ಏಕಾದಶೀ ಉಪವಾಸ ವ್ರತವು 8 ವರ್ಷದಿಂದ ಮೊದಲ್ಗೊಂಡು 80 ವರ್ಷದ ವರೆಗೂ ಶಕ್ತಿ ಇರುವ ಎಲ್ಲಾ ಸ್ತ್ರೀ ಪುರುಷರೂ ಆಚರಿಸಲೇಬೇಕಾದ ಕಡ್ಡಾಯ ವ್ರತ.
" ಏಕಾದಶೀ " ದಿನ ಅನ್ನ ಮೊದಲಾದ ಪದಾರ್ಥಗಳು ತಿನ್ನಲೇಬಾರದು ಎನ್ನುವುದನ್ನು ಶ್ರುತಿ ಸ್ಮೃತಿ ಪುರಾಣಗಳು ಸಾರಿ ಸಾರಿ ಹೇಳುತ್ತಿವೆ.
ಮಹಾಭಾರತದಲ್ಲಿ ...
ಅಹಿಂಸಾ ಸತ್ಯವಚನಂ
ದಾನಮಿಂದ್ರಿಯನಿಗ್ರಹಃ !
ಏತೇಭ್ಯೋ ಹಿ ಮಹಾರಾಜ
ತಪೋ ನಾನಶನಾತ್ ಪರಮ್ !!
ಅಹಿಂಸೆ - ಸತ್ಯವಚನ - ದಾನ - ಇಂದ್ರಿಯನಿಗ್ರಹ ಇವೆಲ್ಲವುಗಳಿಗಿಂತಲೂ " ಉಪವಾಸ " ವು ಮಿಗಿಲು.
ಅದಕ್ಕಿಂತ ಹಿರಿದಾದ ಬೇರೊಂದು ತಪಸ್ಸಿಲ್ಲ!
" ಹರಿದಿನ ( ಏಕಾದಶೀ ) ಬಂದಾಗ " ಅನ್ನ ಮೊದಲಾವುಗಳನ್ನು ತಿನ್ನಕೂಡದು - ತಿನ್ನಕೂಡದು " ಎಂದು ಶ್ರುತಿ, ಸ್ಮೃತಿ, ಪುರಾಣಗಳು ಸಾರಿ ಸಾರಿ ಹೇಳುತ್ತಿವೆ.
ಶ್ರೀ ಕೃಷ್ಣಾಚಾರ್ಯರು " ಸ್ಮೃತಿಮುಕ್ತವಲೀ " ಯಲ್ಲಿ ....
ಮಹಾದೋಷಮಯಂ ಚಾನ್ನ -
ಮೇಕಾದಶ್ಯಾಂ ಭವೇದ್ಯತಃ !
ನ ದಾತವ್ಯಂ ನ ಭೋಕ್ತವ್ಯಂ
ನ ಘ್ರಾತವ್ಯಂ ವಿಶೇಷತಃ !!
" ವರಾಹಪುರಾಣ " ದಲ್ಲಿ ....
ಸರ್ವಥಾ ನಾನ್ನಮಶ್ನೀಯಾನ್ಮಿ
ರಯಮಾಣೋSಪಿ ವೈಷ್ಣವಃ !
ಮಹಾಪದ್ಯಪಿ ಯೋSಶ್ನೀಯಾದನ್ನ -
ಮೇಕಾದಶೀದಿನೇ !!
ತಸ್ಯಾಪರಾಧಂ ನ ಸಹೇ ಲಕ್ಷ್ಮ್ಯಾದಿ
ಪ್ರಾರ್ಥಿಥೋsಪಿ ಸನ್ !!
" ಏಕಾದಶೀ ಉಪವಾಸವನ್ನು ಚೈತ್ರ ಶುದ್ಧ ಏಕಾದಶೀ ಮೊದಲ್ಗೊಂಡು ಫಾಲ್ಗುಣ ಕೃಷ್ಣ ಏಕಾದಶೀ ವರೆಗೂ 24 ಏಕಾದಶೀಗಳೂ ಉಪವಾಸ ಮಾಡಲೇಬೇಕು.
ಆ 24 ಏಕಾದಶೀಗಳಲ್ಲಿ ಪುಷ್ಯ ಮಾಸದಲ್ಲಿ ಬರುವ ಏಕಾದಶೀ " ವೈಕುಂಠ ಏಕಾದಶೀ " ಸಹ ಒಂದು ಅಷ್ಟೇ.
ಆದ್ದರಿಂದ ಏಕಾದಶೀ ವ್ರತ - ಚಾತುರ್ಮಾಸ್ಯ ವ್ರತ - ಕೃಷ್ಣಾಷ್ಟಮೀ ವ್ರತ ಸಕಲ ಮಾನವರಿಗೂ ಮತ್ತು ಎಲ್ಲಾ ಸ್ತ್ರೀಯರಿಗೂ ಹಾಗೂ ಪುರುಷರಿಗೂ ಕಡ್ಡಾಯ!!
ವೈಕುಂಠ ಏಕಾದಶೀ ಅಂದರೇನು?
ಹೀಗಿದೆ ಒಂದು ಕಥೆ...
" ಏಕಾದಶೀ "
ಅಂದರೆ.. " ಹನ್ನೊಂದು "ಎಂಬ ಅರ್ಥವಿದೆ.
ಒಂದು ತಿಂಗಳಲ್ಲಿ 2 ಏಕಾದಶೀಗಳಿರುತ್ತವೆ.
