SRI BRAHMANYA THEERTHARU : ಶ್ರೀ ಬ್ರಹ್ಮಣ್ಯ ತೀರ್ಥರು

varthajala
0


ರಾಮನಗರವೆಂದು ಪ್ರಸಿದ್ಧವಾಗಿರುವ ರಾಮಗಿರಿ ವ್ಯಾಪ್ತಿಯಲ್ಲಿ ಬರುವ ಚೆನ್ನಪಟ್ಟಣದಿಂದ ಸುಮಾರು ನಾಲ್ಕು ಮೈಲುಗಳಿಂದಾಚೆ ಬರುತ್ತಿದ್ದಂತೆ, ಮೊದಲು ಕಣ್ಸೆಳೆಯುವುದು ತಾನೇ ತಾನಾಗಿ ವಿಜೃಂಭಿಸುತ್ತಿರುವ ಹಚ್ಚ ಹಸಿರು; ಮುಗಿಲೆತ್ತರಕ್ಕೆ ತೂಗಿ ನಿಂತಿರುವ ತೆಂಗಿನ ಮರಗಳು; ಬರುತ್ತಿರುವವರನ್ನು ಎದುರುಗೊಂಡು ಆಹ್ವಾನಿಸುವ ನಿಸರ್ಗದ ಕಲ ಕಲ ಮಂಗಳ ವಾದ್ಯ! 


ಯಾವುದೋ ಸಾತ್ವಿಕತೆಯ ತೇಜಸ್ಸಿನಲ್ಲಿ ಮಿಂದು ಬಂದ ತಂಪಾದ ಗಾಳಿಯಿಂದ ದೇಹಕ್ಕೆ ಒಂದು ತರಹದ ಹಿತವಾದಂತಾಗಿ, ಮನಸ್ಸು ಮುದಗೊಳ್ಳುವಷ್ಟರಲ್ಲಿ ಸಿಕ್ಕಿಬಿಡುತ್ತದೆ ಅಬ್ಬೂರು. ಕಂಡರಿಯದ ಸುಂದರವಾದ ಕಿನ್ನರ ಲೋಕಕ್ಕೆ ಬಂದ ಅಪೂರ್ವ ಅನುಭವವಾಗುತ್ತದೆ. ಬಲಗಡೆ ರಾಮಗಿರಿಯಿಂದ ಮುಂದುವರೆಯಲ್ಪಟ್ಟ ‘ಅಬ್ಬೂರು ಗುಡ್ಡ’ವೆಂದು ಕರೆಯುವ ಬೆಟ್ಟಗಳ ಸಾಲು. ಹಿಂದೆ ತನ್ನ ಗಾತ್ರವನ್ನು ಕಿರಿದಾಗಿಸಿಕೊಂಡು ಗಂಭೀರವಾಗಿ, ಮಂಜುಳ ನಿನಾದದೊಂದಿಗೆ ಕಣ್ವಾನದಿ ಹರಿಯುತ್ತಿದ್ದದ್ದು ಈಗ ನೆನಪು ಮಾತ್ರ. ಆದರೆ ನದಿಯ ಪಾತ್ರ ಅಂದಿನ ವೈಭವಕ್ಕೆ ಸಾಕ್ಷಿಯಾಗಿ ಈಗಲೂ ಕಣ್ಣುತುಂಬುತ್ತದೆ. ಹತ್ತಿರದಲ್ಲಿಯೇ ಇರುವ ಕಣ್ವಾಜಲಾಶಯ ಮಳೆಗಾಲದಲ್ಲಿ ತುಂಬಿದಾಗ ನದಿಯ ಪಾತ್ರದಲ್ಲೂ ಕಿರುತೊರೆಯಾಗಿ ನೀರು ಕಾಣಿಸಿಕೊಳ್ಳತೊಡಗುತ್ತದೆ. ಕಣ್ವಾನದಿಯ ಪಕ್ಕದಲ್ಲಿಯೇ ಸಣ್ಣದಾದರೂ ಪವಿತ್ರತೆಯೇ ಮೈತಳೆದಂತಿರುವ, ಪ್ರಶಾಂತವಾದ ಮಠವಿದೆ. ಇಲ್ಲಿಯೇ ನಿಂತಿದ್ದಾರೆ ಸೂರ್ಯಾಂಶ ಸಂಭೂತರೆAದು ಪ್ರಸಿದ್ಧರಾಗಿರುವ ಶ್ರೀ ಬ್ರಹ್ಮಣ್ಯತೀರ್ಥರು!

ಹೌದು ಬ್ರಹ್ಮಣ್ಯ ತೀರ್ಥರು ಸೂರ್ಯಾಂಶಸAಭೂತರು. ಇದಕ್ಕೆ ಆಧಾರವಾಗಿ ಅನೇಕ ಜ್ಞಾನಿಗಳ ವಚನಗಳಿವೆ.

 ಶ್ರೀ ವ್ಯಾಸರಾಜರು ತಮ್ಮ ಗುರುಗಳನ್ನು ಕತ್ತಲೆಯ ಹಿಂಡನ್ನು ಕರಗಿಸಿ ಜ್ಞಾನಮಾರ್ಗವನ್ನು ಬೆಳಗಿಸುವ ಬ್ರಹ್ಮಣ್ಯಭಾಸ್ಕರರೆಂದು ಶ್ಲಾಘಿಸಿದ್ದರೆ ಅವರ ಪ್ರಶಿಷ್ಯರಾದ ಶ್ರೀನಿವಾಸ ತೀರ್ಥರು ಗುರುಗಳ ಬೃಂದಾವನದ ಚಾವಣಿಯಿಲ್ಲ. ವಿಷ್ಣು ಸಾನಿಧ್ಯವುಳ್ಳ ತುಳಸಿ ಗಿಡವಿದೆ. ಸೂರ್ಯಾಂಶರಾದ್ದರಿAದ ಸೂರ್ಯನ ಕಿರಣಗಳು ಬೃಂದಾವನದ ಮೇಲೆ ನೇರವಾಗಿ ಬೀಳುತ್ತದೆ. ಸುಮಾರು ಆರು ದಶಕಗಳ ಐತಿಹೃವಿರವ ಈ ಭವ್ಯ ಬೃಂದಾವನ ಸ್ವಲ್ಪ ವಾಲಿದಂತಿದ್ದರೂ ಈಗಲೂ ಸದೃಡವಾಗಿ ನಿಂತಿದೆ. ದರ್ಶನ ಮಾತ್ರದಿಂದಲೇ ಮೈಮನಗಳು ಮುದಗೊಂಡು ರೋಮಾಂಚನದ ಅನುಭವವಾಗುತ್ತದೆ. ಯಾವುದೋ ಉತ್ಸಾಹದ ಚಿಲುಮೆಯಲ್ಲಿ ಮಿಂದ ಸಂಭ್ರಮದೊAದಿಗೆ, ಭಕ್ತಿಯ ತರಂಗಗಳು ಭಾವುಕರ ಎದೆಯನ್ನು ಹಿತವಾಗಿ ಅಪ್ಪಿ ಹಿಡುಯುತ್ತದೆ. ಗುರುಗಳ ಬಲ ಪಕ್ಕದಲ್ಲಿ ವ್ಯಾಸರಾಜರು ಪ್ರತಿಷ್ಠಾಪಿಸಿರುವ ಪ್ರಾಣದೇವರ ವಿಗ್ರಹ ಮತ್ತು ಎಡ ಪಕ್ಕದಲ್ಲಿ ವ್ಯಾಸರಾಜರ ಮೃತ್ತಿಕಾ ಬೃಂದಾವನ ಪುಟ್ಟದಾಗಿದ್ದರೂ ಮನೊಹರವಾಗಿದೆ. ಸುತ್ತಲೂ ಇರುವ ಬೃಂದಾವನಗಳಲ್ಲಿ ಅನೇಕ ಮಾಧ್ವ ಯತಿವರೇಣ್ಯರು ಹಿರಿಯ ಗುರುಗಳನ್ನು ಸೇವಿಸಲೆಂದೇ ಈ ಹೊತ್ತಿಗೂ ನೆಲೆಸಿರುವಂತಿವೆ. ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ ಬೃಂದಾವನವನ್ನು ಕಡು ನಿಷ್ಠೆಯಿಂದ ನೆರೆನಂಬಿ ಸೇವಿಸುತ್ತಿರುವ ಅನೇಕ ಭಕ್ತ ಜನರು ಇಲ್ಲಿ ದಿನ ನಿತ್ಯ ಕಂಡುಬರುತ್ತಾರೆ. ಗುರುಸ್ತೋತ್ರವನ್ನು ಪಠಿಸುತ್ತಾ, ಗುರುಗಳ ಪಾದದ್ವಯಗಳನ್ನೇ ಚಿಂತಿಸುತ್ತಾ ಪ್ರದಕ್ಷಿಣೆ, ಪ್ರಣಾಮಗಳನ್ನು ಸಲ್ಲಿಸುವ ಅವರ ಸದೃಡ ನಂಬಿಕೆ ಆಶ್ಚರ್ಯ ಹುಟ್ಟಿಸುತ್ತದೆ. ಬ್ರಹ್ಮಣ್ಯ ಭಾಸ್ಕರ‍್ನು ಸೇವಿಸಲು ಬರುವವರೇ ನಿಜಕ್ಕೂ ಪುಣ್ಯವಂತರು. ಅವರ ಸರ್ವಾಭೀಷ್ಟೆಗಳೂ ಖಂಡಿತವಾಗಿಯೂ ಸಿದ್ಧಿಸುವುವು.

ಅವರನ್ನು ಸೇವಿಸುವವನು ಎಂತಹ ರೋಗಿಷ್ಟನಾದರೂ ಕ್ಷಿಪ್ರದಲ್ಲಿ ಆರೋಗ್ಯಭಾಗ್ಯವನ್ನು ಪಡೆಯುವನು. ಕುಂಟನು ನಡೆಯುವನು. ಕಿವುಡನು ಕೇಳುವನು. ಕುರುಡನು ದಿವ್ಯದೃಷ್ಟಿಯನ್ನೇ ಪಡೆದುಕೊಳ್ಳುವನು. ಅಪಸ್ಮಾರಾದಿ ಕಂಟಕಗಳು ಹೇಳಹೆಸರಿಲ್ಲದಂತಾಗುವುವು. ಪುತ್ರ‍್ರನಿಲ್ಲದನು ಸತ್ಪತ್ರನನ್ನು ಹೊಂದುವನು. ಓಂಕಾರಪೂರ್ವಕ “ಬ್ರಹ್ಮಣ್ಯತೀರ್ಥಯ ನಮಃ’ ಎಂಬ ಅಷ್ಟಾಕ್ಷರ ಮಂತ್ರವನು ಶ್ರದ್ಧಾಭಕ್ತಿಗಳಿಂದ ನಿತ್ಯವು ಜಪಿಸುವವರಿಗೆ ದುರ್ಲಭವೆಂಬುದೇ ಇಲ್ಲ. ಬ್ರಹ್ಮಣ್ಯತೀರ್ಥರ ಅಷ್ಟಾಕ್ಷರಿ ಮಂತ್ರ ಬ್ರಹ್ಮತ್ಯಾದಿ ದೋಷಗಳನ್ನು ನಿರ್ಮೂಲಗೊಳಿಸುವುದು ಬ್ರಹ್ಮಪಿಶಾಚಾದಿ ಪೀಡೆಗಳನ್ನು ತರಿದೋಡಿಸುವುದು.

ಗುರುಗಳ ಬೃಂದಾವನದ ಮುಂದೆ ಸಾಲುದೀಪಗಳನ್ನು ಹಚ್ಚುವವನ ಹೃದಯದಲ್ಲಿ ಸಾಕ್ಷಾತ್ ಶ್ರೀಹರಿಯೇ ಮೋಕ್ಷಪಥವನ್ನು ತೋರುವ ಸದೃಡ ಭಕ್ತಿಯ ದೀಪವನ್ನು ಬೆಳಗುವನು. ಇದಕ್ಕೆ ಸವೋತ್ತಮನಾದ ನರಸಿಂಹನೇ ಸಾಕ್ಷಿ ಎಂದು ದಾರಢ್ಯದಿಂದ ನುಡಿಯುತ್ತಾರೆ. ಶ್ರೀನಿವಾಸತೀರ್ಥರು. ಜ್ಞಾನಭಕ್ತಿ ವೈರಾಗ್ಯಾದಿ ಸೌಭಾಗ್ಯಗಳನ್ನು ಕರುಣಿಸುತ್ತಾ ಸರ್ವಾಭೀಷ್ಟಪ್ರದರಾಗಿರುವ ಇಂತಹ ಗುರುಗಳ ಸಾನಿಧ್ಯ ಯಾರಿಗೆ ತಾನೇ ಬೇಡ? ಖುಷಿಗಳ ಆಶ್ರಮದಂತೆ ಕಂಗೊಳಿಸುವ ಈ ಸುಂದರ ತಾಣ ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಹತ್ತಿರವಿರುವುದು ಒಂದು ವಿಶೇಷ. ನಗರದ ಯಾಂತ್ರಿಕ ಜೀವನದಿಂದ ಬೇಸತ್ತ ಜನರು ರಜಾ ದಿವಸಗಳಲ್ಲಿ, ಶಾಂತಿಯನ್ನರಸುತ್ತಾ ಈ ಪ್ರಶಾಂತ ಸ್ಥಳಕ್ಕೆ ಬರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. 

ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವುಳ್ಳ ಅಬ್ಬೂರು ಹಿಂದೆ ಕಣ್ವ ಖುಷಿಗಳ ತಪೋಭೂಮಿಯಾಗಿತ್ತು. ನಂತರ ಹಲವಾರು ಮಾಧ್ವಯತಿಗಳ ಪುಣ್ಯಧಾಮವಾಗಿತ್ತು. ಪ್ರಸಿದ್ಧ ವಾಗಿರುವ ಕಂಬದ ನರಸಿಂಹಸ್ವಾಮಿ ದೇವಾಲಯಕ್ಕೆ ಸಮೀಪದಲ್ಲಿಯೇ ವಿಪ್ರೋತ್ತಮರ ಅಗ್ರಹಾರವಿದ್ದ ಕುರುಹು ಇಂದಿಗೂ ದೊರಕುತ್ತದೆ. ಬ್ರಹ್ಮಣ್ಯತೀರ್ಥರ ತಪಶ್ಯಕ್ತಿಯನ್ನೂ, ಲೋಕ ಕಲ್ಯಾಣಕರವಾದ ವಿಶಾಲ ಮನೋಭಾವವನ್ನೂ ಕಂಡು ಸಂತೋಷಿಸಿ ವಿಜಯನಗರದ ಸಾಮ್ರಾಟನಾದ ಶ್ರೀ ಕೃಷ್ಣದೇವರಾಯ ದಾನವಾಗಿ ನೀಡಿದ ಬ್ರಹ್ಮಣ್ಯಪುರ ಸನಿಹದಲ್ಲಿಯೇ ಇದ್ದು ಅಲ್ಲಿ ಬ್ರಹ್ಮಣ್ಯತೀರ್ಥರ ಮಹಿಮಾ ವಿಶೇಷಗಳನ್ನು ಸಾರುವ ಅನೇಕ ಸ್ಮಾರಕಗಳು ಈಗಲೂ ಇವೆ. ಶ್ರೀಪಾದರಾಜರು, ಬ್ರಹ್ಮಣ್ಯತೀರ್ಥರು ಮತ್ತು ವ್ಯಾಸರಾಜರು ಒಟ್ಟಾಗಿ ಸೇರಿ ಪ್ರತಿಷ್ಠಾಪಿಸಿರುವ ಜಾಗೃತ  ಸನ್ನಿಧಾನವುಳ್ಳ ಪ್ರಾಣದೇವರ ದೇವಾಲಯವಿದೆ. ಅತ್ಯಂತ ಮನೋಹರವಾಗಿರುವ ಈ ವೀರಾಂಜನೇಯನ ಶಿರೋಭಾಗದಲ್ಲಿ ಸೀತಾ ಲಕ್ಷö್ಮಣ ಸಮೇತರಾಗಿ ಶ್ರೀರಾಮಚಂದ್ರಪ್ರಭು ಶೋಭಿಸುತ್ತಾನೆ. ಪ್ರಾಣಪತಿಯ ಇಕ್ಕೆಲ್ಲಗಳಲ್ಲೂ ಶಂಖ ಚಕ್ರಗಳ ಚಿನ್ಹೆಗಳಿದ್ದು ಕಿರೀಟದ ಮೇಲಿನ ಗೂಡಿನಲ್ಲಿ ಬ್ರಹ್ಮಣ್ಯತೀರ್ಥರಿಂದಲೇ ಪೂಜಿತವಾದ ನರಸಿಂಹ ಸಾಲಿಗ್ರಾಮ ಇವತ್ತಿಗೂ ಇದೆ. ಆ ಯತಿತ್ರಯರು ಮಜ್ಜನಗೈದು ಪವಿತ್ರಗೊಳಿಸಿದ ಕೊಳ ಮತ್ತು ಶ್ರೀ ಬ್ರಹ್ಮಣ್ಯ ತೀರ್ಥ ಗುರುರಾಜರು ಕ್ಷಾಮನಿವಾರಣೆಗಾಗಿ ಕಟ್ಟಿಸಿದ ಕೆರೆಯೂ ಇಲ್ಲಿದ್ದು ಆ ಹಿರಿಯರ ಹಿರಿಮೆಗೆ ಸಾಕ್ಷಿಯಾಗಿವೆ. ಅಲ್ಲಿರುವ ತಿರುವೇಂಗಳ ನಾಥನ ಬೆಟ್ಟದಲ್ಲಿ ಬ್ರಹ್ಮಣ್ಯತೀರ್ಥರು ತಮ್ಮ ಭಕ್ತರ ಅಪೇಕ್ಷೆಯಂತೆ ನಿರ್ಮಿಸಿ ಪೂಜಿಸಿದ ನರಸಿಂಹದೇವರ ಪಾದದ್ವಯ, ಕದರೀಶನ ದಿವ್ಯ ಸನ್ನಿಧಾನಯುಕ್ತವಾದ ಕಂಬ ಈಗಲೂ ಭಕ್ತಾಭೀಷ್ಟಪ್ರದವಾಗಿ ನಿತ್ಯಪೂಜೆಗೊಳ್ಳುತ್ತಿವೆ.

 ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನವಾದ ಶ್ರೀ ರಾಜೇಂದ್ರತೀರ್ಥರ ಪೂರ್ವಾದಿ ಮಠದ ಪರಂಪರೆಯಲ್ಲಿ ಬಂದ ಶ್ರೀಪುರುಷೋತ್ತಮತೀರ್ಥರು ಅಬ್ಬೂರಿನಲ್ಲಿ ಬಹುಕಾಲ ವಾಸಿಸಿದ ತಪೋನಿಧಿಗಳು. ಅವರದು ಭವ್ಯವಾದ ಗುರು ಪರಂಪರೆ ಶ್ರೀ ಮದಾಚಾರ್ಯರ ನೇರ ಶಿಷ್ಯ ಶ್ರೀಅಕ್ಷೆÆÃಭ್ಯತೀರ್ಥರು. ಪ್ರಯಾಗದಂತಹ ಪುಣ್ಯಕ್ಷೇತ್ರದಲ್ಲಿ ಟೀಕಾರಾಯರಿಂದ ಸನ್ಯಾಸ ದೀಕ್ಷೆಯನ್ನು ಪಡೆದ ವಿದ್ಯಾಧಿರಾಜರಿಗೆ ರಾಜೇಂದ್ರ ತೀರ್ಥರು ಮತ್ತು ಕವೀಂದ್ರತೀರ್ಥರೆAಬ ಇಬ್ಬರು ಶಿಷ್ಯರು. ಗುರುಗಳ ಆಜ್ಞೆಯಂತೆ ಉತ್ತರಭಾರತದ ಬಂಗಾಳದಲ್ಲಿ ನೆಲೆಸಿ ದ್ವೆöÊತ ದುಂದುಭಿಯನ್ನು ಸಮರ್ಥವಾಗಿ ಮೊಳಗಿಸಿದ ಹಿರಿಮೆ ಶ್ರೀ ರಾಜೇಂದ್ರ ತೀರ್ಥರದು. ಅವರ ಪ್ರಿಯ ಶಿಷ್ಯರಾಗಿ ವೇದಾಂತ ಸಾಮ್ರಾಜ್ಯವನ್ನು ಪಾಲಿಸಿದ ಮಹಾನುಭಾವರೇ ಶ್ರೀಪುರುಷೋತ್ತಮತೀರ್ಥರು ಪಾಂಡಿತ್ಯದಲ್ಲಿ  ವಾದ ವೈಭವದಲ್ಲಿ, ಹರಿಭಕ್ತಿಯಲ್ಲಿ, ತಪಶ್ಯಕ್ತಿಯಲ್ಲಿ, ವೈರಾಗ್ಯಾದಿ ಸದ್ಗುಣಗಳಲ್ಲಿ ಪರುಷೋತ್ತಮತೀರ್ಥರಿಗೆ ಪುರಷೋತ್ತಮ ತೀರ್ಥರೇ ಸಾಟಿ. ಬ್ರಹ್ಮಣ್ಯತೀರ್ಥರು ಪುರುಷೋತ್ತತೀರ್ಥರ ಶಿಷ್ಯಶ್ರೇಷ್ಠರು. ಮಠಕ್ಕೆ ಅಭಿಮುಖವಾಗಿಯೇ ಇರುವ ಬೆಟ್ಟದಲ್ಲಿ ಪುರುಷೋತ್ತಮತೀರ್ಥರು ಬದುಕಿ, ಸಾಧನೆಗೈದು, ಸಿದ್ಧಿಯ ಬೆಳಕನ್ನು ಕಂಡುಕೊAಡ ಗುಹೆಯಿದೆ. ಅವರ ಸನ್ನಿಧಾನದಲ್ಲಿ ಕ್ರೂರ ಮೃಗಗಳೂ ಸಾಧುಸ್ವಭಾವವನ್ನು ಹೊಂದುತ್ತಿತ್ತು ಎಂದು ಹೇಳುತ್ತಾರೆ. ಅನೇಕ ಸಲ ಪುರುಷೋತ್ತಮತೀರ್ಥರು ತಮ್ಮ ಬಳಿಗೆ ಬರುತ್ತಿದ್ದ ಹುಲಿಗಳಿಗೆ ಅಂಗಾರ ಹಚ್ಚಿ, ಅವುಗಳ ಮೇಲೇರಿ ಸಂಚರಿಸುತ್ತಿದ್ದುದ್ದರಿAದ ಅವರನ್ನು “ಹುಲಿ ಸ್ವಾಮಿಗಳು” ಎಂದು ಅಬ್ಬೂರಿನ ಸುತ್ತ ಮುತ್ತಲಿನ ಜನರು ಕರೆಯುತ್ತಿದ್ದರಂತೆ. ಅನೇಕ ವಿದ್ವನ್ಮಣಿಗಳು ಪುರುಷೋತ್ತಮತೀರ್ಥರ ಗರಡಿಯಲ್ಲಿ ತಯಾರಾದರು. ಶ್ರೀಪಾದರಾಜರ ಗುರುಗಳಾದ ಶ್ರೀರಂಗದ ಸ್ವರ್ಣವರ್ಣತೀರ್ಥರೂ ಪುರುಷೋತ್ತಮರ ಸಹೋದರರಾದ ಶ್ರೀ ವಿಷ್ಣುತೀರ್ಥರು ಕುಮಾರ ಪರ್ವತವನ್ನೇರಿ ಅದೃಶ್ಯರಾದಂತೆ ಶ್ರೀಪುರುಷೋತ್ತಮತೀರ್ಥರೂ ಸಹ ಅಬ್ಬೂರು ಸಾಲುಬೆಟ್ಟದ ಗುಹೆಯನ್ನು ಹೊಕ್ಕು ಅದೃಶ್ಯರಾಗಿದ್ದು ಅವರ ಅಪಾರ ಮಹಿಮೆಗೆ ಒಂದು ನಿದರ್ಶನವಾಗಿದೆ. ಪುರುಷೋತ್ತಮತೀರ್ಥರಿಗೆ ಬೃಂದಾವನವಿಲ್ಲ. ಅಬ್ಬೂರಿನಲ್ಲಿ ಕಣ್ಸೆಳೆಯುವ ಬೆಟ್ಟದಲ್ಲಿ ಗುಹೆಯೊಂದಿದ್ದು ಅದು ಈಗಲೂ ‘ಪುರುಷೋತ್ತಮತೀರ್ಥರು ಗುಹೆ’ ಎಂದೇ ಪ್ರಸಿದ್ಧವಾಗಿದೆ. ಬ್ರಹ್ಮಣ್ಯತೀರ್ಥರ ಬೃಂದಾವನಕ್ಕೆ ಹಸ್ತೋದಕ, ಮಂಗಳಾರತಿ ಮಾಡುವ ಮೊದಲು ಪುರುಷೋತ್ತಮತೀರ್ಥರ ಸನ್ನಿಧಾನಯುಕ್ತ ಗುಹಾದ್ವಾರವಿರುವ ಎದುರು ಬೆಟ್ಟಕ್ಕೆ ಹಸ್ತೋದಕ, ಮಂಗಳಾರತಿಗಳನ್ನು ಬ್ರಹ್ಮಣ್ಯತೀರ್ಥರ ಸನ್ನಿಧಾನದಿಂದಲೇ ಸಲ್ಲಿಸುವ ಸಂಪ್ರದಾಯ ಈ ಹೊತ್ತಿಗೂ ಬೆಳೆದುಕೊಂಡು ಬಂದಿದೆ. ಗುಹೆಯ ಬಳಿ ಸಂಚರಿಸುವ ಎಷ್ಟೋ ಮಂದಿ ಗೋಪಾಲಕರು ವೈಷ್ಣವ ಚಿಹ್ನೆಗಳನ್ನು ಧರಿಸಿ, ಕಾಷಾಯ ವಸ್ತçಗಳಿಂದ ಕಂಗೊಳಿಸುವ ವೃದ್ಧರನ್ನು ಕಂಡಿದ್ದಾಗಿ ಹೇಳುವುದೂ ಉಂಟು. ‘ಪುಣ್ಯಫಲಿಸಿದವರ ಕಣ್ಣಿಗೆ ಪುರುಷೋತ್ತಮರು ಕಾಣಿಸುವರು’ ಎಂಬುದು ಒಂದು ನಾಣ್ಮುಡಿಯಾಗಿಬಿಟ್ಟಿದೆ. 

ಶ್ರೀಮದಾನಂದತೀರ್ಥರ ನೇರ ಪರಂಪರೆಯಲ್ಲಿ ಬಂದ ಪುರುಷೋತ್ತಮತೀರ್ಥರು ನೀಡಿದ ಅಮೂಲ್ಯ ನಿಧಿ ಬ್ರಹ್ಮಣ್ಯತೀರ್ಥರಾದರೆ, ಬ್ರಹ್ಮಣ್ಯತೀರ್ಥರು ಮಧ್ವವಾಙ್ಮಯಕ್ಕೆ ಕೊಟ್ಟ ಬಹು ಮುಖ್ಯವಾದ ಕೊಡುಗೆ ಶ್ರೀವ್ಯಾಸತೀರ್ಥರು. ಬ್ರಹ್ಮಣ್ಯತೀರ್ಥರ ಕೃಪಾಶೀರ್ವಾದದ ಫಲವಾಗಿ ಜನ್ಮತಳೆದ ವ್ಯಾಸರಾಜರು ಗುರುಗಳಿಂದಲೇ ಪೋಷಿತರಾಗಿ ಅವರ ಅನುಗ್ರಹದ ಮಹಾಫಲವನ್ನುಂಡು ಬಾಲ್ಯದಲ್ಲಿಯೇ ಯತ್ಯಾಶ್ರಮವನ್ನು ಪಡೆದುಕೊಂಡರು. ಗುರುಗಳ ಆಜ್ಞೆಯಂತೆ ಮುಳಬಾಗಿಲಿನ ಶ್ರೀಪಾದರಾಜ ಗುರುಸಾರ್ವಭೌಮರಲ್ಲಿ ವಿದ್ಯೆಯನ್ನು ಕಲಿತು ಅಪೂರ್ವ ವಿದ್ವನ್ಮಣಿಗಳಾಗಿ ರೂಪುಗೊಂಡರಲ್ಲದೆ ಬ್ರಹ್ಮಣ್ಯತೀರ್ಥರ ನಂತರ ಪೂರ್ವಾದಿ ಮಠದ ಪೀಠಾಧಿಪತ್ಯವನ್ನು ವಹಿಸಿಕೊಂಡರು. ಗುರುಗಳಂತೆಯೇ ಜ್ಞಾನ, ಭಕ್ತಿ, ವೈರಾಗ್ಯಗಳಿಂದ ಶೋಭಿಸುತ್ತಿದ್ದ ವ್ಯಾಸತೀರ್ಥರು ಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವ ಗ್ರಂಥಗಳಲ್ಲದೆ ಇನ್ನೂ ಹಲವಾರು ಶ್ರೇಷ್ಠ ಕೃತಿರತ್ನಗಳನ್ನು ರಚಿಸಿ ಸಾರಸ್ವತ ಭಂಡಾರವನ್ನು ಶ್ರೀಮಂತಗೊಳಿಸಿದರು. “ಸಿರಿ ಕೃಷ್ಣ” ಎಂಬ ಅಂಕಿತದಲ್ಲಿ ಕನ್ನಡ ಭಾಷೆಯಲ್ಲಿಯೂ ನೂರಾರು ಭಕ್ತಿರಸಭರಿತ ಕೀರ್ತನೆಗಳನ್ನು ರಚಿಸಿದರು. ವಿಜಯೀಂದ್ರರು, ವಾದಿರಾಜರು, ಶ್ರೀನಿವಾಸತೀರ್ಥರು ಮುಂತಾದ ಸನ್ಯಾಸಿ ಶಿಷ್ಯರಲ್ಲದೆ ಪುರಂದರದಾಸರು, ಕನಕದಾಸರು ಮೊದಲಾದ ಗೃಹಸ್ಥ ಹರಿದಾಸರನ್ನು ರೂಪಿಸಿದ ಕೀರ್ತಿ ಅವರದು. ವಿಜಯನಗರಕ್ಕೆ ಬಂದೊದಗಿದ ಕುಹುಯೋಗದ ಕಂಟಕವನ್ನು ನಿವಾರಿಸಿ, ಕರ್ನಾಟಕ ವಿದ್ಯಾಸಿಂಹಾಸನ್ನೇರಿ ಯತಿಸಾರ್ವಭೌಮರಾಗಿ ವಿರಾಜಿಸಿದ ವ್ಯಾಸರಾಜರಿಂದ ಮಧ್ವಮತದ ವಿಜಯಪತಾಕೆ ಮುಗಿಲೆತ್ತರಕ್ಕೆ ಹಾರಾಡಿತು. ಶ್ರಿಮನ್ಮಧ್ವಾಚಾರ್ಯರ ತತ್ವವಾಹಿನಿಗೆ ಸಾಗರರೂಪ ನೀಡಿದ ಧೀಮಂತರಾದ ವ್ಯಾಸರಾಜರನ್ನು ಅವರ ವಿದ್ಯಾಗುರುಗಳಾದ ಶ್ರೀಪಾದರಾಜರೇ “ಏಸು ಮುನಿಗಳೆದ್ದೇನು ಮಾಡಿದರಯ್ಯಾ| ವ್ಯಾಸಮುನಿ ತಾ ಮಧ್ವಮತವನುದ್ಧರಿಸಿದ” ಎಂದು ಕೊಂಡಾಡಿದ್ದಾರೆAದ ಮೇಲೆ ಅವರ ಬಹುಮುಖ ವ್ಯಕ್ತಿತ್ವವನ್ನು ನಾವು ಊಹಿಸಬಹುದು.

ವ್ಯಾಸ-ದಾಸ ಸಾಹಿತ್ಯಗಳ ಸವ್ಯಸಾಚಿಗಳೆಂದೆನ್ನಿಸಿದ ವ್ಯಾಸರಾಜರು ತಮ್ಮ ಗುರುಗಳಾದ ಶ್ರೀ ಬ್ರಹ್ಮಣ್ಯತೀರ್ಥರು ಮಾಡಿದ ಉಪಕಾರವನ್ನು ತಮ್ಮ ಕೃತಿಗಳಲ್ಲಿ ಮುಕ್ತಕಂಠದಿಮದ ಪ್ರಶಂಸಿದ್ದಾರೆ. ಕಂಸಧ್ವAಸಿಯಾದ ಕೃಷ್ಣನ ಪಾದಾರವಿಂದಗಳಲ್ಲಿ ಸದಾ ಆಸಕ್ತರಾಗಿರುವ ಹಂಸಪುAಗವರಾದ ಬ್ರಹ್ಮಣ್ಯಗುರುರಾಜರೆಂಬ ಭಾನುವನ್ನು ತಮ್ಮ ಮಾನಸಾಗಸದಲ್ಲಿಟ್ಟು ಶ್ರೀವ್ಯಾಸರಾಜರು ನಲಿದಾಡಿದ್ದಾರೆ. ಗುರುಗಳ ಶ್ರೀಮಂತ ಗುಣಾವಳಿಗಳನ್ನೂ, ಅವರ ಭವ್ಯ ವ್ಯಕ್ತಿತ್ವವನ್ನೂ ಕೊಂಡಾಡಲು “ಪಂಚರತ್ನ ಮಾಲಿಕೆ”ಯನ್ನೇ ರಚಿಸಿ ಬ್ರಹ್ಮಣ್ಯತೀರ್ಥರ ಭಕ್ತವೃಂದಕ್ಕೆ ಮಹೋಪಕಾರ ಮಾಡಿದ್ದಾರೆ. ವ್ಯಾಸರಾಜರಿಂದ ರಚಿತವಾದ ಈ ಪಂಚರತ್ನ ಮಾಲಿಕೆಯನ್ನು ಹೇಳಿಕೊಂಡು ಬ್ರಹ್ಮಣ್ಯತೀರ್ಥರ ಬೃಂದಾವನವನ್ನು ಸೇವಿಸುವ ಭಕ್ತವೃಂದವನ್ನು ನಾವು ಈ ಹೊತ್ತೂ ನೋಡಬಹುದು. ಪ್ರಾತಃಕಾಲದಲ್ಲಿ ಬ್ರಹ್ಮಣ್ಯತೀರ್ಥ ಪಂಚರತ್ನಮಾಲಿಕೆಯನ್ನು ಪಠಿಸಿದರೆ ಸಿಕ್ಕುವ ಮನೋನೈರ್ಮಲ್ಯ, ಆತ್ಮತೃಪ್ತಿ, ಆನಂದಗಳು ವ್ಯಾಸರಾಜರ ಪ್ರಖರ ಗುರುಭಕ್ತಿಯೇ ಸಾಕಾರಗೊಂಡಿರುವ ಈ ಸ್ತೋತ್ರ ಕ್ಷಿಪ್ರಫಲದಾಯಕವೆಂಬುದು ಅನುಭವ ವೇದ್ಯ. 

ಶ್ರೀವ್ಯಾಸರಾಜರ ದೃಷ್ಟಿಯಲ್ಲಿ ಶ್ರೀಬ್ರಹ್ಮಣ್ಯತೀರ್ಥರು ಶುಭತಮಚರಿತರು. ಶ್ರೀಲಕ್ಷಿö್ಮÃನಾರಾಯಣನ ದಿವ್ಯಪಾದಾರವಿಂದಗಳನ್ನು ಸದಾ ಸೇವಿಸುತ್ತಿರುವ ಶಾಂತರು, ಮಹಾನುಭಾವರು ಕಾಮಕ್ರೋಧಾದಿಗಳನ್ನು ಅತಿಕ್ರಮಿಸಿದವರು. ಪಾಪವೆಂಬ ಸಮುದ್ರವನ್ನು ದಾಟಲು ಸಮರ್ಥವಾದ ತೆಪ್ಪದಂತೆ ಇರುವವರು. ಧೀರರೂ, ವಿನಯಸಂಪನ್ನರು. ಸುಜನರಾದ ಭೂಸುರರಿಂದ ಸದಾ ಶ್ಲಾಘನೀಯರು. ಉನ್ಮತ್ತರಾದ ಮಾಯಾವಾದಿಗಳೆಂಬ ಆನೆಗಳಿಗೆ ಸಿಂಹದAತೆ ಇರುವವರು. ಪ್ರಖ್ಯಾತಕೀರ್ತಿಯನ್ನು ಹೊಂದಿರುವ ಮಹಿಮೋಪೇತರು. ವಿಠಲನ ಚರಣಕಮಲದಲ್ಲಿ ಸದಾ ದುಂಬಿಯAತೆ ವಿಹರಿಸುವವರು. ಭಕ್ತರ ಅಭಿಷ್ಟೆಗಳನ್ನು ಪೂರೈಸುವ ಚಿಂತಾಮಣಿಗಳು. ಜ್ಞಾನಾದಿ ಗುಣಸಂಪನ್ನರೂ, ಕಾಷಾಯವಸ್ತçಗಳನ್ನು ಧರಿಸಿ ಉತ್ತಮವಾದ ತುಲಸಿ, ಕಮಲಾಕ್ಷಿಮಣಿಗಳಿಂದ ಭೂಷಿತರೂ ಆದ ಅವರು ಯತಿಗಳ ಸಮೂಹಕ್ಕೆ ಶಿರೋಮಣಿಯಂತೆ ಇರುವವರು. ಸುಂದರಾAಗರು.  ನಾನಾ ತರಹದ ಪಾಪಜಾಲಗಳನ್ನು ಛೇದಿಸುವ ಶಕ್ತಿಯುಳ್ಳವರು. ಅಮೃತಸದೃಶವಾದ ಹಿತವಚನವನ್ನು ನೀಡುವುದರಲ್ಲಿ ನಿಪುಣರೂ, ಮುನಿಸಮೂಹದಿಂದ ವಂದನೀಯರು, ಅನುಗ್ರಹದ ಮಂದಹಾಸವನ್ನು ಬೀರುವ ಮುಖಕಮಲವುಳ್ಳವರು ಎಂದೆಲ್ಲಾ ವರ್ಣಿಸುವ ವ್ಯಾಸರಾಜರು ಯಾರ ಬೃಂದಾವನದ ದರ್ಶನದಿಂದ ಸಮಸ್ತ ಪಾಪಗಳೂ ನಾಶಹೊಂದುವುವೋ, ಯಾರ ವೃಂದಾವನದ ಮೃತ್ತಿಕೆಯನ್ನು ಭಕ್ತಿಪೂರ್ವಕವಾಗಿ ಧರಿಸಿದರೆ ಎಲ್ಲಾ ತಾಪತ್ರಯಗಳೂ ಧ್ವಂಸಗೊಳ್ಳುವುದೋ, ಯಾರ ಬೃಂದಾವನದ ಸೇವೆಯಿಂದ ವಿದ್ಯಾಕಾಂಕ್ಷಿಗಳು ಪರಮವಿದ್ಯಾಸುಖವನ್ನು ಈ ಲೋಕದಲ್ಲಿ ಪಡೆಯುವರೋ, ಅಂತಹ ಬ್ರಹ್ಮಣ್ಯತೀರ್ಥ ಗುರುರಾಜರು ನನ್ನ ಸರ್ವಾರಿಷ್ಟಗಳನ್ನು ಪರಿಹರಿಸಲಿ. ಕುಷ್ಠ ಕ್ಷಯ ಮುಂತಾದ ಕಠಿಣತರ ರೋಗಗಳನ್ನು ನಿರ್ಮೂಲ ಮಾಡುವುದರಲ್ಲಿ ವೈದ್ಯರಾಜರೂ, ಭೂತಪ್ರೇತಗ್ರಹಗಳನ್ನು ತರಿದೋಡಿಸಲು ಸಮರ್ಥವಾದ ಮಹಾಮಂತ್ರಗಳೇ ಮುನಿರೂಪದಲ್ಲಿ ಮೂರ್ತಿ ವೆತ್ತಂತಿರುವವರೂ, ತಮ್ಮನ್ನು ಆಶ್ರಯಿಸಿದವರಿಗೆ ಸರ್ವಾಭೀಷ್ಟಪ್ರದರೂ, ಸರಸಸುಹೃದಯವುಳ್ಳ ಪುಣ್ಯಶ್ಲೋಕರೂ ಆದ ಗುರುಕುಲತಿಲಕರಾದ ಶ್ರೀ ಬ್ರಹ್ಮಣ್ಯತೀರ್ಥರು ನಮ್ಮ ಶ್ರೇಯೋಭಿವೃದ್ಧಿಗೆ ಕಾರಣವಾಗಲಿ ಎಂದು ಮನಮುಟ್ಟುವಂತೆ ಪ್ರಾರ್ಥಿಸುತ್ತಾರೆ. 

