ಕನ್ನಡವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಯ ದಾಳಿಯಿಂದ ನಾವೆಲ್ಲರೂ ರಕ್ಷಿಸಬೇಕು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

varthajala
0

 ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರ್ನಾಟಕ ಸಂಸ್ಕøತಿಯ ಬೀಡಾಗಿದ್ದು, ಕನ್ನಡ ಕೇವಲ ನುಡಿಯಲ್ಲ ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ. ಕನ್ನಡ ಎನ್ನುವುದು ಜೀವನದ ವಿಧಾನ. ಇಂತಹ ಕನ್ನಡವನ್ನು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಆದಿಕವಿ ಪಂಪ, ಬಸವಣ್ಣ, ಅಲ್ಲಮಪ್ರಭು, ಕನಕದಾಸರು, ಪುರಂದರದಾಸರು, ಕುವೆಂಪು, ಬೇಂದ್ರೆ, ಮಾಸ್ತಿ ಹೀಗೆ ದೊಡ್ಡ ಪರಂಪರೆ ಹೊಂದಿರುವ ನಮ್ಮ ಸಾಹಿತ್ಯವನ್ನು ಇಂದಿನ ಮಕ್ಕಳು ಓದಬೇಕು ಎಂದರು.

ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಈ ನೆಲದಲ್ಲಿ ವೈಶಿಷ್ಟ್ಯ ಅಡಗಿದೆ. ಇಲ್ಲಿಗೆ ಬಂದವರು ಯಾವುದೇ ಕಾರಣಕ್ಕೂ ಮರಳಿ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಿರುವ ನಮ್ಮ ಕರ್ನಾಟಕ ಶಾಂತಿಯಿಂದ ಕೂಡಿದೆ. ಹೊರಗಿನಿಂದ ಬಂದವರು ಸಹ ಊಟ, ವಸತಿ ಗಳಿಸಿಕೊಂಡಿದ್ದಾರೆ. ಇದೇ ನಮ್ಮ ಕನ್ನಡ ತಾಯಿ, ಭೂಮಿಯ ವಿಶೇಷ. ಕರ್ನಾಟಕದಲ್ಲಿರುವ ವಾತಾವರಣ ದೇಶದ ಯಾವ ಭಾಗದಲ್ಲಿಯೂ ಇಲ್ಲ. ನಮ್ಮ ಸಂಸ್ಕøತಿ ಹಾಗೂ ನೆಲ, ಜಲಕ್ಕೆ ಎಲ್ಲರನ್ನೂ ಆಕರ್ಷಿಸುವ ಗುಣವಿದೆ ಎಂದರು.

ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಲು ವಾಣಿಜ್ಯ ಮಳಿಗೆಗಳು, ಅಂಗಡಿಗಳು ಸೇರಿದಂತೆ ಎಲ್ಲಾ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಸಲು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ ಎಂದರು.

ಕನ್ನಡಿಗರ ತ್ಯಾಗ, ಬಲಿದಾನ, ಶ್ರಮವನ್ನು ನಾವು ಸ್ಮರಿಸಬೇಕು. ಅನೇಕ ಹಿರಿಯರು ಈ ನೆಲ, ಜಲ, ಭಾಷೆ,  ಬಾವುಟದ ಗೌರವವನ್ನು ಕಾಪಾಡಿದ್ದಾರೆ. ದೇಶದ ಯಾವ ರಾಜ್ಯವೂ ಧ್ವಜ, ನಾಡಗೀತೆ ಹೊಂದಿಲ್ಲ. ಆದರೆ ನಾವು ಇವೆರಡನ್ನೂ ಹೊಂದಿದ್ದೇವೆ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆಯನ್ನೂ  ಸ್ಥಾಪಿಸಿರುವುದು ಹೆಮ್ಮೆಯ ವಿಷಯ ಎಂದರು.

