" ದಿನಾಂಕ : 31.12.2025 ಬುಧವಾರ - ಶ್ರೀ ವಿಶ್ವಾವಸು ನಾಮ ಸಂವತ್ಸರ ಪುಷ್ಯ ಶುದ್ಧ ದ್ವಾದಶೀ - ಶ್ರೀ ಸುರೇಂದ್ರತೀರ್ಥರ ಆರಾಧನಾ ಮಹೋತ್ಸವ "
" ಶ್ರೀ ಪ್ರಾಣೇಶದಾಸರ ಕಣ್ಣಲ್ಲಿ ... "
ಪೊಂದಿದವರ । ನೋಯ ।
ದಂದದಿ ಸಲಹುವ ।
ಎಂದೆಂದೂ ಬಿಡದೆ । ಶ್ರೀ ಸು ।
ರೇಂದ್ರಾಖ್ಯ ಮುನಿಪಾ ।।
ಯಶ್ಚಕಾರೋಪವಾಸೇನ
ತ್ರಿವಾರಂ ಭೂಪ್ರದಕ್ಷಿಣಂ ।
ತಸ್ಮೈ ನಮೋ ಯತೀಂದ್ರಾಯಾ
ಶ್ರೀ ಸುರೇಂದ್ರ ತಪಸ್ವಿನೇ ।।
ಅಂದರೆ, ಮೂರು ಬಾರಿ ನಿರಶನ ವ್ರತದಿಂದ ಭಾರತದ ಸಕಲ ತೀರ್ಥ ಕ್ಷೇತ್ರ ಯಾತ್ರೆ ಮಾಡಿದ ಮಹಾ ತಪಸ್ವಿಗಳಾದ ಶ್ರೀ ಸುರೇಂದ್ರತೀರ್ಥರಿಗೆ ನಮಸ್ಕಾರವು ಎಂಬ ಶ್ರೀ ವಿಜಯೀಂದ್ರತೀರ್ಥ ವಿರಚಿತ ಚರಮ ಶ್ಲೋಕದಿಂದ ಪ್ರತಿಪಾದ್ಯರಾದ ಈ ಮಹಾನುಭಾವರು
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿಗಳೂ;; ಜ್ಞಾನಿ ನಾಯಕರೂ; ಮಾನಸಪೂಜಾ ಧುರಂಧರರೂ ಆಗಿದ್ದಾರೆ.
ಶ್ರೀಮದಾಚಾರ್ಯರ ಮೂಲ ಪೀಠದಲ್ಲಿ 98 ವರ್ಷಗಳ ಸಾರ್ಥಕ ಜೀವನ ನಡೆಸಿ ಲೋಕ ಕಲ್ಯಾಣ ಮಾಡಿದ ಯತಿಸಾರ್ವಭೌಮರು ಶ್ರೀ ಸುರೇಂದ್ರತೀರ್ಥರು.
ಮೂರು ಬಾರಿ ಸಮಸ್ತ ತೀರ್ಥ ಕ್ಷೇತ್ರ ಯಾತ್ರೆಯಿಂದ ಸಕಲ ತೀರ್ಥ ಕ್ಷೇತ್ರಗಳನ್ನೂ ಪವಿತ್ರಗೊಳಿಸಿದ ಮತ್ತು ಸ್ವಯಂ ಪವಿತ್ರರಾದ - ನೂರಾರು ಜನ ವಿದ್ಯಾ ಶಿಷ್ಯರೂ - ಲಕ್ಷಾಂತರ ಶಿಷ್ಯ ಭಕ್ತ ಜನರಿಂದ ನಮಸ್ಕೃತರಾದ - ಮಾನಸ ಪೂಜಾ ಧೌರೀಣತೇ - ಅಪರೋಕ್ಷ ಜ್ಞಾನಾದಿ ಮಹಾ ಮಹಿಮಾ ಪೂರ್ಣರಾದ - ಸಜ್ಜನರು ಮತ್ತು ಸಜ್ಜನರಾದ ಪಂಡಿತರಿಂದ ಭಕ್ತಿ ಪೂರ್ವಕ ಪೂಜಿತ ಪವಿತ್ರ ಶರೀರವುಳ್ಳ - ಶ್ರೀ ಚತುರ್ಮುಖ ಬ್ರಹ್ಮದೇವರ ಕರಾರ್ಚಿತ ಶ್ರೀ ಮೂಲರಾಮಚಂದ್ರನ ಪೂಜಾ ಫಲ ಸಂಪಾದಿತರಾದ - ಚತುರ್ವಿಧ ಪುರುಷಾರ್ಥಗಳಿಂದ ಶೋಭಿತರು ಶ್ರೀ ಸುರೇಂದ್ರತೀರ್ಥರು!!
ಯಾವ ಮಹನೀಯರು ನಿರ್ಮಲವಾದ ಭಾರತ ಭೂಮಿಯನ್ನು ಉಪವಾಸ ಪೂರ್ವಕವಾಗಿ ಮೂರು ಸಲ ಸಂಚಾರ ಮಾಡಿ ಭಾರತ ಭೂಮಿಯನ್ನೂ - ಅಲ್ಲಿನ ಸಜ್ಜನರನ್ನು ಪಾವನಗೊಳಿಸಿದರೋ ಅಂಥಾ ಶ್ರೀಮದಾಚಾರ್ಯರ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರೂ - ಯತಿ ಶ್ರೇಷ್ಠರಾದ ಶ್ರೀಮತ್ಸುರೇಂದ್ರತೀರ್ಥರ ಆರಾಧಾನ ಮಹೋತ್ಸವದ ಪರಮ ಪವಿತ್ರವಾದ ಶುಭ ಸಂದರ್ಭದಲ್ಲಿ ಆ ಮಹಾನೀಯರ ಸಂಕ್ಷಿಪ್ತ ಮಾಹಿತಿಯ ಚಿಕ್ಕ ಪ್ರಯತ್ನ ಇಲ್ಲಿದೆ.
