶಸ್ತಿಗೆ ನಾಗ್ಪುರದ ಸಿಂಬಯೋಸಿಸ್ ಕಾನೂನು ಕಾಲೇಜು ಆಯ್ಕೆಯಾಗಿದೆ.
ಸ್ಪರ್ಧೆಯಲ್ಲಿ ದೇಶದ ಪ್ರಮುಖ 41 ಕಾನೂನು ಕಾಲೇಜುಗಳ ತಂಡಗಳು ಭಾಗವಹಿಸಿ ತಮ್ಮ ವಿಶ್ಲೇಷಣಾತ್ಮಕ ಚಿಂತನೆ ಮತ್ತು ವಾದ ಕೌಶಲ್ಯವನ್ನು ಪ್ರದರ್ಶಿಸಿದವು. ಈ ವರ್ಷ “ಜೈವ ವೈವಿಧ್ಯ ಕಾನೂನು, ಬೌದ್ಧಿಕ ಸ್ವತ್ತು ಹಕ್ಕುಗಳು ಮತ್ತು ಪರಿಸರ ಕಾನೂನು” ಕುರಿತು ಅಣಕು ನ್ಯಾಯಾಲಯದಲ್ಲಿ ವಾದ ಪ್ರತಿವಾದ ಮಂಡನೆಯಾಯಿತು. ಕಾರ್ಪೊರೇಟ್ ಆವಿಷ್ಕಾರ ಮತ್ತು ಮೂಲ ಜನಾಂಗದ ಹಕ್ಕುಗಳ ನಡುವಿನ ಸಮತೋಲನ ಎಂಬ ಸಮಕಾಲೀನ ಮತ್ತು ಪ್ರಸ್ತುತ ವಿಷಯವನ್ನು ಅಣುಕು ನ್ಯಾಯಾಲಯ ಸ್ಪರ್ಧೆಯಲ್ಲಿ ಕೇಂದ್ರೀಕರಿಸಲಾಗಿತ್ತು.
ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಎಂ.ಕೆ.ಪಿ.ಎಂ. ಆರ್.ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವಿಜೇತರಾದರೆ, ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜು ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಹೈಕೋರ್ಟ್ನ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳ ವಾದದ ಗುಣಮಟ್ಟವನ್ನು ಶ್ಲಾಘಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಸರ್ಕಾರಿ ವಕೀಲರಾದ ಎಸ್.ಎಸ್. ಮಹೇಂದ್ರ, ಪ್ರೊ. ಸತೀಶ ಗೌಡ, ಡಾ. ಡಿ.ಎಂ. ಹೆಗಡೆ (ವಕೀಲರ ವಾಹಿನಿ ಸಂಪಾದಕ) ಮತ್ತು ಸೌಂದರ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಕೀರ್ತನ್ ಕುಮಾರ್, ಉಣ್ಣಿ, ಸೌಂದರ್ಯ ಕಾನೂನು ಕಾಲೇಜಿನ ಮೂಟ್ ಕೋರ್ಟ್ ಸೊಸೈಟಿಯ ಅಧ್ಯಕ್ಷರಾದ ವಿ.ಕೆ.ಟಿ. ಕೃಷ್ಣದಾಸ್, ಎಂಸಿಎಂಎಸ್: ಬ್ಲ್ಯಾಕ್ಸ್ಟೋನ್ ಎಡಿಷನ್”ಎಂಬ ನವೀನ ಮೂಟ್ ಕೋರ್ಟ್ ನಿರ್ವಹಣಾ ಆ್ಯಪ್ ಬಿಡುಗಡೆ ಮಾಡಿದರು.
ಪ್ರಾಚಾರ್ಯ ವಿಶ್ವಾಸ್ ಪುಟ್ಟಸ್ವಾಮಿ ಮತ್ತು ಸಿಇಒ ಕೀರ್ತನ್ ಕುಮಾರ್ ಎಂ ಅವರು ಎಲ್ಲಾ ಭಾಗವಹಿಸಿದ ಕಾಲೇಜುಗಳು, ಗಣ್ಯ ಅತಿಥಿಗಳು ಮತ್ತು ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೌಂದರ್ಯ ಪಿ. ಮಂಜಪ್ಪ ಅವರ ಮಾರ್ಗದರ್ಶನದಲ್ಲಿ, ಸೌಂದರ್ಯ ಕಾನೂನು ಕಾಲೇಜು ನೈತಿಕತೆ ಮತ್ತು ಶ್ರೇಷ್ಠತೆಯನ್ನು ಸಮನ್ವಯಗೊಳಿಸಿದ ಭವಿಷ್ಯದ ಕಾನೂನು ವೃತ್ತಿಪರರನ್ನು ರೂಪಿಸುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.