ತಾವು ರಚಿಸಿರುವ ನ್ಯಾಯಾಮೃತ, ತಾತ್ಪರ್ಯಚಂದ್ರಿಕಾ ಮುಂತಾದ ಗ್ರಂಥಗಳಲ್ಲಿ ವ್ಯಾಸರಾಜರು ಬ್ರಹ್ಮಣ್ಯತೀರ್ಥರನ್ನು ಭಕ್ತಿಯಿಂದ ಸ್ತೋತ್ರ ಮಾಡಿರುವರಲ್ಲದೆ ಗ್ರಂಥಾAತ್ಯದಲ್ಲಿ ತಾವು ‘ಪರಮಹಂಸಪರಿವ್ರಾಜಕಾಚಾರ್ಯರಾದ ಶ್ರೀ ಬ್ರಹ್ಮಣ್ಯತೀರ್ಥ ಪೂಜ್ಯಪಾದರ ಶಿಷ್ಯ’ರೆಂದು ಅತ್ಯಂತ ವಿನಯದಿಂದ ಹೇಳಿಕೊಳ್ಳುತ್ತಾರೆ. 

ಅಬ್ಬೂರಿನಲ್ಲಿ ರಾಮಚಾರ್ಯರೆಂಬ ವಿಪ್ತೋತ್ಮಮರೊಬ್ಬರು ತಮಗೆ ಅನುರೂಪಳಾಗಿದ್ದ ಲಕ್ಷöಮ್ಮ ಎಂಬ ಧರ್ಮಪತ್ನಿಯೊಂದಿಗೆ ವಾಸಿಸುತ್ತಿದ್ದರು. 

ವಿದ್ಯಾವಿನಯ ಸಂಪನ್ನರಾಗಿದ್ದ ರಾಮಚಾರ್ಯರು ಸಂತೃಪ್ತ ಜೀವನ ನಡೆಸುತ್ತಿದ್ದರೂ ಅವರಿಗೆ ಸಂತಾನವಿಲ್ಲವೆAಬ ಚಿಂತೆ ಬಹುವಾಗಿ ಬಾಧಿಸುತ್ತಿತ್ತು. ನರಸಿಂಹೋಪಾಸಕರಾಗಿದ್ದ ಆಚಾರ್ಯರು ಅದಕ್ಕಾಗಿ ಲಕ್ಷಿö್ಮÃನರಸಿಂಹನನ್ನು ಪತ್ನೀ ಸಮೇತ ಭಕ್ತಿಯಿಂದ ಸೇವಿಸಿದರು. ಅವರ ಸೇವೆಯು ಫಲಿಸಿತೆಂಬAತೆ ಅವರಿಗೆ ಕ್ಷಿಪ್ರದಲ್ಲಿ ಒಂದು ಗಂಡು ಸಂತಾನವಾಯಿತು. ಇದರಿಂದ ಸಂತುಷ್ಟರಾದ ರಾಮಾಚಾರ್ಯರು ಮಗುವಿಗೆ “ನರಸಿಂಹ” ಎಂದೇ ನಾಮಕರಣ ಮಾಡಿದರು. ಸೂರ್ಯನಂತೆ ಅಪಾರ ತೇಜಸ್ಸಿನಿಂದ ಪ್ರಕಾಶಿಸುತ್ತಿದ್ದ ನರಸಿಂಹ ತಾಯಿತಂದೆಗಳ ಅರೈಕೆಯಲ್ಲಿ ದಿನದಿನಕ್ಕೆ ಮೈತುಂಬಿ ಬೆಳಯತೊಡಗಿದ.

ನರಸಿಂಹನಿಗೆ ಉಪನಯನವಾಯಿತು. ನಂತರ ರಾಮಾಚಾರ್ಯರು ಅವನನ್ನು ಅಬ್ಬೂರಿನ ಕಣ್ವತಟದಲ್ಲಿಯೇ ವಾಸಿಸುತ್ತಿದ್ದ ಶ್ರೀಪುರುಷೋತ್ತಮತೀರ್ಥರ ಬಳಿ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದರು. 

ನರಸಿಂಹ ಓದಿನಲ್ಲಿ ಬಹು ಜಾಣ. ಅವನ ಸ್ಮರಣಶಕ್ತಿಯಂತೂ ಅದ್ಭುತವಾಗಿತ್ತು. ವೈರಾಗ್ಯದಲ್ಲಿ ಆತ ಸನಕನಂತೆ, ಬುದ್ಧಿಶಕ್ತಿಯಲ್ಲಿ ಬೃಹಸ್ಪತಿಯಂತೆ, ವಿಷ್ಣುಭಕ್ತಿಯಲ್ಲಿ ಶುಕನಂತೆ ಶೋಭಿಸುತ್ತಿದ್ದನಲ್ಲದೆ ನರಸಿಂಹ ಸೂರ್ಯಾಂಶ ಸಂಭೂತನಾಗಿದ್ದುದ್ದರಿAದ ಸ್ವಾಭಾವಿಕವಾಗಿಯೇ ಸಕಲವಿದ್ಯೆಗಳೂ ಅವನಿಗೆ ಕರಗತವಾಗಿದ್ದವು. 

“ಬೆಳೆಯುವ ಪೈರು ಮೊಳಕೆಯಲ್ಲೇ” ಎನ್ನುವಂತೆ ಬಾಲಕ ನರಸಿಂಹನ ಅಪೂರ್ವ ಪ್ರತಿಭಾ ಶಕ್ತಿಗಳನ್ನು ನೋಡಿ ಪುರುಷೋತ್ತಮತೀರ್ಥರಿಗೆ ಅತೀವ ಸಂತೋಷವಾಯಿತು. ಅವನಿಗೆ ಸನ್ಯಾಸ ದೀಕ್ಷೆಯಿತ್ತು ತಮ್ಮ ನಂತರ ವೇದಾಂತ ಸಾಮ್ರಾಜ್ಯದ ಅಧಿಪತಿಯನ್ನಾಗಿ ಮಾಡುವ ಅಪೇಕ್ಷೆ ಅವರನ್ನು ಮೂಡಿತು. ಒಮ್ಮೆ ಸ್ವಪ್ನದಲ್ಲಿ ಸಾಕ್ಷಾತ್ ಶ್ರೀಹರಿಯೇ ಬ್ರಾಹ್ಮಣರೂಪದಲ್ಲಿ ತೋರಿಕೊಂಡು ಇದನ್ನು ಅನುಮೋದಿಸಿದಾಗ ಪುರುಷೋತ್ತಮತೀರ್ಥರು ತಡಮಾಡಲಿಲ್ಲ. ನರಸಿಂಹನ ತಂದೆತಾಯಿಗಳನ್ನು ಕರೆಸಿಕೊಂಡು ಅವರ ಒಪ್ಪಿಗೆಯನ್ನು ತೆಗೆದುಕೊಂಡರು. ಒಂದು ಶುಭ ಮುಹೂರ್ತದಲ್ಲಿ ನರಸಿಂಹನಿಗೆ ಯತ್ಯಾಶ್ರಮವನ್ನಿತ್ತು. ಸೂರ್ಯನಂತೆ ತೇಜೋವಂತನಾಗಿದ್ದ ಆತನಿಗೆ “ಬ್ರಹ್ಮಣ್ಯತೀರ್ಥ” ಎಂದು ನಾಮಕರಣ ಮಾಡಿದರು. ಶ್ರೀಮಧ್ವಮುನಿಗಳಿಂದ ಪೂಜಿತಗೊಂಡು ತಮ್ಮ ಪರಂಪರೆಯಲ್ಲಿ ಬಂದಿದ್ದ ನರಸಿಂಹದೇವರನ್ನು ಅರ್ಚಿಸುವ ಭಾಗ್ಯವೂ ನೂತನ ಯತಿಗಳಿಗೆ ಲಭ್ಯವಾಯಿತು. ಮುಂದೆ ಭೂಸುರರಿಗೆ ಅತಿಪ್ರಿಯರಾಗಿ, ಬ್ರಹ್ಮಣ್ಯನಾಮಕ ಶ್ರೀ ಹರಿಯ. ಪರಮಾನುಗ್ರಹಕ್ಕೆ ಪಾತ್ರರಾದ ಬ್ರಹ್ಮಣ್ಯತೀರ್ಥರಿಗೆ ಈ ಹೆಸರು ಅನ್ವರ್ಥವೆನ್ನಿಸಿತು. ಇದಾದ ಸ್ವಲ್ಪ ದಿನಸದಲ್ಲಿಯೇ ಪುರುಷೋತ್ತಮತೀರ್ಥರು ಬ್ರಹ್ಮಣ್ಯತೀರ್ಥರಿಗೆ ತಮ್ಮ ಸಂಸ್ಥಾನವನ್ನು ಒಪ್ಪಿಸಿ ಚೈತ್ರ ಶುದ್ಧ ಪ್ರತಿಪದೆಯ ಯುಗಾದಿಯಂದು ಗುಹಾಪ್ರವೇಶ ಮಾಡಿ ಅದೃಶ್ಯರಾದರು. 

ಅವರು ಪ್ರವೇಶ ಮಾಡಿದ ಗುಹೆ “ಪುರುಷೋತ್ತಮ ತೀರ್ಥರ ಗುಹೆ” ಎಂಬುದಾಗಿ ಪ್ರಸಿದ್ಧವಾಗಿದೆ. 

ಗುರುಗಳು ಭೌತಿಕ ದೇಹದಿಂದ ಕಣ್ಮರೆಯಾದ ನಂತರ ಬ್ರಹ್ಮಣ್ಯತೀರ್ಥರು ನಿತ್ಯವೂ ತಮ್ಮ ಸಂಸ್ಥಾನದ ಪ್ರತಿಮೆಗಳನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸುತ್ತಾ ಕಣ್ವಾನದಿತೀರದಲ್ಲಿಯೇ ನೆಲೆಸಿದರು. 

ಬ್ರಹ್ಮಣ್ಯತೀರ್ಥರು ಕಣ್ವಾನದಿಯಲ್ಲಿ ತ್ರಿಕಾಲಸ್ನಾನ, ಪ್ರಣವಮಂತ್ರ ಜಪ, ಮಧ್ವಶಾಸ್ತç ಪ್ರವಚನಾದಿಗಳನ್ನು ಮಾಡುತ್ತಾ ಯತ್ಯಾಶ್ರಮ ಧರ್ಮವನ್ನು ಚಾಚೂತಪ್ಪದೆ ಪಾಲಿಸಿದರು. ಅವರ ವಾದವೈಖರಿಯೂ ಸಹ ಅದ್ಭುತವಾಗಿತ್ತು. ಶೃತಿ, ಸ್ಮೃತಿ, ಪುರಾಣಾದಿ ವಾಕ್ಯಗಳನ್ನು ಅತ್ಯಂತ ಸ್ಫುಟವಾಗಿ ಉದಾಹರಿಸುತ್ತಾ ಮಧ್ವಶಾಸ್ತçದ ಶ್ರೇಷ್ಠತೆಯನ್ನು ಎತ್ತಿಹಿಡಿಯುವುದರಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಸ್ವಾಮಿಗಳು ನಿತ್ಯ ನಡೆಸುತ್ತಿದ್ದ ಸಂಸ್ಥಾನ ಪ್ರತಿಮೆಗಳ ಪೂಜಾಕ್ರಮ ನೋಡುವವರಿಗೆ ವಿಸ್ಮಯವನ್ನುಂಟು ಮಾಡುತ್ತಿತ್ತು. ಆಯಾ ಪೂಜಾ ಪರಿಕರಗಳಲ್ಲಿ ದೇವತಾ ಸಾನಿಧ್ಯವನ್ನು ಚಿಂತಿಸುತ್ತಿದ್ದರೆ ಆಯಾ ದೇವತೆಗಳು ಅವುಗಳಲ್ಲಿ ಸನ್ನಿಹಿತರಾಗಿ ಪರಮಾತ್ಮನ ಪೂಜೆಯನ್ನು ಸುಲಭಗೊಳಿಸುವರು ಎಂಬ ಅಚಲ ವಿಶ್ವಾಸ ಅವರದು. ಹಾಗಾಗಿ ಸ್ವಾಮಿಗಳು ಕಳಶ ಮತ್ತು ಪೀಠ ಪೂಜೆಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಿದ್ದರಂತೆ. ಅವರು ಆವಾಹನೆ ಮಾಡಿದ ಮೇಲೆ ಶಂಖ, ಕಳಶಾದಿಗಳನ್ನು ಎತ್ತಲೂ ಸಹ ಅವರ ಶಿಷ್ಯರಿಗೆ ಅಸಾಧ್ಯವಾಗುತ್ತಿತ್ತಂತೆ. ಭಿಕ್ಷ ಎಂಬ ಹೆಸರನ್ನು ಸಾರ್ಥಕಪಡಿಸಿಕೊಂಡಿದ್ದ ಬ್ರಹ್ಮಣ್ಯತೀರ್ಥರು ತಮ್ಮ ಶಿಷ್ಯರು ಶ್ರೋತ್ರೀಯರ ಮನೆಗಳಿಂದ ತರುತ್ತಿದ್ದ ಪಕ್ವಾನ್ನವನ್ನು ಶಂಖೋದಕದಿAದ ಪವಿತ್ರೀಕರಿಸಿ ನರಸಿಂಹನಿಗೆ ಅರ್ಪಿಸಿದ ನಂತರ ತಮ್ಮ ಶಿಷ್ಯವೃಂದದೊಡನೆ ಭೋಜನವನ್ನು ಸ್ವೀಕರಿಸುತ್ತಿದ್ದರು. ಆಶ್ಚರ್ಯದ ಸಂಗತಿಯೆAದರೆ ಶಿಷ್ಯರು ಮಧುಕರಿ ವೃತ್ತಿಯಿಂದ ತರುತ್ತಿದ್ದ ಭಿಕ್ಷಾನ್ನದ ಮೇಲೆ ಬ್ರಹ್ಮಣ್ಯತೀರ್ಥರು ಶಂಖೋದಕವನ್ನು ಪೋಕ್ಷಿಸಿದೊಡನೆ ಅದು ಆಗಷ್ಟೇ ತಯಾರಿಸಿದ ಆಹಾರದಂತೆ ಬಿಸಿಯಾಗಿರುತ್ತಿತ್ತು. ಈ ಕ್ರಮದಲ್ಲಿ ಸನ್ಯಾಸಕುಲಕ್ಕೇ ದೀಪದಂತಿದ್ದ ಗುರುರಾಜರು ಕಠಿಣಾನುಷ್ಠಾನವನ್ನು ಕೈಗೊಂಡು ಶ್ರೀಹರಿಯ ಒಲುಮೆಯನ್ನು ಸಂಪಾದಿಸಿದರು. 

ಶ್ರೀಮಧ್ವಚಾರ್ಯರ ಆದೇಶದಂತೆ ಬ್ರಹ್ಮಣ್ಯತೀರ್ಥರು ಯತ್ಯಾಶ್ರಮ ಧರ್ಮವನ್ನು ಪರಿಪಾಲಿಸುತ್ತ ಅನೇಕ ಕ್ಷೇತ್ರಗಳಿಗೆ ಭೇಟಿಕೊಟ್ಟು ಶ್ರೀಹರಿಯ ಪಾರಮ್ಯವನ್ನು ಎತ್ತಿ ಹಿಡಿದರೆಂಬುದು ವೇದ್ಯವಾಗುತ್ತದೆ. ಶ್ರೀಮದಾಚಾರ್ಯರ ಸಿದ್ಧಾಂತವನ್ನು ದೇಶದಾದ್ಯಂತ ಅವರು ಪ್ರಚಾರ ಮಾಡಿದರು. ಅನೇಕ ರಾಜ ಮಹಾರಾಜರು ಬ್ರಹ್ಮಣ್ಯತೀರ್ಥರ ತಪಶ್ಯಕ್ತಿಯನ್ನೂ, ವಿದ್ಯಾ ವೈಭವನ್ನೂ, ವಾದವೈಖರಿಯನ್ನೂ ಕಂಡು ಬೆರಗಾಗುತ್ತಿದ್ದರಲ್ಲದೆ ಶ್ರೀಗಳವರನ್ನು ಪರಿಪರಿಯಾಗಿ ಸನ್ಮಾನಿಸಿ ತಮ್ಮ ಗೌರವವನ್ನು ಸಮರ್ಪಣೆ ಮಾಡುತ್ತಿದ್ದರು. ಬ್ರಹ್ಮಣ್ಯತೀರ್ಥರು ಹಲವಾರು ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ ಬದರೀಕ್ಷೇತ್ರಕ್ಕೆ ಬಂದು ಅಲ್ಲಿ ಕೆಲವು ಸಮಯ ವೇದವ್ಯಾಸಾತ್ಮಕ ನಾರಾಯಣನನ್ನು ಸೇವಿಸುತ್ತಾ ನೆಲೆಸಿದ್ದರು. ಆ ಸಂದರ್ಭದಲ್ಲಿ ಅವರಿಗೆ ತಮ್ಮ ಉತ್ತರಾಧಿಕಾರಿ ಯಾಗಿ ವೇದಾಂತ ಸಾಮ್ರಾಜ್ಯವನ್ನು ನಿರ್ವಹಿಸಬಲ್ಲ ಸಮರ್ಥ ಶಿಷ್ಯನನ್ನು ಪಡೆಯುವ ಹಂಬಲ ತುಂಬಿ ಬಂದಿತು. ಜ್ಞಾನಸಂತಾನವನ್ನು ದಯಪಾಲಿಸು ಎಂದು ಅವರು ಬದರೀನಾಥನನ್ನೇ ಮೊರೆಹೊಕ್ಕರು. ಏಕಾಂತ ಭಕ್ತರ ಮೊರೆಯನ್ನು ಬದರೀ ನಾರಾಯಣ ಬ್ರಹ್ಮಣ್ಯತೀರ್ಥರಿಗೆ ಭಗವಂತನ ಅನುಗ್ರಹವಾಯಿತು. ಸ್ವಯಂ ನಾರಾಯಣನೇ  “ಜ್ಞಾನಪುತ್ರನನ್ನು ಕರುಣಿಸುವೆ” ಎಂಬ ಸೂಚನೆಯನ್ನು ನೀಡಿದ. ಈ ವಿಷಯವನ್ನು ಪುರಂದರದಾಸರು ತಾವು ರಚಿಸಿರುವ “ಗುರುವ್ಯಾಸರಾಯರ ಮಹಿಮೆಗಳ ಕೇಳಿ” ಎಂಬ ಕೀರ್ತನೆಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. 

“ಅಂದು ಬ್ರಹ್ಮಣ್ಯತೀರ್ಥರಿಗೆ ಬದರಿಯಲಿ ಮುದದಿಂದಲಿ 

ನರನಾರಾಯಣರು 

ಕಂದನಾ ಕೊಡುವೆನೆಂದು ಭಿಕ್ಷೆಯ ನೀಡೆ 

ತಂದೆ ಮಧ್ವೇಶ ನಿನ್ನ ದಯವಿರಲಿ ಎಂದು||” 

ಪ್ರಹ್ಲಾದನೇ ಯತಿರೂಪದಲ್ಲಿ ಅವತರಿಸುವನೆಂಬ ವಿಷಯವನ್ನು ಅರಿತ ಬ್ರಹ್ಮಣ್ಯತೀರ್ಥರಿಗೆ ಪರಮಾನಂದವಾಯಿತು. ಜ್ಞಾನಭಿಕ್ಷೆಯನ್ನು ನೀಡುವ ಕೃಪೆ ಮಾಡಿದ ನಾರಾಯಣನಿಗೆ ಕೃತಜ್ಞತಾಪೂರ್ವಕ ಪ್ರಣಾಮಗಳನ್ನು ಅರ್ಪಿಸಿ ಬ್ರಹ್ಮಣ್ಯತೀರ್ಥರು ಉತ್ತರಭಾರತದ ಅನೇಕ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ ಕರ್ನಾಟಕ ಸಾತೇನಹಳ್ಳಿ ಎಂಬ ಗ್ರಾಮಕ್ಕೆ ಬಂದರು. ಅಲ್ಲಿನ ಭಕ್ತವೃಂದ ಬ್ರಹ್ಮಣ್ಯತೀರ್ಥರನ್ನು ಸ್ವಾಗತಿಸಿ ಪೂಜಾದಿಗಳಿಗೆ ಅಗತ್ಯ ಏರ್ಪಾಡುಗಳನ್ನು ಮಾಡಿದಲ್ಲದೆ ಅಲ್ಲಿ ಪ್ರಾಣದೇವರ ವಿಗ್ರಹವನ್ನು  ಪ್ರತಿಷ್ಠಾಪಿಸುವಂತೆ ಶ್ರೀಗಳವರನ್ನು ಭಕ್ತಿಯಿಂದ ಪ್ರಾರ್ಥಿಸಿದರು. ಇದರಿಂದ ಸಂತುಷ್ಟರಾದ ಬ್ರಹ್ಮಣ್ಯತೀರ್ಥರು ಸಾತೇನಹಳ್ಳಿಯಲ್ಲಿ ಕೆಲವು ದಿವಸಗಳ ಕಾಲ ನೆಲೆಸಿ, ಭಕ್ತಾದಿಗಳಿಗೆ ಸಂಸ್ಥಾನ ಪ್ರತಿಮೆಗಳ ದರ್ಶನ, ಪ್ರಸಾದ ಭಾಗ್ಯವನ್ನು ಕರುಣಿಸುತ್ತಾ ಪುನೀತರನ್ನಾಗಿ ಮಾಡಿದರು. ನಂತರ ಅವರ ಕೋರಿಕೆಯಂತೆ ಒಂದು ಶುಭ ಮುಹೂರ್ತದಲ್ಲಿ ಆ ಸ್ಥಳದಲ್ಲಿ ಪ್ರಾಣನಾಥನನ್ನು ಪ್ರತಿಪ್ಠಾಪಿಸಿದರು. ಬ್ರಹ್ಮಣ್ಯತೀರ್ಥರು ಪ್ರತಿಷ್ಠಿಸಿದ ಪ್ರಾಣದೇವರು ಈ ಹೊತ್ತಿಗೂ ಶ್ರೀಗಳವರ ತಪಸ್ಸಿಗೆ ಸಾಕ್ಷಿ ಎಂಬAತೆ ಭಕ್ತಾಭೀಷ್ಟಪ್ರದವಾಗಿ ನಿತ್ಯ ಪೂಜೆಗೊಳ್ಳುತ್ತಿದೆ. 

ಬ್ರಹ್ಮಣ್ಯತೀರ್ಥರು ರಾಮೇಶ್ವರದಿಂದ ಹಿಮಾಲಯದವರೆಗೂ ನೆಲೆಸಿರುವ ಹಲವಾರು ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಅಬ್ಬೂರಿಗೆ ಹಿಂದಿರುಗಿದರು. ಅಲ್ಲಿನ ಭಕ್ತವೃಂದ ಶ್ರೀಗಳವರ ಆಗಮನದಿಂದ ಸಂತೋಷಪಟ್ಟಿತು. ಗುರುಗಳ ನೇತೃತ್ವದಲ್ಲಿ ಮತ್ತೆ ಪಾಠಪ್ರವಚನಗಳು ಪ್ರಾರಂಭವಾದವು. ಬದರೀಕ್ಷೇತ್ರಕ್ಕೆ ಹೋಗಿದ್ದಾಗ ನಾರಾಯಣ ನೀಡಿದ ಜ್ಞಾನಸಂತಾನ ಭಿಕ್ಷೆಯ ನೆನಪಾಗಿ ಸ್ವಾಮಿಗಳಿಗೆ ಅಮಿತಾನಂದವಾಯಿತು. ವ್ಯಾಸರೂಪದಿಂದ ಬರುವ ಪ್ರಹ್ಲಾದನಿಗಾಗಿ ಬ್ರಹ್ಮಣ್ಯತೀರ್ಥರು ಕಾತುರದಿಂದ ಎದುರುನೋಡತೊಡಗಿದರು. 

ಈಗಿನ ಮೈಸೂರು ಜಿಲ್ಲೆಗೆ ಸೇರಿದ ಬನ್ನೂರು ಎಂಬ ಗ್ರಾಮದಲ್ಲಿ ರಾಮಾಚಾರ್ಯ ಮತ್ತು ಲಕ್ಷö್ಮಮ್ಮ ಎಂಬ ದಂಪತಿಗಳು ವಾಸಿಸುತ್ತಿದ್ದರು. ರಾಮಾಚಾರ್ಯರಿಗೆ ಲಕ್ಷöಮ್ಮನ ತವರು ಮನೆಯ ಹೆಸರು ಸೀತಮ್ಮ. ದೈವಭಕ್ತರೂ, ಸದಾಚಾರ ಸಂಪನ್ನರೂ ಆಗಿದ್ದ ಅವರು ಷಾಷ್ಠಿಕ ವಂಶೋತ್ಪನ್ನರು. ತಮ್ಮ ಕುಲಗುರುಗಳಾದ ಬ್ರಹ್ಮಣ್ಯತೀರ್ಥರಲ್ಲಿ ಅವರಿಗೆ ಅಪಾರ ಗೌರವ, ಭಕ್ತಿಗಳಿದ್ದವು. ಗ್ರಾಮೀಣ ಪರಿಸರದಲ್ಲಿ ಸಂತೃಪ್ತ ಬದುಕು ನಡೆಸುತ್ತಿದ್ದ ದಂಪತಿಗಳಿಗೆ ಭೀಮಾಂಬಿಕೆ ಎಂಬ ಮಗಳಿದ್ದರೂ ಗಂಡು ಸಂತಾನವಾಗಿರಲಿಲ್ಲ. ಅವರಿಗಿದ್ದ ಕೊರಗು ಅದೊಂದೇ. ಜ್ಞಾನಿಯೂ, ವಂಶದೀಪಕನೂ ಆದ ಪುತ್ರನನ್ನು ಕರುಣಿಸುವಂತೆ ದಂಪತಿಗಳು ಅನವರತವೂ ಹರಿವಾಯುಗಳನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದರು. ಬಹುಕಾಲದ ಮೇಲೆ ಅವರಿಗೆ ಒಂದು ರಾತ್ರಿ ಸ್ವಪ್ನದಲ್ಲಿ ಬದರೀನಾರಾಯಣ ವೇದವ್ಯಾಸದೇವರು ಕಾಣಿಸಿಕೊಂಡು “ನಿಮಗೆ ನಿಶ್ಚಯವಾಗಿಯೂ ಸತ್ಪುತ್ರನೊಬ್ಬ ಜನಿಸಲಿದ್ದಾನೆ. ಅದಕ್ಕಾಗಿ ನೀವು ಯತಿವರೇಣ್ಯರ ಕೃಪಾಬಲವನ್ನು ಗಳಿಸಿಕೊಳ್ಳಿ” ಎಂದು ಹೇಳಿ ದಂಡ ಕಮಂಡಲಗಳನ್ನು ಧರಿಸಿದ ತೇಜಸ್ವಿಗಳಾದ ಯತಿಪುಂಗವರೊಬ್ಬರನ್ನು ತೋರಿಸಿದಂತಾಯಿತು. ಇದರಿಂದ ಸಂತೋಷಗೊAಡ ರಾಮಾಚಾರ್ಯ ದಂಪತಿಗಳು ಬ್ರಹ್ಮಣ್ಯತೀರ್ಥರೇ ಇರಬೇಕೆಂದು ನಿಶ್ಚಯಿಸಿ ಆಗ ಸನಿಹದ ಅಬ್ಬೂರಿನಲ್ಲಿ ವಾಸಿಸುತ್ತಿದ್ದ ಶ್ರೀಗಳವರನ್ನು ಕಂಡು ತಮಗಾದ ಸ್ವಪ್ನನುಭವವನ್ನು ನಿವೇದಿಸಿಕೊಂಡರು. ಜ್ಞಾನಿಗಳಾದ ಬ್ರಹ್ಮಣ್ಯತೀರ್ಥರಿಗೆ ತಾವು ಬದರೀನಾಥನಲ್ಲಿ ಮಾಡಿಕೊಂಡ ಪ್ರಾರ್ಥನೆ ಫಲಿಸುತ್ತಿಸುವುದು ಗೋಚರವಾಯಿತು. ಶ್ರೀಗಳು ಪರಮಸಂತುಷ್ಟರಾಗಿ “ನಾವು ನಿಮ್ಮ ನಿರೀಕ್ಷೆಯಲ್ಲಿಯೇ ಇದ್ದೆವು. ನಿಮಗೆ ಇಬ್ಬರು ಗಂಡು ಮಕ್ಕಳಾಗುವರು. ಅದರಲ್ಲಿ ಮೊದಲ ಮಗು ಗೋಪಾಲಕೃಷ್ಣನ ಸೇವೆಗಾಗಿಯೇ ಹುಟ್ಟಲಿದೆ. ಅದನ್ನು ನಮಗೆ ಒಪ್ಪಿಸಿ. ಅದರಿಂದ ಲೋಕ ಕಲ್ಯಾಣವಾಗುವುದಲ್ಲದೆ, ನಿಮಗೂ ಮಂಗಳವಾಗುವುದು” ಎಂದು ತಿಳಿಸಿದಾಗ ಅಚಾರ್ಯ ದಂಪತಿಗಳು ಹಾಗೇ ಆಗಲೆಂದು ಒಪ್ಪಿಕೊಂಡರು. ಕ್ಷಿಪ್ರದಲ್ಲಿ ಶ್ರೀಗಳವರ ಅನುಗ್ರಹ ವಿಶೇಷದಿಂದ ದಂಪತಿಗಳ ಬದುಕಿನಲ್ಲಿ ಮಂಗಳದ ಬೆಳಕು ಮೂಡಿತು. ರಾಮಾಚಾರ್ಯರಿಗೆ ಬಂದಿದ್ದ ಅಪಮೃತ್ಯುವೇ ಮೊದಲಾದ ಕಂಟಕಗಳು ನಿವಾರಣೆಯಾದವು. ಅನತಿ ಕಾಲದಲ್ಲಿಯೇ ಲಕ್ಷö್ಮಮ್ಮನವರು ಗರ್ಭವತಿಯಾದರು. ಕ್ರಿ.ಶ. 1447ರ ಪ್ರಭಾವ ಸಂವತ್ಸರದ ವೈಶಾಖ ಶುದ್ಧ ಸಪ್ತಮಿಯಂದು ಅವರು ಗಂಡುಮಗುವಿಗೆ ಜನ್ಮವಿತ್ತರು. ಶ್ರೀಗಳವರು ಮೊದಲೇ ತಿಳಿಸಿದಂತೆ ಮಗುವನ್ನು ಭೂ ಸ್ಪರ್ಷ ಮಾಡಿಸದೆ, ಮಠದಿಂದ ಕಳುಹಿಸಿಕೊಟ್ಟ ಬಂಗಾರದ ಹರಿವಾಣದಲ್ಲಿ ಇರಿಸಿ ಶ್ರೀಗಳವರಿಗೆ ಒಪ್ಪಿಸಲಾಯಿತು. ಹೀಗೆ ಬಂಗಾರದ ಹರಿವಾಣದಲ್ಲಿ ಇರಿಸಿ, ಬ್ರಹ್ಮಣ್ಯತೀರ್ಥರಿಗೆ ಒಪ್ಪಿಸಿದ ಕೂಸೇ ಮುಂದೆ ಕರ್ನಾಟಕದ ಭಕ್ತಿ ಪರಂಪರೆಯ ಇತಿಹಾಸವನ್ನು ಬಂಗಾರದ ಅಕ್ಷರದಲ್ಲಿ ಬರೆದು, ಅಸಂಖ್ಯಾತ ಸುಜೀವಿಗಳ ಬದುಕನ್ನು ಬಂಗಾರವಾಗಿಸಿದ ಶ್ರೀವ್ಯಾಸರಾಜ ಗುರುಸಾರ್ವಭೌಮರು! 

ಬ್ರಹ್ಮಣ್ಯತೀರ್ಥರು ಭೂಸ್ಪರ್ಷವಿಲ್ಲದೆ ಜನಿಸಿದ ಮಗುವನ್ನು ತಾವೇ ಸ್ವತಃ ಪವಿತ್ರವಾದ ಕಣ್ವಾನದಿಯಲ್ಲಿ ತೊಳೆದರು. ಅವರು ಮಗುವನ್ನು ತೊಳೆದ ಶಿಲೆಯೇ ಬಿಳಿಕಲ್ಲುಮಡು ಅಥವಾ “ಶ್ವೇತಶಿಲಾಹ್ರದ” ಎಂಬ ಹೆಸರನ್ನು ಪಡೆದುಕೊಂಡಿತು. 

ಸಹ್ಲಾದನ ಸಹೋದರನಾಗಿದ್ದ ಆ ಬಾಲಕನು ಸುಜನರಿಗೆ ಆಹ್ಲಾದದಾಯಕ ನಾದ ಕಾರಣ ಅವನನ್ನು ಪ್ರಹ್ಲಾದನೆಂದು ಸಂಬೋಧಿಸುವುದೇ ಸರಿಯಾದದ್ದು ಎನ್ನುತ್ತಾರೆ. ಮುಂದೆ ಯತಿಯಾಗಲಿರುವ ಬಾಲಕನಿಗೆ ಶ್ರೀಗಳವರ ಅಪೇಕ್ಷೆಯಂತೆ “ಯಂತಿರಾಜ” ಎಂದು ನಾಮಕರಣ ಮಾಡಲಾಯಿತು. 

ಮಗುವಿನ ಲಾಲನೆ ಪೋಷಣೆಗಳನ್ನು ಬ್ರಹ್ಮಣ್ಯತೀರ್ಥರೇ ಮಾಡಿದರು. ಪ್ರತಿನಿತ್ಯ ಭಗವಂತನಿಗೆ ಅಭಿಷೇಕ ಮಾಡಿದ ಗೋಕ್ಷೀರವನ್ನು ಮಗುವಿಗೆ ಕುಡಿಸುತ್ತಿದ್ದರು. ಪುರುಷೋತ್ತಮತೀರ್ಥರ ಗುಹೆಯ ಗವಾಕ್ಷದಿಂದ ಬರುತ್ತಿದ್ದ ಸರ್ಪವೊಂದು ಹೆಡೆಯರಳಿಸಿ ಮಗುವಿಗೆ ನೆರಳು ನೀಡುತ್ತಿತ್ತು. ಮಗುವಿಗೆ ಕಾಲ ಕಾಲಕ್ಕೆ ಜರುಗಬೇಕಾದ ಚೌಲ, ಉಪನಯನಾದಿ ಸಂಸ್ಕಾರಗಳು ವಿಜೃಂಭಣೆಯಿAದ ನಡೆದವು. ಆ ಸಂದರ್ಭದಲ್ಲಿ ವಟುವಿನ ತಂದೆ ತಾಯಿಗಳು ಶ್ರೀಮಠಕ್ಕೆ ಆಗಮಿಸಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿದರು. ಮೊದಲೇ ಸುಂದರನಾಗಿದ್ದ ಯತಿರಾಜ ಉಪನಯನವಾದ ನಂತರ ಬ್ರಹ್ಮತೇಜಸ್ಸಿನಿಂದ ಕಂಗೊಳಿಸ ತೊಡಗಿದ. ಮುದ್ಧು ಸುರಿಯುವ ಅವನ ಮುಗ್ಧ ಮುಖವನ್ನು ಪರಮವಿರಕ್ತನಾದ ಬ್ರಹ್ಮಣ್ಯತೀರ್ಥರೇ ಮಂತ್ರಮುಗ್ಧರಾಗಿ ನೋಡುತ್ತಾ ಕುಳಿತುಬಿಡುತ್ತಿದ್ದರು. ಅವನ ಬಾಲ ಲೀಲೆಗಳು ಶ್ರೀಗಳವರಿಗೆ ಬಾಲಕೃಷ್ಣನ ನೆನಪನ್ನು ತಂದುಕೊಡುತ್ತಿದ್ದವು. ಅವನನನ್ನು ಎತ್ತಿ ಆಡಿಸುವಾಗ ನಂದ ಗೋಕುಲದಲ್ಲಿ ಕೃಷ್ಣನನ್ನು ಸಂತೈಸಿದ ಯಶೋಧೆಯಂತೆ ಧನ್ಯತಾಭಾವವನ್ನು ಬ್ರಹ್ಮಣ್ಯ ಗುರುವರ್ಯರು ಅನುಭವಿಸುತ್ತಿದ್ದರು. 

