ಬೆಂಗಳೂರು: ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ತೋರಿದರೆ ಅಪಾಯಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಘಟನೆ ನಡೆದಿದೆ. ಬೆಂಗಳೂರಿನ 32 ವರ್ಷದ ಯುವಕನೊಬ್ಬ ಮ್ಯೂಕರ್‌ಮೈಕೋಸಿಸ್ ಎಂಬ ಅಪರೂಪದ ಮತ್ತು ತೀವ್ರವಾದ ಫಂಗಲ್ ಸೋಂಕಿನಿಂದ ಬಳಲುತ್ತಿದ್ದರು, ಅಲ್ಲದೆ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ಕೂಡ ತಲುಪಿದ್ದರು. ಈ ರೀತಿಯ ಪ್ರಕರಣಗಳು ಕೋವಿಡ್ ಸಮಯದಲ್ಲಿ ಕಂಡುಬಂದಿತ್ತು, ತದನಂತರ ಈ ಕುರಿತು ಯಾರೂ ಎಚ್ಚೆತ್ತುಕೊಳ್ಳಲಿಲ್ಲ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಇಎನ್‌ಟಿ ತಜ್ಞರಾದ ಡಾ. ಯಶಸ್ವಿ ಶ್ರೀಕೌಳ.ರೋಗಿಯೊಬ್ಬರು ತಲೆ ಮತ್ತು ಕಣ್ಣಿನ ಸುತ್ತ ನೋವಿನಿಂದ ಬಳಲುತ್ತಿದ್ದರು. ಈ ರೀತಿಯ ಸಂದರ್ಭಗಳಲ್ಲಿ ಇದೊಂದು ಸಾಮಾನ್ಯ ನೋವು ಎಂದು ಅನೇಕರು ನಿರ್ಲಕ್ಷ್ಯ ತೋರುತ್ತಾರೆ ಮತ್ತು ಮನೆಮದ್ದುಗಳನ್ನು ಪ್ರಯೋಗಿಸುತ್ತಾರೆ. ಆದರೆ ತಲೆ, ಕಣ್ಣು, ಮೂಗಿನ ನೋವನ್ನು ನಿರ್ಲಕ್ಷಿಸಬಾರದು, ಅವು ಜೀವಕ್ಕೆ ಅಪಾಯ ತರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತಜ್ಞರು. ರೋಗಿಯು ವಾಸವಿ ಆಸ್ಪತ್ರೆಗೆ ಭೇಟಿ ನೀಡಿದಾಗ ನಾಸಲ್ ಎಂಡೋಸ್ಕೋಪಿಗೆ ಒಳಪಡಿಸಲಾಯಿತು. ರೋಗಿಯ ಮುಖದ ಬಲ ಮಧ್ಯದ ಟರ್ಬಿನೇಟ್ ಮೇಲೆ ಕಪ್ಪಾದ ಡಿಸ್ಚಾರ್ಜ್ (blackish discharge) ಕಂಡುಬಂದಿತು. ನಂತರ ಫಂಗಲ್ ಪರೀಕ್ಷೆಯಲ್ಲಿ ಮ್ಯೂಕರ್‌ಮೈಕೋಸಿಸ್ ಇದೆ ಎಂಬುದು ದೃಢಪಟ್ಟಿತು. ಮೆದುಳಿನಲ್ಲಿ ಬಾವು ಕಂಡುಬಂದ ಹಿನ್ನೆಲೆ ಚಿಕಿತ್ಸೆ ನೀಡದಿದ್ದರೆ ಸೋಂಕು ಶಾಶ್ವತವಾಗಿ ಅಂಧತ್ವಕ್ಕೆ ಕಾರಣವಾಗುತ್ತಿತ್ತು. ಸೋಂಕಿತ ಸೈನಸ್ ಅನ್ನು ಸ್ವಚ್ಛಗೊಳಿಸಲು ಮತ್ತು ಕಪ್ಪಾದ ಡಿಸ್ಚಾರ್ಜ್ ಹರಡುವಿಕೆಯನ್ನು ತಡೆಗಟ್ಟಲು ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ನಡೆಸುವುದು ತಡವಾಗಿದ್ದಿದ್ದರೆ ರಾತ್ರೋರಾತ್ರಿ ರೋಗಿಯು ತಮ್ಮ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರು. ಕೋವಿಡ್ ನಂತರದಲ್ಲಿ ಹಲವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದು, ಇಂಥವರಲ್ಲಿ ಸೋಂಕು ವೇಗವಾಗಿ ಹರಡುತ್ತದೆ ಎಂದು ಡಾ. ಶ್ರೀಕೌಳ ವಿವರಿಸಿದರು.
ಸಣ್ಣ ತಲೆನೋವು ಎಂದು ಕಡೆಗಣಿಸಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ !
December 12, 2025
0
ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಆರು ವಾರಗಳ ಕಾಲ ಇಂಟ್ರಾವೆನಸ್ ಆಂಫೋಟೆರಿಸಿನ್ ಬಿ (Amphotericin B) ಥೆರಪಿ ನೀಡಲಾಯಿತು. ತದನಂತರದಲ್ಲಿ ಕೈಗೊಂಡ ಎಂಆರ್‌ಐ ಸ್ಕ್ಯಾನ್ ಮೂಲಕ ಸೋಂಕು ಸಂಪೂರ್ಣವಾಗಿ ನಿವಾರಣೆಯಾಗಿರುವುದು ತಿಳಿದುಬಂದಿತು. ಇಲ್ಲಿ ಸಂತೋಷದ ವಿಷಯವೆಂದರೆ ರೋಗಿಯು ಆರೋಗ್ಯದ ಜೊತೆಗೆ ದೃಷ್ಟಿಯನ್ನು ಕಳೆದುಕೊಳ್ಳುವುದು ಸಹ ತಪ್ಪಿತು. ಈ ಪ್ರಕರಣದಿಂದ ತಿಳಿದುಬಂದದ್ದೇನೆಂದರೆ ತಲೆನೋವು, ಮೂಗಿನ ಅಸ್ವಸ್ಥತೆಯನ್ನು ವಿಶೇಷವಾಗಿ COVID-ನಂತರದ ದಿನಗಳಲ್ಲಿ ರೋಗಿಗಳು ನಿರ್ಲಕ್ಷಿಸಬಾರದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಯಾವುದೇ ಆರೋಗ್ಯ ಸಮಸ್ಯೆಯಾಗಲಿ ರೋಗಲಕ್ಷಣಗಳು ಕಂಡೊಡನೆ ಶೀಘ್ರವಾಗಿ ತಜ್ಞರನ್ನು ಭೇಟಿ ಮಾಡುವುದು ಒಳಿತು ಎನ್ನುತ್ತಾರೆ ಡಾ. ಯಶಸ್ವಿ ಶ್ರೀಕೌಳ.