ಬೆಳಗಾವಿ / ಬೆಂಗಳೂರು:-ದೇವದುರ್ಗ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿನ ಅಮರಾಪುರ ಕ್ರಾಸ್ ಮತ್ತು ನವಿಲಗುಡ್ಡ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆ ಅವಶ್ಯಕತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅಮರಾಪುರ ಕ್ರಾಸ್ ಅಥವಾ ನವಿಲಗುಡ್ಡ ಗ್ರಾಮಕ್ಕೆ ಪ್ರೌಢಶಾಲೆಯೊಂದನ್ನು ಮಂಜೂರು ಮಾಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕಿ ಕರೆಮ್ಮ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರ ಉತ್ತರಿಸಿದ ಸಚಿವರು, ಅಮರಾಪುರ ಕ್ರಾಸ್ ಮತ್ತು ನವಿಲಗುಡ್ಡ ಶಾಲೆಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಅಥವಾ ಅನುದಾನಿತ ಪ್ರೌಢಶಾಲೆಗಳು ಇರುವುದಿಲ್ಲ. ಆದ್ದರಿಂತ ಈ ಎರಡು ಶಾಲೆಗಳ ಪೈಕಿ ಒಂದನ್ನು ಪ್ರೌಢಶಾಲೆಯಾಗಿ ಉನ್ನತಿಕರಿಸಲು ಸರ್ಕಾರ ಮಂಜೂರಾತಿ ನೀಡಲಿದೆ. ಇದರಿಂದ ನವಿಲಗುಡ್ಡ, ಬಾಗೂರು, ನೀಲವಂಜಿ, ಕರಡಿಗುಡ್ಡ, ಮಂಡಲಗುಡ್ಡ ಮತ್ತು ಹೇರುಂಡಿ ಶಾಲೆಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಮಲ್ಲೇಗೌಡರ ದೊಡ್ಡಿ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ಶಾಲಾ ಕಟ್ಟಡಗಳು ಹಾಗೂ ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇಲ್ಲಿ ಶಿಕ್ಷಕರನ್ನು ನಿಯೋಜಿಸಿ ತಾತ್ಕಾಲಿಕವಾಗಿ ಬ್ರ್ಯಾಂಚ್ ಶಾಲೆ ತೆರೆಯಲಾಗಿದೆ. ಮಲ್ಲೇಗೌಡರ ದೊಡ್ಡಿಯಲ್ಲಿ ನಿಯಮಾನುಸಾರ ಪ್ರಾಥಮಿಕ ಶಾಲೆ ಮಂಜೂರು ಮಾಡಲು ಪರಿಶೀಲನೆ ನಡೆಸುವುದಾಗಿ ಸಚಿವರು ತಿಳಿಸಿದರು.