ಬ್ರಹ್ಮಣ್ಯತೀರ್ಥರು ಬಾಲಕನಿಗೆ ಏಳು ವರ್ಷ ತುಂಬಿದಾಗ ಬ್ರಹ್ಮಣ್ಯತೀರ್ಥರು ಬಾಲಕನಿಗೆ ಏಳು ವರ್ಷ ತುಂಬಿದಾಗ ಒಂದು ಶುಭ ಮುಹೂರ್ತದಲ್ಲಿ ಸನ್ಯಾಸಾಶ್ರಮವನ್ನು ನೀಡಿದರು. ಮುಂದೆ ಈ ಬಾಲ ಸನ್ಯಾಸಿಯು ಸಚ್ಛಾಸ್ತçಕ್ಕೆ ವಿಸ್ತಾರವಾದ ವ್ಯಾಖ್ಯಾನವನ್ನು ಮಾಡುತ್ತಾನೆಂಬುದನ್ನು ಸೂಚಿಸಲು “ವ್ಯಾಸತೀರ್ಥ” ಎಂಬ ಅನ್ವರ್ಥ ನಾಮಾಂಕಿತವನ್ನಿತ್ತರು. 

ಸೋಮನಾಥ ಕವಿಯು ತಾನು ಬರದಿರುವ ‘ಶ್ರೀ ವ್ಯಾಸಯೋಗಿಚರಿತೆ’ ಯಲ್ಲಿ ಬ್ರಹ್ಮಣ್ಯತೀರ್ಥರ ಸೂಚನೆಯಂತೆ ತಂದೆತಾಯಿಗಳೇ ತಮ್ಮ ಮಗನಿಗೆ “ಯತಿರಾಜ” ಎಂಬ ನಾಮಕರಣ ಮಾಡಿ, ಏಳನೆಯ ವಯಸ್ಸಿಗೆ ಉಪನಯನ ಮಾಡಿದರೆಂತಲೂ, ನಂತರ ಅವನ ಹದಿನಾರನೆಯ ವಯಸ್ಸಿನವರೆಗೂ ಅವನ ಲಾಲನೆ ಪೋಷಣೆಗಳನ್ನು ತಾವೇ ಮಾಡಿ ಸಾಹಿತ್ಯ, ವ್ಯಾಕರಣ, ಛಂದಸ್ಸು ಮುಂತಾದವುಗಳನ್ನು ಕಲಿಸಿದರೆಂತಲೂ ಹಾಗೂ ಯತಿರಾಜನಿಗೆ ಹದಿನಾರು ವರ್ಷ ತುಂಬಿದಾಗ ಅವನನ್ನು ಶ್ರೀಗಳವರ ಕೋರಿಕೆಯಂತೆ ಬ್ರಹ್ಮಣ್ಯತೀರ್ಥರಿಗೆ ಒಪ್ಪಿಸಿದರೆಮತಲೂ ಉಲ್ಲೇಖವಿದೆ. ಹದಿನಾರು ವರ್ಷದ ಯತಿರಾಜ ಮೊದಲು ಸನ್ಯಾಸ ಸ್ವೀಕರಿಸಲು ನಿರಾಕರಿಸಿದ. ಆದರೆ ಸ್ವಲ್ಪ ಸಮಯದಲ್ಲಿಯೇ ಅವನಿಗೆ ಒಂದು ವಿಚಿತ್ರ ಸ್ವಪ್ನವಾಗಿ ಗುರುಗಳಿಂದ ಸನ್ಯಾಸವನ್ನು ಸ್ವೀಕರಿಸಲು ನಿರ್ದೇಶನ ದೊರಕಿತು. ಅದರಂತೆ ಯತಿರಾಜ ಬ್ರಹ್ಮಣ್ಯತೀರ್ಥರಿಂದ ಯತ್ಯಾಶ್ರಮವನ್ನು ಸ್ವೀಕರಿಸಿ “ವ್ಯಾಸತೀರ್ಥ” ನಾದ ಎಂದು ಸೋಮನಾಥ ಕವಿ ಹೇಳಿದ್ದಾನೆ. 

ಬ್ರಹ್ಮಣ್ಯತೀರ್ಥರೇ ವ್ಯಾಸತೀರ್ಥ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡರು. ವ್ಯಾಸತೀರ್ಥರನ್ನು ಮುಳಬಾಗಿಲಿನಲ್ಲಿದ್ದ ತಮ್ಮ ಪೂರ್ವಾಶ್ರಮದ ಬಂಧುಗಳೂ, ಆದ ಶ್ರೀಪಾದರಾಜರಲ್ಲಿಗೆ ಕಳುಹಿಸಿಕೊಟ್ಟರು. 

ಬ್ರಹ್ಮಣ್ಯತೀರ್ಥರ ಪೂರ್ವಾಶ್ರಮದ ತಾಯಿಯ ತಂಗಿಯ ಮಗ ವಿಜಯೀಂದ್ರತೀರ್ಥರ ಗುರುಗಳಾಗಿದ್ದ ಸುರೇಂದ್ರತೀರ್ಥರೂ ಸಹ ಬ್ರಹ್ಮಣ್ಯತೀರ್ಥರ ತಾಯಿಯ ಸೋದರಿಯ ಪುತ್ರರೆಂಬ ಹೇಳಿಕೆಯಿದೆ. 

ವ್ಯಾಸ ದಾಸ ಸಾಹಿತ್ಯಗಳಲ್ಲಿ ಪ್ರಸಿದ್ಧರಾದ ಶ್ರೀಪಾದ ರಾಜರು ಶ್ರೀಮನ್ಮಧ್ವಾಚಾರ್ಯರ ಪ್ರಥಮ ಶಿಷ್ಯ ಶ್ರೀಪದ್ಮನಾಭತೀರ್ಥರ ಪರಂಪರೆಯಲ್ಲಿ ಬಂದ ಶ್ರೀರಂಗದ ಶ್ರೀಸ್ವರ್ಣವರ್ಣತೀರ್ಥರ ಕರಕಮಲ ಸಂಜಾತರು. ಶ್ರೀಪಾದರಾಜರು ಶ್ರೀ ವಿಬುದೇಂದ್ರತೀರ್ಥರಲ್ಲಿ ಶಾಸ್ತಾçಧ್ಯಯನವನ್ನು ಕೈಗೊಂಡು ಸಕಲ ವಿದ್ಯಾ ಪಾರಂಗತರಾಗಿದ್ದರು. ಶ್ರೀಪಾದರಾಜರ ಆಶ್ರಮ ನಾಮಧೇಯ ಶ್ರೀಲಕ್ಷಿö್ಮÃನಾರಾಯಣತೀರ್ಥ ಎಂಬುದಾಗಿತ್ತು. ಆದರೆ ಅವರನ್ನು “ಲಕ್ಷಿö್ಮÃನಾರಾಯಣ ಮುನಿಗಳೆಂದು ಕರೆಯುವರು ತುಂಬಾ ಕಡಿಮೆ. 

ಶ್ರೀಲಕ್ಷಿö್ಮÃನಾರಾಯಣ ಮುನಿಗಳು ತಮ್ಮ ಗುರುಗಳಾದ ಶ್ರೀ ವಿಬುದೇಂದ್ರರ ಮೆಚ್ಚುಗೆಗೆ ಪಾತ್ರರಾಗಿ ಅವರಿಂದಲೇ “ಶ್ರೀಪಾದರಾಜ”  ಎಂಬ ಪ್ರಶಸ್ತಿಯನ್ನು ಪಡೆದರೆಂದು ತಿಳಿದುಬರುತ್ತದೆ. ಶ್ರೀಪಾದರಾಜರು ಹೆಸರಿಗೆ ತಕ್ಕ ಹಾಗೆ ಶ್ರೀಪಾದರ ಸಮೂಹಕ್ಕೆ ರಾಜರಂತೆ ಶೋಭಿಸುತ್ತಾ ಆ ಹೆಸರಿನಿಂದಲೇ ಆಸ್ತಿಕವಲಯದಲ್ಲಿ ಹೆಚ್ಚು ಪ್ರಸಿದ್ಧರಾದರು. 

ಸಂಸ್ಕೃತ ಗ್ರಂಥಗಳನ್ನು ಬರೆದಿದ್ದ ಶ್ರೀಪಾದರಾಜರು ಕನ್ನಡದಲ್ಲಿಯೂ ಸಹ “ರಂಗವಿಠಲ” ಎಂಬ ಅಂಕಿತದಿAದ ನೂರಾರು ಕೀರ್ತನೆ, ಉಗಾಭೋಗಗಳಲ್ಲದೆ ಕನ್ನಡ ವಾಯುಸ್ತುತಿಯೆಂದು ಹೆಸರಾದ “ಮಧ್ವನಾಮ” ದಂತಹ ದೀರ್ಘಕೃತಿಗಳನ್ನು ಸಹ ರಚಿಸಿದ್ದರು. 

ದೇವರನಾಮಗಳನ್ನು ತಾವೇ ಸ್ವತಃ ರಚಿಸಿ ಅವುಗಳನ್ನು ಪೂಜಾಕಾಲದಲ್ಲಿ ಪಠಿಸುವ ಮೂಲಕ ಶ್ರೀಪಾದರಾಜರು ಭಗವದಾರಾಧನೆಯನ್ನು ಜನ-ಮನದ ಹತ್ತಿರಕ್ಕೆ ತಂದಿದ್ದರು. ಹರಿದಾಸ ಪದ್ಧತಿಗೆ ಭದ್ರ ಬುನಾದಿಯನ್ನು ಹಾಕಿದ್ದ ಆ ಮಹಾನುಭಾವರು ಭೂವೈಕುಂಟವೆನ್ನಿಸಿದ ತಿರುಪತಿಗೆ ಮೂಡಲ ಬಾಗಿಲಾದ ಮುಳಬಾಗಿಲಿನಲ್ಲಿ ಗುರುಕುಲವೊಂದನ್ನು ಸ್ಥಾಪಿಸಿ ನೂರಾರು ವಿದ್ಯಾಕಾಂಕ್ಷಿಗಳಿಗೆ ವಿದ್ಯಾದಾನ ಮಾಡುತ್ತಿದ್ದರು. ಚಂದ್ರಗಿರಿ ಅರಸನಾದ ಸಾಳ್ವ ನರಸಿಂಹನ ರಾಜಗುರುಗಳಾಗಿ ಮಾರ್ಗದರ್ಶನ ನೀಡುತ್ತಿದ್ದರಲ್ಲದೇ, ಅವನಿಗೆ ಬಂದೊದಗಿದ್ದ ಬ್ರಹ್ಮಹತ್ಯಾ  ದೋಷ ನಿವಾರಣೆಯನ್ನು ಅಭಿಮಂತ್ರಿಸಿದ ಶಂಖೋದಕದಿAದ ಮಾಡಿ ಅನುಗ್ರಹಿಸಿದ್ದರು. ದಕ್ಷಿಣಗಂಗೆಯೆAದು ಪ್ರಸಿದ್ಧವಾದ ನರಸಿಂಹತೀಥದ ದಂಡೆಯ ಮೇಲಿರುವ ಶ್ರೀಅಕ್ಷೆÆÃಭ್ಯತೀರ್ಥ ಕರಾರ್ಚಿತ ಗೋಪೀನಾಥದೇವರನ್ನು ಆರಾಧಿಸುತ್ತಾ ಶ್ರೀಪಾದರಾಜರು ಭಗವದಪರೋಕ್ಷವನ್ನು ಪಡೆದುಕೊಂಡಿದ್ದರು. “ವರ ಧ್ರುವನ ಅವತಾರವೇ ಶ್ರೀಪಾದರಾಜರು, ಶ್ರೀರಂಗನ ಉಪಾಸಕರು” ಎಂದು ಜ್ಞಾನಿವರೇಣ್ಯರಾದ ಗೋಪಾಲದಾಸರು ಶ್ರೀಪಾದರಾಜರನ್ನು ಧ್ರುವಾಂಶ ಸಂಭೂತರೆAದು ಸ್ಪಷ್ಟವಾಗಿ ಸಾರಿದ್ದಾರೆ. 

ಇಂತಹ ಯತಿಸಾರ್ವಭೌಮರಾದ ಶ್ರೀಪಾದರಾಜರು ಸ್ಥಾಪಿಸಿದ್ದ ಮುಳಬಾಗಿಲಿನ ವಿದ್ಯಾಪೀಠಕ್ಕೆ ಬಾಲಯತಿಗಳಾದ ವ್ಯಾಸತೀರ್ಥರು ವಿದ್ಯಾರ್ಜನೆಗಾಗಿ ಬಂದರು. ಸೂರ್ಯನಂತೆ ಕಂಗೊಳಿಸುತ್ತಿದ್ದ ಅವರನ್ನು ನೋಡಿ ಶ್ರೀಪಾದರಾಜರಿಗೆ ತುಂಬಾ ಸಂತೋಷವಾಯಿತು. ತೀಕ್ಷ÷್ಣಮತಿಗಳೂ, ಪ್ರತಿಭಾ ಸಂಪನ್ನರೂ ಆಗಿದ್ದ ವ್ಯಾಸತೀರ್ಥರನ್ನು ತುಂಬು ಹೃದಯದಿಂದ ತಮ್ಮ ವಿದ್ಯಾಶಿಷ್ಯರಾಗಿ ಸ್ವೀಕರಿಸಿ ಅವರಿಗೆ ತಾವು ಕಲಿತಿದ್ದ ಸಕಲ ವಿದ್ಯೆಗಳನ್ನೂ ಧಾರೆಯೆರೆದರು. ವ್ಯಾಸರಾಜರು ಶ್ರೀಪಾದರಾಜರಲ್ಲಿ ಹನ್ನೆರಡು ವರ್ಷಗಳ ಕಾಲ ನೆಲೆಸಿ ಅವರಿಂದ ಸಮಸ್ತ ಶಾಸ್ತçಗಳನ್ನೂ ಅಭ್ಯಾಸ ಮಾಡಿ ಅಪಾರ ನೈಪುಣ್ಯತೆಯನ್ನು ಸಂಪಾದಿಸಿಕೊAಡರು. ಶ್ರೀಪಾದರಾಜರ ಗುರುಕುಲದಲ್ಲಿದ್ದಾಗಲೇ ವ್ಯಾಸರಾಜರಿಗೆ ಹಾವಿನ ರೂಪದಿಂದ ಪದ್ಮನಾಭ ತೀರ್ಥರು ಅನುಗ್ರಹಿಸಿದರು. ಗುರುಗಳಿಂದ ಪ್ರೇರೇಪಿತರಾಗಿ ಚಂದ್ರಿಕ, ತರ್ಕ ತಾಂಡವ ಮತ್ತು ನ್ಯಾಯಾಮೃತ ಎಂಬ ವ್ಯಾಸತ್ರಯವೆಂದು ಖ್ಯಾತವಾದ ಗ್ರಂಥಗಳನ್ನು ರಚಿಸಿ ಲೋಕೋಪಕಾರ ಮಾಡಿದರು. ತಮ್ಮ ಆಶ್ರಮಗುರುಗಳಾದ ಬ್ರಹ್ಮಣ್ಯತೀರ್ಥರೊಂದಿಗೆ ಮತ್ತು ವಿದ್ಯಾಗುರುಗಳಾದ ಶ್ರೀಪಾದರಾಜರೊಂದಿಗೆ ಪಂಢರಾಪುರಕ್ಕೆ ಹೋಗುವ ಅವಕಾಶವೂ ಅವರಿಗೆ ಲಭ್ಯವಾಯಿತು. ಅಲ್ಲಿ ಶ್ರೀಪಾದರಾಜರಿಗೆ ಭೀಮಾನದಿಯ ದಂಡೆಯಲ್ಲಿ ದೈವಪ್ರೇರಣೆಯಂತೆ ರಂಗವಿಠಲನ   ಸುಂದರ ವಿಗ್ರಹ ಪ್ರಾಪ್ತವಾಗಿತ್ತು. ಅದರೊಂದಿಗಿದ್ದ ಮತ್ತೊಂದು ಸಂಪುಟವನ್ನು ಶ್ರೀಗಳವರಿಂದ ತೆಗೆಯಲಾಗಿರಲಿಲ್ಲ. ಅವರು ಆ ಸಂಪುಟಕ್ಕೆ ಹಾಗೆಯೇ ಪ್ರತಿನಿತ್ಯವೂ ಪೂಜೆ ಸಲ್ಲಿಸುತ್ತಿದರು. ಮುಂದೆ ಒಂದು ಸಂದರ್ಭದಲ್ಲಿ ವ್ಯಾಸರಾಜರು ಒಂದು ಸಂಪುಟದಿAದ ರಂಗವಿಠಲನನ್ನು ತೆಗೆದು ಮಂಟಪದಲ್ಲಿಟ್ಟರಲ್ಲದೆ ತೆರೆಯ ಲಾರದ ಮತ್ತೊಂದು ಸಂಪುಟವನ್ನು ಸಹ ತೆರೆದುಬೆಟ್ಟರು. ಆಗ ಏನಾಶ್ಚರ್ಯ! ಸಂಪುಟದ ಒಳಗೆ ಅತ್ಯಂತ ಮನೋಹರವಾದ ರುಕ್ಮಿಣೀ ಸತ್ಯಭಾಮಾ ಸಮೇತನಾದ ಶ್ರೀವೇಣುಗೋಪಾಲನ ವಿಗ್ರಹಗಳಿದ್ದವು. ಸನ್ನಿಧಾನ ವಿಶೇಷದಿಂದ ಕಂಗೊಳಿಸುತ್ತಿದ್ದ ಆ ಸುಂದರ ವಿಗ್ರಹಗಳನ್ನು ನೋಡಿ ವ್ಯಾಸರಾಜರಿಗೆ ಸಂತೋಷ ಮೇರೆ ಮೀರಿತು. ಅವರು ಭಕ್ತö್ಯದ್ರೇಕದಿಂದ ಕೃಷ್ಣನನ್ನು ಸ್ತುತಿಸತೊಡಗಿದರು. ಅವರ ಸ್ತೋತ್ರಕ್ಕೆ ಓಗೊಡುವವನಂತೆ ಕೃಷ್ಣನೂ ಸಹ ತನ್ನ ಭಾಮೆಯರೊಡನೆ ಕುಣಿಯತೊಡಗಿದ. ವ್ಯಾಸರಾಜರು ಭಾವಾತಿರೇಕದಿಂದ ಅಲ್ಲಿಯೆ ಇದ್ದ ಎರಡು ಸಾಲಿಗ್ರಾಮಗಳನ್ನು ತೆಗೆದುಕೊಂಡು ಅವುಗಳನ್ನು ತಾಳದಂತೆ ತಟ್ಟುತ್ತಾ ತಾವೂ ಕುಣಿಯ ತೊಡಗಿದರು. ಹೀಗೆ ಎಷ್ಟೋ ಹೊತ್ತು ಕಳೆಯಿತು. ವ್ಯಾಸರಾಜರ ಭಕ್ತಿಯ ರಭಸಕ್ಕೆ ಆ ಸಾಲಿಗ್ರಾಮಗಳು ಒಡೆದು ಎರಡು ಹೋಳಾದವು. ಈ ವಾರ್ತೆಯನ್ನು ಕೇಳಿ ಓಡಿ ಬಂದ ಶ್ರೀಪಾದರಾಜರೂ ಸಹ ಆ ದೃಶ್ಯವನ್ನು ನೋಡಿದರು. ಅವರು ನೋಡುತ್ತಿದ್ದಂತೆ. ಕುಣಿಯುತ್ತಿದ್ದ ವೇಣುಗೋಪಾಲ ಬಲಗಾಲ ಮೇಲೆ ಎಡಗಾಲು ಹಾಕಿ ಹಾಗೆಯೇ ನಿಂತುಬಿಟ್ಟ ಶ್ರೀಪಾದರಾಜರಿಗೆ ತಮ್ಮ ಶಿಷ್ಯರ ಯೋಗ್ಯತೆಯನ್ನೂ, ಅವರ ಮೇಲೆ ಮುರಳೀಧರ ಮಾಡಿರುವ ಮಹದನುಗ್ರಹವನ್ನೂ ಕಂಡು ತುಂಬಾ ಸಂತೋಷವಾಯಿತು. ಶ್ರೀಪಾದರಾಜರು ವ್ಯಾಸರಾಜರನ್ನು ಮನವುಬ್ಬಿ ಶ್ಲಾಘಿಸಿದರಲ್ಲದೆ ಅವರು ತಾಳವಾಗಿ ತಟ್ಟುತ್ತಿದ್ದ ಸಾಲಿಗ್ರಾಮದ ಹೋಳುಗಳನ್ನು ಮತ್ತು ರುಕ್ಮಿಣೀ ಸತ್ಯಭಾಮಾ ಸಮೇತನಾದ ವೇಣುಗೋಪಾಲನ ಸುಂದರ ವಿಗ್ರಹಗಳನ್ನು ಪೂಜೆಗಾಗಿ ಶಿಷ್ಯರಿಗೇ ನೀಡಿ ಪರಮಾನುಗ್ರಹ ಮಾಡಿದರು. ಈ ಪ್ರಸಂಗದ ಸಂಕೇತವಾಗಿ ಈಗಲೂ ವ್ಯಾಸರಾಜ ಮಠದಲ್ಲಿ ಅಪರೂಪದ ನೃತ್ಯಭಂಗಿಯಲ್ಲಿರುವ ಗೋಪಾಲಕೃಷ್ಣನ ಆ ಸುಂದರ ವಿಗ್ರಹಗಳನ್ನು ನೋಡಬಹುದು. ಕೃಷ್ಣನನ್ನು ತಾವು ತಾಳವಾಗಿ ತಟ್ಟಿದ ಸಾಲಿಗ್ರಾಮಗಳ ಎರಡು ಹೋಳುಗಳನ್ನು ವ್ಯಾಸರಾಜರು ಮುಂದೆ ಒಮ್ಮೆ ಬಳ್ಳಾರಿ ಜಿಲ್ಲೆಯ ಹೊಸೂರಿಗೆ ಸಂಚಾರತ್ವೇನ ಬಂದಿದ್ದಾಗ ಕ್ಷೇತ್ರ ದೇವತೆಯಾದ ಹೊಸೂರಮ್ಮನ ಕೋರಿಕೆಯಂತೆ ಅವುಗಳನ್ನು ಆಕೆಗೆ ಅರ್ಪಿಸಿದರು. ದೇವಿಯ ಕಣ್ಣುಗುಡ್ಡೆಗಳಾಗಿ ಆ ಸಾಲಿಗ್ರಾಮಗಳು ಈ ಹೊತ್ತಿಗೂ ವ್ಯಾಸರಾಜರ ಶ್ರೀಶಾನುಗ್ರಹವನ್ನು ಸಾರುತ್ತಾ ಕಂಗೊಳಿಸುತ್ತಿದೆ. 