ಈ ದಿನದಂದು ಉಪವಾಸದ್ದು, ವ್ರತಾಚರಣೆ ಮಾಡುವ ಸಂಪ್ರದಾಯ.
ಇನ್ನೂ ಕೆಲವರು ಏಕಾದಶೀಯ ದಿನದಂದು ಮೌನ ವ್ರತಾಚರಣೆ ಮಾಡುತ್ತಾರೆ.
ಅದಕ್ಕೆ ಹರಿದಾಸರು ....
" ಎಲ್ಲಾ ವ್ರತಗಳು ಏಕಾದಶೀ ವ್ರತದ ಹಿಂದೆ " - ಅಂದದ್ದು.
" ವೈಕುಂಠ ಏಕಾದಶೀ ವಿಶೇಷತೇ "
ಪ್ರತಿ ಏಕಾದಶೀಗಳಿಗಿಂತಲೂ " ವೈಕುಂಠ ಏಕಾದಶೀ " ವಿಶೇಷವಾದದ್ದು.
ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ " ಪುತ್ರದಾ " ಏಕಾದಶೀ ಅತ್ಯಂತ ವಿಶೇಷವಾದದ್ದು.
ಈ ದಿನದಂದು ವೈಕುಂಠ ( ಶ್ರೀ ವಿಷ್ಣುಲೋಕ - ಸ್ವರ್ಗದ ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ, ಅಂದು ಶ್ರೀ ವಿಷ್ಣು / ಶ್ರೀ ವೆಂಕಟೇಶ್ವರ ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಈ ದಿನ ಶ್ರೀ ವಿಷ್ಣು ದೇವಾಲಯಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
" ವೈಕುಂಠ "
" ವೈಕುಂಠ " ಎಂಬ ಹೆಸರಿನ ಅರ್ಥವೇನು?
":ಕುಂಠ " ಎಂದರೆ ಅಸಾಮರ್ಥ್ಯ.
" ವಿಕುಂಠ " ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು.
ಅಂದರೆ....
ಸಾಕ್ಷಾತ್ಕಾರವಾಗಿ " ಮುಕ್ತಿ " ಪಡೆದವರು ಎಂದರ್ಥ.
" ಬದುಕಿನಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಹೋಗಲಾಡಿಸುವವನು " ಎಂಬುದು ಈ ಹೆಸರಿಗೆ ಇರುವ ಅರ್ಥವಾಗಿದೆ.
" ಶರೀರಮಾಧ್ಯಂ ಖಲು ಧರ್ಮಸಾಧನಂ "
ಎಂಬ ಮಾತಿನಂತೆ ಯಾವುದೇ ಒಳ್ಳೆಯ - ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೂ ಅದಕ್ಕೆ ದೇಹ ಸದೃಢವಾಗಿರುವುದು ಅತ್ಯಗತ್ಯ.
" ಏಕಾದಶೀ ವ್ರತ " ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಮೂಲಕ ಜೀವನದಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಬಹುದು.
ಈ ಮೂಲಕ " ಪರಮಪದ " ವನ್ನು ಸೇರಬಹುದು ಎಂಬುದು " ವೈಕುಂಠ ಏಕಾದಶೀ " ಯ ವ್ರತಾಚರಣೆಯ ಗೂಢಾರ್ಥವಾಗಿದೆ
" ವೈಕುಂಠ ಏಕಾದಶೀಯ ಬಗ್ಗೆ ಶ್ರೀಮದ್ಭಾಗವತ ಮಹಾಪುರಾಣದಲ್ಲಿಯೂ, ಶ್ರೀ ಹರಿವಂಶದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ "
ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು " ಶ್ರೀ ಕೃಷ್ಣ ಚಾರಿತ್ರ್ಯಮಂಜರೀ " ಯಲ್ಲಿ ...
ಗೋವಿಂದಾಖ್ಯೋsಥ ತಾತಂ ಜಲಪಾತಿ -
ಹೃತಮಾನೀಯ ಲೋಕಂ ಸ್ವಕೀಯಂ
ನಂದಾದೀನಾಂ ಪ್ರದರ್ಶ್ಯ ವ್ರಜಗತ -
ವನಿತಾಗಾನಕೃಷ್ಟಾರ್ತಚಿತ್ತಾಃ !
ಯಃ ಕಾಲಿಂದ್ಯಾಂ ನಿಶಾಯಾಮರ -
ಮಮಯದಮಲಜ್ಯೋತ್ಸ್ನಯಾ ದೀಪಿತಾಯಾಂ
ಚಾರ್ವಂಗೀರ್ನರ್ಮವಾಕ್ಯೈ: ಸ್ತನಭರ ನಮಿತಾಃ
ಪ್ರೀಣಯನ್ ಪ್ರಿಯತಾಂ ನಃ !! ೭ !!
ಮೇಲ್ಕಂಡ ಶ್ಲೋಕದಲ್ಲಿ...