" ಶ್ರೀ ಸುರೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು :
ವಿದ್ವಾನ್ ಶ್ರೀ ವೇಂಕಟ ಕೃಷ್ಣಾಚಾರ್ಯರು
" ವಿದ್ಯಾಭ್ಯಾಸ "
ಇವರು ಪ್ರಾಥಮಿಕ ವಿದ್ಯೆಯನ್ನು ತಮ್ಮ ತಂದೆಯವರಲ್ಲಿಯೇ ಅಧ್ಯಯನ ಮಾಡಿ; ವೇದ - ವೇದಾಂತ - ಇತಿಹಾಸ - ಪುರಾಣ - ವ್ಯಾಕರಣ - ನ್ಯಾಯ ಮೀಮಾಂಸಾ ಶಾಸ್ತ್ರಗಳನ್ನು ಶ್ರೀ ಜಯತೀರ್ಥರ ಪೂರ್ವಾಶ್ರಮ ಸೋದರಳಿಯಂದಿರೂ ಮತ್ತು ವಿದ್ಯಾ ಶಿಷ್ಯರೂ ಆದ ಶ್ರೀ ರಾಜೇಂದ್ರತೀರ್ಥರಲ್ಲಿ ಅಧ್ಯಯನ ಮಾಡಿದರು.
" ವಿದ್ವಾನ್ ಶ್ರೀ ವೇಂಕಟ ಕೃಷ್ಣಾಚಾರ್ಯರು ಶ್ರೀ ಸುರೇಂದ್ರತೀರ್ಥರಾಗಿ ವಿರಾಜಿಸಿದ್ದು "
ವಿದ್ವಾನ್ ಶ್ರೀ ವೇಂಕಟ ಕೃಷ್ಣಾಚಾರ್ಯರಲ್ಲಿರುವ ಪಾಂಡಿತ್ಯ, ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಕಂಡು ಶ್ರೀ ರಘುನಂದನತೀರ್ಥರು ಶ್ರೀಮದಾಚಾರ್ಯರ ಸತ್ಸಂಪ್ರದಾಯದಂತೆ ತುರ್ಯಾಶ್ರಮವನ್ನು ನೀಡಿ " ಶ್ರೀ ಸುರೇಂದ್ರತೀರ್ಥ " ರೆಂಬ ಅಭಿಧಾನದಿಂದ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಮಂತ್ರೋಪದೇಶದೊಂದಿಗೆ ಪಟ್ಟಾಭಿಷೇಕ ಮಾಡಿ ಶ್ರೀ ಬ್ರಹ್ಮದೇವರ ಕರಾರ್ಚಿತ ಮೂಲರಾಮ - ಶ್ರೀಮದಾಚಾರ್ಯರ ದಿಗ್ವಿಜಯರಾಮದೇವರು - ಶ್ರೀ ಜಯತೀರ್ಥರ ಕರಾರ್ಚಿತ ಜಯರಾಮದೇವರ ಸಹಿತ ಮಹಾ ಸಂಸ್ಥಾನವನ್ನು ವಹಿಸಿಕೊಟ್ಟರು.
ಅವರಿಗೆ ಶ್ರೀ ಸುರೇಂದ್ರತೀರ್ಥರೆಂದಿಟ್ಟ ಹೆಸರು ಸಾರ್ಥಕವಾಯಿತು.
ಮಹಾ ವಿರಕ್ತರೂ - ಜ್ಞಾನಿಗಳೂ ಆದ ಶ್ರೀ ಸುರೇಂದ್ರತೀರ್ಥರು 71 ವರ್ಷಗಳ ಕಾಲ ಹಂಸನಾಮಕ ಪರಮಾತ್ಮನ ಮೂಲ ಪೀಠವನ್ನು ಆಳಿದರು.
" ಶ್ರೀ ಸುರೇಂದ್ರತೀರ್ಥರ ಪ್ರಪ್ರಥಮ ಭೂ ಪ್ರದಕ್ಷಿಣೆ "
ಶ್ರೀ ಸುರೇಂದ್ರತೀರ್ಥರು ತಮ್ಮ ಪ್ರಪ್ರಥಮ ಭೂ ಪ್ರದಕ್ಷಿಣೆ ಮಾಡುವ ಶುಭ ಸಂದರ್ಭದಲ್ಲಿ ಪ್ರಯಾಗಕ್ಕೆ ದಿಗ್ವಿಜಯ ಮಾಡಿಸಿದರು.
ಅಂದು ಮಾಘ ಬಹುಳ ಅಮಾವಾಸ್ಯೆ ಸೂರ್ಯ ಪರಾಗ ಸಮಯವಾಗಿತ್ತು.
ತಮ್ಮ ಗುರುಗಳಾದ ಶ್ರೀ ರಘುನಂದನತೀರ್ಥರ ಕಾಲದಲ್ಲಿ ಸಂಸ್ಥಾನಕ್ಕೆ ಶ್ರೀ ಬಹ್ಮದೇವರ ಕರಾರ್ಚಿತ ಮೂಲರಾಮಚಂದ್ರದೇವರ ಪ್ರತಿಮೆಯನ್ನು ತಂದು ಕೊಟ್ಟ ಬಾಡದ ಚಂದ್ರ ಭಟ್ಟರಿಗೆ ಮಠದ ಪಾರುಪತ್ಯೆ ಮತ್ತು ಇನ್ನಿತರ ಗೌರವ ಪ್ರಶಸ್ತಿಗಳನ್ನು ಕೊಟ್ಟು ಅದರಂತೆ ತಾಮ್ರಶಾಸನ ಬರೆಯಿಸಿ ಅನುಗ್ರಹಿಸಿದರು.
" ವಿಜಯನಗರ ಸಂಸ್ಥಾನಕ್ಕೆ ಶ್ರೀ ಸುರೇಂದ್ರತೀರ್ಥರ ಆಗಮನ "
ಶ್ರೀ ಸುರೇಂದ್ರತೀರ್ಥರು ಸಂಚಾರ ಕ್ರಮದಲ್ಲಿ ಕ್ರಿ ಶ 1513 ರಲ್ಲಿ ವಿಜಯನಗರ ಆಸ್ಥಾನಕ್ಕೆ ಬಂದು ಅಲ್ಲಿ ಶ್ರೀ ವಿಜಯವಿಠ್ಠಲ ದೇವಸ್ಥಾನದ ದಕ್ಷಿಣ ಭಾಗದಲ್ಲಿ ಬಿಡಾರ ಹೂಡಿದರು.