ಇದಾದ ನಂತರ ಶ್ರೀವ್ಯಾಸರಾಜರು ವಿದ್ಯಾಗುರುಗಳ ಅಪ್ಪಣೆಯನ್ನು ಪಡೆದು ಅಬ್ಬೂರಿಗೆ ಹಿಂದಿರುಗಿದರು. ಅಲ್ಲಿ ಸ್ವಲ್ಪ ದಿವಸಗಳ ಕಾಲ ತಮ್ಮ ಗುರುಗಳಾದ ಬ್ರಹ್ಮಣ್ಯತೀರ್ಥರ ಅವರ ಪರಮಾನುಗ್ರಹಕ್ಕೆ ಪಾತ್ರರಾದರು. ನಂತರ ಬ್ರಹ್ಮಣ್ಯ ಗುರುವರ್ಯರ ಅಪ್ಪಣೆಯಂತೆ ದೇಶ ಸಂಚಾರ ಕೈಗೊಂಡು ಅಸಂಖ್ಯಾತ ದುರ್ವಾದಿಗಳನ್ನು ವಾದದಲ್ಲಿ ಜಯಿಸಿ ದ್ವೆöÊತಧ್ವಜವನ್ನು ಮುಗಿಲೆತ್ತರಕ್ಕೆ ಎತ್ತಿಹಿಡಿದರು. ಭೂವೈಕುಂಠವೆನ್ನಿಸಿದ ತಿರುಪತಿಯಲ್ಲಿ ಹನ್ನೆರಡು ವರ್ಷಗಳ ಕಾಲ ನೆಲೆಸಿ ಶ್ರೀನಿವಾಸನನ್ನು ತಾವೇ ಸ್ವತಃ ಪೂಜಿಸುವ ಅಪೂರ್ವ ಅವಕಾಶ ಅವರಿಗೆ ಲಭ್ಯವಾಯಿತು. ಆಗ ಅವರು ತಿರುಪತಿ ಬೆಟ್ಟವನ್ನು ಒಂದು ಪವಿತ್ರ ಸಾಲಿಗ್ರಾಮ ಶಿಲೆಯೆಂದು ಭಾವಿಸಿ ಅದರ ಮೇಲೆ ಪಾದಸ್ಪರ್ಷ ಮಾಡದೆ ಮೊಣಕಾಲೂರಿಕೊಂಡು ಹತ್ತಿದರಂತೆ. ಗುರುಗಳ ಪರಮಾನುಗ್ರಹದಿಂದ ವಿಜಯನಗರದ ರಾಜಗುರುಗಳಾಗುವ ಮಹಾಯೋಗ ಅವರಿಗೆ ಪ್ರಾಪ್ತವಾಯಿತು. ಅವರ ಮುಖಂಡತ್ವದಲ್ಲಿ ವಾದಿರಾಜರು, ವಿಜಯೀಂದ್ರರು, ಶ್ರೀನಿವಾಸತೀರ್ಥರಂತಹ ಯತಿಶ್ರೇಷ್ಠರು ತಯಾರಾದರು. ಪುರಂದರ, ಕನಕರಂತಹ ದಾಸವರೇಣ್ಯರು ಹರಿನಾಮಸುಧೆಯನ್ನು ಮನೆಮನೆಗೂ ಪರಿಣಾಮಕಾರಿಯಾಗಿ ಮುಟ್ಟಿಸಿ ನೂರಾರು ಸುಜೀವಿಗಳ ಮನಃಪರಿವರ್ತನೆಗೆ ಕಾರಣರಾದರು. ತಾವೇ ಸ್ವತಃ “ಸಿರಿಕೃಷ್ಣ” ಎಂಬ ಅಂಕಿತದಲ್ಲಿ ನೂರಾರು ಕನ್ನಡ ಕೃತಿಗಳನ್ನು ನಿರ್ಮಾಣ ಮಾಡಿದರು. ಅವರಿಂದಾಗಿ ವ್ಯಾಸದಾಸ ಸಾಹಿತ್ಯಗಳ ವಾಹಿನಿ ಸಮೃದ್ಧಗೊಂಡು ಭೋರ್ಗೆರೆಯಿತು. ವ್ಯಾಸರಾಜರು ಏಳನೂರು ಪ್ರಾಣದೇವರ ಮೂರ್ತಿಗಳನ್ನು ನಾಡಿನಾದ್ಯಮತ ಪ್ರತಿಷ್ಠಾಪಿಸಿರಲ್ಲದೆ ವಿಜಯನಗರದರಸು ಕೃಷ್ಣದೇವರಾಯನಿಗೆ ಬಂದೊದಗಿದ್ದ ಕುಹುಯೋಗದ ಮಹಾವಿಪತ್ತನ್ನು ನಿವಾರಿಸಿ ರಾಜನ ಅಪೇಕ್ಷೆಯಂತೆ ಸಿಂಹಾಸನಾರೂಢರಾಗಿ ಸಾಮ್ರಾಜ್ಯವನ್ನು ಪರಿಪಾಲಿಸಿದರು. ಸಾಮ್ರಾಟನಾದ ಕೃಷ್ಣದೇವರಾಯನಂತೂ ತನಗೆ ಹಾಗೂ ರಾಜ್ಯಕ್ಕೆ ಬಂದಿದ್ದ ವಿಪತ್ತನ್ನು ಪರಿಹರಿಸಿ ರಕ್ಷಿಸಿದ ವ್ಯಾಸರಾಜರನ್ನು ಬಹುಪರಿಯಾಗಿ ಸನ್ಮಾನಿಸಿ ಅವರಿಗೆ ರತ್ನಾಭಿಷೇಕವನ್ನೇ ಮಾಡಿದನು. ಇವೆಲ್ಲವನ್ನೂ ವ್ಯಾಸರಾಜರು ತಮ್ಮ ವಿದ್ಯಾಗುರುಗಳಾದ ಶ್ರೀಪಾದರಾಜರ ಮತ್ತು ಆಶ್ರಮ ಗುರುಗಳಾದ ಬ್ರಹ್ಮಣ್ಯತೀರ್ಥರ ಅಂತರ್ಯಾಮಿಗೆ ಸಮರ್ಪಿಸಿ ಜಗದ್ವಂದ್ಯರಾಗಿ ಮೆರೆದರು. 

ಬಹುಮುಖ ಪ್ರತಿಭೆಯುಳ್ಳ ವ್ಯಾಸರಾಜರನ್ನು ಜಗತ್ತಿಗೆ ಅರ್ಪಿಸಿದ ಬ್ರಹ್ಮಣ್ಯತೀರ್ಥರ ತಪಶ್ಯಕ್ತಿ ಅತ್ಯದ್ಭುತವಾದದ್ದು. ಇದನ್ನು ಬಿಂಬಿಸುವ ಅನೇಕ ಮಹಿಮಾನ್ವಿತ ಪ್ರಸಂಗಗಳು ಅವರ ಜೀವಿತಕಾಲದಲ್ಲಿ ನಡೆದವು. ಅವುಗಳಲ್ಲಿ ಚಿಕ್ಕಗಮಗವಾಡಿವಂಶದ ರಾಜಕುಮಾರನಾಗಿದ್ದ ಸಾರಂಗಧರನ ವೃತ್ತಾಂತ ಸ್ವಾರಸ್ಯಪೂರ್ಣವಾಗಿದೆ. 

ಚೆನ್ನಪಟ್ಟಣದ ಸುತ್ತಮುತ್ತಲ ಪ್ರಾಂತವನ್ನು ಆಗ ಚಿಕ್ಕಗಂಗನವಾಡಿವAಶದ ತಿಮ್ಮರಸು ಎಂಬ ರಾಜನು ಪಾಲಿಸುತ್ತಿದ್ದನು ಅವನಿಗೆ ಹಿರಿಯ ರಾಣಿಯಲ್ಲಿ ಸಾರಂಗಧರ ಎಂಬ ಪುತ್ರನೊಬ್ಬ ಜನಿಸಿದ್ದನು. ದಿನ ಕಳೆದಂತೆಲ್ಲಾ ದೃಢಾಂಗನಾಗಿ ರೂಪುಗೊಂಡ ಸಾರಂಗಧರ ವೀರೋಚಿತವಾದ ವಿದ್ಯೆಗಳಲ್ಲಿಯೂ ಪಾರಂಗತನಾದನು. ಧರ್ಮಿಷ್ಟನೂ, ಪ್ರಜಾನುರಾಗಿಯೂ ಆಗಿದ್ದ ರಾಜಕುಮಾರನನ್ನು ಕಂಡು ಸಂತೋಷಭರಿತನಾದ ತಿಮ್ಮರಸು ಅವನಿಗೆ ಯುವರಾಜನ ಪಟ್ಟವನ್ನು ಸಹ ಕಟ್ಟಿದ್ದನು. ಅ ಹೊತ್ತಿಗೆ ಹಿರಿಯರಾಣಿಯು ಮೃತಳಾಗಿದ್ದ ಕಾರಣ ರಾಜನು ಕಿರಿಯ ವಯಸ್ಸಿನ ಮತ್ತೊಬ್ಬ ರಾಜಕುಮಾರಿಯನ್ನು ಮದುವೆಯಾದನು. ತಾರುಣ್ಯದ ಹೊಸ್ತಿಲಲ್ಲಿದ್ದ ಆಕೆಗೆ ವೃದ್ಧನಾದ ತಿಮ್ಮರಸನಿಂದ ದೈಹಿಕ ತೃಪ್ತಿ ಸಿಕ್ಕಲಿಲ್ಲ. ಕಾಮಾಂಧಳಾದ ಆಕೆ ಯುವರಾಜನನ್ನೇ ಮೋಹಿಸತೊಡಗಿದಳು. ಮಾತೃಸಮಾನಳಾದ ಆಕೆಯ ವರ್ತನೆ ಸಾರಂಗಧರನಿಗೆ ಸರಿ ಕಾಣಲಿಲ್ಲ. ತನ್ನ ಇಚ್ಛೆಯನ್ನು ಪೂರೈಸುವಂತೆ ಆಕೆ ಒತ್ತಾಯಿಸಿದಾಗ ಸಾರಂಗಧರನು ಅದನ್ನು ನಿರಾಕರಿಸಿದನಲ್ಲದೆ ‘ತಾಯಿಯ ಸ್ಥಾನದಲ್ಲಿರುವ ತಾವು ರೌರವ ನರಕಾದಿಗಳಿಗೆ ಕಾರಣವಾಗುವ ಇಂತಹ ಹೇಯ ವರ್ತನೆಯನ್ನು ಮಾಡಬಾರದು’ ಎಂದು ಆಕೆಗೆ ತಿಳಿಹೇಳಿದನು. ಕಾಮಬಾಧೆಯಿಂದ ಕುರುಡಳಾಗಿದ್ದ ಕಿರಿಯರಾಣಿಗೆ ಯುವರಾಜನ ಉಪದೇಶ ಕೋಪವನ್ನೇ ತರಿಸಿತು. ಆಕೆ ತನ್ನನ್ನು ಸಾರಂಗಧರ ಬಲಾತ್ಕರಿಸಿದನೆಂದು ರಾಜನಿಗೆ ಚಾಡಿ ಹೇಳಿದಳು. ಕಿರಿಯರಾಣಿಯ ಮೋಹಪಾಶದಲ್ಲಿ ಸಿಲುಕಿದ್ದ ತಿಮ್ಮರಸ ಆಕೆಯ ಆರೋಪವನ್ನು ನಿಜವೆಂದೇ ನಂಬಿದನು. ತನ್ನ ತಾಯಿಯ ಸಮಾನಳಾದ ಕಿರಿಯರಾಣಿಯನ್ನು ಮೋಹಿಸಿದ ಸಾರಂಗಧರನ ಮೇಲೆ ಅವನಿಗೆ ಅಸಾಧ್ಯ ಕೋಪವುಂಟಾಯಿತು. ಮಗನ ಕೈಕಾಲುಗಳನ್ನು ಕತ್ತರಿಸಿ ಹಾಕುವಂತೆ ಆದೇಶವಿತ್ತನು. ರಾಜನ ಆದೇಶದಂತೆ ರಾಜಭಟರು ತಮ್ಮ ರಾಜ್ಯದ ಹೊರವಲಯದಲ್ಲಿ ಹರಿಯುತ್ತಿದ್ದ ಕಣ್ವಾನದಿಯತಟಕ್ಕೆ ಯುವರಾಜನನ್ನು ಕರೆದುಕೊಂಡು ಹೋಗಿ ಅವನ ಕೈಕಾಲುಗಳನ್ನು ಕತ್ತಿರಿಸಿಹಾಕಿ ಹೊರಟುಹೋದರು. ಆ ಸಂದರ್ಭದಲ್ಲಿ ಅಪ್ರಮೇಯನ ದರ್ಶನಕ್ಕೆ ಬಂದಿದ್ದ ಬ್ರಹ್ಮಣ್ಯತೀರ್ಥರು ಆಹ್ನೀಕಕ್ಕಾಗಿ ಕಣ್ವಾತೀರಕ್ಕೆ ಬಂದಿದ್ದರು. ನೋವಿನಿಂದ ನರಳುತ್ತಾ ಬಿದ್ದಿರುವ ರಾಜಕುಮಾರನನ್ನು ಕಂಡು ಅವರಿಗೆ ಮರುಕವುಕ್ಕಿ ಬಂದಿತು. ಸ್ವಾಮಿಗಳನ್ನು ನೋಡಿದ ಸಾರಂಗಧರ ತನ್ನ ವೃತ್ತಾಂತವನ್ನೆಲ್ಲಾ ಸಾದ್ಯಂತವಾಗಿ ಅವರಿಗೆ  ನಿವೇದಿಸಿಕೊಂಡು ತನ್ನನ್ನು ರಕ್ಷಿಸುವಂತೆ ಪ್ರಾರ್ಥಿಸಿದನು. ಬ್ರಹ್ಮಣ್ಯತೀರ್ಥರು ಅವನಿಗೆ ಅಭಯನೀಡಿದರಲ್ಲದೆ ನದಿಯ ಮೃತ್ತಿಕೆಯನ್ನು ಮುಷ್ಟಿಯಲ್ಲಿ ಹಿಡಿದು ಮಂತ್ರಿಸಿ ಅವನ ಶರೀರಕ್ಕೆ ಲೇಪಿಸಿದರು. ಏನಾಶ್ಚರ್ಯ! ಬ್ರಹ್ಮಣ್ಯತೀರ್ಥರ ತಪಶ್ಯಕ್ತಿ ಸ್ಪರ್ಷದಿಂದ ಅವನ ಕಾಲುಗಳು ಮೊಳೆಯ ತೊಡಗಿದವು. ಸ್ವಲ್ಪಸಮಯದಲ್ಲಿಯೇ ಅವನು ಮೊದಲಿನಂತೆ ದೃಢಾಂಗನಾದನು. ಯುವರಾಜನಿಗೆ ಕಾಲುಗಳು ಮೊಳೆತ ವಿಷಯ ಎಲ್ಲೆಲ್ಲೂ ಹರಡಿತು. ಸುತ್ತಮುತ್ತಲ ಜನರೆಲ್ಲರೂ ತಂಡೋಪತAಡವಾಗಿ ಆಗಮಿಸಿ ತಮ್ಮ ನೆಚ್ಚಿನ ರಾಜಕುಮಾರ ಆರೋಗ್ಯಪೂರ್ಣವಾಗಿರುವುದನ್ನು ಕಂಡು ಸಂತೋಷಪಟ್ಟರು. ಬ್ರಹ್ಮಣ್ಯಯತಿವರೇಣ್ಯರ ಕೃಪೆಯಿಂದ ರಾಜಕುಮಾರನ ಕಾಲುಗಳು ಮೊಳೆತ ಆ ಸ್ಥಳವನ್ನು ಜನರು ಮೊಳೆತೂರು ಎಂದೇ ಕರೆಯತೊಡಗಿದರು. ಆ ಹೊತ್ತಿಗೆ ನಿಜಾಂಶವನ್ನು ತಿಳಿದಿದ್ದ ತಿಮ್ಮರಸನಿಗೆ ತನ್ನ ದುಡುಕು ನಿರ್ಧಾರದಿಂದ ನಡೆದಿದ್ದ ಘೋರದುರಂತದ ಅರಿವಾಗಿತ್ತು. ಪಶ್ಚಾತ್ತಾಪದಿಂದ ಪರಿತಪಿಸುತ್ತಿದ್ದ ಅವನು ಈ ವಾರ್ತೆಯನ್ನು ಕೇಳಿ ಪರಮಾನಂದಭರಿತನಾಗಿ ಬ್ರಹ್ಮಣ್ಯತೀರ್ಥರಲ್ಲಿಗೆ ಧಾವಿಸಿ ಬರಬೇಕೆನ್ನುವಷ್ಟರಲ್ಲಿ ರಾಜಕುಮಾರನೇ ಅರಮನೆಗೆ ಬಂದನು. ದೃಢಾಂಗನಾಗಿ ಹಿಂದುರಿಗಿದ ಮಗನನ್ನು ಕಂಡು ತಿಮ್ಮರಸನಿಗಾದ ಸಂತೋಷ ಅಷ್ಟಿಷ್ಟಲ್ಲ. ಚಿಕ್ಕಗಂಗವಾಡಿಯ ವಂಶದ ಕುಡಿಯನ್ನು ಉಳಿಸಿದ ಬ್ರಹ್ಮಣ್ಯತೀರ್ಥರ ಕಾರುಣ್ಯಕ್ಕೆ ಅವನ ಹೃದಯ ತುಂಬಿಬAದಿತು. ಅವನು ಕೂಡಲೇ ಶ್ರೀಗಳವರಲ್ಲಿಗೆ ಬಂದು ಶರಣಾಗಿ ತನ್ನ ತಪ್ಪೋಪ್ಪಿಕೊಂಡನಲ್ಲದೆ ತನ್ನ ಸಮಸ್ತ ರಾಜ್ಯವನ್ನೂ ಸ್ವೀಕರಿಸುವಂತೆ ಅವರನ್ನು ಪ್ರಾರ್ಥಿಸಿದನು. ಅಧ್ಯಾತ್ಮ ಸಾಮ್ರಾಜ್ಯದ ಅಧಿಪತಿಗಳಾಗಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ವಿರಕ್ತಶಿಖಾಮಣಿಗಳಾದ ಬ್ರಹ್ಮಣ್ಯ ಮನಿಗಳು ವಿನಯದಿಂದ ಅದನ್ನು ತಿರಸ್ಕರಿಸಿದರು. ಆದರೆ ತಿಮ್ಮರಸ ತನ್ನ ತೃಪ್ತಿಗಾಗಿ ಏನನ್ನಾದರು ಸ್ವೀಕರಿಸಲೇಬೇಕೆಂದು ಒತ್ತಾಯಿಸಿದಾಗ ಶ್ರೀಗಳು ನಿರ್ವಾಹವಿಲ್ಲದೆ ತಮ್ಮ ಸಾಧನ ಕ್ಷೇತ್ರವಾಗಿದ್ದ ಅಬ್ಬೂರು ಗ್ರಾಮವನ್ನು  ಅವನಿಂದ ದಾನವಾಗಿ ಪಡೆದುಕೊಂಡರು. ಬ್ರಹ್ಮಣ್ಯತೀರ್ಥರ ತಪಶ್ಯಕ್ತಿಯಿಂದ ಚಿಕ್ಕಗಂಗನವಾಡಿ ರಾಜಕುಮಾರನ ಕಾಲುಗಳು ಮೊಳೆತ ಆ ಪ್ರದೇಶ ಈಗಲೂ ಮಳೂರು ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅಲ್ಲಿರುವ ಪೌರಾಣಿಕ ಮಹತ್ವವುಳ್ಳ ಶ್ರೀರಾಮಾಪ್ರಮೇಯಸ್ವಾಮಿಯ ದೇವಸ್ಥಾನದಲ್ಲಿ ಬ್ರಹ್ಮಣ್ಯತೀರ್ಥರ ಶಿಷ್ಯರಾದ ಶ್ರೀವ್ಯಾಸರಾಜರು ಮುದ್ದಾದ ನವನೀತ ಕೃಷ್ಣನ ವಿಗ್ರಹವನ್ನು ತಾವೇ ಸ್ವಹಸ್ತದಿಂದ ನಿರ್ಮಿಸಿ ಪ್ರತಿಷ್ಠಾಪಿಸಿದ್ದಾರೆ. ಗುರುಶಿಷ್ಯರ ತಪಶ್ಯಕ್ತಿಯ ಹೆಗ್ಗುರುತಾಗಿ ಆ ಸ್ಥಳ ಈ ಹೊತ್ತಿಗೂ ಭಕ್ತಾಭಿಷ್ಟಪ್ರದವಾಗಿ ವಿರಾಜಿಸುತ್ತಿದೆ. ವ್ಯಾಸರಾಜರು ಅಲ್ಲಿಯೇ ತಮ್ಮ ಪ್ರಸಿದ್ಧ ಗ್ರಂಥವಾದ “ತರ್ಕತಾಂಡವ” ವನ್ನು ರಚಿಸಿದರೆಂಬ ಹೇಳಿಕೆಯಿದೆ. ದಾಸಶ್ರೇಷ್ಠರಾದ ಶ್ರೀಪುರಂದರದಾಸರು ಗುರುಗಳು ಪ್ರತಿಷ್ಠಾಪಿಸಿರುವ ನವನೀತ ಕೃಷ್ಣನ ಮೋಹಕ ರೂಪಿಗೆ ಮರುಳಾಗಿ “ಜಗದೋದ್ಧಾರನ ಆಡಿಸಿದಳೆ ಶೋದೆ” ಎಂಬ ಸುಂದರ ಕೀರ್ತನೆಯನ್ನು ಸಹ ರಚಿಸಿದ್ದಾರೆ. 