A. ಶ್ರೀ ಗೋವಿಂದನ ಪಟ್ಟಾಭಿಷೇಕ.
B. ಶ್ರೀ ಕೃಷ್ಣ ಪರಮಾತ್ಮನು ಶ್ರೀ ವರಣದೇವನಿಂದ ಪೂಜಿಸಲ್ಪಟ್ಟಿದ್ದು.
C. ಗೊಲ್ಲರಿಗೆ ( ಯಾದವರಿಗೆ ) ವೈಕುಂಠ ಲೋಕವನ್ನು ತೋರಿಸಿದ್ದು.
D. ಶ್ರೀ ಕೃಷ್ಣ ಪರಮಾತ್ಮನ ಮುರಳೀಗಾನ / ವೇಣುಗಾನ
E. ಶ್ರೀ ಕೃಷ್ಣ ಪರಮಾತ್ಮನು ಗೋಪಿಕಾ ಸ್ತ್ರೀಯರ ಭಕ್ತಿಯನ್ನು ಪರೀಕ್ಷಿಸಿದ್ದು.
ಕಥಾ ಭಾಗವನ್ನು ಸೆರೆ ಹಿಡಿದಿದ್ದಾರೆ.
ಒಮ್ಮೆ ಸಾಧನ ದ್ವಾದಶೀಯು ಬಂತು.
ನಂದನು ಏಕಾದಶೀಯ ದಿನ ಉಪವಾಸವಾಗಿದ್ದನು.
ಸಾಧನ ದ್ವಾದಶೀ ದಿನ ಸೂರ್ಯೋದಯ ಕಾಲಕ್ಕೆ ಸರಿಯಾಗಿ ಪಾರಣೆಯನ್ನು ಮಾಡಬೇಕು.
ಅದಕ್ಕಿಂತ ಹಿಂದಾಗಲೀ - ಮುಂದಾಗಲೀ ಮಾಡಕೂಡದು.
ಆದ್ದರಿಂದ ಏಕಾದಶೀ ರಾತ್ರಿಯಲ್ಲಿ ಬಹಳ ಬೇಗನೆ ಏಳಬೇಕಾಯಿತು.
ಆ ಕಾಲದಲ್ಲಿ ಗಡಿಯಾರಗಳು ಇರಲಿಲ್ಲ.
ನಕ್ಷತ್ರಗಳನ್ನು ನೋಡಿಯೇ ಕಾಲವನ್ನು ತಿಳಿಯಬೇಕಿತ್ತು.
ಆ ದಿನ ರಾತ್ರಿಯಲ್ಲಿ ಮೇಘಗಳು ಆಕಾಶವನ್ನು ಮುಚ್ಚಿಕೊಂಡಿದ್ದವು.
ಆದ್ದರಿಂದ ನಕ್ಷತ್ರಗಳು ತಿಳಿಯಲಿಲ್ಲ.
ಬೇಗನೆ ಏಳಬೇಕೆಂಬ ಆಸೆಯಿಂದ ಸರಿಯಾದ ಕಾಲವನ್ನು ತಿಳಿಯದೆ ಅರ್ಧರಾತ್ರಿ ಕಾಲದಲ್ಲಿ ನಂದನು ಎದ್ದನು.
ಎಲ್ಲಾ ಗೊಲ್ಲರನ್ನೂ ಎಬ್ಬಿಸಿದನು.
ಅವರೊಡನೆ ಸ್ನಾನಕ್ಕಾಗಿ ಯಮುನಾ ನದಿಗೆ ಹೋದನು.
ನೀರಿನಲ್ಲಿ ಎಲ್ಲರೂ ಮುಳುಗಿದರು.
ಅರ್ಧರಾತ್ರ ಕಾಲವು ರಾಕ್ಷಸರ ಸಂಚಾರ ಕಾಲವೆನಿಸುತ್ತದೆ.
ವರುಣನ ದೂತರಾದ ಕೆಲವು ರಾಕ್ಷಸರು ವರುಣನ ಅಧೀನವಾದ ನೀರಿನಲ್ಲಿ ಎಲ್ಲೆಡೆಗಳಲ್ಲಿಯೂ ಅರ್ಧರಾತ್ರಿ ಕಾಲದಲ್ಲಿ ಸಂಚರಿಸುತ್ತಿರುತ್ತಾರೆ.
ಅವರಲ್ಲಿ ಒಬ್ಬ ರಾಕ್ಷಸನು ನಂದನನ್ನು ನೋಡಿದನು.
ತಮ್ಮ ಸಂಚಾರ ಕಾಲದಲ್ಲಿ ಯಾರನ್ನು ಬೇಕಾದರೂ ಹಿಡಿಯುವ ಶಕ್ತಿಯು ತಮಗಿದೆ.
ಆ ಶಕ್ತಿಯಿಂದ ನಂದನನ್ನು ಹಿಡಿದು, ವರುಣ ಲೋಕಕ್ಕೆ ಕರೆದುಕೊಂಡು ಹೋಗಿ, ತನ್ನ ಯಜಮಾನನಾದ ವರುಣನ ವಶಕ್ಕೆ ಒಪ್ಪಿಸಿದನು.
ಸ್ನಾನಾರ್ಥವಾಗಿ ಮುಳುಗಿದ ಎಲ್ಲಾ ಗೋಪಾಲಕರೂ ನೀರಿನಿಂದ ಮೇಲೆ ಬಂದರು.
ನಂದನು ಕಾಣಿಸಲಿಲ್ಲ.
ಈ ವಿಷಯವನ್ನು ಶ್ರೀ ಕೃಷ್ಣ ಪರಮಾತ್ಮನಿಗೆ, ಕೃಷ್ಣಾ - ರಾಮ ಎಂದು ಕೂಗುತ್ತಾ ತಿಳಿಸಿದರು.
ಸರ್ವೋತ್ತಮನೂ, ಅಭಿಜ್ಞನಾದ ಶ್ರೀ ಕೃಷ್ಣ ಪರಮಾತ್ಮನು ವರುಣನ ಭೃತ್ಯನು ಮಾಡಿದ ಕೆಲಸವನ್ನು ತಿಳಿದು ನೀರಿನಲ್ಲಿ ಇಳಿದು, ವರುಣ ಲೋಕಕ್ಕೆ ಹೋದನು. ತನ್ನ ಪ್ರಭುವಾದ ಶ್ರೀ ಕೃಷ್ಣ ಪರಮಾತ್ಮನು ತನ್ನ ಲೋಕಕ್ಕೆ ಬಂದಿರುವ ವಿಷಯವನ್ನು ವರುಣನು ತಿಳಿದನು.
ಅತ್ಯಂತ ಭಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮನನ್ನು ಸ್ವಾಗತಿಸಿ, ತನ್ನ ಆಸನದಲ್ಲಿ ಕುಳ್ಳಿರಿಸಿ, ಪಾದಗಳನ್ನು ತೊಳೆದನು.
ಆ ಜಲದಿಂದ ತನ್ನ ದೇಹವನ್ನೂ, ಎಲ್ಲಾ ವಸ್ತುಗಳನ್ನೂ ಪ್ರೋಕ್ಷಿಸಿ, ಷೋಡಶೋಪಚಾರ ಪೂಜೆಯನ್ನು ಮಾಡಿದನು.
ಬಂದ ಕಾರಣವನ್ನು ಕುರಿತು ಪ್ರಶ್ನಿಸಿ ವಿಷಯವನ್ನು ತಿಳಿದನು.
ತನ್ನ ಸೇವಕನು ಮಾಡಿದ ಅಪರಾಧಕ್ಕಾಗಿ ಕ್ಷಮೆ ಯಾಚಿಸಿದನು.
ತನ್ನ ಲೋಕದಲ್ಲಿ ಕಾರಾಗೃಹದಲ್ಲಿ ಇಟ್ಟಿದ್ದ ನಂದನನ್ನು ಕಾರಾಗೃಹದಿಂದ ಬಿಡಿಸಿದನು.
ವಿಶೇಷ ಮರ್ಯಾದೆಗಳೊಡನೆ ತಂದು ಶ್ರೀ ಕೃಷ್ಣ ಪರಮಾತ್ಮನಿಗೆ ಒಪ್ಪಿಸಿದನು.
ವರುಣನ ಭೃತ್ಯರಾದ ರಾಕ್ಷಸರು ನಂದನನ್ನು ವರುಣ ಲೋಕಕ್ಕೆ ಕರೆದುಕೊಂಡು ಹಿಡಿದಾಗಿ ನಾವು ಹೇಳಿದೆವು.
ನಿಜವಾದ ವಿಷಯವನ್ನು ಈಗ ಹೇಳುವೆವು...
ವರುಣನ ಸೇವಕನು ನಂದನನ್ನು ವರುಣ ಲೋಕಕ್ಕೆ ಕರೆದುಕೊಂಡು ಹೋಗಲಿಲ್ಲ.
ಶ್ರೀ ಕೃಷ್ಣ ಪರಮಾತ್ಮನ ಸನ್ನಿಧಾನದಲ್ಲಿ ಅವನ ತಂದೆಯ ಮುಟ್ಟುವ ಯೋಗ್ಯತೆಯು ಯಾವ ರಾಕ್ಷಸನಿಗಿದೆ?
ವರುಣನೇ ಒಬ್ಬ ರಾಕ್ಷಸನಂತೆ ರೂಪವನ್ನು ಧರಿಸಿ ಸಂಚರಿಸುತ್ತಾ, ನಂದನನ್ನು ನೋಡಿದನು.
ಶ್ರೀ ಕೃಷ್ಣ ಪರಮಾತ್ಮನು ತನ್ನ ಪ್ರಭುವೆಂದು ತಿಳಿದು ಅವನಲ್ಲಿ ಅತ್ಯಂತ ಭಕ್ತಿಯನ್ನು ವರುಣನು ಮಾಡುತ್ತಿದ್ದನು.
ಆ ಶ್ರೀ ಕೃಷ್ಣ ಪರಮಾತ್ಮನು ತನ್ನ ಮಗನೆಂದು ನಂದನು ಹೇಳುತ್ತಿರುವನೆಂಬ ವಿಷಯವು ವರುಣನಿಗೆ ಜ್ಞಾಪಕಕ್ಕೆ ಬಂತು.
ತಂದೆಯೇ ಇಲ್ಲದಿರುವ ತನ್ನ ಪ್ರಭುವಾದ ಶ್ರೀ ಕೃಷ್ಣ ಪರಮಾತ್ಮನನ್ನು ತನ್ನ ಮಗನೆಂದು ಹೇಳುತ್ತಿರುವ ನಂದನು ತುಂಬಾ ದೊಡ್ಡ ಅಪರಾಧಿಯೆಂದು ತಿಳಿದನು
ಅದಕ್ಕಾಗಿ ಅವನನ್ನು ಶಿಕ್ಷಿಸಬೇಕೆಂದು ತೀರ್ಮಾನಿಸಿದನು.
ಶೆಳೆದುಕೊಂಡು ಹೋಗಿ ಕಾರಾಗೃಹದಲ್ಲಿಟ್ಟನು.
ವರುಣನಿಗೆ ತನ್ನಲ್ಲಿರುವ ದೃಢ ಭಕ್ತಿಯನ್ನು ಶ್ರೀ ಕೃಷ್ಣ ಪರಮಾತ್ಮನು ನೋಡಿದನು.
ನಂದನನ್ನು ಬಿಡಿಸಿಕೊಂಡು ಬರುವ ನಿಮಿತ್ತದಿಂದ ವರುಣ ಲೋಕಕ್ಕೆ ಹೋದನು.
ವರುಣನಿಂದ ಮಾಡಲ್ಪಟ್ಟ ಪೂಜೆಯನ್ನು ತಂದೆಯೊಡನೆ ಸ್ವೀಕರಿಸಿದನು.
ತಂದೆಯನ್ನು ಕರೆದುಕೊಂಡು ಹಿಂದಿರುಗಿದನು.
ನಂದನು ನಡೆದ ವಿಚಾರಗಳೆಲ್ಲವನ್ನೂ ಎಲ್ಲಾ ಗೊಲ್ಲರ ಮಧ್ಯದಲ್ಲಿ ತಿಳಿಸಿದನು.
ವರುಣನ ಅಪಾರ ಸಂಪತ್ತನ್ನು ಹೇಳಿದನು.
ಅಂಥಹಾ ವರುಣನು ಶ್ರೀ ಕೃಷ್ಣ ಪರಮಾತ್ಮನಲ್ಲಿ ತೋರಿರುವ ಭಕ್ತಿಯನ್ನು ತಿಳಿಸಿದನು.
ಇದನ್ನೆಲ್ಲವನ್ನೂ ಕೇಳಿದ ಗೊಲ್ಲರೆಲ್ಲರೂ ವರುಣನಿಂದ ಪೂಜಿಸಲ್ಪಟ್ಟ ಶ್ರೀ ಕೃಷ್ಣ ಪರಮಾತ್ಮನು ದೇವತೆಗಳಲ್ಲಿ ಉತ್ತಮನೆಂದು ತೀರ್ಮಾನಿಸಿದರು.
ಶ್ರೀ ಕೃಷ್ಣ ಪರಮಾತ್ಮನ ನಿಜ ಸ್ವರೂಪವನ್ನು ತಿಳಿಯಬೇಕೆಂದು ಗೊಲ್ಲರೆಲ್ಲರೂ ಆಶಿಸಿದರು.
ಶ್ರೀ ಕೃಷ್ಣ ಪರಮಾತ್ಮನು ಅವರ ಆಸೆಯನ್ನು ಪೂರ್ತಿ ಮಾಡಬೇಕೆಂದೂ, ತನ್ನ ಮಹಿಮೆಯನ್ನು ಅವರೆಲ್ಲರಿಗೂ ತಿಳಿಸಬೇಕೆಂದೂ ಸಂಕಲ್ಪಿಸಿದನು.
ಅವರೆಲ್ಲರನ್ನೂ ಯಮುನಾ ನದಿಯಲ್ಲಿರುವ " ಬ್ರಹ್ಮಹ್ರದ " ಎಂಬ ಮಡುವಿಗೆ ಕರೆದುಕೊಂಡು ಬಂದನು.
ಎಲ್ಲರಿಗೂ ನೀರಿನಲ್ಲಿ ಮುಳುಗುವಂತೆ ಆಜ್ಞಾಪಿಸಿದನು.
ಅವರೆಲ್ಲರೂ ನೀರಿನಲ್ಲಿ ಮುಳುಗಿದರು.
ಅವರೆಲ್ಲರಿಗೂ ದಿವ್ಯ ದೃಷ್ಟಿಯನ್ನು ಕೊಟ್ಟನು.
ಅವರೆಲ್ಲರಿಗೂ ನಿಜ ಸ್ವರೂಪವನ್ನು ತೋರಿಸಿದನು.
ಈ ಸಂಸಾರದಲ್ಲಿ ಬಿದ್ದಿರುವ ಒಬ್ಬೊಬ್ಬರೂ ಕರ್ಮಗಳಿಂದ ಬಿಗಿಯಲ್ಪಟ್ಟು ಉತ್ತಮ ದೇವತಾದಿ ಶರೀರಗಳನ್ನೂ, ನೀಚವಾದ ಮೃಗ, ಪಕ್ಷಿ ಮುಂತಾದ ಶರೀರಗಳನ್ನೂ ಪಡೆಯುತ್ತಿರುವರು.
ತಮ್ಮ ಮತ್ತು ಶ್ರೀ ಕೃಷ್ಣ ಪರಮಾತ್ಮನ ಸ್ವರೂಪಗಳನ್ನು ತಿಳಿಯಲು ಆಸಕ್ತರಾಗಿರುವರು.
ಅವರಿಗೆ ಶ್ರೀ ಕೃಷ್ಣ ಪರಮಾತ್ಮನ ಕರುಣೆಯಿಂದಲೇ ತಮ್ಮ ಮತ್ತು ಶ್ರೀ ಕೃಷ್ಣ ಪರಮಾತ್ಮನ ನಿಜ ಸ್ವರೂಪದ ಪರಿಜ್ಞಾನ ಏರ್ಪಡಬೇಕು.
" ಇವರೆಲ್ಲರೂ ನನ್ನನ್ನು ಕಣ್ಣಾರೆ ನೋಡಲಿ.
ನನ್ನಲ್ಲಿ ದೃಢವಾದ ಭಕ್ತಿಯನ್ನು ಮಾಡಲಿ ".
