ರೋಬೋಟಿಕ್ ತಂತ್ರಜ್ಞಾನದ ಯಶಸ್ವಿ ಅಳವಡಿಕೆ: 38 ಕಡೆ ತಪ್ಪಿದ ರಸ್ತೆ ಅಗೆತ - ಸಾರ್ವಜನಿಕರಿಗೆ ತಪ್ಪಿದ ತೊಂದರೆ ಅತ್ಯಾಧುನಿಕ ರೋಬೋಟಿಕ್ ಇನ್ಸ್‍ಪೆಕ್ಷನ್ ತಂತ್ರಜ್ಞಾನ ಬಳಕೆಯಿಂದ ನಿಖರ ದೋಷ ಪತ್ತೆ

varthajala
0

 ಬೆಂಗಳೂರು: ಪೈಪ್‍ಲೈನ್ ನಿರ್ವಹಣೆಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಳವಡಿಸಿಕೊಂಡಿರುವ ಅತ್ಯಾಧುನಿಕ 'ರೋಬೋಟಿಕ್ ಇನ್‍ಸ್ಪೆಕ್ಷನ್ ತಂತ್ರಜ್ಞಾನ' ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದೆ. 2025ರ ನವೆಂಬರ್ 12 ರಂದು ಜಾರಿಗೆ ತರಲಾದ ಈ ತಂತ್ರಜ್ಞಾನದ ಬಳಕೆಯಿಂದಾಗಿ, ನೆಲದಾಳದ ಸಮಸ್ಯೆಗಳನ್ನು ಅತ್ಯಂತ ನಿಖರವಾಗಿ ಗುರುತಿಸಲು ಸಾಧ್ಯವಾಗಿದ್ದು, 38 ಸ್ಥಳಗಳಲ್ಲಿ ರಸ್ತೆ ಅಗೆತವನ್ನು ತಪ್ಪಿಸಲಾಗಿದೆ. ಇದರಿಂದ ಮಂಡಳಿಗೆ ಲಕ್ಷಾಂತರ ರೂ. ವೆಚ್ಚ ಉಳಿತಾಯವಾಗಿದ್ದು, ನಾಗರಿಕರಿಗೆ ಉಂಟಾಗುತ್ತಿದ್ದ ಅನಾನುಕೂಲತೆ ತಪ್ಪಿಸಲಾಗಿದೆ.

ನಿಖರ ಕಾರ್ಯಾಚರಣೆ - ತ್ವರಿತ ಸ್ಪಂದನೆ: ರೋಬೋಟಿಕ್ ಕ್ಯಾಮೆರಾ ವ್ಯವಸ್ಥೆಗಳ ಮೂಲಕ ಜಲಮಂಡಳಿ ಸಿಬ್ಬಂದಿಗಳು ಪೈಪಲೈನ್‍ನಲ್ಲಿನ ದೋಷಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಾಗಿದ್ದರಿಂದ, ಸಮಸ್ಯೆಗಳ ಗುರುತಿಸುವಿಕೆಯಲ್ಲಿ ನಿಖರತೆ ಹೆಚ್ಚಾಗಿದೆ. ಈ ತಂತ್ರಜ್ಞಾನ ಅಳವಡಿಕೆಯಾದ ನಂತರ ಒಟ್ಟು 75 ದೂರುಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 67 ಸ್ಥಳಗಳಲ್ಲಿ ಈಗಾಗಲೇ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಉಳಿದಿರುವಂತಹ 11 ಮನವಿಗಳು ಪ್ರಗತಿಯ ಹಂತದಲ್ಲಿವೆ.ರೋಬೋಟಿಕ್ ತಪಾಸಣೆಯ ಮೂಲಕ, ಒಳಚರಂಡಿ ಕೊಳವೆಗಳಲ್ಲಿನ ತಡೆಗಳು (Blockages) ರಚನಾತ್ಮಕ ದೋಷಗಳು ಮತ್ತು ಆಂತರಿಕ ಹಾನಿಗಳು ಸೇರಿದಂತೆ 93ಕ್ಕೂ ಹೆಚ್ಚು ದೋಷಗಳನ್ನು ಪತ್ತೆಹಚ್ಚಲಾಗಿದೆ. ಹಿಂದೆ ಇಂತಹ ದೋಷಗಳನ್ನು ಪತ್ತೆಹಚ್ಚಲು ಟ್ರಯಲ್ ಅಂಡ್ ಎರರ್ ಭಾಗವಾಗಿ ಅಗೆತ ಮಾಡುವುದು ಅನಿವಾರ್ಯವಾಗಿತ್ತು. ಆದರೆ, ನೂತನ ತಂತ್ರಜ್ಞಾನದಿಂದ ಸಮಸ್ಯೆಯ ನಿಖರ ಸ್ಥಳ ಮತ್ತು ಸ್ವರೂಪ ತಿಳಿಯುವುದು ಸುಲಭವಾಗಿದೆ. ಇದರಿಂದಾಗಿ ನಗರದ ವಿವಿಧ ಭಾಗಗಳಲ್ಲಿ 38 ಕಡೆಗಳಲ್ಲಿ ರಸ್ತೆ ಕತ್ತರಿಸುವುದನ್ನು ಮತ್ತು ಅಗೆಯುವುದನ್ನು ತಪ್ಪಿಸಲಾಗಿದೆ. ಈ ಮೂಲಕ ರಸ್ತೆ ಮರು ನಿರ್ಮಾಣಕ್ಕಾಗಿ ತಗಲುತ್ತಿದ್ದ ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣ ಉಳಿತಾಯವಾಗಿದೆ.

ಸಾರ್ವಜನಿಕ ಸ್ನೇಹಿ ಕ್ರಮ: ಸಾಂಪ್ರದಾಯಿಕವಾಗಿ ರಸ್ತೆಗಳನ್ನು ಅಗಿಯುವುದರಿಂದ ಉಂಟಾಗುತ್ತಿದ್ದ ರಸ್ತೆ ತಡೆ, ಸಂಚಾರ ದಟ್ಟಣೆ, ಧೂಳು, ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕರ ಓಡಾಟಕ್ಕೆ ಉಂಟಾಗುತ್ತಿದ್ದ ಅಡಚಣೆಯನ್ನು ಈ ತಂತ್ರಜ್ಞಾನ ನಿವಾರಿಸಿದೆ. ರೋಬೋಟಿಕ್ಸ್ ಬಳಕೆಯು ಸಮಸ್ಯೆಯ ಶೀಘ್ರ ಪತ್ತೆ ಮತ್ತು ಪರಿಹಾರಕ್ಕೆ ನೆರವಾಗಿದ್ದು, ಸೇವೆಗಳನ್ನು ತ್ವರಿತವಾಗಿ ಪುನಃಸ್ಥಾಪಿಸಲು ಸಾಧ್ಯವಾಗಿದೆ. ಅಲ್ಲದೆ, ಕಾರ್ಮಿಕ ಸುರಕ್ಷತೆಗೆ ಒತ್ತು ನೀಡಿದಂತಾಗಿದೆ.
"ಮೂಲಸೌಕರ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನ ಆಧಾರಿತ ಮತ್ತು ಜನಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ 38 ಕಡೆ ಅನಗತ್ಯ ಅಗೆತವನ್ನು ತಪ್ಪಿಸಲಾಗಿದೆ. ಇದು ಕೇವಲ ಹಣದ ಉಳಿತಾಯವಲ್ಲ, ರಸ್ತೆಗಳ ಹಾನಿ ತಡೆಗಟ್ಟುವಿಕೆ ಮತ್ತು ಮುಖ್ಯವಾಗಿ ಪದೇ ಪದೇ ರಸ್ತೆ ಅಗೆಯುವುದರಿಂದ ನಾಗರಿಕರಿಗೆ ಉಂಟಾಗುವ ಯಾತನೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿಗೆ ಹೆಚ್ಚು ದಕ್ಷ ಮತ್ತು ಜವಾಬ್ದಾರಿಯುತ ಸೇವೆ ಒದಗಿಸಲು ತಂತ್ರಜ್ಞಾನ ನಮಗೆ ಸಹಕಾರಿಯಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ, ವೆಚ್ಚ ತಗ್ಗಿಸಲು ಮತ್ತು ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಮುಂಬರುವ ದಿನಗಳಲ್ಲಿ ರೋಬೋಟಿಕ್ ತಪಾಸಣೆಯನ್ನು ನಗರದ ಇತರೆ ವಲಯಗಳಿಗೂ ವಿಸ್ತರಿಸಲು ಮಂಡಳಿ ಯೋಜಿಸಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)