ಇದೇ ಚಿಕ್ಕಗಂಗವಾಡಿ ಅರಸನ ಕೋಶಾಗಾರದಲ್ಲಿದ್ದು ನಂತರ ಭೂಗತವಾಗಿದ್ದ ವಿಠಲನ ಸುಂದರ ವಿಗ್ರಹವೊಂದು ಬ್ರಹ್ಮಣ್ಯತೀರ್ಥರಿಗೆ ಲಭ್ಯವಾದ ಘಟನೆಯೂ ಸಹ ಶ್ರೀಗಳವರ ಮೇಲಿದ್ದ ಶ್ರೀಶಾನುಗ್ರಹದ ದ್ಯೋತಕವಾಗಿದೆ. ಬ್ರಹ್ಮಣ್ಯತೀರ್ಥರು ಹಿಂದೆ ಸಂಚಾರತ್ವೇನ ಪಂಢರಾಪುರಕ್ಕೆ ಹೋಗಿದ್ದಾಗ ಅಲ್ಲಿ ಭಕ್ತವರದನಾಗಿ ವಿರಾಜಿಸುತ್ತಿರುವ ಪಾಂಡುರAಗ ವಿಠಲನನ್ನು ಕೈಯಾರೆ ಅರ್ಚಿಸುವ ಅವಕಾಶ ಅವರಿಗೆ ಪ್ರಾಪ್ತವಾಗಿತ್ತು. ಮೂರ್ತಿಯನ್ನು ತಮ್ಮ ಸಂಸ್ಥಾನದ ಪ್ರತಿಮೆಗಳೊಂದಿಗೆ ಅರ್ಚಿಸುವ ಹಂಬಲ ತುಂಬಿಬAದಿತು. ಆತ ಬ್ರಾಹ್ಮಣನ ರೂಪದಲ್ಲಿ ಕಾಣಿಸಿಕೊಂಡು ತಾನು ವಿಠಲಮೂರ್ತಿಯ ರೂಪದಿಂದ ಅಬ್ಬೂರು ಗ್ರಾಮಕ್ಕೆ ಸಮೀಪದ ಬೆಟ್ಟವೊಂದರ ಬಳಿ ಭೂಗತನಾಗಿದ್ದೇನೆ. ನನ್ನನ್ನು ತೆಗೆದುಕೊಂಡು ಪೂಜಿಸುವಂತೆ ಆದೇಶ ನೀಡಿದಂತಾಯಿತು. ಬೆಳಿಗ್ಗೆ ಎಚ್ಚರಗೊಂಡ ಶ್ರೀಗಳವರು ಕನಸಿನಲ್ಲಿ ಕಂಗೊಳಿಸಿದ ವಿಠಲನ ಆ ಸುಂದರ ರೂಪವನ್ನೇ ಧ್ಯಾನಿಸುತ್ತಾ ಪರವಶವಾದರು. ಶ್ರೀಹರಿಯ ಕಾರುಣ್ಯವನ್ನು ನೆನೆದು ಅವರ ಕಣ್ಣಾಲಿಗಳು ತೇಲಿಬಂದವು. ತಮ್ಮ ಮನದಿಚ್ಛೆಯನ್ನು ತಿಳಿದು ತಾನಾಗಿ ಒಲಿದು ಬಂದ ವಿಠಲನ ಭಕ್ತವಾತ್ಸಲ್ಯವನ್ನು ಅವರು ಪರಿಪರಿಯಾಗಿ ಕೊಂಡಾಡಿದರು. ನಂತರ ಬ್ರಹ್ಮಣ್ಯತೀರ್ಥರು ತಮ್ಮ ಶಿಷ್ಯರೊಂದಿಗೆ ಸ್ವಾಮಿ ನಿರ್ದೇಶಿಸಿದ್ದ ಆ ಸ್ಥಳಕ್ಕೆ ತೆರಳಿ ಶಿಷ್ಯರಿಂದ ಭೂಮಿಯನ್ನು ಶೋಧಿಸಿದಾಗ ಅತ್ಯಪೂರ್ವವಾದ ವಿಠಲನ ವಿಗ್ರಹವೊಂದು ಕಂಡುಬAದಿತು. ಅವರು ಆ ಸುಂದರ ವಿಗ್ರಹವನ್ನು ಅಂದಿನಿAದ ತಮ್ಮ ಸಂಸ್ಥಾನದ ಪ್ರತಿಮೆಗಳೊಂದಿಗಿಟ್ಟು ಶ್ರದ್ಧಾಭಕ್ತಿಗಳಿಂದ ಪೂಜಿಸತೊಡಗಿದರು. ಅಬ್ಬೂರು ವ್ಯಾಸರಾಜ ಸಂಸ್ಥಾನದಲ್ಲಿ” ಮೂರ್ತಿ ನಿತ್ಯ ಪೂಜೆಗೊಳ್ಳುತ್ತಿದೆ. ಶ್ರೀಗಳವರಿಗೆ ವಿಠಲನ ವಿಗ್ರಹ ದೊರೆತ ಸ್ಥಳವನ್ನು ಈಗಲೂ ಅಲ್ಲಿನ ಜನ ‘ವಿಠಲಬೆಟ್ಟ’ ಎಂಬ ಹೆಸರಿನಿಂದ ಗುರುತಿಸುತ್ತಾರೆ. 

ಬರ ಪರಿಹರಿಸಿದ ಬ್ರಹ್ಮಣ್ಯತೀರ್ಥರು 

ಬ್ರಹ್ಮಜ್ಞಾನಿಗಳಾದ ಶ್ರೀಬ್ರಹ್ಮಣ್ಯತೀರ್ಥರು ಸ್ವಪ್ನಲಬ್ದವಾದ ಬ್ರಹ್ಮಣ್ಯವಿಠಲನ ವಿಗ್ರಹವನ್ನು ತಮ್ಮ ಸಂಸ್ಥಾನದ ಮುಖ್ಯಮೂರ್ತಿಗಳೊಂದಿಗೆ ಪೂಜಿಸುತ್ತಿದ್ದಾಗ ಅವರ ಶಿಷ್ಯರಾದ ವ್ಯಾಸರಾಜರು ಗುರುಗಳನ್ನು ವಿಜಯನಗರಕ್ಕೆ ಬಂದು ಅಲ್ಲಿನ ಸಾಮ್ರಾಟನಾದ ಶ್ರೀಕೃಷ್ಣದೇವರಾಯನನ್ನು ಅನುಗ್ರಹಿಸುವಂತೆ ಪ್ರಾರ್ಥಿಸಿದರು. ಶಿಷ್ಯರ ಪ್ರಾರ್ಥನೆಯನ್ನು ಮನ್ನಿಸಿ ಬ್ರಹ್ಮಣ್ಯತೀರ್ಥರು ವಿಜಯನಗರಕ್ಕೆ ದಯಮಾಡಿಸಿದರು. ಕರ್ನಾಟಕ ರಾಜಧಾನಿಯ ಸಾಮ್ರಾಟನು ನೀಡಿದ ಗೌರವ ಸನ್ಮಾನಗಳನ್ನು ಸ್ವೀಕರಿಸಿದ ಶ್ರೀಗಳವರು ಆ ಸುಂದರ ನಗರದ ಅನೇಕ ದೇವಾಲಯಗಳಿಗೆ ತಮ್ಮ ಶಿಷ್ಯರೊಂದಿಗೆ ಸಂದರ್ಶಿಸಿ ಅಲ್ಲಿನ ಭಕ್ತವೃಂದಕ್ಕೆ ತತ್ವೋಪದೇಶ ನೀಡಿದರು. 

ಅಲ್ಲಿನ ದೇವಸಾನಿಧ್ಯದಲ್ಲಿ ತಮ್ಮ ಪಟ್ಟದ ದೇವರನ್ನು ಬಂಗಾರದ ಪೀಠದಲ್ಲಿ ಕೂಡಿಸಿ ಆ ಯತಿವರೇಣ್ಯರು ಮನದಣಿಯ ಪೂಜಿಸಿದರು. ಶ್ರೀಗಳವರ ಪೂಜಾವೈಭವವನ್ನು ಕಂಡು ಅಲ್ಲಿನ ಭಕ್ತಜನತೆ ಪುನೀತವಾಯಿತು. ಬ್ರಹ್ಮಣ್ಯತೀರ್ಥರು ವಿಜಯನಗರದಲ್ಲಿದ್ದಾಗಲೇ ಸುತ್ತಮುತ್ತಲ ಪ್ರದೇಶದಲ್ಲಿ ಬರಗಾಲವುಂಟಾಗಿ ಹನಿನೀರಿಗಾಗಿ ಜನರು ಹಾಹಾಕಾರಪಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ತಮ್ಮ ರಾಜ್ಯಕ್ಕೆ ಆಗಮಿಸಿರುವ ತಪೋನಿಧಿಗಳಾದ ಬ್ರಹ್ಮಣ್ಯತೀರ್ಥರಲ್ಲಿಗೆ ಅಲ್ಲಿನ ಜನರೆಲ್ಲ ಆಗಮಿಸಿರುವ ತಪೋನಿಧಿಗಳಾದ ಬ್ರಹ್ಮಣ್ಯತೀರ್ಥರಲ್ಲಿಗೆ ಅಲ್ಲಿನ ಜನರೆಲ್ಲ ಗುಂಪಾಗಿ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ರಕ್ಷಿಸುವಂತೆ ಪ್ರಾರ್ಥಿಸಿದರು. ಆಗ ಕರುಣಾಳುಗಳಾದ ಬ್ರಹ್ಮಣ್ಯತೀರ್ಥರು ಜನರ ತೊಂದರೆಯ ನಿವಾರಣೆಗಾಗಿ ಅಲ್ಲಿ ತಮ್ಮ ಶಿಷ್ಯರಿಗೆ ಪರ್ಜನ್ಯಜಪವನ್ನು ಮಾಡಲು ಆದೇಶಿಸಿದರು. ಪರ್ಜನ್ಯಜಪ ಮುಂದುವರೆಯುತ್ತಿದ್ದAತೆ ಶ್ರೀಗಳವರ ತಪಶ್ಯಕ್ತಿಯೂ ಪ್ರಕಟವಾಗತೊಡಗಿತು. ಜಲಕ್ಷಾಮದಿಂದ ತಲ್ಲಣಿಸಿದ್ದ ಪ್ರದೇಶವೆಲ್ಲಾ ತೋಯ್ದುಹೋಗುವಂತೆ ಧಾರಾಕಾರ ಮಳೆಯಾಗಿ ಅನತಿಕಾಲದಲ್ಲಿಯೇ ಅಲ್ಲಿನ ಜಲಾಶಯಗಳೆಲ್ಲವೂ ತುಂಬಿತುಳುಕಿದವು. ಎಲ್ಲೆಲ್ಲೂ ಸುಭಿಕ್ಷ ಪರಿಸ್ಥಿತಿ ನಿರ್ಮಾಣವಾಯಿತು. ಜನರೆಲ್ಲಾ ಮತ್ತೆ ಒಟ್ಟಾಗಿ ತಮ್ಮನ್ನು ಭೀಕರ ಬರಗಾಲದಿಂದ ಪಾರುಮಾಡಿದ ಬ್ರಹ್ಮಣ್ಯಮುನಿಗಳಿಗೆ ಕೃತಜ್ಞತೆಯನ್ನು ಅರ್ಪಿಸಲು ಧಾವಿಸಿಬಂದರು. ಆದರೆ ಅಲ್ಲಿ ಬ್ರಹ್ಮಣ್ಯತೀರ್ಥರನ್ನು ಕಾಣದೆ ಅವರಿಗೆಲ್ಲ ತೀವ್ರ ನಿರಾಶೆಯಾಯಿತು. 