ಆಗ ರಾಮರಾಯ ರಾಜ್ಯದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದನು.
ಆ ರಾಮರಾಯನು ಶ್ರೀ ಸುರೇಂದ್ರತೀರ್ಥರನ್ನು ಆದರದಿಂದ ಬರ ಮಾಡಿಕೊಂಡು ಆತಿಥ್ಯವನ್ನು ಮಾಡಿದ.
ಶ್ರೀಗಳವರು ಪ್ರಸನ್ನರಾಗಿ ಅವನನ್ನು ಅನುಗ್ರಹಿಸಿದರು.
ಅಷ್ಟರಲ್ಲಿ ಶ್ರೀ ರಾಮನವಮೀ ಸಮೀಪಿಸಿತು.
ರಾಮರಾಯ ಇನ್ನಿತರು ಮಹಾ ಸಂಸ್ಥಾನಕ್ಕೆ ಬಂದು ನಮಸ್ಕರಿಸಿ ನಮ್ಮ ಆಸ್ಥಾನದಲ್ಲಿಯೇ ಶ್ರೀ ಮೂಲರಾಮಚಂದ್ರನಿಗೆ ಮಹಾಭಿಷೇಕ ನೆರವೇರಿಸಬೇಕೆಂದು ಪ್ರಾರ್ಥಿಸಿದನು.
ಶ್ರೀಗಳವರು ಸ್ವಲ್ಪ ಯೋಚಿಸಿ ತಥಾಸ್ತು ಅಂದರು.
ಶ್ರೀ ಸುರೇಂದ್ರತೀರ್ಥರು ಆನಂದದಿಂದ ಶ್ರೀ ಮೂಲರಾಮ - ಶ್ರೀ ದಿಗ್ವಿಜಯರಾಮ - ಶ್ರೀ ಜಯರಾಮದೇವರಿಗೆ ಮಹಾಭಿಷೇಕ ಮಾಡಿ ಮಹಾ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು.
ಅದೇ ಸಂದರ್ಭದಲ್ಲಿ ರಾಮರಾಯನು ಶ್ರೀ ಸುರೇಂದ್ರತೀರ್ಥರಿಗೆ ಈ ಕೆಳಕಂಡ ಗ್ರಾಮಗಳನ್ನು ದಾನವಾಗಿ ಕೊಟ್ಟ.
ಮೊದಗಲ್ಲು ದೇಶದಲ್ಲಿನ ಆನೆಹೊಸೂರು ' ಮಯೂರ ಕ್ಷೇತ್ರದಲ್ಲಿ ಮಠವೂ ಸೇರಿ ( ಇದನ್ನು ಈ ಹಿಂದೆ ಶ್ರೀ ವಿಬುಧೇಂದ್ರತೀರ್ಥರಿಗೆ ದಾನ ಕೊಟ್ಟಿದ್ದನ್ನೇ ಈಗ ಮತ್ತೊಮ್ಮೆ ಕೊಟ್ಟ ).
ಕೊಪ್ಪಳ ದೇಶದ ಲೇಪಗಿರಿ - ಗಂಗಾವತಿ ದೇಶದ ಶಿರುಗಾಪುರ - ಕುಷ್ಟಗಿ ದೇಶದ ಮಲ್ಲಾಪುರ ಮತ್ತು ಹೊನ್ನಮಟ್ಟಿ - ತೆಕ್ಕಲಕೋಟೆ ದೇಶದ ಹೇರೇಕಲ್ಲು ( ತುಂಗಭದ್ರಾ ನದೀ ತೀರ ) - ಲಕ್ಷ್ಮೇಶ್ವರ ದೇಶದ ಠೊಳಲಿ - ಬಸವಾ ಪಟ್ಟಣ ದೇಶದ ಮಲ್ಲೂರಿನ ಕೆಳಗಿನ ಕಮ್ಮಾರಕಟ್ಟೆ - ಕುಮದ್ವತೀ ತೀರದ ರಟ್ಟಿಹಳ್ಳಿ ದೇಶದ ಚಿಕ್ಕಮೊರಟೆ -
ಸತ್ಪಾತ್ರರಲ್ಲಿ ದಾನ ಮಾಡುವ ರಾಜನ ವಿವೇಕವನ್ನು ನೋಡಿ ಸಭಿಕರೆಲ್ಲಾ ಅವನನ್ನು ಪ್ರಶಂಸಿಸಿದರು.
" ಇದೆಲ್ಲಾ ನಮಗೇಕೆ ರಾಜ? "
ಎಂದರು ಶ್ರೀಗಳವರು. "
ತಮಗಲ್ಲ ಸ್ವಾಮೀ!
ನನ್ನ ಉದ್ಧಾರಕ್ಕೆ " ಎಂದು ರಾಜನುತ್ತರಿಸಿದ.
ಆಗಲಪ್ಪಾ!
ಶ್ರೀಮನ್ಮೂಲರಘುಪತಿಯ ಭಂಡಾರಕ್ಕೆ ಕೊಟ್ಟಿದ್ದು ಎಂದಿಗೂ ವ್ಯರ್ಥವಾಗದು.
ಅದಕ್ಕೆ ನೂರು ಮಡಿ ನಿನಗೆ ಸಿಗುತ್ತದೆ ಎಂದು ಹೇಳಿ ಅವನನ್ನು ಅನುಗ್ರಹಿಸಿದರು.
" ಶ್ರೀ ವ್ಯಾಸರಾಜ ಗುರುಸಾರ್ವಭೌಮರಿನ್ದ ಸತ್ಕಾರ "
ಶ್ರೀ ಸುರೇಂದ್ರತೀರ್ಥರು ಮಹಾ ತಪಸ್ವಿಗಳೂ - ದೊಡ್ದ ಜ್ಞಾನಿಗಳೂ; ವ್ಯಾಪ್ತೋಪಾಸಕರು.
ಎಲ್ಲಿ ಫಲ ಪುಷ್ಪ ಭರಿತವಾದ ವನವನ್ನು ಅವರು ನೋಡಿದರೆ ಸಾಕು ಅದನ್ನು ಭಗವಂತನಿಗೆ ಅರ್ಪಿಸಿ ಬಿಡುತ್ತಿದ್ದರು.
