ಬೆಂಗಳೂರು: 16ನೇ ವಿಧಾನ ಸಭೆಯ 8ನೇ ಅಧಿವೇಶನವು 2025ರ ಡಿಸೆಂಬರ್ 8 ರಂದು ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಪ್ರಾರಂಭವಾಗಿ 19 ನೇ ಡಿಸೆಂಬರ್ 2025 ರ ವರೆಗೆ 10 ದಿನಗಳ ಕಾಲ ಸುಮಾರು 57 ಗಂಟೆ 35 ನಿಮಿಷÀÀಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ ಎಂದು ವಿಧಾನಸಭೆಯ ಸಭಾರ್ಧಯಕ್ಷರಾದ ಯು.ಟಿ.ಖಾದರ್ ತಿಳಿಸಿದರು.ಇಂದು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಭಾಧ್ಯಕ್ಷರು, ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಗಿದೆ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.2025-26ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತನ್ನು 2025 ರ ಡಿಸೆಂಬರ್ 17 ರಂದು ಮಂಡಿಸಿ ಡಿಸೆಂಬರ್ 18 ರಂದು ಮತಕ್ಕೆ ಹಾಕಿ ಅಂಗೀಕರಿಸಲಾಯಿತು. ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಯನ್ನು ಡಿಸೆಂಬರ್ 18 ರಂದು ಮಂಡಿಸಲಾಗಿದೆ ಎಂದರು.
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ 2024-25ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳು (ಸಂಪುಟ I) ಮತ್ತು (ಸಂಪುಟ II ರ ಭಾಗ 1 ಮತ್ತು 2), ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ (ಪಿಎಂಕೆಕೆಕೆವೈ) ಮೇಲಿನ ಜಿಲ್ಲಾ ಖನಿಜ ಪ್ರತಿಷ್ಠಾನÀ ಟ್ರಸ್ಟ್ (ಡಿಎಂಎಫ್‍ಟಿ) ಒಳಗೊಂಡಂತೆ (ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ-ಸಿವಿಲ್) ವರದಿ (2025ನೇ ಸಾಲಿನ ವರದಿ ಸಂಖ್ಯೆ:7), ಕರ್ನಾಟಕದಲ್ಲಿ ವಿಪತ್ತು ನಿರ್ವಹಣಾ ಕಾರ್ಯನಿರ್ವಹಣೆ (ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ - ಸಿವಿಲ್) ವರದಿ (2025ರ ವರದಿ ಸಂಖ್ಯೆ:8) ಹಾಗೂ “ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (ಐಪಿಡಿಎಸ್) ಅನುಷ್ಠಾನದ ಮೇಲಿನ” (ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ - ವಾಣಿಜ್ಯ) (2025ನೇ ಸಾಲಿನ ವರದಿ :9) ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ ಎಂದರು.
ಈ ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕವು ಸೇರಿದಂತೆ ಒಟ್ಟು 22 ವಿಧೇಯಕಗಳನ್ನು ಮಂಡಿಸಿ, ಕರ್ನಾಟಕ ವಿಧಾನಸಭೆಯ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ, 2025ನೇ ಸಾಲಿನ ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವು ಸೇರಿದಂತೆ ಒಟ್ಟು 23 ವಿಧೇಯಕಗಳನ್ನು ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ನಿಯಮ 60 ರಡಿಯಲ್ಲಿ ನೀಡಿದ್ದ 01 ನಿಲುವಳಿ ಸೂಚನೆÀಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚಿಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ 39 ಸದಸ್ಯರುಗಳು ಭಾಗವಹಿಸಿದ್ದು, ಸುಮಾರು 17 ಗಂಟೆ 02 ನಿಮಿಷಗಳ ಕಾಲ ಚರ್ಚೆ ನಡೆಸಲಾಗಿದೆ ಎಂದರು.
