ಬೆರಗುಗೊಳಿಸಿದ ವಿದಿತಾ ನಾಟ್ಯಾಮೋದ

VK NEWS
0

ಖ್ಯಾತ ‘ಶ್ರದ್ಧಾ ಡ್ಯಾನ್ಸ್ ಸೆಂಟರ್’ ನೃತ್ಯಶಾಲೆಯ ಬದ್ಧತೆಯ ಗುರುವೆಂದು ಹೆಸರಾದ, ಸ್ವತಃ ಅತ್ಯುತ್ತಮ ನೃತ್ಯ ಕಲಾವಿದೆಯಾದ ವಿ. ಶಮಾ ಕೃಷ್ಣಾ ಅವರ ವಿಶಿಷ್ಟ ನಾಟ್ಯಶಿಕ್ಷಣದಲ್ಲಿ ಕಲಾಪ್ರಪೂರ್ಣವಾಗಿ ಅರಳಿದ ಪುಟ್ಟ ಕಲಾವಿದೆ ವಿದಿತಾ ನವೀನ್,  ತನ್ನ ಮನೋಜ್ಞ ನೃತ್ಯ ವೈಖರಿಯಿಂದ ಸಮಸ್ತ ಕಲಾರಸಿಕರನ್ನು ಮಂತ್ರಮುಗ್ಧಗೊಳಿಸಿದಳು.  ಸಂದರ್ಭ – ನಗರದ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಈ ಬಾಲಪ್ರತಿಭೆ ತನ್ನ ವಯಸ್ಸಿಗೂ ಮೀರಿದ ನುರಿತಾಭಿನಯ, ಮಿಂಚಿನ ಸಂಚಾರದ ಅಪೂರ್ವ ನೃತ್ತ ವಿನ್ಯಾಸಗಳಿಂದ, ಬೆರಗುಗೊಳಿಸಿದ ಆಂಗಿಕಾಭಿನಯದಿಂದ ಚಿರಸ್ಮರಣೀಯವಾದ ವಿಶೇಷ ಅನುಭವವನ್ನು ಕಟ್ಟಿಕೊಟ್ಟರು.




ವೇದಿಕೆಯ ಮೇಲೆ ಮಿಂಚಿನ ಬಳ್ಳಿಯೊಂದು, ಇಡೀ ರಂಗವನ್ನು ಬಳಸಿಕೊಂಡು ಪ್ರತಿಯೊಂದು ನೃತ್ಯ ಕೃತಿಯನ್ನೂ ವಿಶೇಷ ಆಯಾಮದಲ್ಲಿ ಪ್ರಫುಲ್ಲವಾಗಿ ಪ್ರಸ್ತುತಿಪಡಿಸಿದ್ದು ಕಲಾವಿದೆಯ ಅಸ್ಮಿತೆಯೇ ಸರಿ. ವಿಘ್ನ ವಿನಾಯಕನ ಆರಾಧನೆ, ‘ನರಸಿಂಹ ಕೌತ್ವಂ’ದ ನಾರಸಿಂಹನ ಕೌತುಕ ಭಂಗಿಗಳು, ಉಗ್ರಸ್ವರೂಪದ ಸಾಕ್ಷಾತ್ಕಾರದಲ್ಲಿ ಮೈ ನವಿರೇಳಿಸಿತು. 

 ನಂತರ- ರಾಮಾಯಣದ ಘಟನೆಗಳ ಆಧಾರಿತ, ‘ವರ್ಣ’ ಅತ್ಯಮೋಘವಾಗಿ ಮೂಡಿಬಂತು. ಅಶೋಕವನದಲ್ಲಿ ಶೋಕತಪ್ತಳಾಗಿ ಕುಳಿತ ಸೀತೆ ತನ್ನ ಪತಿ ಶ್ರೀರಾಮಚಂದ್ರನನ್ನು ನೆನೆಯುತ್ತ ಅವನ ಮಹಿಮೆಯ ಪ್ರತಿ ಘಟನೆಗಳನ್ನೂ ನೆನೆದು ದುಃಖಿಸುತ್ತ, ಇಂಥವನು ನನ್ನ ಸ್ವಾಮಿ ಎಂದು ಪರೋಕ್ಷವಾಗಿ ಆ ಮಹಾಮಹಿಮನ ಶೌರ್ಯ- ಪರಾಕ್ರಮಗಳ ಜೊತೆ ಅವನ ಕರುಣಾಳು- ದಯಾರ್ದ್ರ ಗುಣಗಳನ್ನು ಒಳಗೊಂಡ ಚಿತ್ರಣವನ್ನು ತನ್ನ ಬಹು ಸೊಗಸಾದ ತಲ್ಲೀನ ಅಭಿನಯ ಚಾತುರ್ಯದಿಂದ ಕಟ್ಟಿಕೊಡುತ್ತಾಳೆ. ಕಲಾವಿದೆಯ ನೃತ್ಯ ಸಾಮರ್ಥ್ಯವನ್ನು ಉದ್ದೀಪಿಸುವ, ಗುರು ಶಮಾ ಅವರ ಸುಸ್ಪಷ್ಟ, ಓತಪ್ರೋತ ನಟುವಾಂಗದ ಸೊಗಡು ಗಾಢವಾಗಿ  ಆಕರ್ಷಿಸಿತು. ಮುಂದೆ ಮನರಂಜಿಸಿದ ಕೃತಿ – ತಾಯಿ ಯಶೋದೆ ಮತ್ತು ಬಾಲಕೃಷ್ಣರ ವಾತ್ಸಲ್ಯದ ಚಿತ್ರಣವನ್ನು ಕಲಾವಿದೆ ಸುಂದರವಾಗಿ ಕಟ್ಟಿಕೊಟ್ಟಳು. ‘ತಿಲ್ಲಾನ’ದ ಆನಂದದ ನರ್ತನದ ನಂತರ ವಿದಿತಾ, ಅಂತ್ಯದಲ್ಲಿ,  ‘ಚಿತ್ರ ನೃತ್ಯಂ’ ಎಂಬ ವಿಸ್ಮಯಕಾರಕವಾದ ಅಷ್ಟೇ ಕಲಾತ್ಮಕವಾಗಿದ್ದ ನೃತ್ಯ  ‘ಮಯೂರ ಕೌತ್ವಂ’ ನಯನ ಮನೋಹರವಾಗಿ ಚೋದಿಸಿತು. ನೆಲದ ಮೇಲೆ ಹರವಿದ ರಂಗೋಲಿಯ ಮೇಲೆ ಕಲಾವಿದೆ ಮಯೂರದಂತೆ ಕೊರಳು ಕೊಂಕಿಸುತ್ತ, ಮಯೂರದ ಹಸ್ತಮುದ್ರೆಗಳಿಂದ ನರ್ತಿಸುತ್ತ, ತನ್ನ ಲಯಾತ್ಮಕ ಹೆಜ್ಜೆಗಳಿಂದ ರಚಿಸಿದ ಸುಂದರ ನವಿಲು, ಗರಿಬಿಚ್ಚಿ ನಲಿದುದನ್ನು ಕಂಡು ಇಡೀ ಸಭಾಂಗಣ ಅಚ್ಚರಿಯಿಂದ ಉದ್ಗಾರ ತೆಗೆದಿತ್ತು. 

                                                      **************     ವೈ.ಕೆ.ಸಂಧ್ಯಾ ಶರ್ಮ

Post a Comment

0Comments

Post a Comment (0)