ಹೀಗೆ ಅವರು ಯಾವಾಗಲೂ ಭಗವದ್ಧ್ಯಾನಪರರಾಗಿದ್ದರು.
ಶ್ರೀ ಸುರೇಂದ್ರತೀರ್ಥರ ತಪಃ ಶಕ್ತಿಯನ್ನು ಅರಿತ ಮುನಿತ್ರಯರಲ್ಲೊಬ್ಬರಾದ ಮಾಧ್ವ ಯತಿಕುಲ ತಿಲಕರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀಗಳವರನ್ನು ಆದರದಿಂದ ಸತ್ಕರಿಸಿದರು.
" ಮಾನಸ ಪೂಜಾ ಧುರಂಧರರೂ ಶ್ರೀ ಸುರೇಂದ್ರತೀರ್ಥರು "
ಒಮ್ಮೆ ಒಂದು ಚಮತ್ಕಾರದ ಸಂಗತಿ ನಡೆಯಿತು.
ಶ್ರೀ ವ್ಯಾಸರಾಯರ ಶಿಷ್ಯರು ತುಳಸೀಯನ್ನು ತಂದು ಇಟ್ಟರು.
ಶ್ರೀ ವ್ಯಾಸರಾಯರು ನಿತ್ಯವೂ ಪೂಜೆ ಮಾಡುವಂತೆ ಅದನ್ನು ಪೂಜಿಸಲು ತೊಡಗಿ ತುಳಸೀ ತಂದವರನ್ನು ಕರೆದು ಕೇಳಿದರು.
ಅದೇಕೆ?
ನಿರ್ಮಾಲ್ಯದ ತುಳಸೀ ತಂದಿದ್ದೀ?
ಇಲ್ಲ ಮಹಾಸ್ವಾಮೀ! ಬೆಳಿಗ್ಗೆ ದೂರವಾಗಿ ಊರ ಹೊರಗೆ ಹೋಗಿ ತುಳಸೀ ಬಿಡಿಸಿ ತಂದೆವು.
ಇಲ್ಲಪ್ಪಾ!
ಇದು ನಿರ್ಮಾಲ್ಯ.
ಓಹೋ ಮಾನಸ ಪೂಜಾ ಧುರಂಧರರಾದ ಶ್ರೀ ಸುರೇಂದ್ರತೀರ್ಥರಲ್ಲಿಗೆ ದಿಗ್ವಿಜಯ ಮಾಡಿರುವರು.
ಅಲ್ಲಿಯ ತುಳಸೀ ವನವನ್ನೇ ಅವರು ಶ್ರೀ ಹರಿಗೆ ಸಮರ್ಪಿಸಿದ್ದಾರೆ.
ಆಹಾ!
ಅಂಥವರ ಸಮಾಗಮವೇ ಮಹಾಭಾಗ್ಯ!
ಎಂದು ಶ್ರೀ ವ್ಯಾಸರಾಯರು ಬಹು ಬೇಗ ದೇವತಾರ್ಚನೆ ಮುಗಿಸಿಕೊಂಡು ಸಕಲ ರಾಜ ಮರ್ಯಾದೆಯೊಡನೆ ವಾದ್ಯ ವೈಭವದಿಂದ ಊರ ಹೊರಗೆ ಹೋಗಿ ಆ ವನದಲ್ಲಿ ತಂಗಿದ್ದ....
" ಶ್ರೀ ವಿಜಯೀಂದ್ರ ವಿಜಯ " ದಲ್ಲಿ..
ತುಂಗಭದ್ರಾನದೀತೀರೆ
ದೃಷ್ಟ್ವೋದ್ಯಾನಮನುತ್ತಮಂ ।
ಸ್ನಾತ್ವಾ ನದ್ಯಾಂ ವನೇರಾಮಂ
ಪೂಜಯದ್ಭಕ್ತಿಪೂರ್ವಕಂ ।।
ಶ್ರೀ ಸುರೇಂದ್ರತೀರ್ಥರನ್ನೆದಿರ್ಗೊಂಡು ನಗರಕ್ಕೆ ದಿಗ್ವಿಜಯ ಮಾಡಬೇಕೆಂದು ಪ್ರಾರ್ಥಿಸಿದರು.
ಶ್ರೀ ವ್ಯಾಸ ಯೋಗಿಗಳ ಮುಖ್ಯ ಶಿಷ್ಯನಾದ ಕರ್ನಾಟಕ ರಾಜಹಂಸನಾದ ಕೃಷ್ಣದೇವರಾಯ ತಮ್ಮ ಗುರುಗಳು ಈ ರೀತಿ ಬಿನ್ನವಿಸಿಕೊಂಡಿದ್ದನ್ನು ನೋಡಿ ಭಕ್ತಿಯಿಂದ ಪುಲಕಿತನಾಗಿ, ಅವನು ಶ್ರೀ ಸುರೇಂದ್ರತೀರ್ಥರಿಗೆ ಸಾಷ್ಟಾಂಗವೆರಗಿ ಕೈ ಮುಗಿದು ಪ್ರಾರ್ಥಿಸಿದ..
ನಮ್ಮ ಗುರುಗಳಿಂದ ಪೂಜ್ಯರಾದ ಶ್ರೀ ಸನ್ನಿಧಾನದ ದರ್ಶನವಾದದ್ದು ನನ್ನ ಜನ್ಮದಲ್ಲೇ ದೊಡ್ಡ ಸುಯೋಗ.
ಪಟ್ಟಣಕ್ಕೆ ದಯಾ ಮಾಡಿಸಿ ಅಲ್ಪನನ್ನು ಉದ್ಧರಿಸಬೇಕು.
ಮಹಾ ಸನ್ನಿಧಾನದಲ್ಲಿ ಹೆಚ್ಚು ವಿಜ್ಞಾಪಿಸಲು ಶಕ್ತನಲ್ಲ!!
" ಶ್ರೀ ಸುರೇಂದ್ರತೀರ್ಥರಿಗೆ ಶ್ರೀ ವ್ಯಾಸರಾಜರಿಂದ ಆತಿಥ್ಯ "
ಒಂದು ದಿನ ಶ್ರೀ ವ್ಯಾಸರಾಜರು ಶ್ರೀ ಸುರೇಂದ್ರತೀರ್ಥರನ್ನು ಕುರಿತು ಇಂದು ತಾವು ನಮ್ಮ ಮಠದಲ್ಲಿ ಮಹಾ ಸಂಸ್ಥಾನದ ಪೂಜೆ ಮಾಡಬೇಕು ಎಂದು ಆಹ್ವಾನಿಸಿದರು.