2025ನೇ ಸಾಲಿನ ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರಿಶೀಲಿಸಿ, ವರದಿ ನೀಡಲು ರಚಿಸಲಾಗಿದ್ದ ಕರ್ನಾಟಕ ವಿಧಾನಸಭೆಯ ಪರಿಶೀಲನಾ ಸಮಿತಿಯ ವರದಿ, ಕರ್ನಾಟಕ ವಿಧಾನ ಸಭೆಯ ಹಕ್ಕುಬಾಧ್ಯತೆಗಳ ಸಮಿತಿಯ 2023-24ನೇ ಸಾಲಿನ ಮೊದಲನೇ ವರದಿ ಮತ್ತು 2024-25ನೇ ಸಾಲಿನ ಮೊದಲನೇ ಮತ್ತು ಎರಡನೇ ವರದಿ, ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 2024-25ನೇ ಸಾಲಿನ ಒಂದನೇ ವರದಿ ಹಾಗೂ ಕರ್ನಾಟಕ ವಿಧಾನಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2025-26ನೇ ಸಾಲಿನ ನಾಲ್ಕನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.
22 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. ಸಭೆಯ ಮುಂದಿಡಲಾದ ಕಾಗದ ಪತ್ರಗಳ 1 ಮತ್ತು 2 ಪಟ್ಟಿಯಿಂದ ಒಟ್ಟು 54 ಅಧಿಸೂಚನೆಗಳು ಮತ್ತು 78 ವಾರ್ಷಿಕ ವರದಿಗಳು, 74 ಲೆಕ್ಕ ಪರಿಶೋಧನಾ ವರದಿಗಳು, 14 ಅನುಪಾಲನ ವರದಿಗಳು ಹಾಗೂ 14 ಅನುಸರಣಾ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಒಟ್ಟು 2109 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 134 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 1974 ಪ್ರಶ್ನೆಗಳ ಪೈಕಿ 1750 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351 ರಡಿಯಲ್ಲಿ 180 ಸೂಚನೆಗಳನ್ನು ಅಂಗೀಕರಿಸಿದ್ದು, 70 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 368 ಸೂಚನೆಗಳ ಪೈಕಿ 228 ಸೂಚನೆಗಳಿಗೆ ಉತ್ತರವನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ 02 ಸೂಚನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದÀರು.
2025ನೇ ಡಿಸೆಂಬರ್ 18 ರಂದು ರಾಯಚೂರು ಜಿಲ್ಲೆಯಲ್ಲಿ ತಕ್ಷಣವೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಅನ್ನು ಸ್ಥಾಪಿಸಲು ಭಾರತ ಸರ್ಕಾರಕ್ಕೆ ಆಗ್ರಹಿಸುವ ಬಗ್ಗೆ, ಬೆಂಗಳೂರು ಮೈಸೂರು ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ 73 ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಗುರುತಿಸಿ, ಅವುಗಳಲ್ಲಿ ಕನಿಷ್ಠ 25 ಪ್ರಮುಖ ಸಂಶೋಧನಾ ಸಂಸ್ಥೆಗಳು ಸೇರಿದಂತೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವರ್ಗಾಯಿಸಲು ಭಾರತ ಸರ್ಕಾರವನ್ನು ಆಗ್ರಹಿಸುವ ಬಗ್ಗೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ನ್ನು ತಕ್ಷಣವೇ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಅನುದಾನ ಬಿಡುಗಡೆ ಮಾಡಲು ಮತ್ತು ಕೃಷ್ಣ್ಣಾ ಜಲವಿವಾದ ನ್ಯಾಯಾಧೀಕರಣ-2 ರ ಅಂತಿಮ ತೀರ್ಪಿನ ಗೆಜೆಟ್ ಅಧಿಸೂಚನೆಗೆ ಒತ್ತಾಯಿಸುವ ಬಗ್ಗೆ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ರೂ.5000 ಕೋಟಿ ಹೊಂದಾಣಿಕೆ ಅನುದಾನವನ್ನು ವಿದರ್ಭ ಅಭಿವೃದ್ಧಿ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸುವ ಬಗ್ಗೆ, ಕರ್ನಾಟಕದಲ್ಲಿ ಕಬ್ಬು ಮತ್ತು ಇತರೆ ಕಚ್ಚಾ ವಸ್ತುಗಳನ್ನು ಆಧರಿಸಿ ಉತ್ಪಾದಿಸುವ ಎಥೆನಾಲ್ ಸಾಮಥ್ರ್ಯಕ್ಕೆ ಅನುಗುಣವಾಗಿ ತಾರತಮ್ಯ ಮಾಡದೇ ಸಮಾನವಾದ ಎಥೆನಾಲ್ ಸಂಗ್ರಹಣೆ ಪ್ರಮಾಣವನ್ನು ನಿಗದಿಪಡಿಸಿ ರೈತರ ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಬಗ್ಗೆ, ಮಹದಾಯಿ ನ್ಯಾಯಾಧೀಕರಣದ ತೀರ್ಪಿನನ್ವಯ ಕುಡಿಯುವ ನೀರು ಪೂರೈಕೆಯ ಮಹತ್ವಾಕಾಂಕ್ಷೆಯ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಅಗತ್ಯವಿರುವ ಅರಣ್ಯ ಮತ್ತು ವನ್ಯಜೀವಿ ಮಂಡಳಿಗಳ ಅನುಮೋದನೆಗಳನ್ನು ತ್ವರಿತವಾಗಿ ಒದಗಿಸಲು ಭಾರತ ಸರ್ಕಾರವನ್ನು ಒತ್ತಾಯಿಸುವ ಬಗ್ಗೆ, ರಾಜ್ಯದ ಮೀಸಲಾತಿ ಅಧಿನಿಯಮಗಳನ್ನು ಭಾರತ ಸಂವಿಧಾನದ ಒಂಭತ್ತನೇ ಅನುಸೂಚಿಗೆ ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ಅಧಿಕೃತ ನಿರ್ಣಯಗಳನ್ನು ಸದನದಲ್ಲಿ ಮಂಡಿಸಲಾಗಿದ್ದು, ಸದನವು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಹೇಳಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಉದ್ಯಾನವನ ಹಾಗೂ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜ ಅನಾವರಣ ಮಾಡಲಾಗಿದೆ ಎಂದರು.
ಸದನ ನಡೆಸಲು ಸಹಕರಿಸಿದ ಸಭಾ ನಾಯಕರಾದ ಮುಖ್ಯಮಂತ್ರಿಯವರಿಗೆ, ಉಪ ಮುಖ್ಯಮಂತ್ರಿಯವರಿಗೆ, ವಿರೋಧ ಪಕ್ಷದ ನಾಯಕರಿಗೆ, ಸಚಿವ ಸಂಪುಟದ ಸದಸ್ಯರಿಗೆ, ಸರ್ಕಾರಿ ಮುಖ್ಯ ಸಚೇತಕರಿಗೆ, ಎಲ್ಲಾ ಸದಸ್ಯರುಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ, ಇಲಾಖಾ ಮುಖ್ಯಸ್ಥರು, ಅಧಿಕಾರಿ-ಸಿಬ್ಬಂದಿಯವರಿಗೆ, ಬೆಳಗಾವಿಯಲ್ಲಿ ವಸತಿ ಮತ್ತು ಸಾರಿಗೆ ವ್ಯವಸ್ಥೆ ಮಾಡಿಕೊಟ್ಟು ಶಾಸಕರ ಸೌಕರ್ಯಕ್ಕೆ ನಿರಂತರವಾಗಿ ಪ್ರಯತ್ನಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಬೆಳಗಾವಿ ಜಿಲ್ಲಾಡಳಿತದವರಿಗೆ ಹಾಗೂ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿದ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ವಿಧಾನಸಭೆ ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ನಾಡಿನ ಜನತೆಗೆ ಮುಂಬರುವ 2026ರ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು.