ಬೆಂಗಳೂರು: ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯಲ್ಲಿ ಕಂಡುಬಂದಿದ್ದ ಭಾರೀ ಸೋರಿಕೆಯನ್ನು ಸರಿಪಡಿಸುವಲ್ಲಿ ಬೆಂಗಳೂರು ಜಲಮಂಡಳಿ ಯಶಸ್ವಿಯಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ 18 ಗಂಟೆಗಳ ಕಾಲ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಟಿ.ಕೆ. ಹಳ್ಳಿಯಿಂದ 5.2 ಕಿ.ಮೀ ದೂರದಲ್ಲಿರುವ (ಗುಂಡಾಪುರ) 3000 ಎಂಎಂ ವ್ಯಾಸದ ಟ್ರಾನ್ಸ್‍ಮಿಷನ್ ಮೇನ್‍ನ ಸ್ಕವರ್ ವಾಲ್ವ್ ನಲ್ಲಿ ಉಂಟಾಗಿದ್ದ ಸೋರಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯ ವಿವರ:ಸೋರಿಕೆಯನ್ನು ತಡೆಗಟ್ಟಲು ಹಾನಿಗೊಳಗಾಗಿದ್ದ ಗ್ಯಾಸ್ಕೆಟ್ ಹಾಗೂ ಮುರಿದು ಹೋಗಿದ್ದ ನಟ್ ಮತ್ತು ಬೋಲ್ಟ್‍ಗಳನ್ನು ಬದಲಾಯಿಸಲಾಗಿದೆ. ಈ ದುರಸ್ತಿ ಕಾರ್ಯಕ್ಕಾಗಿ ಡಿಸೆಂಬರ್ 17 ರಂದು ಬೆಳಿಗ್ಗೆ 7.30 ರಿಂದ ಡಿಸೆಂಬರ್ 18 ರ ಬೆಳಗಿನ ಜಾವ 2.00 ಗಂಟೆಯವರೆಗೆ, ಒಟ್ಟು 18 ಗಂಟೆಗಳ ಶಟ್ ಡೌನ್ ತೆಗೆದುಕೊಳ್ಳಲಾಗಿತ್ತು. ಇದೇ ವೇಳೆ, 5ನೇ ಹಂತದ ಪಂಪ್ ಹೌಸ್‍ನಲ್ಲಿರುವ 900 ಎಂಎಂ ವ್ಯಾಸದ ಬಟರ್‍ಫ್ಲೈ ವಾಲ್ವ್‍ನ ಬೈಪಾಸ್ ವ್ಯವಸ್ಥೆಯಲ್ಲಿನ ಸೋರಿಕೆಯನ್ನೂ ಸಹ ಇದೇ ಅವಧಿಯಲ್ಲಿ ಸರಿಪಡಿಸಲಾಗಿದೆ.
ಪ್ರಸ್ತುತ ದುರಸ್ತಿ ಕಾರ್ಯ ಸಂಪೂರ್ಣವಾಗಿದ್ದು, 3 ಪಂಪ್‍ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ನಗರಕ್ಕೆ ನೀರು ಸರಬರಾಜು ಪುನರಾರಂಭಗೊಂಡಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.