ಎಂದು ಶ್ರೀ ಕೃಷ್ಣ ಪರಮಾತ್ಮನು ತೀರ್ಮಾನಿಸಿದನು.
ಗೊಲ್ಲರೆಲ್ಲರಿಗೂ ತನ್ನ ನಿಜ ಸ್ವರೂಪವನ್ನು ತೋರಿಸಿದನು.
ಶ್ರೀ ಕೃಷ್ಣ ಪರಮಾತ್ಮನ ಅತಿಶಯವಾದ ರೂಪ ಲಾವಣ್ಯವನ್ನೂ, ಅವನ ಮಹಿಮೆಯನ್ನೂ, ವಜ್ರ ವೈಢೂರ್ಯಗಳಿಂದ ಪ್ರಕಾಶಮಾನವಾದ ವೈಕುಂಠ ಲೋಕವನ್ನು ಕಂಡು ಪುನೀತರಾದರು.
ಅನಂತ ಮನ್ಮಥರ ಸೌಂದರ್ಯಗಳಿಗೆ ತವರು ಮನೆಯಂತೆ ಪ್ರಕಾಶಿಸಿದನು.
ಸುವರ್ಣ ಮಂಟಪದ ಮಧ್ಯದಲ್ಲಿ, ನಿರ್ಮಲವಾದ ಕಮಲದಲ್ಲಿ ಕುಳಿತಿರುವನು.
ಸಕಲ ಲೋಕಗಳ ಉತ್ಪತ್ತಿಗೂ, ಪಾಲನೆಗೂ, ಸಂಹಾರಕ್ಕೂ, ಮುಕ್ತಿಗೂ ಕಾರಣನೂ - ಸ್ವಚ್ಛವಾದ ಶ್ರೀ ಶೇಷದೇವರ ಹೆಡೆಗಳೆಂಬ ಕೊಡೆಯ ಕೆಳಗೆ ಕುಳಿತಿರುವವನೂ, ಆದ ಶ್ರೀ ಕೃಷ್ಣ ಪರಮಾತ್ಮನನ್ನು ಎಲ್ಲಾ ಗೊಲ್ಲರೂ ನೋಡಿದರು.
ವೇದಾಭಿಮಾನಿಗಳಾದ ಶ್ರೀ ಚತುರ್ಮುಖ ಬ್ರಹ್ಮದೇವರು ಮುಂತಾದ ಎಲ್ಲಾ ದೇವತೆಗಳೂ, ಸಂತುಷ್ಟರಾದ ಶ್ರೀ ನಾರದ ಮಹರ್ಷಿಗಳೇ ಮುಂತಾದ ಮುನಿಗಳೂ ಶ್ರೀ ಕೃಷ್ಣ ಪರಮಾತ್ಮನನ್ನು ಅತ್ಯಂತ ಭಕ್ತಿಯಿಂದ ಸ್ತುತಿಸುತ್ತಿರುವರು.
ಶ್ರೀ ಕೃಷ್ಣ ಪರಮಾತ್ಮನ ಈ ವೈಕುಂಠಲೋಕವೂ, ರೂಪವೂ ಪ್ರಾಕೃತವಲ್ಲ.
ಮುಕ್ತರಿಂದಲೇ ಹೊಂದುವುದಕ್ಕೆ ಯೋಗ್ಯವಾದುದು.
ಈ ವೈಕುಂಠಲೋಕವನ್ನೂ, ಶ್ರೀ ಕೃಷ್ಣ ಪರಮಾತ್ಮನ ರೂಪವನ್ನು ನೋಡುತ್ತಾ ಗೊಲ್ಲರೆಲ್ಲರೂ ಆನಂದ ಪರವಶರಾದರು.
ಸ್ವಲ್ಪ ಕಾಲವಾದ ಕೂಡಲೇ ಆ ರೂಪವು ಅದೃಶ್ಯವಾಯಿತು.
ಎಲ್ಲರೂ ಸ್ವಪ್ನದಲ್ಲಿ ನೋಡಿದಂತೆ ಆ ರೂಪವನ್ನು ನೋಡಿ ಶ್ರೀ ಕೃಷ್ಣ ಪರಮಾತ್ಮನಲ್ಲಿ ಅತ್ಯಂತ ಭಕ್ತಿಯಿಂದಲೂ, ಭಯದಿಂದಲೂ ಹಿಂದಿರುಗಿದರು.
ಈ ಕಾರಣಕ್ಕೆ ಏಕಾದಶಿಯನ್ನು " ವೈಕುಂಠ ಏಕಾದಶೀ " ಎಂದು ಕರೆದರು.
ಈ " ವೈಕುಂಠ ಏಕಾದಶೀ " ದ್ವಾಪರ ಯುಗದಿಂದಲೂ ಆಚರಣೆಗೆ ಬಂದಿದೆ.
" ಏಕಾದಶೀ ವ್ರತೋಪವಾಸದ ಉಪಯೋಗಗಳು "
1. ಏಕಾದಶೀ ವ್ರತೋವಾಸ ಮಾಡುವುದರಿಂದ ಚಿರ ಯೌವನ - ದೇಹದ ಆರೋಗ್ಯ - ಮನಸ್ಸಿನ ಉಲ್ಲಾಸ ಮೊದಲಾದವುಗಳನ್ನು ಸಾಧಿಸಬಹುದು.
2. ಆರೋಗ್ಯ ವೃದ್ಧಿ - ಮಾನಸಿಕವಾಗಿಯೂ, ಆಧ್ಯಾತ್ಮಿಕವಾಗಿ ಉನ್ನತಿಯನ್ನು ಸಾಧಿಸುವುದು.
