ಮಕ್ಕಳ ಕುಂದುಕೊರತೆ ಆಲಿಸುವುದು ಸರ್ಕಾರದ ಆದ್ಯ ಕರ್ತವ್ಯ: ಡಾ.ತಿಪ್ಪೇಸ್ವಾಮಿ

varthajala
0

 ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಗುರುತಿಸಿರುವಂತೆ ಮಕ್ಕಳು ಭಾಗವಹಿಸುವ ಹಕ್ಕುನ್ನು ಹೊಂದಿದ್ದಾರೆ. ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಭಾಗವಹಿಸುವ, ತಮ್ಮ ಕುಂದುಕೊರತೆಗಳನ್ನು ಹಂಚಿಕೊಳ್ಳುವ ಹಕ್ಕು ಅವರಿಗಿದೆ. ಹೀಗೆ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡುವುದು ಮತ್ತು ಅವರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ರವರು ಹೇಳಿದರು.ಅವರು ಸಿರಾ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಿರಾ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಡಳಿತ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಅವರಲ್ಲಿ ಜವಾಬ್ದಾರಿ, ವಿಶ್ವಾಸ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗೌರವದ ಪ್ರಜ್ಞೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಮಕ್ಕಳು ತಮ್ಮ ಭಾವನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿದಾಗ, ಅವರು ಜವಾಬ್ದಾರಿಯುತ ಹಾಗೂ ಪ್ರಶ್ನೆಮಾಡಬಲ್ಲ ನಾಗರೀಕರಾಗಿ ರೂಪುಗೊಳ್ಳುತಾರೆ ಎಂದರು. 
ಸಂವಾದಲ್ಲಿ ಸಿರಾ ನಗರ ಹಾಗೂ ಗ್ರಾಮೀಣ ಭಾಗದ ೨೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮ ಅಹವಾಲುಗಳನ್ನು ಹಂಚಿಕೊಂಡರು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವುದು, ಕೊಠಡಿಗಳ ದುರಸ್ಥಿ, ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದು, ಬಸ್ ಗಳ ಸಮಯ ಬದಲಾವಣೆ ಮಾಡುವುದು, ಶಾಲಾ ಆವರಣಗಳಲ್ಲಿ ಕುಡುಕರ ಹಾವಳಿ ತಪ್ಪಿಸುವುದು, ರಸ್ತೆಯಲ್ಲಿ ವೀಲಿಂಗ್ ಮಾಡುವುದನ್ನು ತಪ್ಪಿಸುವುದು, ಶಾಲೆಯ ಬಳಿ ಸೂಚನಾ ಫಲಕ ಹಾಕುವುದು, ಸಿರಾ ನಗರದ ರಸ್ತೆ ಬದಿಗಳಲ್ಲಿ ಸುರಿದಿರುವ ಕಸದ ರಾಶಿಯನ್ನು ತೆರವುಗೊಳಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದು, ಬಾಲ ಕಾರ್ಮಿಕರನ್ನು ರಕ್ಷಿಸುವುದು, ಶಾಲೆಗಳಲ್ಲಿ ಆಟದ ಅವಧಿಗಳನ್ನು ಕಡಿತಮಾಡದಿರುವುದು, ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ ಮಾಡುವುದು, ಹೀಗೆ ಮಕ್ಕಳು ತಾವು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ನೆರೆದಿದ್ದ ಆಯೋಗದ ಸದಸ್ಯರು ಹಾಗೂ ಅಧಿಕಾರಿಗಳ ಮುಂದೆ ಹಂಚಿಕೊಂಡರು. 
ಸಂವಾದದಲ್ಲಿ ಸಿರಾ ತಾಲ್ಲೂಕು ತಹಶಿಲ್ದಾರರು ಹಾಗೂ ದಂಡಾಧಿಕಾರಿಗಳಾದ ಶ್ರೀ ಆನಂದ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಪವಿತ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ಸೌಮ್ಯ, ಪೌರಾಯುಕ್ತರಾದ ಶ್ರೀ ರುದ್ರೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀ ಸಿದ್ಧೇಶ್ವರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಬಡಿಗೇರ್, ಪಿಎಸ್.ಐ ಶ್ರೀಮತಿ ರೇಣುಕಾ ಯಾದವ್, ಕಾರ್ಮಿಕ ನಿರೀಕ್ಷಕ ಶ್ರೀ ಅಬ್ದುಲ್ ರಪುಲ್, ಕೆ.ಎಸ್.ಆ.ಟಿಸಿ ಅಧಿಕಾರಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿ ಮಕ್ಕಳ ಸಮಸ್ಯೆಗಳನ್ನು ಆಲಿಸಿ ಆಯಾ ಇಲಾಖೆಗೆ ಸಂಬಂಧಿಸಿದಂತೆ ಉತ್ತರಿಸಿದರು.



Post a Comment

0Comments

Post a Comment (0)