ಜನರ ತೊಂದರೆಯನ್ನು ನಿವಾರಿಸಿದ ನಂತರ ಶ್ರೀಗಳವರು ಅವರಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಅಬ್ಬೂರಿನ ದಾರಿ ಹಿಡಿದಿದ್ದರು. ಸಂಚಾರತ್ವೇನ ಶ್ರೀಬ್ರಹ್ಮಣ್ಯತೀರ್ಥರು ಶಿರಸಿ ಸಮೀಪದ ಬನವಾಸಿ ಎಂಬ ಸ್ಥಳಕ್ಕೆ ಬಂದಿದ್ದಾಗ ಅಲ್ಲಿ ನರಸಿಂಹಾಚಾರ್ಯ ಮತ್ತು ಕೃಷ್ಣಾಚಾಂiÀið ಎಂಬ ಸದಾಚಾರ ಸಂಪನ್ನರಾದ ವಿಪ್ರಸಹೋದರರ ಪ್ರಾರ್ಥನೆಯಂತೆ ಅವರ ಮನೆಯಲ್ಲಿ ಭಿಕ್ಷೆಯನ್ನು ಸ್ವೀಕರಿಸಿದರು. ಶ್ರೀಗಳವರ ತಪಶ್ಯಕ್ತಿಯನ್ನು ಕಂಡು ಅವರ ಪ್ರಭಾವಕ್ಕೊಳಗಾದ ಆ ಸಹೋದರರು ಬ್ರಹ್ಮಣ್ಯತೀರ್ಥರ ನಿತ್ಯ ಸನ್ನಿಧಾನವನ್ನು ಬಯಸಿ ಶ್ರೀಗಳವರನ್ನು ಹಿಂಬಾಲಿಸಲು ಅವರ ಅಪ್ಪಣೆಯನ್ನು ಬೇಡಿದರು. ಆಗ ಶ್ರೀಗಳವರು ಅಣ್ಣನಾದ ನರಸಿಂಹಾಚಾರ್ಯರರನ್ನು ಅಲ್ಲಿಯೇ ಇರಲು ಆದೇಶಿಸಿ ಕೃಷ್ಣಾಚಾರ್ಯರಿಗೆ ತಮ್ಮೊಂದಿಗೆ ಬರಲು ಅನುಮತಿ ನೀಡಿದರು. ಆಚಾರ್ಯರೊಂದಿಗೆ ಅವರ ನೆಚ್ಚಿನ ಭಂಟನಾಗಿದ್ದ ನರಸನೆಂಬ ಬ್ರಾಹ್ಮಣೇತರ ವ್ಯಕ್ತಿಗೂ ಯಜಮಾನನ್ನು ಕೂಡಿಕೊಳ್ಳಲು ಅಪ್ಪಣೆ ದೊರೆಯಿತು. ಶ್ರೀಗಳವರು. ಈಗ ಬ್ರಹ್ಮಣ್ಯಪುರ ಎಂದು ಪ್ರಸಿದ್ಧವಾಗಿರುವ ಲವ್ರವನಹಳ್ಳಿಯಲ್ಲಿ ಆಚಾರ್ಯರಿಗೆ ಮತ್ತು ಅವರ ಸೇವಕನಾದ ನರಸನಿಗೆ ಪ್ರತ್ಯೇಕ ಮನೆಗಳನ್ನು ಕಟ್ಟಿಸಿಕೊಟ್ಟರಲ್ಲದೆ ದುಷ್ಟಶಕ್ತಿಯಿಂದ ತೊಂದರೆ ಗೊಳಗಾದ ವರಕನಪುರ ಗ್ರಾಮಸ್ಥರಿಗೂ ಸಹ ಅಲ್ಲಿ ಇರಲು ವಸತಿ ಸೌಕರ್ಯಗಳನ್ನು ಕಲ್ಪಿಸಿದರು. ಕದರಿ ನರಸಿಂಹನ ಅಂತರAಗ ಭಕ್ತರಾಗಿದ್ದ ಕೃಷ್ಣಾಚಾರ್ಯರಿಗೆ ಒಮ್ಮೆ ಕದರೀ ಕ್ಷೇತ್ರಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆಯಬೇಕೆಂಬ ಹಂಬಲವುAಟಾಯಿತು. ಆದರೆ ಅಶಕ್ತರಾಗಿದ್ದ ಕಾರಣ ಅವರಿಗೆ ಅದು ಸಾಧ್ಯವಾಗದೆ ಸ್ವಾಮಿಯನ್ನು ಮನಸ್ಸಿನಲ್ಲಿಯೇ ಪರಿಪರಿಯಾಗಿ ಪ್ರಾರ್ಥಿಸುತ್ತಿದರು. ಆಚಾರ್ಯರ ನಿರ್ಮಲಭಕ್ತಿಗೆ ಮೆಚ್ಚಿದ ನರಸಿಂಹ ಅವರ ಸ್ವಪ್ನದಲ್ಲಿ ಕಾಣಿಸಿಕೊಂಡು ಲವ್ರವನಹಳ್ಳಿಗೆ ಸಮೀಪವಿದ್ದ ತಿರುವೇಂಗಳನಾಥ ಬೆಟ್ಟದಲ್ಲಿ ಸನ್ನಿಹಿತನಾಗಿರುವುದಾಗಿ ಸೂಚಿಸಿದ. ಇದನ್ನು ಆಚಾರ್ಯರು ಬ್ರಹ್ಮಣ್ಯತೀರ್ಥರಿಗೆ ತಿಳಿಸಿದಾಗ ಶ್ರೀಗಳವರು ಪರಮ ಸಂತುಷ್ಟರಾಗಿ ಸ್ವಾಮಿ ಸೂಚಿಸಿದ ಸ್ಥಳದಲ್ಲಿ ಶಂಖಚಕ್ರ, ಗರುಡ, ಆಂಜನೇಯನ ಚಿತ್ರಗಳುಳ್ಳ ಧ್ವಜಸ್ಥಂಭವನ್ನು ನಿರ್ಮಿಸಿ ಅದರ ಮೇಲೆ ದೈವಯೋಗದಿಂದ ಲಭ್ಯವಾದ ಸನ್ನಿಧಾನಯುಕ್ತ ಚೌಕಾಕಾರದ ಕಲ್ಲನ್ನು ಸ್ಥಾಪಿಸಿ ತಾವೇ ಸ್ವತಃ ಪೂಜಿಸಿದ ನಂತರ ಕೃಷ್ಣಾಚಾರ್ಯರಿಗೆ ಪೂಜಾ ಭಾಗ್ಯವನ್ನು ಕಲ್ಪಿಸಿಕೊಟ್ಟರು. ಅವರ ಸೇವಕನಾದ ನರಸನಿಗಾಗಿ ಅಲ್ಲಿಗೆ ಸ್ವಲ್ಪ ಹತ್ತಿರದ ಸ್ಥಳದಲ್ಲಿ ನರಸಿಂಹನ ದಿವ್ಯವಾದ ಚರಣದ್ವಯಗಳ ಚಿನ್ಹೆÀಗಳನ್ನು ಕೆತ್ತಿಸಿ ಅವನಿಗೂ ಸ್ವಾಮಿಯ ಸೇವಾವಕಾಶವನ್ನು ಒದಗಿಸಿದರು. 

ಯತಿತ್ರಯರು ಪ್ರತಿಷ್ಠಾಪಿಸಿದ ಪ್ರಾಣದೇವರು  

ಸುತ್ತಮುತ್ತಲ ಜನರ ಅನುಕೂಲಕ್ಕಾಗಿ ಮುಂದೆ ಬ್ರಹ್ಮಣ್ಯಪುರವೆಂದು ಪ್ರಸಿದ್ಧವಾದ ಆ ಸ್ಥಳದಲ್ಲಿ ಒಂದು ಕೆರೆಯನ್ನು ನಿರ್ಮಾಣ ಮಾಡಿದರು. ಅದೇ ಸಂದರ್ಭದಲ್ಲಿ ಅವರಿಗೆ ಒಂದು ಅಪೂರ್ವವಾದ ಪ್ರಾಣದೇವರ ವಿಗ್ರಹ ಸಹ ಲಭ್ಯವಾಯಿತು. ಮೂರ್ತಿಯ ಎರಡೂ ಪಾರ್ಶ್ವದಲ್ಲಿ ಶಂಖಚಕ್ರಗಳ ಚಿನ್ಹೆಗಳಿದ್ದ ಆ ಸುಂದರ ಪ್ರಾಣಪತಿಯ ಮೇಲುಭಾಗದಲ್ಲಿ ಸೀತಾಲಕ್ಷಣಸಮೇತನಾದ ರಘುಪತಿಯ ಮೂರ್ತಿಗಳೂ ಸಹ ಮನೋಹರವಾಗಿ ಕೆತ್ತಲ್ಪಟ್ಟಿದ್ದವು. ಆ ವಿಗ್ರಹದ ಪ್ರತಿಷ್ಠಾಪನೆಯೂ ಸಹ ಅತ್ಯಂತ ಅಪೂರ್ವ ರೀತಿಯಲ್ಲಿಯೇ ಆಯಿತು. ಬ್ರಹ್ಮಣ್ಯತೀರ್ಥರು ತಮ್ಮ ಪ್ರಿಯ ಶಿಷ್ಯರ ದ್ವಾರ ನಡೆಸಬೇಕೆಂದು ಉದ್ದೇಶಿಸಿದ ಪ್ರತಿಷ್ಠಾಪನೆಯ ಕಾರ್ಯಕ್ರಮದಂದು ಶ್ರೀವ್ಯಾಸರಾಜರ ಪ್ರಾರ್ಥನೆಯಂತೆ ಮುಳಬಾಗಿಲಿನಿಂದ ಶ್ರೀ ಪಾದರಾಜರೂ ಸಹ ಬ್ರಹ್ಮಣ್ಯಪುರಕ್ಕೆ ಆಗಮಿಸಿದ್ದರು. ವ್ಯಾಸರಾಜರು ತಮ್ಮ ಆಶ್ರಮ ಗುರು ಮತ್ತು ವಿದ್ಯಾಗುರುಗಳೊಂದಿಗೆ ಸೇರಿ ಪ್ರಾಣೇಶನ ವಿಗ್ರಹದ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದು ಒಂದು ವಿಶೇಷವಾಗಿತ್ತು. ಇದು ಮುಂದೆ ವ್ಯಾಸರಾಜರು ದೇಶದಾದ್ಯಂತ 732 ಪ್ರಾಣದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದಕ್ಕೂ ಸ್ಪೂರ್ತಿಪ್ರದವಾದ ಘಟನೆಯಾಗಿ ಪರಿಣಮಿಸಿತು. ಈಗಲೂ ಸಹ ಅಪರೋಕ್ಷಿಗಳಾದ ಆ ಮುನಿತ್ರಯರು ಪ್ರತಿಷ್ಠಾಪಿಸಿದ ಪ್ರಾಣದೇವರ ಭವ್ಯ ಮೂರ್ತಿ ಬ್ರಹ್ಮಣ್ಯಪುರದಲ್ಲಿ ಭಕ್ತಾಭೀಷ್ಟಪ್ರದವಾಗಿ ಅರ್ಚಿಸಲ್ಪಡುತ್ತಿರುವುದನ್ನು ನೋಡಬಹುದು. ಅಲ್ಲಿಯೇ ಆ ಮೂವರು ಮಹನೀಯರು ಮಜ್ಜನಗೈದ ಕೊಳವೊಂದಿದ್ದು ಈ ಚರಿತ್ರಾರ್ಹ ಘಟನೆಯನ್ನು ಸಾರುತ್ತಿದೆ. ಮುನಿತ್ರಯರು ಮಾಡಿದ ಪ್ರಾಣಪತಿಯ ಪ್ರತಿಷ್ಠಾಪನೆಯ ಪ್ರಸಂಗವನ್ನು ಶ್ರೀನಿವಾಸತೀರ್ಥರು ತಾವು ರಚಿಸಿರುವ “ಶ್ರೀವ್ಯಾಸವಿಜಯ”ದಲ್ಲಿಯೂ ಉಲ್ಲೇಖಿಸಿರುತ್ತಾರೆ. 

ಬ್ರಹ್ಮಣ್ಯತೀರ್ಥರು ತೋರಿದ ಮಹಿಮೆ ಮತ್ತು ಅವರು ಗಳಿಸಿದ್ದ ಅದ್ಭುತ ತಪಶ್ಯಕ್ತಿ ವಿಜಯನಗರದಾದ್ಯಂತ ಅಪೂರ್ವ ಭಾವಸಂಚಲನವನ್ನೇ ಉಂಟು ಮಾಡಿತು. ರಾಜಗುರುಗಳಾದ ಶ್ರೀವ್ಯಾಸರಾಜರನ್ನು ರೂಪಿಸಿದ ಬ್ರಹ್ಮಣ್ಯತೀರ್ಥರ ಧೀಮಂತ ವ್ಯಕ್ತಿತ್ವಕ್ಕೆ ಸಾಮ್ರಾಟನಾದ ಶ್ರೀಕೃಷ್ಣದೇವರಾಯನೇ ಮಾರುಹೋಗಿ ಅವರಿಗೆ ಏನನ್ನಾದರೂ ಶಾಶ್ವತವಾದ ಸೇವೆಯನ್ನು ಸಲ್ಲಿಸಲು ಅಪೇಕ್ಷಿಸಿದ. ಶ್ರೀವ್ಯಾಸರಾಜರ ಸೂಚನೆಯಂತೆ ಕಾಲಾನಂತರ ಚೆನ್ನಪಟ್ಟಣ ಸಮೀಪದಲ್ಲಿರುವ ಲವ್ರವನಹಳ್ಳಿ ಗ್ರಾಮವನ್ನು ಬ್ರಹ್ಮಣ್ಯತೀರ್ಥರ ಹೆಸರಿನಲ್ಲಿ ಅವರ ಶಿಷ್ಯರಾದ ವ್ಯಾಸರಾಜರಿಗೆ ದಾನವಾಗಿ ನೀಡಿದನಲ್ಲದೆ ಅಲ್ಲಿ ವಿಪ್ರರಿಗೆ ಅನುಕೂಲವಾಗುವಂತಹ ಅಗ್ರಹಾರಗಳನ್ನು ಸಹ ನಿರ್ಮಿಸಲು ಎಲ್ಲಾ ಏರ್ಪಾಡುಗಳನ್ನು ಮಾಡಿಕೊಟ್ಟ. ಪ್ರಾಣಪತಿಯ ಪೂಜೆಗಾಗಿ ಅನೇಕ ದತ್ತಿಗಳನ್ನು ಬಿಟ್ಟುಕೊಟ್ಟ. ಅವನು ನೀಡಿದ ದಾನ ರಾಜನ ಗುರುಭಕ್ತಿಯನ್ನೂ, ಬ್ರಹ್ಮಣ್ಯತೀರ್ಥರ ಮತ್ತು ವ್ಯಾಸರಾಜರ ಮಹೋನ್ನತ ವ್ಯಕ್ತಿತ್ವವನ್ನೂ ಬಿಂಬಿಸುತ್ತವೆ. 

ಕೃಷ್ಣದೇವರಾಯನು ದಾನಮಾಡಿದ ಗ್ರಾಮಕ್ಕೆ ವ್ಯಾಸರಾಜರು ತಮ್ಮ ಗುರುಗಳ ಅಂತರ್ಯಾಮಿಯ ಪ್ರೀತ್ಯರ್ಥವಾಗಿ “ಬ್ರಹ್ಮಣ್ಯಪುರ” ಎಂದು ತಮ್ಮ ಗುರುಗಳ ಹೆಸರನ್ನೇ ಇಟ್ಟು ತಮ್ಮ ಮೂವತ್ತೆರಡು ಶಿಷ್ಯಶ್ರೇಷ್ಠರಿಗೆ ಅಲ್ಲಿ ವೃತ್ತಿಯನ್ನು ಕಲ್ಪಿಸಿಕೊಟ್ಟರು. ಅಲ್ಲಿನ ಪ್ರಾಣದೇವರ ಪೂಜೆಗಾಗಿ ತಮ್ಮ ಗುರುಗಳೇ ನೇಮಿಸಿದ್ದ ಕೃಷ್ಣಾಚಾರ್ಯರ ವಂಶೀಕರಿಗೆ ಈ ವೃತ್ತಿಯನ್ನು ಶಾಶ್ವತವಾಗಿ ನಡೆಸಿಕೊಂಡು ಬರಲು ಅಗತ್ಯ ವ್ಯವಸ್ಥೆ ಮಾಡಿದರು. ಈಗಲೂ ಸಹ ಕೃಷ್ಣಾಚಾರ್ಯರ ವಂಶಜರೇ ಪ್ರಾಣಪತಿಯ ನಿತ್ಯಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಎಂಬAತೆ “ಬ್ರಹ್ಮಣ್ಯಪುರ” ವೆಂದು ಭೂಮಿಯಲ್ಲಿ ಪ್ರಖ್ಯಾತವಾಗಿರುವ ಈ ಸ್ಥಳ ರಾಮಗಿರಿಮಂಡಲಕ್ಕೆ ಸೇರಿದ್ದು ಈಗಲೂ ಫಲವತ್ತಾದ ಪ್ರದೇಶವೆನ್ನಿಸಿದೆ. 

ಬೃಂದಾವನ ಪ್ರವೇಶ 

ಬ್ರಹ್ಮಣ್ಯತೀರ್ಥರು ಕಣ್ವಾನದಿ ಕ್ಷೇತ್ರದಲ್ಲಿ ವಾಸಿಸುತ್ತಾ ಮಧ್ವಸಿದ್ಧಾಂತದ ತತ್ವಜ್ಞಾನ ಮಂಟಪವನ್ನೇ ನಿರ್ಮಿಸಿದರು. ತಮ್ಮ ಶಿಷ್ಯರಾದ ವ್ಯಾಸರಾಜರಿಗೆ ಅನೇಕ ಪ್ರೌಢ ಗ್ರಂಥಗಳನ್ನು ನಿರ್ಮಿಸಲು ಸ್ಫೂರ್ತಿ ತುಂಬಿದರು. ಶ್ರೀಮನ್ಮಧ್ವಾಚಾಂiÀið ಮೂಲ ಮಹಾಸಂಸ್ಥಾನವಾದ ಪೂರ್ವಾದಿಮಠದ ಪೀಳಿಗೆಯಲ್ಲಿ ವಿರಾಜಿಸಿ, ಆಚಾರ್ಯರ ಕರಾರ್ಚಿತವಾದ ತಮ್ಮ ಸಂಸ್ಥಾನದ ಮೂರ್ತಿಗಳನ್ನು ನಿರಂತರ ಪೂಜಿಸಿ ಶ್ರೀಬ್ರಹ್ಮಣ್ಯತೀರ್ಥರು ತಮ್ಮ ಅವತಾರದ ಉದ್ದೇಶಿತ ಕಾರ್ಯವನ್ನು ಯಶಸ್ವಿಯಾಗಿ ಸಾಧಿಸಿದರು. ಜ್ಞಾನಿವರೇಣ್ಯರಾದ ಅವರಿಗೆ ತಮ್ಮ ಅವಸಾನ ಕಾಲ ಸಮೀಪಿಸುತ್ತಿರುವುದರ ಅರಿವಾಯಿತು. ತಮ್ಮ ಆರಾಧ್ಯಮೂರ್ತಿಯ ಪಾದಪದ್ಮಗಳನ್ನೇ ನಿರಂತರ ಧ್ಯಾನಿಸುತ್ತಿದ ತಪೋಧನರಾದ ಬ್ರಹ್ಮಣ್ಯಮುನಿಗಳು ತಮ್ಮ ಶಿಷ್ಯೋತ್ತಮರಾದ ವ್ಯಾಸರಾಜರಿಗೆ ವೇದಾಂತ ಸಾಮ್ರಾಜ್ಯದ ಅಧಿಪತ್ಯವನ್ನು ವಹಿಸಿ ಅಬ್ಬೂರು ಕ್ಷೇತ್ರದಲ್ಲಿಯೇ ಬೃಂದಾವನಸ್ಥರಾದರು. 

ಭಾಸ್ಕರಾಂಶ ಸಂಭೂತರಾದ ಶ್ರೀಬ್ರಹ್ಮಣ್ಯತೀರ್ಥರು (ಕ್ರಿ.ಶ. 1467, ಶಾ.ಶ. 1389) ಸರ್ವಜಿತು ಸಂವತ್ಸರದ ವೈಶಾಖ ಬಹುಳ ಏಕಾದಶಿಯಂದು ತಮ್ಮ ಸ್ವರೂಪದಲ್ಲಿ ಲೀನವಾದರು. 

ಶ್ರೀಬ್ರಹ್ಮಣ್ಯತೀರ್ಥರು ಬೃಂದಾವನಸ್ಥರಾದ ಸಂದರ್ಭದಲ್ಲಿ ಅವರ ಶಿಷ್ಯೋತ್ತಮರಾದ ಶ್ರೀವ್ಯಾಸರಾಜರು ತಮ್ಮ ಗುರುಗಳ ಬೃಂದಾವನವನ್ನು ಪೂಜಿಸಿ ಅವ ಮಹಿಮಾನ್ವಿತ ವ್ಯಕ್ತಿತ್ವವನ್ನು ಬಿಂಬಿಸುವ “ಪಂಚರತ್ನ ಮಾಲಿಕಾ” ಸ್ತೋತ್ರವನ್ನು ರಚಿಸಿ ಗುರುವಂತರ್ಯಾಮಿಗೆ ಸಮರ್ಪಿಸಿದರು. ವ್ಯಾಸರಾಜರು ರಚಿಸಿದ ಪಂಚರತ್ನ ಮಾಲಿಕಾ ಸ್ತೋತ್ರ ಈ ಹೊತ್ತಿಗೂ ಬ್ರಹ್ಮಣ್ಯತೀರ್ಥರನ್ನು ಸೇವಿಸುವ ಭಕ್ತವೃಂದಕ್ಕೆ ಅತ್ಯುಪಯುಕ್ತವಾಗಿದ್ದು ಗುರುಗಳ ಅನುಗ್ರಹವನ್ನು ಸಂಪಾದಿಸಲು ಸಾಧನಾ ಮಂತ್ರವಾಗಿ ಪರಿಣಮಿಸಿದೆ. 


Post a Comment

0Comments

Post a Comment (0)