3. ಏಕಾದಶೀ ಉಪವಾಸದಿಂದ ಬುದ್ಧಿಶಕ್ತಿಯ ವೃದ್ಧಿ.
4. ಏಕಾದಶೀ ಉಪವಾಸದಿಂದ ದೇಹದ ತೂಕ ಇಳಿಯುವುದು.
5. ಏಕಾದಶೀ ಉಪವಾಸದಿಂದ ಶಕ್ತಿ ವೃದ್ಧಿ.
6. ಏಕಾದಶೀ ಉಪವಾಸದಿಂದ ಸಮಸ್ಯೆಗಳ ಪರಿಹಾರ.
7. ಏಕಾದಶೀ ಉಪವಾಸದಿಂದ ಅನಿಷ್ಟ ನಿವೃತ್ತಿ.
8. ಏಕಾದಶೀ ವ್ರತಕ್ಕಿಂತ ಮಿಗಿಲಾದ ತಪಸ್ಸಿಲ್ಲ.
9. ಏಕಾದಶೀ ಉಪವಾಸದಿಂದ ಚತುರ್ವಿಧ ಪುರುಷಾರ್ಥ ಸಿದ್ಧಿ.
10. ಏಕಾದಶೀಯು ಸಕಲ ತೀರ್ಥ ಕ್ಷೇತ್ರಗಳಿಗಿಂತ ಮಿಗಿಲು.
11. ಎಲ್ಲಾ ಯಾಗ ಯಜ್ಞಗಳಿಗಿಂತಲೂ ಏಕಾದಶೀಯು ಶ್ರೇಷ್ಠ.
12. ಪರ್ವ ಕಾಲಗಳಿಗಿಂತಲೂ ಏಕಾದಶೀಯು ಬಹಳ ದೊಡ್ಡದು.
13. ಏಕಾದಶೀ ಆಚರಣೆಯಿಂದ ಜನ್ಮ ಜನ್ಮಾಂತರದ ಪಾತಕಗಳು ಪರಿಹಾರ.
14. ಏಕಾದಶೀ ವ್ರತಕ್ಕಿಂತ ಮಿಗಿಲಾದ ಪಾಪ ನಾಶಕ ವ್ರತ ಮತ್ತೊಂದಿಲ್ಲ.
15. ಏಕಾದಶೀ ಉಪವಾಸದಿಂದ ಯಮಬಾಧೆ, ಶನಿಕಾಟ ಪರಿಹಾರ.
16. ಸ್ತ್ರೀ ಪುರುಷರೂ ಎಂಬ ಭೇದವಿಲ್ಲದೆ ಮಾನವರಿಗೆಲ್ಲಾ ಏಕಾದಶೀ ಉಪವಾಸ ಕಡ್ಡಾಯ
17. ಸೂತಕದಲ್ಲೂ ಏಕಾದಶೀ ವ್ರತ ಬಿಡಕೂಡದು.
18. ಮಾಸದಲ್ಲಿನ ಎರಡೂ ಏಕಾದಶೀಗಳಂದು ( ಶುಕ್ಲ ಪಕ್ಷ / ಕೃಷ್ಣ ಪಕ್ಷ ) ಉಪವಾಸವು ಮಾಡಲೇಬೇಕು.
" ಹರಿದಾಸರ ಮಾತುಗಳಲ್ಲಿ ಏಕಾದಶೀ ವ್ರತದ ವೈಭವ "
ಶ್ರೀ ಧ್ರುವಾಂಶ ಶ್ರೀಪಾದರಾಜರು ....
ಉಪವಾಸ ವ್ರತಗಳಲ್ಲದೆ ಜೀವ ! ತಪಸಿಯೆನಿಸಿ ಕೊಳ್ಳಲರಿಯನಂತೆ !!
ಶ್ರೀ ಪ್ರಹ್ಲಾದಾಂಶ ವ್ಯಾಸರಾಜರು ....
✓ ಹರಿದಿನ ಹರಿದಾಸರ ಪಾದರಜವಿರಲು ! ದುರಿತದ ಭಯವ್ಯಾಕೆ ನರಕದ ಭಯವ್ಯಾಕೆ !!
✓ ಹರಿದಿನ ಪಾತಕ ಪರಿಹಾರ ದಿವಿಜರ !
ಕರುಣಕ್ಕೆ ಕಾರಣ ನಂಬಲೋ ಮನುಜ !!
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು...
✓ ಹರಿದಿನಕೆ ಮರುದಿನ ಸರಿಯಲ್ಲವೆಂತೆಂದು !
ಹರಿವ ಹಾವನು ಹಿಡಿಯಲೆ !
✓ ನಾಳೆ ಏಕಾದಶೀ ಉಪವಾಸ ಜಾಗರ !
ಆಲಸ್ಯ ಮಾಡದೆ ಮಾಡಿರೋ ಎಂದು !!
✓ ಏಕಾದಶೀಯ ಮಾಡಿ !
ಶ್ರೀ ಕೃಷ್ಣನಂಘ್ರಿಗಳ ನೋಡಿ !!
ಶ್ರೀ ನಾರದಾಂಶ ಪುರಂದರದಾಸರು ....
✓ ಹರಿದಿನದುಪವಾಸವಿರುಳು
ಜಾಗರವ ನೀ ಮರೆಯದಿರೆಚ್ಚರಿಕೆ !!