ದಿನವೂ ನಿಮ್ಮ ಮಠದಲ್ಲಿಯೇ ಶ್ರೀ ಮೂಲ ದಿಗ್ವಿಜಯ ಜಯರಾಮರ ಪೂಜೆ ನಡೆಯುತ್ತಿದೆ ಅಲ್ಲವೇ? ನೀವು ರಾಜರು - ರಾಜ ಗುರುಗಳು ಎಂದು ಶ್ರೀ ಸುರೇಂದ್ರತೀರ್ಥರು ನಗುತ್ತಾ ನುಡಿದರು.
ಹಾಗಲ್ಲಾ!
ಇಂದು ಮಾತ್ರ ನಮ್ಮ ಕೋರಿಕೆಯನ್ನು ನಡೆಸಬೇಕು ಎಂದು ಶ್ರೀ ವ್ಯಾಸರಾಯರು ಹೇಳಿದರು.
ಆಗಲಿ!
ಶ್ರೀ ಮೂಲರಾಮನಿಗೆ ಶ್ರೀ ಮೂಲ ಗೋಪಾಲಕೃಷ್ಣನಿಗೆ ಸತ್ಕಾರವೀಯುವುದನ್ನು ನೋಡುವುದೇ ನಮ್ಮ ಪುಣ್ಯ ವಿಶೇಷ!
" ಶ್ರೀ ಸುರೇಂದ್ರತೀರ್ಥರಿಂದ ಶ್ರೀ ಮೂಲರಾಮ - ದಿಗ್ವಿಜಯರಾಮ - ಶ್ರೀ ಜಯರಾಮರ ಪೂಜಾ ವೈಭವ "
ಆ ದಿನದ ವಿಶೇಷ ವ್ಯವಸ್ಥೆಗಳು ಶ್ರೀ ವ್ಯಾಸರಾಜರ ನೇತೃತ್ವದಲ್ಲೇ ನೆರವೇರಿದವು. ಕೃಷ್ಣ ಭೂಪತಿ ಕೈಕಟ್ಟಿಕೊಂಡು ನಿಂತಿದ್ದ.
ಈ ವಿಶೇಷ ರಹಸ್ಯ ಯಾರಿಗೂ ತಿಳಿಯಲಿಲ್ಲ.
ಶ್ರೀ ವ್ಯಾಸರಾಯರಿಗೆ ತಮ್ಮ ಶಿಷ್ಯರ ಪೈಕಿ ಶ್ರೀ ವಿಷ್ಣುತೀರ್ಥರೆಂದರೆ ಪಂಚಪ್ರಾಣ.
ಅವರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು.
ಶ್ರೀ ವಿಷ್ಣುತೀರ್ಥರಿಗೂ ಇಂದಿನ ಸಮಾರಂಭದ ನಿಮಿತ್ತ ಅರ್ಥವಾಗಲಿಲ್ಲ.
ಅಂದು ಅವರು ಅಲ್ಲೇ ಸಿದ್ಧವಾಗಿರಬೇಕೆಂದೂ ವ್ಯಾಸಂಗ ಮರುದಿನ ಮಾಡಬೇಕೆಂದೂ ಗುರುಗಳ ಆಜ್ಞೆಯಾಯಿತು.
ಶ್ರೀ ವಿಷ್ಣುತೀರ್ಥರು ಸರಿಯೆಂದು ಹೇಳಿ ಗುರುಗಳ ಹಿಂದೆಯೇ ಇದ್ದರು.
ಶ್ರೀ ವ್ಯಾರಾಜರು ಪೂಜೆಯನ್ನು ಮುಗಿಸಿ ಶ್ರೀ ಸುರೇಂದ್ರತೀರ್ಥರು ಪೂಜೆ ಮಾಡುತ್ತಿದ್ದ ಸ್ಥಳದ ಮುಂಭಾಗದಲ್ಲಿ ಕುಳಿತು ಮಹಾ ಸಂಸ್ಥಾನದ ಪ್ರತಿಮೆಗಳ ವಿವರವನ್ನು ತಿಳಿಸಬೇಕೆಂದು ಕೇಳಿದಾಗ ಅಲ್ಲೇ ಉಪಸ್ಥಿತರಿದ್ದ ಶ್ರೀ ನಾರದಾಂಶ ಪುರಂದರದಾಸರು ಈ ಕೆಳಗಿನಂತೆ ವಿವರಣೆ ನೀಡಿದರು.
