ಪಂ. ಕಮಲಾಕರ್ ಭಟ್ ಅವರ ಸ್ಮರಣಾರ್ಥ ಭವ್ಯ ಸಂಗೀತೋತ್ಸವ ದಿನಪೂರ್ತಿ ಸಂಗೀತ ಸಂಭ್ರಮದಲ್ಲಿ ಕಲಾವಿದರ ಮಧುರ ನಿನಾದ

varthajala
0

 ಬೆಂಗಳೂರು, ನವೆಂಬರ್ 9: ಅಂತರಕಮಲಾ ಮ್ಯೂಸಿಕ್ ಅಕಾಡೆಮಿ ವತಿಯಿಂದ ಖ್ಯಾತ ಸಂಗೀತಜ್ಞರಾದ ಪಂ. ಕಮಲಾಕರ ಭಟ್ ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮವನ್ನು ನವೆಂಬರ್ 9 ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಲಾಯಿತು.  ದಿನಪೂರ್ತಿ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಗಣ್ಯ ಕಲಾವಿದರು ಹಾಗೂ ಸಂಗೀತಾಸಕ್ತರು ಭಾಗವಹಿಸಿ, ಪಂ. ಕಮಲಾಕರ್ ಭಟ್ ಅವರ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಮಹತ್ತರ ಕೊಡುಗೆಯನ್ನು ಸ್ಮರಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನಡೆದ “ಸ್ವರ ಕಮಲಾಕರ” ಪ್ರಶಸ್ತಿ ಪ್ರದಾನದಲ್ಲಿ, ಆಗ್ರಾ ಘರಾನಾದ ಖ್ಯಾತ ಗಾಯಕ ಉಸ್ತಾದ್ ವಸೀಮ್ ಅಹಮದ್ ಖಾನ್ ಮತ್ತು ತಬಲಾ ಗುರು ಪಂಡಿತ ಮೋಹನ್ ಹೆಗಡೆ ಅವರನ್ನು ಸಂಗೀತ ಕ್ಷೇತ್ರದಲ್ಲಿ ನೀಡಿದ ಅಸಾಧಾರಣ ಕೊಡುಗೆಗಾಗಿ ಸನ್ಮಾನಿಸಲಾಯಿತು.
ಬೆಳಗಿನ ಅಧಿವೇಶನದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳ ಮನಮೋಹಕ ಸಂಗೀತ ಪ್ರದರ್ಶನದಿಂದ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಳಿಕ ಅಮೃತಾ ರಾವ್ ಅವರ ಗಾಯನ, ಡಾ. ಪ್ರಮೊದ್ ಗೈಕ್ವಾಡ್ ಅವರ ಶೆಹನಾಯಿ ಹಾಗೂ ಮಹೇಶರಾಜ್ ಸಾಳುಂಕೆ ಅವರ ತಬಲಾ ವಾದನದ ಸಂಗಮ, ಜೊತೆಗೆ ಕಿರಣ ಹೆಗಡೆ ಅವರ ಕೊಳಲು ವಾದನ ಪ್ರೇಕ್ಷಕರ ಮನ ಗೆದ್ದಿತು.
ಮಧ್ಯಾಹ್ನದ ಅಧಿವೇಶನದಲ್ಲಿ ರೇಖಾ ಹೆಗಡೆ, ಶ್ರೀರಂಜಿನಿ, ಸಂವತ್ಸರ, ಶ್ರೀಧರ ಅವರ ಗಾಯನಗಳು ಹಾಗೂ ಅಂತರಾ ಭಟ್ ಮತ್ತು ಪ್ರಕಾಶ್ ಹೆಗಡೆ ಅವರ ಕೊಳಲು ವಾದನಗಳು ಮನಮೋಹಕವಾಗಿದ್ದವು.
ಕಾರ್ಯಕ್ರಮದ ಅಂತ್ಯದಲ್ಲಿ ಅಕಾಡೆಮಿಯ ಸಂಚಾಲಕ ಕಿರಣ ಭಟ್ ಅವರ  ಆಗ್ರಾ ಪರಂಪರಾಗತ ಗಾಯನದ ನಂತರ, ಉಸ್ತಾದ್ ವಸೀಮ್ ಅಹಮದ್ ಖಾನ್ ಅವರ ವಿದ್ಯಾವಿಭೂಷಿತ ಹಾಗೂ ಉತ್ಸಾಹಭರಿತ ಗಾಯನದಿಂದ ಸಭಾಂಗಣ ಉಲ್ಲಾಸಭರಿತವಾಯಿತು.
ಈ ಕಾರ್ಯಕ್ರಮದಲ್ಲಿ  ಗುರುಮೂರ್ತಿ ವೈದ್ಯ, ಅರುಣ ಭಟ್,  ಮಂಜುನಾಥ ಮೊಟೆನ್ಸರ ತಬಲಾದಲ್ಲಿ ಹಾಗೂ  ಸಂವತ್ಸರ ಮತ್ತು ಅಜಯ್ ಹೆಗಡೆ ಹಾರ್ಮೋನಿಯಂನಲ್ಲಿ ಸಹಕರಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್, ಅಕಾಡೆಮಿಯ ಸಂಚಾಲಕ  ಕಿರಣ ಭಟ್ ಅವರ ವೃತ್ತಿಯ ಹೊರತಾದ ಸಂಗೀತ-ಸಾಧನೆ ಮತ್ತು ತಮ್ಮ ತಂದೆ ಪಂ. ಕಮಲಾಕರ ಭಟ್ ಅವರ ಬಗ್ಗೆ ಇರುವ ನಿಷ್ಠೆಯನ್ನು ಪ್ರಶಂಸಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಕಮಲಾಕರ ಭಟ್ ಅವರ ಆರು ದಶಕಗಳ ಕಲೆಯ ಮೇಲಿನ ಶ್ರದ್ಧೆ ಮುಂದಿನ ತಲೆಮಾರಿಗೆ ಪ್ರೇರಣಾದಾಯಕ ಎಂದರು. 
ಈ ಸಂದರ್ಭದಲ್ಲಿ ಕಿರಣ ಭಟ್, ಅರುಣ ಭಟ್ ಅವರ ಕುಟುಂಬದವರು ಕಮಲಾಕರ ಭಟ್ ಅವರ ಪತ್ನಿ ಊಮಾ ಭಟ್ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮವನ್ನು ಕವಯತ್ರಿ ಸಿಂಧು ಚಂದ್ರ ನಿರ್ವಹಿಸಿದರು.

Post a Comment

0Comments

Post a Comment (0)