✓ ವ್ರತಗಳೆಲ್ಲವು ಹರಿವಾಸರ
ವ್ರತದ ಹಿಂದೆ !
✓ ಶೌರಿ ದಿನ ವ್ರತವನಾಚರಿಸದವ ಭ್ರಷ್ಟ !
✓ ಹರಿವಾಸರದುಪವಾಸದ ಭಾಗ್ಯವು
ಕಂದಕಂಡವರಿಗೆ ದೊರಕುವುದೆ !!
ಶ್ರೀ ಯಮಾಂಶ ಕನಕದಾಸರು ....
ನೇಮದಿ ಉಪವಾಸ ಆ ಮಹಾ ಏಕಾದಶೀ !
ಕಾಮ ಜನಕನನ್ನು ಪ್ರೇಮದಿ ಸ್ಮರಿಸದೆ !
ಹ್ಯಾಂಗೆ ನೀ ದಾಸನಾದಿ !!
ಶ್ರೀ ರುದ್ರಾಂಶ ಪ್ರಸನ್ವೆಂಕಟದಾಸರು...
ಹರಿದಿನಾ ಇಂಥಾ ಹರಿದಿನಾ !
ಹರಿದಿನದ ಮಹಿಮೆ ಹೊಗಳಲಗಾಧ !
ಪರಮ ಭಾಗವತರಾಚರಣೆಗಾಹ್ಲಾದ !
ದುರಿತದುಷ್ಕೃತಪರ್ವಕೆ ವಜ್ರನಾದ !
ಮರುತಸದ್ವ್ರತಕೆಲ್ಲ ಶಿರೋ ರತ್ನವಾದ !!
ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ವಿಜಯದಾಸರು...
✓ ಏಕಾದಶೀಯ ಮಾಡದವನ ವ್ರತವು ಯಾತಕೆ !
✓ ಸಕಲ ದಿನಂಗಳು ಹರಿದಿನದ ತರುವಾಯ !
✓ ಹರಿದಿನದುಪವಾಸ ಜಾಗರ ಪಾರಣೆ !
ಗುರು ಹಿರಿಯರಲಿ ವಿಹಿತ ಸೇವೆ !!
✓ ಬಿಸಜನಾಭನ ದಿವಸ ಮಾಡದಿದ್ದವ ಹೊಲೆಯ
✓ ಇಂದು ಪಾವನವಾಗಿರೋ !
ಇಂದಿರಾರಮಣನ್ನ ದಿನ ವ್ರತವ ಮಾಡಿ !!
ಶ್ರೀ ಮಾಂಡವ್ಯ ಋಷಿಗಳ ಅಂಶ ಸಂಭೂತರಾದ ಶ್ರೀ ಮೋಹನದಾಸರು....
ವ್ರತದೊಳಗೆ ಹರಿದಿನವು ಪರಮ ಶ್ರೇಷ್ಠ !
ಶ್ರೀ ಬೃಹಸ್ಪತಿ ಅಂಶ ಸಂಭೂತರಾದ ಜಗನ್ನಾಥದಾಸರು ....
ನಾಗೇಂದ್ರಶಯನನ ದಿನದುಪವಾಸವ !
ಜಾಗರ ಮಾಡದೆ ಮಲಗಿಪ್ಪಳಾ !
ಭಾಗವತ ಸಚ್ಛಾಸ್ತ್ರಗಳ ಕೇಳದೆ ಮತ್ತಳಾಗಿ -
ತಿರುಗುವವಳಾ ಕರೆದು ತನ್ನಿರೋ ಎಂದೂ !!
ಶ್ರೀ ಮರುದಂಶ ಪ್ರಾಣೇಶದಾಸರು ...
ಹರಿದಿನದಲಿ ಉಂಬೋರ ಮೊಗವ ನೋಡಲಿ ಒಲ್ಲೆ !
" ವಿಶೇಷ ವಿಚಾರ "
ಪ್ರತಿ ತಿಂಗಳಲ್ಲಿ ಬರುವ ಎರಡು ಏಕಾದಶೀಗಳಂದು ಏಕಾದಶ ಇಂದ್ರಿಯಗಳನ್ನು ನಿಗ್ರಹ ಮಾಡಿ, ಭಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮನ ಧ್ಯಾನ, ಜಪಗಳನ್ನೂ, ಹರಿ ನಾಮ ಸಂಕೀರ್ತನೆಯನ್ನು ಮಾಡುತ್ತಾ, ಶುದ್ಧ ಮನಸ್ಸಿನಿಂದ ಶ್ರೀ ಕೃಷ್ಣ ಪರಮಾತ್ಮನ ಹತ್ತಿರದಲ್ಲಿಯೇ ವಾಸ ಮಾಡುವುದನ್ನು " ಏಕಾದಶೀ ಉಪವಾಸ ವ್ರತ "
ಮುಕ್ತಿಯೋಗ್ಯವಾದ ಮಂಗಳಕರವಾದ ವ್ರತವೇ " ಏಕಾದಶೀ ವ್ರತ "
ಈ ಏಕಾದಶೀ ವ್ರತಾಚರಣೆಯಿಂದ ಶ್ರೀ ಕೃಷ್ಣ ಪರಮಾತ್ಮನ ವೈಕುಂಠ ಲೋಕ ಪ್ರಾಪ್ತಿಯಾಗಿ, ಶಾಶ್ವತವಾದ ಆನಂದ ಪಡೆಯುವನು.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