ರಾಗ : ಬಿಲಹರಿ ತಾಳ : ಝಂಪೆ
ಇಂದಿನ ದಿನ ಸುದಿನವಾಯಿತು ।
ಇಂದಿರೇಶ ಮೂಲರಾಮಚಂದ್ರನ ।
ಪದ ಕಮಲಗಳು ಸುರೇಂದ್ರತೀರ್ಥ
ತೋರಿಸೆ ।। ಪಲ್ಲವಿ ।।
ಈತನ ಪದ ಕಮಲಗಳ । ವಿ ।
ಧಾತ ತನ್ನ ಸದನದೊಳಗೆ ।
ಸೀತೆಯ ಸಹ ಪೂಜಿಸೆ । ನರ ।
ನಾಥ ಇಕ್ಷ್ವಾಕುನಿಗೆಯಿತ್ತ ।।
ಆತನನುಸರಿದ ನೃಪರು ।
ಪ್ರೀತಿಯಿಂದಲರ್ಚಿಸಿ । ರಘು ।
ನಾಥ ವೇದಗರ್ಭಗಿತ್ತ ।
ನಾಥನ ಮೂರ್ತಿಯನು ಕಂಡು ।। ಚರಣ ।।
ಗಜಪತಿಯ ಭಂಡಾರದಲಿ ।
ಅಜನು ಪೂಜಿತನಾಗಿ । ಭೂ ।
ಮಿಜೆ ಸಹಿತ ಶ್ರೀರಾಮ ನಿರಲು ।
ನಿಜ ಜ್ಞಾನದಿಂದ ತಿಳಿದಾಗಾ ।।
ಸುಜನ ಗುರುವೆಂದೆನಿಸುವ ನಮ್ಮ ।
ಭಜಕ ಪಾಲಕ ನರಹರಿ ಮುನಿಪ ।
ಈ ಜಗವರಿಯ ಶ್ರೀ । ಅಂ ।
ಬುಜಲೋಚನ
ಮೂರುತಿಯ ಕಂಡು ।। ಚರಣ ।।
ಅಂದವುಳ್ಳ ಮೂಲರಾಮ ।
ಚಂದ್ರನ ಪದಯುಗಳನು ।
ವೃಂದಾರ ಕೇಂದ್ರವೆನಿಸುವಾ ।
ನಂದತೀರ್ಥ ಮುನಿಗಳಾ ।।
ನಂದದಿಂದಲರ್ಚಿಸಿ ನಮ್ಮನು ।
ಹೊಂದಿದ ಶಿಷ್ಯರ ಕರದ । ದಯಾ ।
ದಿಂದ ನಿಜಾನ್ವಯದೊಳಿಟ್ಟ । ಪು ।
ರಂದರವಿಠ್ಠಲನ ಸುರೇಂದ್ರ ಮುನಿಪ ।
ತಂದು ತೋರಲು ।। ಚರಣ ।।
ಅದಕ್ಕೆ ಶ್ರೀ ಯಮಾಂಶ ಸಂಭೂತರಾದ ಶ್ರೀ ಕನಕದಾಸರು ನಗುತ್ತಾ...
ದಾಸರೇ!
ಗುರುಗಳಾದ ಶ್ರೀ ವ್ಯಾಸರಾಯರು ಕೃಷ್ಣರಾಯನಿಗೆ ಈ ಚತುರ್ಯುಗ ಮೂರ್ತಿಯ ಮಹಿಮೆಯನ್ನು ತಿಳಿಸಲೆಣಿಸಿದ್ದರು. ನೀವು ವಿವರಿಸೆ ಬಿಟ್ಟಿರಲ್ಲ " ಎಂದರು.
ಶ್ರೀ ಚಂದ್ರಿಕಾಚಾರ್ಯರು, ಶ್ರೀ ಸುರೇಂದ್ರರೂ, ಶ್ರೀ ಪುರಂದರದಾಸರು ನಕ್ಕರು.
ಈ ವಿಚಿತ್ರವನ್ನು ಕಂಡವರು ಯಾರು ದೊಡ್ಡವರು, ಯಾರು ಮಹಾತ್ಮರು ಎಂದು ಅರಿಯಲರದೇ ಹೋದರು!!
" ಶ್ರೀ ಮೂಲಗೋಪಾಲಕೃಷ್ಣಾರಾಧಕರು ಶ್ರೀ ಮೂಲರಾಮನ ಪೂಜಾರಾಧಕರಾದ ಸಂದರ್ಭ "
ಶ್ರೀ ಸುರೇಂದ್ರತೀರ್ಥರು ಬಾರಿ ಬಾರಿಗೆ ಶ್ರೀ ವಿಷ್ಣುತೀರ್ಥರನ್ನು ನೋಡಿ ಹಿಗ್ಗುತ್ತಿದ್ದರು.
ಏನೋ ಯೋಚಿಸುತ್ತಿದ್ದರು.
ಶ್ರೀ ವಿಷ್ಣುತೀರ್ಥರ ಮುಖದಲ್ಲಿ ಇದೇಕೋ ವಿಚಿತ್ರ ಕಾಂತಿ ಪ್ರಕಾಶಿಸುತ್ತಿತ್ತು.
ಭಕ್ತಿಯಿಂದ ಕರ ಜೋಡಿಸಿ ಕುಳಿತಿದ್ದರು.
ದ್ವಾದಶೀ ಪಾರಣೆಯ ಸಮಯ. ಹಸ್ತೋದಕವಾಗಬೇಕು.
ಶ್ರೀ ಸುರೇಂದ್ರತೀರ್ಥರು ಏಕೋ ಸುಮ್ಮನೇ ಕುಳಿತಿದ್ದಾರೆ.
ಶ್ರೀ ವ್ಯಾಸರಾಜರು ಅತ್ತ ನೋಡಿದರು.
ಶ್ರೀ ಪುರಂದರದಾಸರು...
ಶ್ರೀ ಮೂಲರಾಮನಿಗೆ ಒಂದು ಮಹಾನ್ವ್ಯಕ್ತಿಯಾ ಮೇಲೆ ಕಣ್ಣು ಬಿದ್ದಿದೆ ಎನಲು..
ಶ್ರೀ ಚಂದ್ರಿಕಾಚಾರ್ಯರು...
ಶ್ರೀ ಮೂಲ ಗೋಪಾಲಕೃಷ್ಣ ಅದಕ್ಕೆಂದೇ ಸಾಕಿದ್ದಾನೆ! ಕೊಡೆತ್ತಾನೆ ಎಂದರು.
ಶ್ರೀ ವಿಷ್ಣುತೀರ್ಥರು...
ಆಜ್ಞಾ ಶಿರಸಾಮಾನ್ಯ ಎಂದ ಕೂಡಲೇ ಸುಮ್ಮನೆ ಕುಳಿತಿದ್ದ..
ಶ್ರೀ ವಾದಿರಾಜರು...
ಸ್ನೇಹದಿಂದ ಶ್ರೀ ವಿಷ್ಣುತೀರ್ಥರ ಬೆನ್ನು ಚಪ್ಪರಿಸಿ " ಹಾಗಾದರೆ ಖಂಡಿತ ಉಡುಪಿಗೆ ಬಂದು ಶ್ರೀ ಕೃಷ್ಣ ಕೊಡುವ ಮಠವನ್ನು ಮಿತ್ರರು ಸ್ವೀಕರಿಸಲೇಬೇಕು " ಎಂದು ಹೇಳಿದರು .
( ಪ್ರಸುತ ಉಡುಪಿಯ ರಾಜಬೀದಿಯಲ್ಲಿ ಶ್ರೀ ಕೃಷ್ಣನ ಎದುರಿಗೆ ವಿರಾಜಮಾನವಾದ ಶ್ರೀ ರಾಯರ ಮಠದ ಸ್ಥಳವನ್ನು ಶ್ರೀ ವಾದಿರಾಜರು ಶ್ರೀ ವಿಜಯೀಂದ್ರತೀರ್ಥರಿಗೆ ದಾನವಾಗಿ ಕೊಟ್ಟಿದ್ದರು. ಆ ಸ್ಥಳದಲ್ಲಿ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಶೀಲೇಂದ್ರತೀರ್ಥರು ಶ್ರೀ ರಾಯರ ಮೂಲ ಮೃತ್ತಿಕಾ ಬೃಂದಾವನವನ್ನು ಸ್ಥಾಪಿಸಿದ ಮಠವನ್ನು ಭಕ್ತರ ಅನುಕೂಲಕ್ಕಾಗಿ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಶಮೀಂದ್ರತೀರ್ಥರು ಮತ್ತು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಯತೀಂದ್ರತೀರ್ಥರು ನವೀಕರಿಸಿದ್ದಾರೆ ).
ಶ್ರೀ ಸುರೇಂದ್ರತೀರ್ಥರು...
" ಮೂಲರಾಮ ಪ್ರೀತನಾದ " ಎಂದು ತೃಪ್ತರಾಗಿ ಪಾರಣೆ ಮುಗಿಸಿದರು.
ಒಬ್ಬರು ಒಂದು ಹೇಳಿದರೆ ಮತ್ತೊಬ್ಬರು ಹಿಂದೂ ಮುಂದಿಲ್ಲದೇ ಇನ್ನೊಂದು ಹೇಳುವರು ನಿಜ! ಒಬ್ಬರಿಗಿಂತ ಒಬ್ಬರು ಅಸದೃಶ ಪಂಡಿತರೂ; ಮಹಾತ್ಮರೂ ಮತ್ತು ಅಪರೋಕ್ಷ ಜ್ಞಾನಿಗಳು.
ಆ ಮಹಾ ಮಹಿಮರ ಒಕ್ಕೂಟ ಒಂದು ನಾಟಕದಂತೆ ಅಜ್ಞರಿಗೆ ಭಾಸವಾಗುವುದು ಸಹಜ.
ಆದರೆ ಒಬ್ಬರ ಮನವನ್ನೊಬ್ಬರು ಅರಿಯಬಲ್ಲ ಜ್ಞಾನಿಗಳಿಗೆ ಅದೊಂದು ರಸ ನಿಮಿಷವಷ್ಟೇ.
ಪರಮಾತ್ಮನ ವ್ಯಾಪ್ತಿಯ ಹರಿತನವನು. ಆಹಾ! ಅಂಥಹಾ ಅಪರೋಕ್ಷ ಜ್ಞಾನಿಗಳನ್ನು ಕಣ್ಣಾರೆ ಕಂಡವರೆಂಥಹಾ ಮಹಾಭಾಗ್ಯಶಾಲಿಗಳು!!
" ಶ್ರೀ ವಿಷ್ಣುತೀರ್ಥರು ಶ್ರೀ ವಿಜಯೀಂದ್ರತೀರ್ಥರಾಗಿ ವಿರಾಜಿಸಿದ್ದು "
" ಶ್ರೀ ವಿಜಯೀಂದ್ರವಿಜಯ " ದಲ್ಲಿ ....
ಸುರೇಂದ್ರಸ್ಯ ಪ್ರದದೌ ಭಿಕ್ಷೋರ್ದಂಡಾಮಂಡಲಂ
ಮಂತ್ರಂ ದತ್ವಾ ಸ್ವವಂಶಸ್ಯ ಕರ್ತಾರಂ ಕೃತವಾನ್ ಮುನಿಃ ।
ಅಥಾಸೌ ವಿಷ್ಣುತೀರ್ಥಶ್ಚ ವಿಜಯೀ೦ದ್ರೇತಿ ವಿಶ್ರುತಃ
ಸುರೇಂದ್ರಸ್ಯ ಮುನೇಶ್ಶಿಷ್ಯೋ ಭೂತ್ವಾ ತ್ವಂ ಪರ್ಯತೋಷಯತ್ ।।
ಶ್ರೀ ವಿಷ್ಣುತೀರ್ಥರಿಗೆ ದಂಡ ಕಮಂಡಲು ಪಲ್ಲಟ ಮಾಡಿ ಮುದ್ರಾಧಾರಣೆ ಮಂತ್ರೋಪದೇಶ ಮಾಡಿ " ಶ್ರೀ ವಿಜಯೀಂದ್ರತೀರ್ಥ " ರೆಂದು ನಾಮಕರಣ ಮಾಡಿ ತಮ್ಮ ಸ್ವಹಸ್ತಗಳಿಂದ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿದರು.
" ನೂತನ ಗುರುಗಳು "
ಶ್ರೀ ಶಾಲಿವಾಹನ ಶಕೆ 1497ನೇ ಕ್ರಿ ಶ 1575 ಯುವ ನಾಮ ಸಂವತ್ಸರದ ಚೈತ್ರ ಶುದ್ಧ ಚತುರ್ದಶೀ ಶುಭ ದಿನದಂದು ಶ್ರೀ ನಾರಾಯಣಾಚಾರ್ಯರು ಸಂನ್ಯಾಸಾಶ್ರಮ ಸ್ವೀಕಾರ ಮಾಡಿ, ಕಾಷಾಯಾಂಬರ - ದಂಡ ಕಮಂಡಲಧಾರಿಗಳಾಗಿ ಬಂದು ಶ್ರೀ ಸುರೇಂದ್ರತೀರ್ಥರಿಗೂ, ಶ್ರೀ ವಿಜಯೀಂದ್ರತೀರ್ಥರಿಗೂ ಪಾದಪೂಜೆ ಮಾಡಿ ವಿನೀತರಾಗಿ ನಿಂತಿರುವ ನೂತನ ಯತಿಗಳಿಗೆ ಶ್ರೀ ಸುರೇಂದ್ರತೀರ್ಥರು ಮಂತ್ರ ಮುದ್ರಾಧಾರಣೆ, ಗುರೂಪದೇಶ, ಮಹಾ ಮಂತ್ರೋಪದೇಶ, ಚತುಃಷಷ್ಟಿ ಕಲೆಗಳ ಉಪದೇಶಗಳನ್ನೂ ಮಾಡಿ ಅವರನ್ನು ಸಿದ್ಧವಾಗಿರುವ ಭದ್ರಾಸನದಲ್ಲಿ ಮಂಡಿಸಿ, ಸಕಲ ಮಂಗಳವಾದ್ಯ ಜಯಘೋಷ ವೇದಘೋಷಗಳಾಗುತ್ತಿರಲು ಶ್ರೀಮದಾಚಾರ್ಯರ ಮಹಾ ಸಂಸ್ಥಾನಾಧಿಪತಿಗಳೆಂದು ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿ " ಸುಧೀಂದ್ರತೀರ್ಥ " ರೆಂದು ಅಭಿದಾನದಿಂದ ಅನುಗ್ರಹಿಸಿ ಅವರ ಕರವನ್ನು ಶ್ರೀ ವಿಜಯೀಂದ್ರತೀರ್ಥರ ಕರದಲ್ಲಿಟ್ಟು ನೂತನ ಜಗದ್ಗುರುಗಳ ಸಮಸ್ತ ಭಾರವನ್ನೂ ಅವರಿಗೆ ವಹಿಸಿಕೊಟ್ಟು ಕೃತಾರ್ಥರಾದರು.