ಕುವೆಂಪು ಅವರು ಹೇಳಿರುವಂತೆ ಕರ್ನಾಟಕ ಶಾಂತಿಯ ತೋಟ. ನಾವೆಲ್ಲರೂ ಜಾತಿ, ಧರ್ಮಗಳನ್ನು ಬಿಟ್ಟು ಸಹಬಾಳ್ವೆಯಿಂದ ಕರ್ನಾಟಕದ ಏಳಿಗೆಗೆ ದುಡಿಯಬೇಕು. ಜಾಗತಿಕವಾಗಿ ಬೆಂಗಳೂರು ಬೆಳೆಯುತ್ತಿದೆ. ಪ್ರಪಂಚದ ಜನರು ಕರ್ನಾಟಕವನ್ನು ಗಮನಿಸುತ್ತಿದ್ದಾರೆ. ಕನ್ನಡ, ಕರ್ನಾಟಕವನ್ನು ಜಾಗತಿಕ ಮಟ್ಟಕ್ಕೆ ನಾವೆಲ್ಲರೂ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಶಾಲಾ ಮಕ್ಕಳ ಪಥಸಂಚಲನ ನೋಡುತ್ತಿದ್ದರೆ ತಮ್ಮ ಬಾಲ್ಯದ ದಿನಗಳು ನೆನಪಾಗುತ್ತದೆ ಎಂದ ಅವರು ತಮ್ಮ ಪ್ರೌಢಶಾಲೆಯ ದಿನಗಳ ಮೆಲುಕು ಹಾಕುತ್ತಾ, ಕರ್ನಾಟಕದ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಂಸ್ಕøತಿ ನಮ್ಮ ಉಸಿರು- ಸಚಿವ ಮಧು ಬಂಗಾರಪ್ಪ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದು.. ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ನಮ್ಮ ಸಂಸ್ಕøತಿ ನಮ್ಮ ಉಸಿರು. ಕನ್ನಡಕ್ಕೆ ಮಾತ್ರ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ಸಂಗತಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
 
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು 51000 ಅತಿಥಿ ಶಿಕ್ಷಕರನ್ನು ಒಂದೇ ಬಾರಿಗೆ ನೇಮಕ ಮಾಡಿಕೊಳ್ಳಲಾಗಿದೆ. ಅತಿಥಿ ಶಿಕ್ಷಕರ ಗೌರವ ಧನವನ್ನು ರೂ. 2000/-ಗಳಿಗೆ ಹೆಚ್ಚಿಸಿದೆ. 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮೂರು ಪರೀಕ್ಷಾ ಮಾದರಿಯನ್ನು ಪರಿಚಯಿಸಿದ್ದರಿಂದ ಶೇಕಡಾ 79.71ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪಿ.ಯು.ಸಿಯಲ್ಲಿ ಶೇಕಡಾ 85.19ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು.

ಶಾಲಾ ಕೊಠಡಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ರೂ, 850 ಕೋಟಿಗಳ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಇಲಾಖೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಕ್ಕಳ ಹಿತದೃಷ್ಠಿಯಿಂದ ದಿನಾಂಕ: 14-11-2025ರಂದು ಮಕ್ಕಳ ದಿನಾಚರಣೆ ಅಂಗವಾಗಿ ಮೆಗಾ ಶಿಕ್ಷಕರ ಸಭೆಯನ್ನು ಏಕಕಾಲಕ್ಕೆ ನಡೆಸಲಾಗುವುದು ಎಂದರು.

2026-27ನೇ ಶೈಕ್ಷಣಿಕ ಸಾಲಿನಿಂದ ಬೆಳಗಾವಿ ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ 07 ಸರ್ಕಾರಿ ಶಾಲೆಗಳ ಆವರಣದಲ್ಲಿ ಹೆಚ್ಚುವರಿಯಾಗಿ ಕನ್ನಡ ಮಾಧ್ಯಮ ವಿಭಾಗಗಳನ್ನು ಪ್ರಾರಂಭಿಸಲು ಹಾಗೂ 02 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಉನ್ನತೀಕರಿಸಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಗಡಿಭಾಗಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಗೆ ಸಂಪೂರ್ಣ ಆದ್ಯತೆ ನೀಡಲಾಗುವುದು ಎಂದರು.

ವಿವಿಧ ಶಾಲಾ ಮಕ್ಕಳು ಪಥಸಂಚಲನ ಮಾಡಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗÀವಹಿಸಿದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸ್ವಾಗತಿಸಿದರು ಹಾಗೂ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ವಂದಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್,  ಶಾಸಕರಾದ ರಿಜ್ವಾನ್ ಅರ್ಷದ್, ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಬಿ.ಆರ್.ಪಾಟೀಲ್, ಗೋವಿಂದರಾಜು ಹಾಗೂ ಪೊಲೀಸ್ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷರಾದ ಡಾ.ಎಂ.ಎ. ಸಲೀಂ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)