ಪರಿಭಾವಿತ (ಡೀಮ್ಡ್) ಅರಣ್ಯ ವೀಸ್ತಿರ್ಣ ಪುನರ್ ಪರಿಶೀಲನೆಗೆ ಸಮಿತಿ ರಚನೆ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೇಗೆ ಆದೇಶ - ಅರಣ್ಯ ಸಚಿವ ಈಶ್ವರ ಖಂಡ್ರೆ

varthajala
0

 ಬೆಳಗಾವಿ / ಬೆಂಗಳೂರು:-ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಇದರ ಪುನರ್ ಪರಿಶೀಲನೆ ನಡೆಸಿ ವಾಸ್ತವದಲ್ಲಿರವ ಪರಿಭಾವಿತ ಅರಣ್ಯ ಪ್ರದೇಶವನ್ನು ಗುರುತಿಸಲು ಸಮಿತಿ ರಚನೆ ಮಾಡಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳರ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರ ಉತ್ತರಿಸಿದ ಸಚಿವರು, ಅರಣ್ಯ ಇಲಾಖೆ ಜಾಗ ಗುರುತಿಸಲು ಅನುಕೂಲವಾಗುವಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಲು ಆದೇಶ ಮಾಡಲಾಗಿದೆ. ಪರಿಭಾವಿತ ಅರಣ್ಯ ಪ್ರದೇಶದ ವಿಸ್ತೀರ್ಣ ಪುನರ್ ಪರಿಶೀಲಿಸಲು ನೇಮಿಸಿರುವ ಸಮಿತಿ 6 ತಿಂಗಳಿನಲ್ಲಿ ತನ್ನ ವರದಿ ನೀಡಲಿದೆ. ಇದಕ್ಕೂ ಮುನ್ನ ಪ್ರತಿ ಜಿಲ್ಲೆಗೆ ಸಂಬಂಧಿಸಿದಂತೆ ಪರಿಭಾವಿತ ಅರಣ್ಯ ವಿಸ್ತೀರ್ಣ ಕುರಿತು ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ವರದಿ ಮಂಡಿಸಿ, ಎಲ್ಲಾ ಶಾಸಕರಿಗೂ ಮಾಹಿತಿ ನೀಡುವಂತೆ ಇಲಾಖೆಯಿಂದ ಆದೇಶ ನೀಡಲಾಗಿದೆ ಎಂದು ತಿಳಿಸಿದರು.ಕೋಲಾರ ಜಿಲ್ಲೆಯಲ್ಲಿ 36992 ಹೆಕ್ಟೇರ್ ಮೀಸಲು, 545.65 ಹೆಕ್ಟೇರ್ ಗ್ರಾಮ, 2885.59 ಹೆಕ್ಟೇರ್ ರಕ್ಷಿತ, ಸೆಕ್ಷೆನ್ 04 ಅಡಿ 1047.55 ಹೆಕ್ಟೇರ್, 5529.89 ಹೆಕ್ಟೇರ್ ವರ್ಗೀಕರಿಸಿದ ಹಾಗೂ 4986.70 ಹೆಕ್ಟೇರ್ ಪರಿಭಾವಿತ ಅರಣ್ಯವಿದೆ. ಒಟ್ಟಾರೆ ಜಿಲ್ಲೆಯಲ್ಲಿ 51987 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಕಂದಾಯ, ಮೋಜಿಣಿ ಮತ್ತು ಅರಣ್ಯ ಇಲಾಖೆಗಳು ಜಂಟಿ ಮೋಜಿಣಿ ಕಾರ್ಯಕೈಗೊಂಡು ಅಕ್ರಮ ಅರಣ್ಯ ಒತ್ತುವರಿ ಪ್ರದೇಶವನ್ನು ಗುರುತಿಸಿದ್ದಾರೆ. ಕರ್ನಾಟಕ ಅರಣ್ಯ ಕಾಯಿದೆ 1964ರ ಕಲಂ 64(ಎ) ಅನ್ವಯ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಒಮ್ಮೆ ಪಹಣಿಯಲ್ಲಿ ಅರಣ್ಯ ಎಂದು ನಮೂದಾದರೆ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅನುಮತಿ ಪಡೆಯದೆ ಸಂಬಂದಿಸಿದ ಜಮೀನನ್ನು ಯಾರಿಗೂ ಮಂಜೂರು ಮಾಡಲು ಬರುವುದಿಲ್ಲ. ಸರ್ವೋಚ್ಛ ನ್ಯಾಯಾಲಯವು ಸಹ ಒಮ್ಮೆ ಅರಣ್ಯ ಎಂದರೆ ಸದಾ ಅರಣ್ಯ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಖಾಸಗಿ ಹಾಗೂ ಪಟ್ಟಾ ಜಮೀನು ಹೊಂದಿರವ ಯಾರನ್ನು ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸಿ ತೊಂದರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.ಬಂಗಾರಪೇಟೆ ತಾಲ್ಲೂಕಿನ ಇಂದಿರಾಗಾಂಧಿ ಪಾರ್ಕ್ ಅಭಿವೃದ್ಧಿ ಪಡಿಸಲು 2016-17 ರಿಂದ 2025-26 ರವರೆಗೆ ರೂ.2.37 ಕೋಟಿ ಅನುದಾನ ನೀಡಲಾಗಿದೆ. ಅಗತ್ಯವಿದ್ದಲ್ಲಿ ಶಾಸಕರ ಬೇಡಿಕೆ ಮೇರೆಗೆ ಅನುದಾನ ಒದಗಿಸಲಾಗುವುದು. ಮಾಲೂರು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ತಡೆಗಟ್ಟಲು 74.43 ಕಿ.ಮೀ. ಸೋಲಾರ್ ತಂತಿಬೇಲಿ ಅಳವಡಿಸಲಾಗಿದೆ. ತಂತಿಬೇಲಿ ನಿರ್ವಹಣೆ ಅಗತ್ಯ ಇರುವ ಅನುದಾನವನ್ನು ಸಹ ನೀಡುವುದಾಗಿ ಸಚಿವರು ತಿಳಿಸಿದರು.ರಾಜ್ಯದ ಎಲ್ಲೆಡೆ ಪರಿಭಾವಿತ ಅರಣ್ಯ ವಿಸ್ತೀರ್ಣದ ಗೊಂದಲ ನಿವಾರಣೆ ಸರ್ಕಾರ ಸಮಿತಿ ರಚಿಸಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಸಮಿತಿ ರಚಿಸುವ ವರದಿಯನ್ನು ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಜಂಟಿ ಸರ್ವೇ ಕಾರ್ಯ ಮುಗಿಯುವವರೆಗೆ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಶಾಸಕರುಗಳಾದ ಸಿ.ಸಿ.ಪಾಟೀಲ್, ಸುನಿಲ್‍ಕುಮಾರ್, ಅರಗ ಜ್ಞಾನೇಂದ್ರ, ಭಾಗೀರತಿ ಮರುಳ್ಯ ಸೇರಿದಂತೆ ಶಾಸಕರು ಸಚಿವರಲ್ಲಿ ಕೋರಿದರು.

Post a Comment

0Comments

Post a Comment (0)