" ಅರ್ಚಾಗತಿಕ್ರಮ " ದಲ್ಲಿ...
ಸುರೇಂದ್ರಃ ಸಾಂಪ್ರದಾಯಾ-
ಪಟನ್ಯಾಸವಿಚ್ಛೇದ ಭೀರುಕಃ ।
ಸುಧೀಂದ್ರಂ ನ್ಯಾಸಯಿತ್ವಾ ತ್ವಂ
ವಿಜಯೀಂದ್ರ ಕರೇ ದದೌ ।।
ಆಗ ಶ್ರೀ ವಿಜಯೀಂದ್ರತೀರ್ಥರು ಶ್ರೀ ಸುರೇಂದ್ರತೀರ್ಥರಿಗೆ ನಮಸ್ಕರಿಸಿ " ನಮ್ಮ ಪ್ರಿಯ ಶಿಷ್ಯರಾದ ಶ್ರೀ ಸುಧೀಂದ್ರತೀರ್ಥರನ್ನು ಜಗದ್ವಿಖ್ಯಾತ ಪಂಡಿತರನ್ನಾಗಿ; ಪರವಾದಿ ದಿಗ್ವಿಜಯ, ಸಿದ್ಧಾಂತ ಸ್ಥಾಪನೆ, ಪಾಠ ಪ್ರವಚನ, ಗ್ರಂಥ ರಚನೆ, ಶಿಷ್ಯ ಜನೋದ್ಧಾರಾದಿ ಕಾರ್ಯಾಸಕ್ತರಾಗಿ ಮಹಾ ಸಂಸ್ಥಾನದ ಕೀರ್ತಿ ಪತಾಕೆಯನ್ನು ಜಗತ್ತಿನಲ್ಲೆಲ್ಲಾ ಮೆರೆಸಿ ಕೀರ್ತಿಗಳಿಸುವಂತೆ ನಾವು ಮಾಡುತ್ತೇವೆ " ಎಂದು ಗುರುಗಳಿಗೆ ಭರವಸೆಯನ್ನು ನೀಡಿದರು.
ಸರ್ವರೂ ಗುರು ಶಿಷ್ಯರನ್ನು ಶ್ಲಾಘಿಸಿದರು.
ನಂತರ ಶ್ರೀ ವಿಜಯೀಂದ್ರತೀರ್ಥರ ಆದೇಶದಂತೆ ಶ್ರೀ ಸುಧೀಂದ್ರತೀರ್ಥರು ಸಂಸ್ಕೃತದಲ್ಲಿ ವಿದ್ವತ್ಪೂರ್ಣ ಅನುಗ್ರಹ ಸಂದೇಶವನ್ನು ನೀಡಿ ಸರ್ವರನ್ನೂ ಆನಂದಗೊಳಿಸಿದರು.
ಮುಂದೆ ಶ್ರೀ ವಿಜಯೀಂದ್ರತೀರ್ಥರು ಶ್ರೀ ಸುಧೀಂದ್ರತೀರ್ಥರನ್ನು ಜಗದ್ವಿಖ್ಯಾತ ಪಂಡಿತರನ್ನಾಗಿ ಮಾಡಿದರು.
" ಅವತಾರ ಸಮಾಪ್ತಿ "
ಶ್ರೀ ಸುರೇಂದ್ರತೀರ್ಥರು ವಿಕಾರಿ ನಾಮ ಸಂವತ್ಸರ ಪುಷ್ಯ ಶುಕ್ಲ ದ್ವಾದಶೀ ತಿಥಿಯಂದು ತುಂಗಭದ್ರಾ ನದೀ ತೀರದ ಆನೆಗೊಂದಿಯಲ್ಲಿ ವೃಂದಾವನಸ್ಥರಾದರು.
" ಶ್ರೀ ವಿಜಯೀಂದ್ರವಿಜಯ " ದಲ್ಲಿ ....
ಸ್ವಾಂತಕಾಲೇ ಚ ಸಂಪ್ರಾಪ್ತೇ
ಸುರೆಂದ್ರೋ ಗಜಗಹ್ವರೇ ।
ವಿಕಾರಿ ವತ್ಸರೇ ಪುಷ್ಯ
ಶುಕ್ಲೇ ಚ ದ್ವಾದಶೀ ತಿಥೌ ।।
ಸುರೇಂದ್ರಸ್ಯ ಪುಣ್ಯದಿನಂ
ಪ್ರಥಿತಂ ಭುವಿ ಸರ್ವತಃ ।।
ಶ್ರೀ ವಿಜಯೀಂದ್ರತೀರ್ಥರು ....
ಯಶ್ಚಕಾರೋಪವಾಸೇನ
ತ್ರಿವಾರಂ ಭೂಪ್ರದಕ್ಷಿಣಂ ।
ತಸ್ಮೈ ನಮೋ ಯತೀಂದ್ರಾಯಾ
ಶ್ರೀ ಸುರೇಂದ್ರ ತಪಸ್ವಿನೇ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