ಬೆಂಗಳೂರು, ಅಕ್ಟೋಬರ್ 08 (ಕರ್ನಾಟಕ ವಾರ್ತೆ): ವಿಕಲಚೇತನರ ಸಬಲೀಕರಣ ಮತ್ತು ಎಲ್ಲರನ್ನು ಒಳಗೊಳ್ಳುವ ಸಮಾಜವನ್ನು  ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡಿಸೆಂಬರ್ ಮಾಹೆಯಲ್ಲಿ ಮೂರು ದಿನಗಳ ಕಾಲ “ಪರ್ಪಲ್ ಫೆಸ್ಟ್” ಉತ್ಸವವನ್ನು ಆಯೋಜಿಸಲಾಗುವುದು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ತಿಳಿಸಿದರು.  
ಅವರು ಇಂದು ಶೇಷಾದ್ರಿಪುರಂನ  ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಕಲಚೇತನರಿಗೆ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡಲು ಈ “ಪರ್ಪಲ್ ಫೆಸ್ಟ್” ಮುಖ್ಯ ಪಾತ್ರ ವಹಿಸಲಿದ್ದು, ಅವರು ಸಮಾಜದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಉತ್ತಮ ವೇದಿಕೆಯನ್ನು ಕಲ್ಪಿಸಲು ಸಹಕಾರಿಯಾಗಿದೆ. ಅಲ್ಲದೆ ವಿಶೇಷಚೇತನರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹ ಮುಖ್ಯ ವೇದಿಕೆಯಾಗಿದ್ದು,  ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಭೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ವಿವಿಧ  ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು. ಉತ್ಸವದ ಯಶಸ್ವಿಗೆ  ವಿವಿಧ ಬಗೆಯ ಸಮಿತಿಗಳ ರಚನೆ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾದಿಕಾರಿ ಕೃಷ್ಣಮೂರ್ತಿ, ಸರ್ಕಾರದ ಸಲಹೆಗಾರರಾದ ಪ್ರೀತಮ್ ಸಿನ್ಹಾ, ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.